ನಗರ ನಿಸರ್ಗ ತಾಣಗಳು

Update: 2018-04-07 11:56 GMT

ಬೆಂಗಳೂರು ವಿಪರೀತ ವೇಗದಲ್ಲಿ ಬೆಳೆಯುತ್ತ ಜಗತ್ತಿನ ಗಮನ ಸೆಳೆದಿರುವ ನಗರವಾಗಿದೆ. ವಾತಾವರಣದ ಯಾವ ಅಂಶವೂ ಈ ತನಕ ಅತಿರೇಕಕ್ಕೆ ಹೋಗದೆ ಒಂದು ಸ್ವಸ್ಥ ಬದುಕಿಗೆ ಯೋಗ್ಯವಾದ ನಗರ ಎಂಬ ಬಿರುದನ್ನು ಅದು ನಿಧಾನವಾಗಿ ಕಳಚಿಕೊಳ್ಳುತ್ತಿದೆ. ಜನದಟ್ಟಣೆ, ವಾಹನದಟ್ಟಣೆ, ಸಂಪನ್ಮೂಲಗಳ ಕೊರತೆ, ಮಿತಿಮೀರಿದ ಮಾಲಿನ್ಯ, ಧಗೆ, ಇಕ್ಕಟ್ಟು, ಗದ್ದಲಗಳ ಗೊಂಡಾರಣ್ಯವಾಗುತ್ತಿದೆ. ಅನಿಯಂತ್ರಿತ ನಗರೀಕರಣದ ಬಲಿಪಶು ವಾಗುವುದನ್ನು ತಪ್ಪಿಸಬೇಕಿದ್ದರೆ ಬೆಂಗಳೂರಿಗೆ ನಗರಾರಣ್ಯಗಳು ಬಹಳ ಅಗತ್ಯ ಇವೆ. ಇವು ಬೆಳೆದರೆ ಮಕ್ಕಳ ಪೀಳಿಗೆಗೆ ಒಳ್ಳೆಯ ಪರಿಸರ ದೊರಕುತ್ತದೆ.

ಜಗತ್ತಿನೆಲ್ಲೆಡೆ ಇಂದು ನಗರೀಕರಣವು ತೀವ್ರ ಗತಿಯಲ್ಲಿ ಸಾಗುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರಗಳ ಮುಂಚೂಣಿ ಸಾಲಿನಲ್ಲಿದೆ.

ಬೃಹತ್ ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಪರ್ಕ ಇತ್ಯಾದಿ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಂತೆಯೇ ಆದ್ಯತೆಯ ಮೇರೆಗೆ ''ನಗರ ನಿಸರ್ಗ ತಾಣ'' ([Urban Green Space]) ಗಳನ್ನು ಸಹ ನಿರ್ಮಿಸುವುದು ಸೂಕ್ತವಾಗಿರುತ್ತದೆ. ಜಗತ್ತಿನ ಪ್ರಮುಖ ನಗರಗಳ ಯೋಜನಾ ತಜ್ಞರು ನಗರ ನಿಸರ್ಗ ತಾಣಗಳ ಮಹತ್ವವನ್ನು ಈಗ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.

ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆಯು ನಗರ ಪ್ರದೇಶಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಪ್ರತೀ ವ್ಯಕ್ತಿಗೆ 20 ಚದರ ಮೀಟರ್‌ನಂತೆ ಸರಾಸರಿ ''ನಗರ ನಿಸರ್ಗ ವಲಯ'' ಇರಬೇಕೆಂದು ನಿಗದಿ ಮಾಡಿರುತ್ತದೆ.

ಇತ್ತೀಚೆಗೆ ತೀವ್ರ ನಗರೀಕರಣದಿಂದಾಗಿ ಜನತೆ ಮತ್ತು ನಿಸರ್ಗದ ನಡುವಿನ ಅಂತರ ಹೆಚ್ಚಾಗುತ್ತಿದೆ. ನಗರ ಅರಣ್ಯ ಅಥವಾ ನಗರ ನಿಸರ್ಗ ವಲಯಗಳನ್ನು ರೂಪಿಸಿ ಬೆಳೆಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.

ಜಗತ್ತಿನ ಪ್ರಮುಖ ನಗರಗಳ ಒಟ್ಟು ವಿಸ್ತೀರ್ಣದಲ್ಲಿ ಹಸಿರು ತಾಣಗಳ ಪ್ರಮಾಣ ಎಷ್ಟಿದೆ ಎಂಬ ಒಂದು ಅಂಕಿ ಅಂಶವನ್ನು ಇಲ್ಲಿ ನೀಡಿದೆ.

ಹಾಗೆಯೇ ಭಾರತದಲ್ಲಿ ದಿಲ್ಲಿ ನಗರವು ತನ್ನ ಒಟ್ಟು ವಿಸ್ತೀರ್ಣದ ಶೇ.20 ರಷ್ಟು ಹಸಿರು ವಲಯ ಹೊಂದಿದ್ದರೆ, ಮುಂಬೈ ನಗರವು ಶೇ. 2.5 ರಷ್ಟನ್ನು ಮಾತ್ರ ಹೊಂದಿದೆ.

ಬೆಂಗಳೂರು ನಗರದ ಒಟ್ಟು ವಿಸ್ತೀರ್ಣದಲ್ಲಿ ಹಸಿರು ತಾಣಗಳ ವಿಸ್ತಾರವು ಶೇ.19.9ರಷ್ಟಿದೆ ಎಂಬುದಾಗಿ ಕೆಲವು ಅಧ್ಯಯನದ ವರದಿಗಳು ತಿಳಿಸುತ್ತಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿರುವ ಪ್ರತೀ ವ್ಯಕ್ತಿಗೆ ಸರಾಸರಿ 20 ಚದರ ಮೀಟರ್‌ನ ಮಾನದಂಡಕ್ಕೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಅದರ ಪ್ರಮಾಣವು ಪ್ರತೀ ವ್ಯಕ್ತಿಗೆ ಸರಾಸರಿ 17.32 ಚದರ ಮೀಟರ್‌ನಷ್ಟಿದೆ ಎಂಬುದಾಗಿ ಕೆಲ ವರದಿಗಳು ಹೇಳುತ್ತಿವೆ.

ನಗರ ಪ್ರದೇಶಗಳಲ್ಲಿ 'ಬೃಹತ್ ಹಸಿರು ತಾಣ'ಗಳಿಂದ ಅನೇಕ ರೀತಿ ಉಪಯೋಗಗಳಾಗುತ್ತವೆ.

1.ವಾಹನ ಹಾಗೂ ಔದ್ಯಮಿಕ ಚಟುವಟಿಕೆಗಳಿಂದ ಹೊರ ಸೂಸಲ್ಪಡುವ ಕಾರ್ಬನ್ ಡಯಾಕ್ಸೈಡ್ ಹೀರಿಕೊಳ್ಳುವಿಕೆ [Carbon Dioxide segregate Action]

2.ಆಮ್ಲಜನಕ ಹೊರ ಸೂಸುವಿಕೆ [Oxygen Emission]

3.ಮಳೆ ಮೋಡಗಳ ಆಕರ್ಷಣೆ [Rain fall Intention]

4.ಧೂಳು ಹೀರಿಕೊಳ್ಳುವಿಕೆ [Dust Retention]

5.ಜೀವ ವೈವಿಧ್ಯತೆ ರಕ್ಷಣೆ [Bio Diversity conservation]

6.ಅಂತರ್ಜಲ ಮರುಪೂರಣ [Ground water recharge]

7.ಮಣ್ಣಿನ ಸವಕಳಿ ನಿಯಂತ್ರಣ

ಇದಲ್ಲದೆ ನಗರ ಜೀವನದ ಒತ್ತಡದಲ್ಲಿ ಬದುಕುವ ಜನಸಾಮಾನ್ಯರಿಗೆ ಉದ್ಯಾನವನಗಳು ಹಾಗೂ ಹಸಿರು ತಾಣಗಳಲ್ಲಿ ಕಾಲ ಕಳೆಯುವ ಹಾಗೂ ವಿಹರಿಸುವುದರಿಂದ, ಅನೇಕ ರೀತಿಯ ಮಾನಸಿಕ ಒತ್ತಡದಿಂದ ಬಿಡುಗಡೆ ಪಡೆಯುತ್ತಾರೆಂದು ಮತ್ತು ದೈಹಿಕ ಆರೋಗ್ಯಕ್ಕೂ ಇದು ಪೂರಕವೆಂದು ಅಧ್ಯಯದ ವರದಿಗಳು ಸಾಬೀತು ಮಾಡಿದೆ.

ಇದನ್ನು ನಿಸರ್ಗವು ಮನುಷ್ಯ ಸಮಾಜಕ್ಕೆ ನೀಡುವ ಕೊಡುಗೆ ಅಥವಾ ನಿಸರ್ಗದ ಉತ್ಪತ್ತಿ ಎಂದೇ ಪರಿಗಣಿಸಲಾಗುತ್ತಿದೆ.

ಬೆಂಗಳೂರು ನಗರದಲ್ಲಿ 18ನೇ ಶತಮಾನದಲ್ಲಿ ಹೈದರಲಿ ಸ್ಥಾಪಿಸಿದ ಲಾಲ್‌ಬಾಗ್ ಮತ್ತು 19ನೇ ಶತಮಾನದಲ್ಲಿ ರೂಪಿಸಲಾದ ಕಬ್ಬನ್‌ಪಾರ್ಕ್ ಹೊರತುಪಡಿಸಿದರೆ ಆ ನಂತರದಲ್ಲಿ ಕಳೆದ 2 ಶತಮಾನಗಳಲ್ಲಿ ಅಷ್ಟು ವಿಸ್ತೀರ್ಣದ ಇನ್ನೊಂದು ಬೃಹತ್ ಉದ್ಯಾನವನವನ್ನು ನಿರ್ಮಿಸಿರುವುದಿಲ್ಲ. ಬೆಂಗಳೂರು ನಗರದ ಹಾಗೂ ಇಲ್ಲಿ ವಾಸಿಸುತ್ತಿರುವ ಕೋಟ್ಯಂತರ ಜನರ ಹಿತದೃಷ್ಟಿಯಿಂದ ಹಲವಾರು ('Lung Space') ಗಳಂತರ ಹೊಸ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಪ್ರಯತ್ನಿಸಬೇಕಿದೆ.

► ನಗರಾರಣ್ಯಗಳ ನಡುವೆ

ಜನನಿಬಿಡ ನಗರಗಳಿಗೆ ಮರನಿಬಿಡ ಅಡವಿಗಳ ಅಗತ್ಯ ಬಹಳವಿದೆ ಅನಿಸುತ್ತೆ. ಬೆಳೆಯುವ ನಗರಕ್ಕೆ ನೀರು, ವಿದ್ಯುತ್‌ನಂತಹ ಸೌಲಭ್ಯ ಒದಗಿಸುವ ಸವಾಲು ಒಂದೆಡೆ, ಸ್ಥಿರಾಸ್ತಿಯ ರೂಪಾಯಿ ಮೌಲ್ಯ ಹೆಚ್ಚುತ್ತ ಸಾಗುವ ಸಂಭ್ರಮ ಇನ್ನೊಂದೆಡೆ. ಇವೆರಡರ ನಡುವೆ ಅಭಿವೃದ್ಧಿಯ ಪರಿಕಲ್ಪನೆಯು ನಿರ್ಲಕ್ಷಿಸುವ ಎರಡು ಮುಖ್ಯ ಜೀವಪರ ಅಂಶಗಳೆಂದರೆ ಒಂದು ಉತ್ತಮ ಆರೋಗ್ಯಕ್ಕೆ ಪೂರಕವಾದ ನೈಸರ್ಗಿಕ ಪರಿಸರವನ್ನು ಉಳಿಸಿಕೊಳ್ಳುವುದು (ಅಥವಾ ರೂಪಿಸಿಕೊಳ್ಳುವುದು), ಎರಡನೆಯದು ಅದನ್ನು ಮಕ್ಕಳಿಗಾಗಿ ಸಂರಕ್ಷಿಸುವುದು.

ನಾವು ಒಮ್ಮೆ ಸುಮ್ಮನೆ ಆಲೋಚಿಸೋಣ. ಚೆನ್ನೈ ನಗರವನ್ನು ಒಂದು ಅರಣ್ಯದ ವರ್ತುಲವು ದಟ್ಟವಾಗಿ ಸುತ್ತುವರಿದಿದ್ದರೆ ಅದು ಪ್ರವಾಹಕ್ಕೆ ತುತ್ತಾಗುತ್ತಿತ್ತೆ? ಮರಗಳ ದಟ್ಟಣೆ ನೀರಿನ ರಭಸಕ್ಕೆ ತಡೆಯೊಡ್ಡುತ್ತದೆ ಎಂಬ ಸತ್ಯ ಒಬ್ಬ ನಿರಕ್ಷರ ಕುಕ್ಷಿಗೂ ಗೊತ್ತಿದೆ. ಎಲ್ಲೆಲ್ಲಿ ಕಾಂಡ್ಲಾ ಕಾಡುಗಳಿರುತ್ತವೋ ಅಲ್ಲೆಲ್ಲ ಸುನಾಮಿ ಅಲೆಗಳು ತೀರವನ್ನು ಅಪ್ಪಳಿಸುವುದಿಲ್ಲ. ಹುಚ್ಚು ಗಾಳಿಯ ವೇಗವನ್ನು ತಗ್ಗಿಸಲೂ ಅರಣ್ಯಗಳು ಬೇಕು. ಬಯಲುಸೀಮೆಯಲ್ಲಾಗುವಷ್ಟು ಬಿರುಗಾಳಿಯ ಹಾನಿ ಮಲೆನಾಡಿನಲ್ಲಿ ಕಡಿಮೆಯೇ ಎನ್ನಬೇಕು.

ಮರದೆಲೆಗಳು ತಮ್ಮ ಮೇಲೆ ಧೂಳು ಧರಿಸಿ ಧೂಳಿನ ಪ್ರಸರಣವನ್ನು ನಿಯಂತ್ರಿಸುತ್ತವೆ. ಹೊಗೆ ತುಂಬಿದ ಕಾವಳವನ್ನೂ ಹೀಗೆಯೆ ತಿಳಿಗೊಳಿಸಬಲ್ಲವು. ನಗರಜೀವನದ ಗದ್ದಲವನ್ನು ಹೀರಿ ಶಬ್ದ ಮಾಲಿನ್ಯವನ್ನು ಕಡಿತಗೊಳಿಸುವ ಕಲೆಯು ಮರಗಳಿಗೆ ಗೊತ್ತು.

ಮಳೆಯ ಬಹುಪಾಲನ್ನು ನೆಲಕ್ಕೆ ಇಂಗಿಸಿ ನಗರದ ಅಂತರ್ಜಲದ ಮಟ್ಟ ಹೆಚ್ಚಿಸುವ ಕೆಲಸಕ್ಕೆ ಮರಗಳೆಂದೂ ಪಗಾರ ಕೇಳುವುದಿಲ್ಲ.

ವಾಹನಗಳು ಮತ್ತು ಕೈಗಾರಿಕೆಗಳಿಂದ ಇಂಗಾಲದ ಡೈ ಆಕ್ಸೈಡ್ ಅಧಿಕಗೊಳ್ಳುತ್ತ ಸಾಗಿ ನಗರ ವಲಯದಲ್ಲಿ ಆಮ್ಲಜನಕದ ಪ್ರಮಾಣ ಕುಂಠಿತಗೊಳ್ಳುವುದು. ಮರಗಳು ಯಥೇಚ್ಛ ಸುತ್ತುವರಿದ ಕಡೆ ಆಮ್ಲಜನಕ ಪ್ರಮಾಣ ಅಧಿಕಗೊಳ್ಳುತ್ತೆ ಎಂದು ಒತ್ತಿ ಹೇಳಬೇಕಾಗಿಲ್ಲ ಅಲ್ಲವೇ?

ಇನ್ನು ವಾಯುಮಾಲಿನ್ಯದ ಕಡೆ ನೋಡೋಣ. ಸ್ಟೊಮಾಟಗಳ ಮೂಲಕ ಟನ್ನುಗಟ್ಟಲೆ ಪ್ರಮಾಣದಲ್ಲಿ ಹೀರಲ್ಪಡುವ ಇಂಗಾಲದ ಮೋನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್ ಮತ್ತು ಓರೆನ್‌ಗಳು ಎಲೆಗಳ ನೀರಿನಂಶದಲ್ಲಿ ಬಂಧಿಯಾಗುತ್ತವೆ. ಕ್ರಮೇಣ ನಾವು ಉಸಿರಾಡುವ ಗಾಳಿ ಶುದ್ಧಗೊಳ್ಳುತ್ತದೆ. ವಾಯುಮಾಲಿನ್ಯ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಉತ್ತೇಜನಕಾರಿಯಾದುದು. ಈ ಉತ್ತೇಜನವನ್ನು ಕುಗ್ಗಿಸಲು ನಗರಾರಣ್ಯಗಳು ನೆರವಾಗುತ್ತವೆ. ಇಂಗಾಲದ ಡೈ ಆಕ್ಸೈಡ್ ಹೆಚ್ಚಿದರೆ ಅದು ಸೂರ್ಯನ ಶಾಖವನ್ನು ಹಿಡಿದಿರಿಸುತ್ತದೆ. ಗಿಡಮರಗಳು ಇಂಗಾಲವನ್ನು ಬಳಸಿಕೊಂಡು ಈ ಶಾಖವನ್ನು ತಗ್ಗಿಸಬಲ್ಲವು. ಸ್ಥಳೀಯ ಉಷ್ಣತೆಯನ್ನು 3 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ತಗ್ಗಿಸಬಲ್ಲ ಸಾಮರ್ಥ್ಯ ಸ್ಥಳೀಯ ಅರಣ್ಯಗಳಿಗಿದೆ.

ನಗರದ ನಡುವೆ ಮತ್ತು ಸುತ್ತ ಬೆಳೆಸಿದ ಮರ ಸಮೂಹಗಳನ್ನು ನಗರಾರಣ್ಯ ಎಂದು ಕರೆಯುವ ನಗರಾರಣ್ಯಗಳ ಭೌತಿಕ ಅನುಕೂಲಗಳ ಬಗ್ಗೆ ಹೇಳಿದ್ದಾಯಿತು. ಈಗ ಕೆಲವು ಭಾವನಾತ್ಮಕ ಅನುಕೂಲಗಳ ಬಗ್ಗೆ ತಿಳಿಯುವ. ನಗರದ ಸೌಂದರ್ಯ ವೃದ್ಧಿಯಲ್ಲಿ ನಗರಾರಣ್ಯಗಳ ಪಾತ್ರ ದೊಡ್ಡದು. ಅವುಗಳ ಬಾಷ್ಪವಿಸರ್ಜನೆಯಿಂದ ಹವೆ ತಂಪುಗೊಂಡು ಮನಸ್ಸಿಗೆ ಆಹ್ಲಾದದ ಅನುಭವವಾಗುತ್ತದೆ. ದೈನಂದಿನ ಒತ್ತಡಗಳ ನಡುವೆ ಅವುಗಳ ನೆರಳಿಗಾಶಿಸಿ ಹಮ್ಮಿಕೊಳ್ಳುವ ಪಿಕ್‌ನಿಕ್‌ಗಳಿಂದ ಖುಷಿ ಸಿಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ಇಂತಹ ಪಿಕ್‌ನಿಕ್‌ಗಳು ಬಾಲ್ಯದ ಸುಂದರ ಅನುಭವಗಳಾಗಿರುತ್ತವೆ. ಹಕ್ಕಿ ವೀಕ್ಷಣೆ, ಚಿಟ್ಟೆಗಳ ವೀಕ್ಷಣೆ, ಕೀಟಗಳ ವೀಕ್ಷಣೆಗಳ ಜೊತೆ ಗಿಡ ಮರಗಳ ಪರಿಚಯ ಮಾಡಿಕೊಳ್ಳುವ ಮೂಲಕ ಮಕ್ಕಳು ನಿಸರ್ಗಕ್ಕೆ ಹತ್ತಿರವಾಗುತ್ತಾರೆ.

ಹೀಗೆ ಹತ್ತಿರವಾದ ಮನಸ್ಸು ಕ್ರಮೇಣ ಜೀವ ವಿರೋಧಿ ಭಾವನೆಗಳ ಪ್ರಭಾವಕ್ಕೆ ಸಿಲುಕದಿರುವ ಸಂಭವವೇ ಹೆಚ್ಚು. ನಗರಾರಣ್ಯಗಳ ಆಸುಪಾಸು ಬಗೆಬಗೆಯ ಹೂಗಿಡಗಳನ್ನು ಬೆಳೆಸುವುದು ಇನ್ನೂ ಉತ್ತಮವೇ. ವರ್ಣರಂಜಿತ ಪರಿಸರಕ್ಕೆ ಮನದ ಬೇಗುದಿಗಳನ್ನು ಹಗುರಗೊಳಿಸುವ ಶಕ್ತಿಯಿದೆ. ಇಲ್ಲಿ ಸಾಂದರ್ಭಿಕವಾಗಿ ಇನ್ನೊಂದು ಅಂಶವನ್ನು ಹೇಳಲೇಬೇಕು. ಇಂದು ಜಾಗತಿಕ ತಾಪ ಏರಿಕೆಯ ಕಾರಣಕ್ಕೆ ಜೇನು ನೊಣಗಳು ಅಳಿವಿನ ಅಂಚಿಗೆ ಸರಿಯುತ್ತಿವೆ. ಸುಮಾರು ಒಂದು ಲಕ್ಷ ಅರವತ್ತು ಸಾವಿರದಷ್ಟು ಸಸ್ಯ ಪ್ರಭೇದಗಳು ಪರಾಗಸ್ಪರ್ಶ ಕ್ರಿಯೆಗೆ ಜೇನ್ನೋಣಗಳನ್ನೇ ಅವಲಂಬಿಸಿವೆಯೆಂದು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಜೇನು ನೊಣಗಳಿಲ್ಲವಾದರೆ ಬಹುಪಾಲು ಆಹಾರ ಮತ್ತು ವಾಣಿಜ್ಯ ಬೆಳೆಗಳ ಇಳುವರಿ ಕುಂಠಿತಗೊಳ್ಳುತ್ತದೆ. ಇದರ ದುಷ್ಪರಿಣಾಮಗಳನ್ನು ವಿಶೇಷವಾಗಿ ವಿವರಿಸಬೇಕಿಲ್ಲ. ಗಿಡಮರಗಳ ಹೆಚ್ಚಳವೆಂದರೆ ಜೇನು ನೊಣಗಳ ಹೆಚ್ಚಳ ಎಂದೇ ಅರ್ಥ. ನಗರಾರಣ್ಯಗಳು ಈ ಹೆಚ್ಚಳಕ್ಕೆ ಮಹತ್ತರ ಕೊಡುಗೆ ನೀಡಬಲ್ಲವು.

ಬೆಂಗಳೂರು ವಿಪರೀತ ವೇಗದಲ್ಲಿ ಬೆಳೆಯುತ್ತ ಜಗತ್ತಿನ ಗಮನ ಸೆಳೆದಿರುವ ನಗರವಾಗಿದೆ. ವಾತಾವರಣದ ಯಾವ ಅಂಶವೂ ಈ ತನಕ ಅತಿರೇಕಕ್ಕೆ ಹೋಗದೆ ಒಂದು ಸ್ವಸ್ಥ ಬದುಕಿಗೆ ಯೋಗ್ಯವಾದ ನಗರ ಎಂಬ ಬಿರುದನ್ನು ಅದು ನಿಧಾನವಾಗಿ ಕಳಚಿಕೊಳ್ಳುತ್ತಿದೆ. ಜನದಟ್ಟಣೆ, ವಾಹನದಟ್ಟಣೆ, ಸಂಪನ್ಮೂಲಗಳ ಕೊರತೆ, ಮಿತಿಮೀರಿದ ಮಾಲಿನ್ಯ, ಧಗೆ, ಇಕ್ಕಟ್ಟು, ಗದ್ದಲಗಳ ಗೊಂಡಾರಣ್ಯವಾಗುತ್ತಿದೆ. ಅನಿಯಂತ್ರಿತ ನಗರೀಕರಣದ ಬಲಿಪಶುವಾಗುವುದನ್ನು ತಪ್ಪಿಸಬೇಕಿದ್ದರೆ ಬೆಂಗಳೂರಿಗೆ ನಗರಾರಣ್ಯಗಳು ಬಹಳ ಅಗತ್ಯ ಇವೆ. ಇವು ಬೆಳೆದರೆ ಮಕ್ಕಳ ಪೀಳಿಗೆಗೆ ಒಳ್ಳೆಯ ಪರಿಸರ ದೊರಕುತ್ತದೆ. ಎಲ್ಲೆಲ್ಲಿ ಅನುಪಯುಕ್ತ ಮತ್ತು ನಿರ್ಲಕ್ಷಿತ ಸರಕಾರಿ ಜಮೀನುಗಳು ಇವೆಯೋ ಅವುಗಳನ್ನು ಮೇಲೆ ವಿವರಿಸಿದಂತೆ ಹಸಿರು ನೆಲೆ ಮತ್ತು ರಚನಾತ್ಮಕ ಚಟುವಟಿಕೆಗಳ ಕಾರ್ಯಕ್ಷೇತ್ರಗಳಾಗಿ ಪರಿವರ್ತಿಸಬಹುದಾಗಿದೆ. ಬೆಂಗಳೂರು ಆ ದಿಕ್ಕಿನೆಡೆಗೆ ಸಾಗುವ ನಗರವಾಗಲಿ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News