ಸಾವಿನ ದಶಾವತಾರ

Update: 2018-04-07 19:01 GMT

‘‘ಸಾವಿನ ದಶಾವತಾರ’’ ಕಾದಂಬರಿಯಲ್ಲಿ ಅನ್ವೇಷಕರು ನೀಡುವ ಪ್ರಶ್ನೆಗಳು ಹಾಗೂ ಉತ್ತರ ರೂಪದ ವಿವರಣೆಗಳು ಒಂದು ರೀತಿಯಲ್ಲಿ ಪರಕಾಯ ಪ್ರವೇಶದ ರೂಪದಲ್ಲಿ ಬದುಕನ್ನು ಗ್ರಹಿಸಲು ತೊಡಗುತ್ತದೆ ಅನ್ನಬಹುದು. ಸಾವಿನ ಅಂತಿಮ ಕ್ರಿಯೆಗೆ ವಸ್ತುವಾಗಿರುವ ಘಟನೆಗಳು ಉದಾಹರಣೆಗೆ ‘‘ಎಮರಾಲ್ಡ್ ಅಪಾರ್ಟಮೆಂಟ್’’ ಟೆರೇಸಿನಲ್ಲಿ ಚೆಂಡನ್ನು ಝಾಡಿಸುತ್ತಾ ಆಡುತ್ತಿರುವ ಮಕ್ಕಳೊಂದಿಗೆ ಆಡುತ್ತಿರುವ ಪ್ರತಾಪ ಎಂಬ ಚಿಕ್ಕಮಗುವಿನ ಸಾವಿನ ಸನ್ನಿವೇಶ ಆಧುನಿಕ ಬದುಕಿನ ವಿನ್ಯಾಸದ ಜತೆಗೆ ತಳಕು ಹಾಕಿಕೊಂಡಿದೆ.

ಕೆ. ಸತ್ಯನಾರಾಯಣ ವಿಕಲ್ಪ ಕಾದಂಬರಿ ಬರೆದ ಎರಡು ವರುಷದ ನಂತರ ಬರೆದ ‘‘ಸಾವಿನ ದಶಾವತಾರ’’ ಕಾದಂಬರಿಯ ತಮ್ಮ ಅರಿಕೆಯಲ್ಲಿ ಹೀಗೆ ಹೇಳಿದ್ದಾರೆ. ‘‘ಕನ್ನಡ ಕಥನ ಪರಂಪರೆಯ ಮುಖ್ಯ ಗುಣವೆಂದರೆ ಬದುಕನ್ನು ಕುರಿತು ಇರುವ ಶೋಧಕ ಪ್ರವೃತ್ತಿ ಹೊಸ ವಿನ್ಯಾಸ, ಆಕೃತಿಗಳ ಕುರಿತು ಇರುವ ಮಮಕಾರ. ಒಮ್ಮಾಮ್ಮೆ ಕೆಲವು ಕೃತಿಗಳಲ್ಲಿ ಈ ಎರಡೂ ಪ್ರವೃತ್ತಿಗಳು ಬೇರೆ ಬೇರೆ ಪ್ರಮಾಣದಲ್ಲಿ ಬೆರೆತಿರಬಹುದು. ಈ ಹಿನ್ನೆಲೆಯಲ್ಲಿ ಈಚಿನ ಯಶಸ್ವೀ ಕಾದಂಬರಿಗಳು ಕೇವಲ ನಿರೂಪಣೆಯ ಸೊಗಸಿಗೇ ಪ್ರಾಶಸ್ತ್ಯ ಕೊಡುತ್ತಿರುವುದು ಆಶ್ಚರ್ಯ ಹಾಗೂ ಆತಂಕಕ್ಕೆ ದಾರಿ ಮಾಡಿ ಕೊಡುತ್ತಿರುತ್ತದೆ ಎಂದಿದ್ದಾರೆ. ಈ ದೃಷ್ಟಿಯಲ್ಲಿ ‘‘ಸಾವಿನ ದಶಾವತಾರ’’ ಕಾದಂಬರಿ ಹೊಸತೇ ಆದ ರೀತಿಯಲ್ಲಿ ಹೊಸ ಹೂರಣ ತುಂಬಿದಹೊಸ ಪ್ರಯೋಗಶೀಲತೆಯಿಂದ ಹೊಸ ಪ್ರಕಾರದ ಚಿಕಿತ್ಸಕವಾದ ನಿರೂಪಣೆಯ ಮೂಲಕ ಕತೆಯ ಹಂಗನ್ನು ತೊರೆದ ಕಾದಂಬರಿ. ಸಾವೆಂಬುದು ಆತ್ಯಂತಿಕವಾಗಿ ಬದುಕಿನ ಬಿಡುಗಡೆ ಎಂಬುದು ಮರೀಚಿಕೆಯೇ. ಬಿಡುಗಡೆ ಎಂಬುದೂ ಬಂಧನ ಆಗಿ ಬಿಡಬಹುದು. ಕೆ.ಸತ್ಯನಾರಾಯಣ ಅವರ ಬರವಣಿಗೆಯ ಕಲ್ಪಣೆ ಈ ರೀತಿಯದು. ಸೈದ್ಧಾಂತಿಕವಾದ ಬರವಣಿಗೆಗೆಲ್ಲಾ ಒಂದಲ್ಲ ಒಂದು ಕ್ಲಿಷ್ಟತೆಯ ಪದರು ಇರಬಹುದು. ಕಾದಂಬರಿ ಸಲೀಸಾಗಿಸಾಗುವ ಸವಕಲು ದಾರಿಯನ್ನು ತ್ಯಜಿಸಿ ಹೊಸದಾದ ಚಿಕಿತ್ಸಕವಾದ ನಿರೂಪಣೆಯ ಕ್ರಮವನ್ನು ಕಟ್ಟಲು ‘‘ಸಾವಿನ ದಶಾವತಾರ’’ ಪ್ರಯತ್ನಿಸುತ್ತದೆ. ಕಾದಂಬರಿಗೆ ಕಥೆಯ ಬೇಸ್ ಇಲ್ಲದೇ ಚಲನೆಗೆ ತೊಡಗಬೇಕಾಗಿದೆ. ಸೃಷ್ಟಾತ್ಮಕವಾಗಿ ಇಲ್ಲಿನ ನಿರೂಪಕ ತಾನು ಕಂಡ ವಿವಿಧ ಸಾವಿನ ಸಮಗ್ರ ಪರಿಕಲ್ಪನೆಯ ಚಿತ್ರಣವು ಕಾದಂಬರಿಯ ಹಲವು ಸ್ತರಗಳಲ್ಲಿ ಹರಿಯುತ್ತದೆ.

 ಭಾರತದ ಮಹಾನಗರಗಳಲ್ಲಿ ಕಳೆದ ಮೂರು ದಶಕಗಳಲ್ಲಿ ಕಾಣಿಸಿಕೊಂಡ ಹೊಸ ಹೊಸ ವೃತ್ತಿಗಳ ಸ್ವರೂಪದ ಕುರಿತು ಸಂದರ್ಶನಕ್ಕಾಗಿ ಒಂದಿಬ್ಬರು ಅನ್ವೇಷಕರು-ಪುರುಷೋತ್ತಮ ಮತ್ತು ಅನುಪಲ್ಲವಿ ಜೋಡಿಗಳು ಸಾವುಗಳ ನಂತರದ ಅಪರಿ ಕರ್ಮಗಳನ್ನು ನಿರ್ವಹಿಸುತ್ತಿದ್ದ ಸಾವಿನ ಅಪರಿಕರ್ಮದ ಇವೆಂಟ್ ಮೆನೇಜರಾದ ಕಾದಂಬರಿ ನಿರೂಪಕನಿಗೆ ತನ್ನ ವೃತ್ತಿ ಬದುಕಿನ ಕುರಿತು ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳ ಮಾಹಿತಿ ಕಲೆ ಹಾಕುವ ಸಂಶೋಧನೆಗಾಗಿ ಅವರು ಒಂದಿಷ್ಟು ಪ್ರಶ್ನಾವಳಿಗಳನ್ನು ನಿರೂಪಕನಿಗೆ ನೀಡುತ್ತಾರೆ. ಈ ಪ್ರಶ್ನೆಗಳಿಗೆ ತನ್ನದೇ ರೀತಿಯಲ್ಲಿ ಸಾವು ಹಾಗೂ ನಂತರದ ಅಪರಿ ಕರ್ಮ ಮಾಡುವಾಗಿನ ತನ್ನೆಲ್ಲ ಅನುಭವಗಳನ್ನು ಚಿಕಿತ್ಸಕನ ನೋಟದಲ್ಲಿ ಮಾನವರ ಪಾಡನ್ನು ಸಾವು ನೀಡುವ ಬೆಳಕಲ್ಲಿ ಶೋಧಿಸುವ ಎಳೆ ಎಳೆಯಾಗಿ ಇಲ್ಲಿನ ಕಥನ ಕ್ರಮ ಮತ್ತು ಪ್ರಯೋಗಶೀಲತೆ ಒಂದನ್ನೊಂದು ಪ್ರಭಾವಿಸುತ್ತಾ ಕಾದಂಬರಿ ಓದುಗರ ಬುದ್ಧಿ-ಭಾವಗಳನ್ನು ತಟ್ಟುವ ಹಾಗೆ ಸವಿವರವಾಗಿ ನಿರೂಪಿಸಿ ಒಟ್ಟಂದದಲ್ಲಿ ವಿಡಂಬನಾತ್ಮಕವಾಗಿ ಹೆಣೆದಿರುವುದು ಕಂಡುಬರುತ್ತದೆ. ಸಂದರ್ಶಕರು ಕೇಳಿದ ಪ್ರಶ್ನೆ ‘ಈ ವೃತ್ತಿ ಆಯ್ಕೆ ಮಾಡಲು ಕಾರಣ ಮತ್ತು ವೃತ್ತಿಯಿಂದ ಬಾಲ್ಯದ ಆಸೆ ಕನಸುಗಳು ಈಡೇರಿದವೇ?’ ಎನ್ನುವ ಪ್ರಶ್ನೆಗೆ ಸಾವಿನ ನಂತರ ನಡೆಯಬೇಕಾದ ಶರೀರದ ವಿಲೇವಾರಿ, ಉತ್ತರ ಕ್ರಿಯೆ, ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಸಭೆ, ಮುಂತಾದ ಸಮಗ್ರ ಪರಿಕಲ್ಪನೆಯ ಚಿತ್ರಣ ನೀಡುತ್ತಾ ಶೋಧಿಸುತ್ತಾ ಜತೆಯಲ್ಲೇ ಸ್ವಾರ್ಥದ ವಿರಾಟ ಸ್ವರೂಪವನ್ನು ಅದರ ಬೇರೆ ಬೇರೆ ಸ್ತರಗಳನ್ನು ಕಾದಂಬರಿ ಬಿಡಿಸುತ್ತದೆ.

ಈ ವೃತ್ತಿಯ ಆಯ್ಕೆ ಬಗ್ಗೆ ನಿರೂಪಕ ಹೀಗೆ ಹೇಳುತ್ತಾನೆ.

 ‘‘ನಿತ್ಯ ಬದಲಾವಣೆಯ ಇಂದಿನ ಜಗತ್ತಿನಲ್ಲಿ ಆಯ್ಕೆ ಎನ್ನುವುದು ಯಾವ ಯಾವುದೋ ತಿರುಗಣೆಗೆ ಸಿಕ್ಕಿ ಬದಲಾವಣೆಗೆ ತಕ್ಕಂತೆ ಆಯ್ಕೆಯೂ ಬದಲಾಗುತ್ತಾ ಬದುಕು ಅದೃಷ್ಟ ಕರೆದುಕೊಂಡು ಹೋದ ಕಡೆ ಸುಮ್ಮನೇ ಹೋಗಿದ್ದೇನೆ.14ವರ್ಷ ಬ್ಯಾಂಕ್ ಅಧಿಕಾರಿಯಾಗಿ ಸೇವೆಯಲ್ಲಿ ಭಡ್ತಿಯಾಗಿ ಜಿ.ಎಂ. ಆಗಬಹುದಿತ್ತು ಆದರೆ ಹರಿರಾಮ್ ಗುಂಪಿನ ಮೊದಲಿಯಾರ್ ರತ್ನಂ ಶೇರ್ ಮಾರ್ಕೆಟ್ಟಿಗೆ 20,000ರೂ.ಶೇರ್ ತೆಗೆದು ಕೊಳ್ಳುವಂತೆ ಒತ್ತಾಯಿಸಿದಾಗ ಶೇರ್‌ಗೆ ಹಣ ಹಾಕಿದ ಎರಡೇ ವರ್ಷದಲ್ಲಿ 42ಲಕ್ಷ ರೂಪಾಯಿ ಲಾಭ ಬಂದಾಗ ಇಡೀ ಕುಟುಂಬದ ಜೀವನ ಶೈಲಿಯೇ ಬದಲಾಗಿ ಬಿಟ್ಟಿತು. ಜತೆಯಲ್ಲೇ ಸಮಾಜದಲ್ಲಿ ಹೆಚ್ಚಿನ ಸ್ಥಾನ ಮಾನಗಳಿಸುವ ತಹ ತಹ ಇದರಿಂದ ಶೇರ್ ಮಾರ್ಕೆಟ್ ಗೀಳು, ಖಚಿತವಾಗಿದ್ದ ಬ್ಯಾಂಕ್ ಅಧಿಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಇನ್ ವೆಸ್ಟ್ ಮೆಂಟ್‌ಕನ್‌ಸಲ್ಟೆಂಡ್ ವೃತ್ತಿ ಆಯ್ಕೆ; ಆಗಲೇ ಶ್ರೀರಾಮ್ ನಾರಂಗ್ ಯಶಸ್ವಿ ಹೂಡಿಕೆದಾರರ ಪರಿಚಯ ಮತ್ತು ಜಾಗತಿಕವಾಗಿ ಖ್ಯಾತಿ ಇದ್ದ ಶ್ರೀನಾಥ ಮನೆತನದ ಸಂಪರ್ಕ. ಅವರ ಎಲ್ಲಾ ವಹಿವಾಟು ನೋಡಿಕೊಳ್ಳುವ ಜವಾಬ್ದಾರಿ. ಆಗಲೇ ದೊಡ್ಡ ದೊಡ್ಡವರ ಸಂಪರ್ಕ. ಕೈತುಂಬಾ ಹಣದ ಹೊಳೆ. ಅಕಸ್ಮಾತ್ ಶ್ರೀನಾಥ ತೀರಿ ಹೋದಾಗ ಅವರ ಡೆತ್ ಸರ್ವಿಸ್ ಹೊಣೆಗಾರಿಕೆಯಿಂದ ಅವರ ಸಂಪರ್ಕದ ಯಾರು ಸತ್ತರೂ ಅದರ ಜವಾಬ್ದಾರಿ ಹೊತ್ತುಕೊಂಡ ಮೇಲೆ ಮತ್ತೊಮ್ಮೆ ಈ ‘‘ಇನ್‌ವೆಸ್ಟ್ ಮೆಂಟ್ ಕನ್‌ಸಲ್ಟೆಂಟ್’’ ವೃತ್ತಿಯಿಂದ ‘‘ಡೆತ್‌ಕಾನ್‌ಸಲ್ಟೆಂಟ್’’ ವೃತ್ತಿಯ ಆಯ್ಕೆ ಹೀಗೆ ಯಾರಿಗೂ ಬದುಕಿನಲ್ಲಿ ತನ್ನದೇ ಆಯ್ಕೆ ಇರುವುದಿಲ್ಲ. ಸಂದರ್ಭ ಸನ್ನಿವೇಶ ಎಳೆದುಕೊಂಡು ಹೋದ ಕಡೆ ಹೋಗುತ್ತೇವೆ. ವಿಧಿ, ದೈವ ಕೃಪೆ, ಎಂದು ಅಂದುಕೊಳ್ಳುತ್ತೇವೆ. ಎನ್ನುವ ನಿರೂಪಕನ ಮಾತುಗಳು ಅವನ ವಿಚಾರ ಪ್ರಣಾಳಿಕೆಯನ್ನು ಹೇಳುತ್ತವೆ. ಈ ಕುರಿತು ಉದಾಹರಣೆ ಕೊಟ್ಟು ಸಾವಿನ ನಂತರದ ಶವಾಗಾರದ ಕೆಲಸದ ಜೊತೆ ಜೊತೆಯಲ್ಲೇ ಸ್ಮಶಾನ ಹೊಂದಿಸುವುದು, ಸ್ನಾನದ ವ್ಯವಸ್ಥೆ, ಶವಕ್ಕೆ ಹೊದಿಸುವ ಬಿಳಿ ಬಟ್ಟೆ, ಬ್ರಾಹ್ಮಣರಾದರೆ ಜನಿವಾರ, ಬೇರೆ ಬೇರೆ ಜಾತಿ, ಮತಕ್ಕೆ ತಕ್ಕಂತೆ ಅವರವರ ಸ್ಥಾನ-ಮಾನಕ್ಕೆ ತಕ್ಕಂತೆ ಹೊಂದಿಸುವುದು, ಇದಕ್ಕಾಗಿ ದಿನಗಟ್ಟಲೇ ಪರದಾಡುವುದು. ಹಾಗೇನೇ ಕುಟುಂಬದ ಹಿರಿಯರು ಸತ್ತರೆ ಮನೆ ಮಠ ಮಾರುವ ಆಸ್ತಿ ಪಾಲಾಗುವ ಜಂಜಾಟ. ಬ್ಯಾಂಕ್ ಲಾಕರ್ ಮುಚ್ಚುವ ಕೆಲಸ ಸಹ ಕರ್ಮಾಂತರದ ಜೊತೆಯೇ ಆಗಬೇಕು. ಹೀಗೆ ಸಾವಿನ ನಂತರದ ಅದರ ಮೀಮಾಂಸೆಯನ್ನು, ಅದರ ವಿರಾಟರೂಪದ ದರ್ಶನವನ್ನು ನಿರೂಪಕ ಉದಾಹರಣೆ ಮೂಲಕ ಜಾಣತನದ ಚೇಷ್ಟೆಯ ವ್ಯಂಗ್ಯ ಹೇಳಿಕೆ ಮೂಲಕ ಹೇಳುವಾಗ ಕಂಡದ್ದೆಲ್ಲವನ್ನೂ ಒಳಗೊಳ್ಳುವ ಅನುಭವವನ್ನು ಆತ್ಮಕತೆಯ ರೂಪದಲ್ಲಿ ವಿಶ್ಲೇಷಿಸುತ್ತಾ , ಶೋಧಿಸುತ್ತಾ ಅನೇಕಾರ್ಥಗಳನ್ನು ಧ್ವನಿಸುವಂತೆ ಮಾಡುತ್ತದೆ.

‘‘ಸಾವಿನ ದಶಾವತಾರ’’ ಕಾದಂಬರಿಯಲ್ಲಿ ಅನ್ವೇಷಕರು ನೀಡುವ ಪ್ರಶ್ನೆಗಳು ಹಾಗೂ ಉತ್ತರ ರೂಪದ ವಿವರಣೆಗಳು ಒಂದು ರೀತಿಯಲ್ಲಿ ಪರಕಾಯ ಪ್ರವೇಶದ ರೂಪದಲ್ಲಿ ಬದುಕನ್ನು ಗ್ರಹಿಸಲು ತೊಡಗುತ್ತದೆ ಅನ್ನಬಹುದು. ಸಾವಿನ ಅಂತಿಮ ಕ್ರಿಯೆಗೆ ವಸ್ತುವಾಗಿರುವ ಘಟನೆಗಳು ಉದಾಹರಣೆಗೆ ‘‘ಎಮರಾಲ್ಡ್ ಅಪಾರ್ಟಮೆಂಟ್’’ ಟೆರೇಸಿನಲ್ಲಿ ಚೆಂಡನ್ನು ಝಾಡಿಸುತ್ತಾ ಆಡುತ್ತಿರುವ ಮಕ್ಕಳೊಂದಿಗೆ ಆಡುತ್ತಿರುವ ಪ್ರತಾಪ ಚಿಕ್ಕಮಗುವಿನ ಸಾವಿನ ಸನ್ನಿವೇಶ ಆಧುನಿಕ ಬದುಕಿನ ವಿನ್ಯಾಸದ ಜತೆಗೆ ತಳಕು ಹಾಕಿಕೊಂಡಿದೆ. ವಾಸ್ತವ ತನ್ನೆಲ್ಲಾ ಅಸಾಧಾರಣ ಅವಲೋಕನ ಸಾಮರ್ಥ್ಯದಿಂದ ಮನಕಲಕುವ ಘಟನಾವಳಿಯಿಂದ ಜೀವನದ ಅರ್ಥಸಾಧ್ಯತೆ ಹುಡುಕುತ್ತದೆ, ಪ್ರಶ್ನಿಸುತ್ತದೆ. ಸತ್ಯವನ್ನು ಹುಡುಕುವ ಹಾದಿ ಗಾಢವಾದ ವಿಷಾದದಿಂದ ಹೊರಡುತ್ತದೆ. ಇಲ್ಲಿ ನಿರೂಪಕ ಹೇಳುವ ಮಾತು ಹೀಗಿದೆ. ‘‘ನಾನು ಡೆತ್ ಸರ್ವಿಸ್’’ ಕೇಳಿಕೊಂಡು ಬರುವವರು ಮಕ್ಕಳ ಸಾವಿನ ಸುದ್ದಿ ತರದೇ ಇರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ಪ್ರಾರ್ಥನೆ ಢೋಂಗಿ ಇರಬೇಕು. ಬಂದೇ ಬಿಟ್ಟಿತ್ತು.

(“EMARALD APARTMENT”) ನಿಂದ ಪ್ರತಾಪ ಮಗುವಿನ ಸಾವಿನ ಸುದ್ದಿ 17 ಅಂತಸ್ತುಗಳ ಅಪಾರ್ಟ್‌ಮೆಂಟಿನಲ್ಲಿ ವಾಸಿಸುವರೆಲ್ಲ್ಲ ಸ್ಥಿತಿವಂತ ಕುಟುಂಬಗಳು. ಅಪಾರ್ಟ್‌ಮೆಂಟ್ ಒಳಗಡೆ ದೊಡ್ಡ ಉದ್ಯಾನವನ ಇದೆ. ಮಹಾನಗರದಲ್ಲಿ ದೇವದಾರು ವೃಕ ್ಷಗಳಿರುವ ವಸತಿ ಸಂಕೀರ್ಣವೆಂದರೆ ಇದೊಂದೆ. ಅಪಾರ್ಟ್‌ಮೆಂಟ್ ಕೆಲಸಮಾಡುವ ಕಾರ್ಮಿಕರಿಗೆ ಒಳಗಡೆಯೂ ಕ್ವಾರ್ಟಸ್. ಮೂರು ಡಿಪಾರ್ಟ್‌ಮೆಂಟ್ ಸ್ಟೋರ್ಸ್‌ ಇವೆ. ಎಲ್ಲವು (Exelunce)   ಪ್ರತಾಪ ಎಂಬ ಮಗು ಮಕ್ಕಳೊಂದಿಗೆ ಚೆಂಡಾಟ ಟೆರೇಸಿನಲ್ಲಿ ಆಡುತ್ತಾ ಚೆಂಡು ಚಿಮ್ಮುತ್ತಾ ಧಾವಿಸಿ ಕೆಳಗೆ ಬಿದ್ದಾಗ ಚೆಂಡಿನ ಹಿಂದೆಯೇ ನುಗ್ಗಿ ಟೆಲಿವಿಷನ್ ಹಾಗೂ ಕಾಮಿಕ್ಸ್ ಓದಿ ಚೆಂಡು ಹಿಡಿದೇ ಬಿಡುವನೆಂದು ಟೆರೇಸಿನಿಂದ ಕೆಳಗಡೆ ಧುಮುಕಿ ಸಾವನ್ನಪ್ಪಿದ್ದಾನೆ. ಇಲ್ಲಿ ಕಾದಂಬರಿಯ ನಿರೂಪಕ ಈ ಸಾವಿನ ಬಗ್ಗೆ ಹಾಗೂ ಬೇರೆ ಬೇರೆ ಸಾವಿನ ಘಟನೆಗಳ ಬಗ್ಗೆ ಹೇಳುವಾಗ ಅಪರೂಪದ ಒಳನೋಟಗಳನ್ನು ಚಿಕಿತ್ಸಕವಾದ ನಿರೂಪಣೆ ಮೂಲಕ ಕಾಣಿಸುತ್ತಾನೆ. ಅದು ನಮ್ಮ ವರ್ತಮಾನಕ್ಕೆ ಮುಖಾಮುಖಿಯಾಗಿ ಸಾಮುದಾಯಿಕ ನೆಲೆಯ ಎಲ್ಲಾ ಹಿಪೊಕ್ರಸಿಯನ್ನು ಪ್ರಶ್ನಿಸುತ್ತದೆ. ಯಾರಿಗೆ ಯಾರೂ ಇಲ್ಲದ ಜಗತ್ತು. ಸಾವಿನ ಸಂದರ್ಭದಲ್ಲೂ ಲಾಭತನ ತೋರುವ ನಡುವಳಿಕೆಯ ಒಳಮುಖವನ್ನು ವ್ಯಂಗ್ಯದ ಮೂಲಕ ಅನಾವರಣಗೊಳಿಸುವುದು ಲೇಖಕರು ಇಲ್ಲಿ ಹೊಸತೇನೊ. ಒಂದು ಸೃಷ್ಟಿಸುವುದರಲ್ಲಿ ಹೊರಟಿದ್ದಾರೆ ಅನಿಸುತ್ತಿದೆ.

ಲೇಖಕರು: ಕೆ.ಸತ್ಯನಾರಾಯಣ

ಪ್ರಕಾಶನ: ಅಭಿನವ 17/18-2 ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040

Writer - ಕೆ. ತಾರಾ ಭಟ್

contributor

Editor - ಕೆ. ತಾರಾ ಭಟ್

contributor

Similar News