ತುಮಕೂರು: ಬಲೂನ್ ಹಾಗೂ ಗೀತೆಗಳ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮ

Update: 2018-04-07 16:30 GMT

ತುಮಕೂರು,ಏ.07: ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂಬ ಉದ್ದೇಶದಿಂದ ಹಲವು ಕಸರತ್ತು ನಡೆಸುತ್ತಿರುವ ಸ್ವೀಪ್ ಸಮಿತಿ, ದಿನಕ್ಕೆ ಸಾವಿರಾರು ಜನರು ಬಂದು ಹೋಗುವ ತುಮಕೂರು ಅಮಾನಿಕೆರೆಯ ಗಾಜಿನ ಮನೆ ಬಳಿ ಕಡ್ಡಾಯ ಮತದಾನದ ಸಂದೇಶವನ್ನು ಹೊತ್ತು ಬಲೂನ್ ಹಾರಿ ಬಿಡುವ ಮೂಲಕ ಹಾಗೂ ಮತದಾನ ಜಾಗೃತಿ ಗೀತೆಗಳ ಸಿಡಿ ಬಿಡುಗಡೆ ಮಾಡಿ, ಮತದಾನ ಹೆಚ್ಚಿಸಲು ಮುಂದಾಗಿದೆ.

ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬಲೂನ್ ಹಾಗೂ ಜಾಗೃತಿ ಗೀತೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‍ರಾಜ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯು ಹಮ್ಮಿಕೊಂಡಿರುವ ಕ್ರಿಯಾ ಯೋಜನೆಯ ಬಗ್ಗೆ ಚುನಾವಣಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ. ಜಿಲ್ಲೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತುಮಕೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯಲ್ಲಿರುವ ಸ್ಥಳೀಯ ಸಂಸ್ಥೆಯ ಪ್ರದೇಶಗಳಲ್ಲಿ ಪ್ರತಿದಿನ ಬೆಳಿಗ್ಗೆ ಕಸ ಸಂಗ್ರಹಿಸಲು ತೆರಳುವ ವಾಹನಗಳಲ್ಲಿಯೂ ಕೂಡ ಜಾಗೃತಿ ಗೀತೆಗಳನ್ನು ಪ್ರಸಾರ ಮಾಡಿ ಜನರಲ್ಲಿ ಅರಿವು ಮೂಡಿಸಲಾಗುವುದು. ಅಲ್ಲದೆ ತುಮಕೂರು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಟೋಲ್‍ಗಳಲ್ಲಿ ನೀಡುವ ರಸೀದಿಗಳು ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ವಿತರಿಸುವ ಪ್ರಯಾಣದ ಟಿಕೇಟ್‍ನಲ್ಲಿಯೂ ಮತದಾನದ ಅರಿವಿನ ಕುರಿತ ಸಂದೇಶಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ವಿವಿಪ್ಯಾಟ್ ಮತ್ತು ಇವಿಎಂಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಸರಕಾರಿ ನೌಕರರ ಮೊಬೈಲ್‍ಗಳ ರಿಂಗ್‍ಟೋನ್, ಕಾಲರ್‍ಟೋನ್ ಗಳಲ್ಲಿಯೂ ಮತದಾನದ ಬಗ್ಗೆ ಅರಿವು ಮೂಡಿಸುವ ಗೀತೆಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಕಸದ ವಾಹನಗಳಿಗೆ ಜಾಗೃತಿ ಗೀತೆಯ ಪೆನ್‍ಡ್ರೈವ್‍ಗಳನ್ನು ವಿತರಿಸಿದರು. ಮಾಸ್ಟರ್ ಟ್ರೈನರ್ ರಿಜ್ವಾನ್ ಬಾಷಾ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ನಿರ್ಮಿತಿಕೇಂದ್ರದ ರಾಜಶೇಖರ್ ಮತ್ತಿತರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News