ದತ್ತ ಪೀಠ ವಿವಾದ: ನ್ಯಾಯಾಲಯದ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ; ಬಿಜೆಪಿ

Update: 2018-04-06 17:38 GMT

ಚಿಕ್ಕಮಗಳೂರು, ಎ.6: ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಸ್ವಾಮೀಜಿ ತಪಸ್ಸು ಮಾಡಿದ ಶ್ರದ್ಧಾಕೇಂದ್ರವಾದ ಗುರು ದತ್ತಾತ್ರೇಯ ಪೀಠವನ್ನು ರಾಜ್ಯ ಸರಕಾರ ಒಂದು ಕೋಮಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಏಕಪಕ್ಷೀಯವಾಗಿ ವರದಿ ತಯಾರಿಸಿ ಹಿಂದೂ ಧರ್ಮಕ್ಕೆ ಅನ್ಯಾಯವೆಸಗಿದೆ. ದತ್ತಪೀಠದಲ್ಲಿ ಶಾಖಾದ್ರಿ ಅವರಿಗೆ ಪೂಜಾ ವಿಧಿ ವಿಧಾನಕ್ಕೆ ನ್ಯಾಯಾಲಯ ಅವಕಾಶ ನೀಡಬೇಕೆಂದು ತೀರ್ಪು ನೀಡಿರುವುದರ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಚಾರ ಸಂಬಂಧ ಹಲವಾರು ವರ್ಷಗಳಿಂದ ಗುರು ದತ್ತಾತ್ರೇಯ ಸ್ವಾಮಿ ಸಂವರ್ಧನಾ ಸಮಿತಿ ವತಿಯಿಂದ ಸುಪ್ರೀಂ ಕೋರ್ಟ್‍ನಲ್ಲಿ ದಾವೆ ಹೂಡಿ ಕಾನೂನು ಹೋರಾಟ ಮಾಡುತ್ತಿತ್ತು. ಹಿಂದೂ ಪದ್ಧತಿಯಂತೆ ಧಾರ್ಮಿಕ ವಿಧಿ ವಿಧಾನ ನಡೆಸಲು ಮತ್ತು ಹಿಂದೂ ಅರ್ಚಕರ ನೇಮಕ ಮಾಡಬೇಕೆಂದು ದಾವೆ ಹೂಡಲಾಗಿತ್ತು. ಆದರೆ ತೀರ್ಪು ಬರುವ ಸಂದರ್ಭದಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‍ಗೆ ಅರ್ಜಿಸಲ್ಲಿಸಿ, ರಾಜ್ಯದಲ್ಲಿ ಹಿಂದು ಮತ್ತು ಮುಸ್ಲಿಂ ಜನಾಂಗದ ಪ್ರತಿನಿದಿಗಳನ್ನು ಕೂರಿಸಿ ರಾಜೀ ಸಂಧಾನದ ಮುಖಾಂತರ ನಾವೇ ಸಮಸ್ಯೆ ಬಗೆಹರಿಸುತ್ತೇವೆಂದು ನ್ಯಾಯಾಲಕ್ಕೆ ಅಫಿಡೆವಿಟ್ ಸಲ್ಲಿಸಿತ್ತು. ಪರಿಣಾಮ ನ್ಯಾಯಾಲಯ ಪ್ರಕರಣವನ್ನು ರಾಜ್ಯ ಸರಕಾರಕ್ಕೆ ಕಳುಹಿಸಿ ರಾಜಿ ಸಂದಾನ ನಡೆಸಿ ವರದಿ ಸಲ್ಲಿಸಲು ತಿಳಿಸಿತ್ತು.

ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಎರಡೂ ವರ್ಗದ ಪ್ರತಿನಿಧಿಗಳನ್ನು ಕೂರಿಸಿ ರಾಜಿ ಸಂಧಾನ ನಡೆಸದೇ ಏಕಪಕ್ಷೀಯವಾಗಿ ವರದಿಯನ್ನು ತೆರೆಮರೆಯಲ್ಲಿ ಸಿದ್ಧ ಪಡಿಸಿದೆ. ಕಾಂಗ್ರೆಸ್ ನೇತೃತ್ವದ ಸರಕಾರ ತಮಗೆ ಬೇಕಾದಂತೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ನಾಮಕಾವಸ್ಥೆಗಾಗಿ ಒಂದು ಸಮಿತಿಯನ್ನು ನೇಮಕ ಮಾಡಿ ಬಹು ಸಂಖ್ಯಾತ ಹಿಂದುಗಳಿಗೆ ಅನ್ಯಾಯವೆಸಗಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ಸಮಿತಿಯು ರಾಜ್ಯ ಸರಕಾರದ ಅಣತಿಯಂತೆ ದತ್ತ ಪೀಠದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಆಸ್ತಿ ವಹಿವಾಟು ನಡೆಸುತ್ತಿದ್ದ ಹಾಗೂ ಇಡೀ ಪೀಠವನ್ನು ಇಸ್ಲಾಮೀಕರಣಗೊಳಿಸಲು ಪ್ರಯತ್ನಿಸಿದ್ದ ಶಾಖಾದ್ರಿಗೆ ಅನುಕೂಲವಾಗುವಂತೆ ತಯಾರಿಸಿ ನ್ಯಾಯಾಲಯಕ್ಕೆ ಈ ಸಮಿತಿಯ ಮುಖಾಂತರ ಸಲ್ಲಿಸಿತ್ತು. ಈ ವರದಿ ಆಧಾರದ ಮೇಲೆ ದೇಶದ ಸರ್ವೋಚ್ಚ ನ್ಯಾಯಾಲಯ ಶಾಖಾದ್ರಿಗೆ ದತ್ತ ಪೀಠದಲ್ಲಿ ಪೂಜಾ ವಿಧಿ ವಿಧಾನ ನಡೆಸುವ ತೀರ್ಪು ನೀಡಿರುತ್ತದೆ. ಈ ತೀರ್ಪಿನ ವಿರುದ್ಧ ಶ್ರೀ ಗುರು ದತ್ತಾತ್ರೇಯ ಸಂವರ್ಧನಾ ಸಮಿತಿಯು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News