‘‘ಹಿಂದೂಗಳೆಂದು ನಮ್ಮನ್ನು ಕರೆಯದಿರಿ, ನಾವು ವಿಭಿನ್ನರು’’ -ಎಸ್.ಎಂ.ಜಾಮದಾರ್

Update: 2018-04-03 07:49 GMT

ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಚಳವಳಿಯ ಮುಂಚೂಣಿಯ ನಾಯಕರಲ್ಲೊಬ್ಬರಾದ ಎಸ್.ಎಂ. ಜಾಮದಾರ್ ಅವರು ಓರ್ವ ಪ್ರಮುಖ ಲಿಂಗಾಯತ ವಿದ್ವಾಂಸರು. ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲು ಒಪ್ಪಿಕೊಂಡ ಬಳಿಕ, ಕನ್ನಡದ ಪತ್ರಿಕೆಗಳಲ್ಲಿ ಜಾಮದಾರ್ ಬರೆದಿರುವ ಲೇಖನಗಳು ಪ್ರಾಮುಖ್ಯತೆ ದೊರೆತವು. ಕರ್ನಾಟಕದ ನಿವೃತ್ತ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಐಎಎಸ್ ಅಧಿಕಾರಿಯಾಗಿರುವ ಜಾಮದಾರ್ ಅವರು ಈ ಸಂದರ್ಶನದಲ್ಲಿ ವೀರಶೈವರು ಹಾಗೂ ಲಿಂಗಾಯತರ ತತ್ವಗಳ ನಡುವೆ ಇರುವ ವ್ಯತ್ಯಾಸಗಳು, 12ನೇ ಶತಮಾನದ ಸಮಾಜ ಸುಧಾರಕ, ಕವಿ ಕ್ರಾಂತಿಯೋಗಿ ಬಸವಣ್ಣ ಅವರ ಜಾತಿ ವಿರೋಧಿ ನಿಲುವುಗಳು ಹಾಗೂ ಬಿಜೆಪಿಯ ಧೋರಣೆಗಳ ಬಗ್ಗೆ ಮಾತನಾಡಿದ್ದಾರೆ.
ಜಾಮದಾರ್ ಅವರ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.

ಪ್ರಶ್ನೆ: ಬಸವತತ್ವದಲ್ಲಿ ನಂಬಿಕೆಯಿಟ್ಟವರನ್ನು ಧಾರ್ಮಿಕ ಅಲ್ಪಸಂಖ್ಯಾತರನ್ನಾಗಿ ಪರಿಗಣಿಸಬೇಕೆಂದು ಸರಕಾರವು ಶಿಫಾರಸು ಮಾಡಿರುವುದು ಲಿಂಗಾಯತರು ಹಾಗೂ ವೀರಶೈವರನ್ನು ವಿಭಜಿಸುವ ತಂತ್ರವೇ?.

ಜಾಮದಾರ್:   ಸರಕಾರವು ಸಮುದಾಯವನ್ನು ವಿಭಜಿಸುತ್ತಿಲ್ಲ. ಈ ವಿಭಜನೆಯು ಸಮ್ಮತಿಪೂರ್ವಕವಾದು ದಾಗಿದೆ. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಸರಕಾರದ ಈ ನಿಲುವನ್ನು ಶಿಯಾಗಳು ಹಾಗೂ ಸುನ್ನಿಗಳನ್ನು ಮತ್ತು ಪ್ರೊಟೆಸ್ಟಂಟರನ್ನು ಹಾಗೂ ಕ್ರೈಸ್ತರನ್ನು ವಿಭಜಿಸಿರುವುದಕ್ಕೆ ಸರಿಸಮಾನವೆಂದು ಟೀಕಿಸಿದ್ದರು. ಆದರೆ ಶಿಯಾಗಳು ಹಾಗೂ ಸುನ್ನಿಗಳು ಮುಸ್ಲಿಂ ಧರ್ಮದ ಪಂಗಡಗಳಾಗಿವೆ. ಈ ಎರಡೂ ಪಂಗಡಗಳು ಒಂದೇ ರೀತಿಯಾಗಿ ಕುರ್‌ಆನ್ ಹಾಗೂ ಪ್ರವಾದಿಯವರ ಮೇಲೆ ನಂಬಿಕೆಯಿರಿಸಿವೆ ಮತ್ತು ಅವರೆಲ್ಲರೂ ಹಜ್ ಯಾತ್ರೆಗೆ ತೆರಳುತ್ತಾರೆ, ರಮಝಾನ್ ಉಪವಾಸ ಆಚರಿಸುತ್ತಾರೆ. ಆದರೆ ವೀರಶೈವರು ಹಾಗೂ ಲಿಂಗಾಯತರು ಪರಸ್ಪರ ವಿಭಿನ್ನವಾಗಿದ್ದಾರೆ. ನಮ್ಮ ಧರ್ಮಗಳ ಸಂಸ್ಥಾಪಕರು ಬೇರೆ ಬೇರೆ. ನಮ್ಮ ಪವಿತ್ರಗ್ರಂಥಗಳೂ ಬೇರೆಯೇ ಆಗಿವೆ. ಬಸವಣ್ಣನವರು ತಮ್ಮ ಧರ್ಮದ ಸ್ಥಾಪಕನೆಂಬುದನ್ನು ವೀರಶೈವರು ಒಪ್ಪುವುದಿಲ್ಲ. ಬದಲಿಗೆ ಅವರ ಸಮಕಾಲೀನರಾದ ರೇಣುಕಾಚಾರ್ಯರನ್ನು ತಮ್ಮ ಧರ್ಮಸಂಸ್ಥಾಪಕನೆಂಬುದಾಗಿ ಅವರು ಪರಿಗಣಿಸುತ್ತಾರೆ. ಒಂದು ಮಗುವಿಗೆ ಎಷ್ಟು ಮಂದಿ ತಂದೆಯರು ಇರಲು ಸಾಧ್ಯ?. ನಮಗೆ (ಲಿಂಗಾಯತ) ವಚನಗಳೇ ಪವಿತ್ರ ಗ್ರಂಥವಾಗಿದ್ದರೆ, ಅವರಿಗೆ ಸಿದ್ಧಾಂತಶಿಖಾಮಣಿ ಪವಿತ್ರ ಗ್ರಂಥವಾಗಿದೆ. ದುರದೃಷ್ಟವಶಾತ್ ವೀರಶೈವರು ತಾವು ಲಿಂಗಾಯತರಿಗಿಂತ ಶ್ರೇಷ್ಠರೆಂದು ಭಾವಿಸುತ್ತಾರೆ.

ಪ್ರಶ್ನೆ: ಲಿಂಗಾಯತರಿಗೆ ಹಾಗೂ ವೀರಶೈವರಿಗೆ ಹಿಂದೂಧರ್ಮದ ಜೊತೆಗಿರುವ ಸಂಬಂಧವೇನು?
ಜಾಮದಾರ್: 
 ವೀರಶೈವ ಹಾಗೂ ಹಿಂದೂ ನಡುವೆ ಯಾವುದೇ ವ್ಯತ್ಯಾಸವಿಲ್ಲ. ವಾಸ್ತವವಾಗಿ ವೀರಶೈವ ತುಂಬಾ ಸಂಪ್ರದಾಯವಾದಿ ಹಾಗೂ ಮಡಿವಂತಿಕೆಯುಳ್ಳವರು. ಆದರೆ ನಾವು ಲಿಂಗಾಯತರು, ಅದಕ್ಕೆ ತದ್ವಿರುದ್ಧವಾಗಿದ್ದೇವೆ.
  ಮೊದಲನೆಯದಾಗಿ, ನಾವು ದೇವಾಲಯಕ್ಕೆ ಹೋಗುವುದಾಗಲಿ ಅಥವಾ ಶಿವಲಿಂಗ ಸೇರಿದಂತೆ ಮೂರ್ತಿಗಳನ್ನು ಪೂಜಿಸುವುದಾಗಲಿ ಮಾಡುತ್ತಿಲ್ಲ. ನಾವು ಇಷ್ಟಲಿಂಗವನ್ನು ಪೂಜಿಸುತ್ತೇವೆ. ಇಷ್ಟಲಿಂಗವು ಸಣ್ಣ ಪ್ರತಿಮೆಯಾಗಿದ್ದು, ಅದು ದೇವಾಲಯಗಳಲ್ಲಿರುವ ಲಿಂಗಕ್ಕಿಂತ ನೋಡಲು ಭಿನ್ನವಾಗಿದೆ. ಲಿಂಗಾಯತವು ಒಂದು ದೀಕ್ಷಾಪೂರ್ವಕವಾದ ಧರ್ಮವಾಗಿದೆ. ಲಿಂಗಾಯತರಾಗಿ ಜನಿಸದಿದ್ದರೂ, ಆ ಧರ್ಮಕ್ಕೆ ಸೇರ್ಪಡೆಗೊಳ್ಳಬಹುದಾಗಿದೆ. ಸಾವಿನಲ್ಲೂ ನಾವು ಹಿಂದೂಗಳಿಗಿಂತ ಭಿನ್ನ. ನಮ್ಮಲ್ಲಿ ಮೃತರನ್ನು ನಗ್ನಾವಸ್ಥೆಯಲ್ಲಿ ಕುಳಿತ ಭಂಗಿಯಲ್ಲಿ, ಇಷ್ಟಲಿಂಗವನ್ನು ಕೈಯಲ್ಲಿರಿಸಿ ದಫನಮಾಡಲಾಗುತ್ತದೆ. ಸ್ವರ್ಗ ಹಾಗೂ ನರಕಗಳ ಬಗ್ಗೆ ನಮಗೆ ನಂಬಿಕೆಯಿಲ್ಲ. ಪುನರ್ಜನ್ಮದಲ್ಲೂ ನಮಗೆ ವಿಶ್ವಾಸವಿಲ್ಲ. ನಮಗೆ ಸಾವೆಂದರೆ, ಲಿಂಗದೊಂದಿಗೆ ಐಕ್ಯವಾಗುವುದಾಗಿದೆ. ಸಾವಿನಲ್ಲಿ ನೀವು ದೇವರೊಂದಿಗೆ ಸಮಾಗಮಗೊಳ್ಳುತ್ತೀರಿ. ಇದಕ್ಕಿಂತಲೂ ಮುಖ್ಯವಾಗಿ ಲಿಂಗಾಯತ ತತ್ವವು ವೇದವನ್ನು ಪ್ರಬಲವಾಗಿ ಟೀಕಿಸುತ್ತದೆ. ಹಲವು ವಚನಗಳನ್ನು ಉಲ್ಲೇಖಿಸಿರುವ ನಾಗಮೋಹನ್‌ದಾಸ್ ಸಮಿತಿಯ ವರದಿಯನ್ನು ನೀವು ಓದಲೇ ಬೇಕು. ಈ ವಚನಗಳಲ್ಲಿ ವೇದಗಳು, ಪುರಾಣಗಳು, ಶಾಸ್ತ್ರಗಳನ್ನು ಕಟುವಾಗಿ ಟೀಕಿಸಲಾಗಿದೆ. ಇತರ ವಚನಗಳಲ್ಲಿಯೂ ಅವುಗಳ ವಿರುದ್ಧ ಕಠೋರವಾದ ಪದಗಳನ್ನು ಬಳಸಲಾಗಿದೆ. ವಚನಗಳು ಸಂಪೂರ್ಣವಾಗಿ ಜಾತಿವ್ಯವಸ್ಥೆಯನ್ನು ತಿರಸ್ಕರಿಸುತ್ತವೆ. ಲಿಂಗಾಯತ ತತ್ವದ ಪ್ರಕಾರ ಅಸ್ಪಶ್ಯ ಹಾಗೂ ಬ್ರಾಹ್ಮಣ ಸರಿಸಮಾನರಾಗಿದ್ದಾರೆ. ಬಸವಣ್ಣ ಅವರು ಬ್ರಾಹ್ಮಣರಾಗಿದ್ದರು. ಬ್ರಾಹ್ಮಣ ಅಗ್ರಹಾರವೊಂದರ ಮುಖಂಡನ ಪುತ್ರನಾಗಿದ್ದ ಅವರು ಬಾಲ್ಯದಲ್ಲೇ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದ್ದರು.
  ತನ್ನ ಸಹೋದರಿಗೆ ಯಜ್ಞೋಪವೀತ ಧಾರಣೆ ಮಾಡಲು ಅವಕಾಶ ನೀಡಲಿಲ್ಲವೆಂಬ ಕಾರಣಕ್ಕಾಗಿ ಬಸವಣ್ಣ ತನಗೂ ಉಪನಯನವನ್ನು ನಿರಾಕರಿಸಿದ್ದರು. ಅವರು ಬಾಲ್ಯದಲ್ಲಿ ಕೆಳಜಾತಿಯ ಮಕ್ಕಳ ಜೊತೆ ಆಟವಾಡುತ್ತಿದ್ದರು. ಈ ಎಲ್ಲ ಕಾರಣಗಳಿಗಾಗಿ ಅವರನ್ನು ಜಾತಿಯಿಂದ ಉಚ್ಚಾಟಿಸಲಾಯಿತು. ಎಂಟನೇ ವಯಸ್ಸಿನಲ್ಲಿ ಮನೆ ಬಿಟ್ಟು ತೆರಳಿದ ಅವರು 22 ವಯಸ್ಸಿನವರೆಗೂ ವೇದಗಳನ್ನು ಅಧ್ಯಯನ ಮಾಡಿದ್ದರು.
 
ಪ್ರಶ್ನೆ: ಪ್ರಸಕ್ತ ಹೋರಾಟವು ಭುಗಿಲೇಳಲು ಕಾರಣವೇನು?
ಜಾಮದಾರ್: 
 ಕಳೆದ 150 ವರ್ಷಗಳಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೇಡಿಕೆಯಿಟ್ಟಿರುವುದು ಇದು ನಾಲ್ಕನೆ ಸಲವಾಗಿದೆ ಮತ್ತು ಇದು ಕೊನೆಯ ಸಲವೂ ಆಗಿದೆ. ಪ್ರಸಕ್ತ ಹೋರಾಟವು ಒಂದು ವರ್ಷದ ಹಿಂದೆ ಆರಂಭಗೊಂಡಿತ್ತು. ಆದರೆ ಯಾರು ಕೂಡಾ ಈ ಹೋರಾಟವನ್ನು ನಡೆಸುವ ಯೋಜನೆಯನ್ನು ಮಾಡಿರಲಿಲ್ಲ. ಸಿದ್ದರಾಮಯ್ಯ ಅವರು ವಿಜಯಪುರದ ವಿಶ್ವವಿದ್ಯಾನಿಲಯಕ್ಕೆ ಅಕ್ಕಮಹಾದೇವಿ ವಿವಿ ಎಂಬುದಾಗಿ ಮರುನಾಮಕರಣ ಮಾಡಿದರು. ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವಿರುವುದನ್ನು ಅವರು ಕಡ್ಡಾಯಗೊಳಿಸಿದರು. ಯಾಕೆಂದರೆ ಬಸವಣ್ಣ ಅವರು ಕೇವಲ ಧಾರ್ಮಿಕ ನಾಯಕರಾಗಿರದೆ, ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಪ್ರತೀಕವೂ ಆಗಿದ್ದರು. ಹೀಗಾಗಿ ವೀರಶೈವ ಮಹಾಸಭಾ ಸೇರಿದಂತೆ ಲಿಂಗಾಯತ ಸಮುದಾಯವು ಮುಖ್ಯಮಂತ್ರಿಯವರನ್ನು ಸನ್ಮಾನಿಸಲು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಅಲ್ಲಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಸಲ್ಲಿಸಲಾಯಿತು. ತಾವು ಹಿಂದೂಗಳಲ್ಲ ಹಾಗೂ ತಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ತಾವು ಬಯಸುವುದಾಗಿ ಅವರು (ವೀರಶೈವ ಮಹಾಸಭಾ)ಸ್ಪಷ್ಟವಾಗಿ ಹೇಳಿದ್ದರು. ಇದೀಗ ಅವರು ಅದಕ್ಕೆ ವಿರುದ್ಧವಾಗಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಬೇಡಿಕೆಯನ್ನು ಬೆಂಬಲಿಸುವುದಾಗಿ ಹೇಳಿದ್ದರು. ಈ ವಿಚಾರವಾಗಿ ದಿನಪತ್ರಿಕೆಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಚರ್ಚೆ ಆರಂಭಗೊಂಡಿತು. ಪತ್ರಿಕೆಯೊಂದರಲ್ಲೂ ನಾನು ಈ ಬಗ್ಗೆ ಲೇಖನ ಬರೆದಿದ್ದೆ ಹಾಗೂ ಆನಂತರ ನನ್ನ 20 ಪುಟಗಳ ಲೇಖನವನ್ನು ಗೌರಿ ಲಂಕೇಶ್ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳು ಪ್ರಕಟಿಸಿದವು. ಬೀದರ್‌ನಲ್ಲಿ ಸ್ವಾಮೀಜಿಯೊಬ್ಬರು ಈ ವಿಷಯವಾಗಿ ಸಂವಾದವನ್ನು ಆಯೋಜಿಸಿದ್ದರು. ಆಗ ಎರಡು ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಮೊತ್ತ ಮೊದಲ ರ್ಯಾಲಿ ಅದಾಗಿತ್ತು. ಲಿಂಗಾಯತ ಅತ್ಯಂತ ಸಂಘಟಿತ, ಸುಶಿಕ್ಷಿತ ಸಮುದಾಯವಾಗಿದೆ. ಹೀಗಾಗಿ ಚರ್ಚೆಗಳು ನಡೆಯುತ್ತಲೇ ಹೋದವು ಹಾಗೂ ಅದೊಂದು ಹೋರಾಟವಾಗಿ ರೂಪುಗೊಂಡಿತು.

ಪ್ರಶ್ನೆ: ವೀರಶೈವ ಮಹಾಸಭಾ ಯಾಕೆ ತನ್ನ ನಿಲುವನ್ನು ಬದಲಾಯಿಸಿತು?
ಜಾಮದಾರ್:   ಬಸವತತ್ವದಲ್ಲಿ ವಿಶ್ವಾಸವಿಟ್ಟಿರುವುದಾಗಿ ಘೋಷಿಸುವವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗುವುದೆಂದು ಸರಕಾರ ತಿಳಿಸಿತ್ತು. ಇದರಿಂದಾಗಿ ವೀರಶೈವರು ತನ್ನಿಂತಾನೆ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವುದರಿಂದ ಹೊರತಾಗುತ್ತಾರೆ. ಯಾಕೆಂದರೆ ಬಸವಣ್ಣನವರನ್ನು ಅನುಸರಿಸುವವರು ಧಾರ್ಮಿಕ ಅಥವಾ ಸಾಮಾಜಿಕ ವಿಷಯಗಳಲ್ಲಿ ಮಹಿಳೆಯರಿಗೆ ತಾರತಮ್ಯವನ್ನು ಮಾಡದಂತಹ ಸಂಪೂರ್ಣ ಸರ್ವ ಸಮಾನತೆಯ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿರಬೇಕಾಗುತ್ತದೆ. ಆದರೆ ವೀರಶೈವರು ಆಂಧ್ರಪ್ರದೇಶದ ಬ್ರಾಹ್ಮಣರು ಸ್ಥಾಪಿಸಿರುವ ಪಂಚಪೀಠಗಳನ್ನು ಅನುಸರಿಸುತ್ತಾರೆ. ಈ ಪಂಚಪೀಠಗಳು ಹಿಂದೂಧರ್ಮದ ತತ್ವಗಳನ್ನು ಅನುಸರಿಸುತ್ತವೆ. ವೀರಶೈವ ಮಹಾಸಭಾ ನಮ್ಮ ಸಂಸ್ಥೆಯಲ್ಲ. ನಾವು ಅದನ್ನು ತ್ಯಜಿಸಿದ್ದೇವೆ. ಅವರು ನಮ್ಮನ್ನು ಪ್ರತಿನಿಧಿಸುವುದಿಲ್ಲ.

 ಪ್ರಶ್ನೆ: ಈ ವಿಷಯದಲ್ಲಿ ಲಿಂಗಾಯತರ ಬೆಂಬಲ ಹೊಂದಿರುವ ಪಕ್ಷವೆಂದೇ ಪರಿಗಣಿಸಲ್ಪಟ್ಟಿರುವ ಬಿಜೆಪಿಯ ಪಾತ್ರವೇನು?
ಜಾಮದಾರ್:
ಬಿಜೆಪಿಯು ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಪ್ಪಾಗಿ ತಿಳಿದುಕೊಂಡಿದೆ. ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳ ಸೃಷ್ಟಿಯಾಗಿದ್ದಾರೆ. ಲಿಂಗಾಯತರಿಗೆ ಅವರು ಏನೂ ಅಲ್ಲ. ಆಕಸ್ಮಿಕವಾಗಿ ಅವರು ಮುಖ್ಯಮಂತ್ರಿಯಾಗಿ ಬಿಟ್ಟಿದ್ದರು. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಏರ್ಪಟ್ಟ ಒಪ್ಪಂದದಂತೆ 2007ರಲ್ಲಿ ದೇವೇಗೌಡ ಅವರು 20 ತಿಂಗಳ ಅವಧಿಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ್ದಲ್ಲಿ ತುಂಬಾ ಬೇಗನೇ ಅವರೇ ಮೂರ್ಖರಾಗಿ ಬಿಡುತ್ತಿದ್ದರು ಮತ್ತು ಅಧಿಕಾರದಿಂದ ಅವರಾಗಿಯೇ ನಿರ್ಗಮಿಸುತ್ತಿದ್ದರು. ಯಾಕೆಂದರೆ ದೇವೇಗೌಡ ಅವರು ಯಡಿಯೂರಪ್ಪಗೆ ಮುಖ್ಯಮಂತ್ರಿಯಾಗುವ ಹಕ್ಕನ್ನು ನಿರಾಕರಿಸಿದ್ದರು. ಅದೊಂದು ಒಕ್ಕಲಿಗ ವರ್ಸಸ್ ಲಿಂಗಾಯತ ವಿಷಯವಾಗಿ ಮಾರ್ಪಟ್ಟಿತು. ತಮ್ಮ ಸಮುದಾಯದ ವ್ಯಕ್ತಿಗೆ ವಂಚನೆಯಾಗಿದೆಯೆಂಬ ಭಾವನೆ ಲಿಂಗಾಯತರಲ್ಲಿ ಉಂಟಾಗಿ, ಅವರು ಯಡಿಯೂರಪ್ಪ ಪರವಾಗಿ ಮತಹಾಕಿದರು. 2013ರಲ್ಲಿ ಯಡಿಯೂರಪ್ಪ ಅವರು ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೋರಿ ಸಲ್ಲಿಸಲಾದ ಮನವಿಪತ್ರಕ್ಕೆ ಸಹಿಹಾಕಿದ್ದರು. ಆದರೆ ಈಗ ಅವರು ಅದಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ವಾಸ್ತವಿಕವಾಗಿ ಈ ವಿಚಾರವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಅದರಲ್ಲೂ ವಿಶೇಷವಾಗಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಪ್ರತಿಯೊಬ್ಬರೂ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಬೆಂಬಲಿಸಿದ್ದಾರೆ ಹಾಗೂ ಈ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ.

ಬೆಳಗಾವಿಯಲ್ಲಿ ನಡೆದ ರ್ಯಾಲಿ ಎರಡನೆ ಅತಿ ದೊಡ್ಡ ರ್ಯಾಲಿಯಾಗಿದ್ದು 5 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಬಿಜೆಪಿ ಸಂಸದ ಪ್ರಭಾಕರ ಕೋರೆ ರ್ಯಾಲಿಗೆ ತನ್ನ ನಿವೇಶನವನ್ನೇ ನೀಡಿದ್ದರು. ಇತರ ನಾಯಕರು ಕೂಡಾ ಆಹಾರದ ವ್ಯವಸ್ಥೆ ಮಾಡಿದ್ದರು ಹಾಗೂ ಇನ್ನು ಕೆಲವರು ವಾಹನಗಳ ಏರ್ಪಾಡು ಮಾಡಿದ್ದರು.

ಪ್ರಶ್ನೆ: ಬಸವ ವಚನಗಳನ್ನು ಬರೆದಾಗ ಹಿಂದೂಧರ್ಮ ಹೇಗಿತ್ತು?

ಜಾಮದಾರ್: ವಚನಗಳನ್ನು ಬರೆದಿರುವುದು ಬಸವಣ್ಣ ಒಬ್ಬರೇ ಅಲ್ಲ. ಚಾಲುಕ್ಯ ಚಕ್ರಾಧಿಪತ್ಯದ ಪ್ರಧಾನಮಂತ್ರಿಯಾಗಿ ಬಸವಣ್ಣನವರು ತನ್ನ ಚಿಂತನೆಗಳನ್ನು ಹರಡಲು ತನ್ನ ಅಧಿಕಾರದ ಪ್ರಭಾವವನ್ನು ಬಳಸಿಕೊಂಡರು. ಅವರು ಪ್ರಪ್ರಥಮ ಸಂಸತ್ತೆನಿಸಿರುವ ಅನುಭವ ಮಂಟಪವನ್ನು ಸ್ಥಾಪಿಸಿದರು. ಈ ಅನುಭವಮಂಟಪಕ್ಕೆ ದೇಶಾದ್ಯಂತದ ಎಲ್ಲಾ ಜಾತಿ ಹಾಗೂ ಲಿಂಗಗಳ ಜನರು ಆಗಮಿಸುತ್ತಿದ್ದರು. ನೂರಾರು ಶರಣರು ಸುಮಾರು 20 ಸಾವಿರ ವಚನಗಳನ್ನು ಬರೆದಿದ್ದರು. ವೇದಗಳು ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಿರುವುದಕ್ಕೆ ವಿರುದ್ಧವಾದುದನ್ನೇ ಅವರು ಹೇಳಿದ್ದಾರೆ. ಅವರು ಎಲ್ಲಾ ರೀತಿಯ ವೈದಿಕ ಆಚರಣೆಗಳನ್ನು ತಿರಸ್ಕರಿಸುತ್ತಾರೆ. ಆಗ ಅದು ಅತ್ಯಂತ ಕರ್ಮಠ ಹಿಂದೂವಾದದ ಕಾಲವಾಗಿತ್ತು. 9ನೇ ಶತಮಾನದಲ್ಲಿ ಶಂಕರಾಚಾರ್ಯರು ದಕ್ಷಿಣ ಭಾರತದಲ್ಲಿ ಹಿಂದೂಧರ್ಮವನ್ನು ಹರಡಿದ್ದರು. ಆಗ ಅತ್ಯಂತ ಅಸಮಾನತೆ ನೆಲೆಸಿತ್ತು ಹಾಗೂ ಕೆಳಜಾತಿಗಳವರು ಶೋಷಣೆಗೊಳಗಾಗಿದ್ದರು. ಶರಣರು ತಾವು ಬೋಧಿಸಿದ್ದನ್ನು ಆಚರಿಸತೊಡಗಿದಾಗ ತೊಂದರೆ ಕಾಣಿಸಿಕೊಂಡಿತು. ಬಸವಣ್ಣನವರು ಬ್ರಾಹ್ಮಣ ಹುಡುಗಿ ಹಾಗೂ ಪರಿಶಿಷ್ಟ ಜಾತಿಯ ಹುಡುಗನ ನಡುವೆ ವಿವಾಹವನ್ನು ಏರ್ಪಡಿಸಿದ್ದರು. ಇದನ್ನು ಹಲವರು ವಿರೋಧಿಸಿದರು. ಆ ಜೋಡಿಯನ್ನು ಆನೆಗಳ ಮೂಲಕ ತುಳಿಸಿ ಕೊಲ್ಲಲಾಯಿತು. ಆಗ ಬಸವಣ್ಣನವರ ಅನುಯಾಯಿಗಳು ಹಿಂಸಾಚಾರಕ್ಕಿಳಿದರು. ದೊರೆಯನ್ನೇ ಹತ್ಯೆಗೈದರು. ಬಸವಣ್ಣ ಸ್ಥಳವನ್ನು ತೊರೆದುಹೋದರು. ಆನಂತರ ವ್ಯಾಪಕ ರಕ್ತಪಾತವಾದವು. ಜಾತಿ ವ್ಯವಸ್ಥೆ ಹಾಗೂ ವರ್ಣಾಶ್ರಮ ಧರ್ಮವನ್ನು ತಿರಸ್ಕರಿಸಿದ್ದಕ್ಕಾಗಿ ಈ ದಾರುಣ ಅಂತ್ಯವುಂಟಾಯಿತು. ಅದಕ್ಕಾಗಿಯೇ ನಾವು ‘‘ಹಿಂದೂಗಳೆಂದು ನಮ್ಮನ್ನು ಕರೆಯದಿರಿ’’ ಎಂದು ಈ ವ್ಯಕ್ತಿಗಳಿಗೆ ಹೇಳುತ್ತಿದ್ದೇವೆ. ಆದರೆ ನಾವು ಹಿಂದೂ ವಿರೋಧಿಗಳಲ್ಲ. ನಾವು ಬೇರೆಯವರು. ಅದನ್ನು ಮಾನ್ಯ ಮಾಡಿ ಎಂದು ನಾವು ಹೇಳುತ್ತೇವೆ.

ಪ್ರಶ್ನೆ: ಈ ಸಲ ಪರಿಸ್ಥಿತಿ ವಿಭಿನ್ನವಾಗಿದೆಯೆಂದು ನೀವು ಭಾವಿಸುತ್ತೀರಾ? ನಿಮ್ಮ ಬೇಡಿಕೆ ಈಡೇರುವುದೆಂದು ನೀವು ಭಾವಿಸುತ್ತೀರಾ?
ಜಾಮದಾರ್:
ಈಗ ಜಾಗೃತಿಯುಂಟಾಗಿದೆ. ಬಸವಣ್ಣನವರ ಬೋಧನೆಗಳ ಬಗ್ಗೆ ಈಗ ವ್ಯಾಪಕವಾದ ಅರಿವುಂಟಾಗಿದೆ. ಕಳೆದ 50 ವರ್ಷಗಳಲ್ಲಿ ಬಸವಣ್ಣನವರ ಕನಿಷ್ಠ 10 ಸಾವಿರ ಪ್ರತಿಮೆಗಳು ಸ್ಥಾಪನೆಯಾಗಿವೆ. ಸುಮಾರು 200-300 ವರ್ಷ ಗಳ ಹಿಂದೆ ಇದ್ದ ಸಮಾನತಾವಾದದ ಚಿಂತನೆಯು ಬ್ರಾಹ್ಮಣ್ಯದ ಪ್ರಭಾವದಿಂದ ನಶಿಸಿದೆ. ಆದರೆ ಅದರ ಮೂಲ ಸಿದ್ಧಾಂತಗಳು ನಾಶವಾಗಿಲ್ಲ. ಧರ್ಮದ ಪರಿಶುದ್ಧ ರೂಪದೆಡೆಗೆ ಮರಳಿ ಹೋಗಲು ಇನ್ನು ಸುಲಭ ಸಾಧ್ಯವಾಗಲಿದೆ.

ಕೃಪೆ : ಇಂಡಿಯನ್ ಎಕ್ಸ್ ಪ್ರೆಸ್

Writer - ಅಮೃತಾ ದತ್ತಾ

contributor

Editor - ಅಮೃತಾ ದತ್ತಾ

contributor

Similar News

ಜಗದಗಲ
ಜಗ ದಗಲ