ಸಿದ್ದರಾಮಯ್ಯ ಆಡಳಿತ ಕಂಡು ಜನ ಬೇಸತ್ತಿದ್ದಾರೆ: ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ

Update: 2018-04-08 14:21 GMT

ಮೈಸೂರು,ಎ.8: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಕಂಡು ಜನ ಬೇಸತ್ತಿದ್ದಾರೆ. ನಂಬಿದ ವ್ಯಕ್ತಿಗಳಿಗೆ ಮೋಸ ಮಾಡುವುದು ಹೇಗೆ ಎಂಬುದು ರಕ್ತದಲ್ಲಿಯೆ ಅವರಿಗೆ ಕರಗತವಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಎಸ್‍ಪಿ ಮತ್ತು ಜೆಡಿಎಸ್ ವತಿಯಿಂದ ರವಿವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷಣಕ್ಕೂ ಮುನ್ನ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ರಾಹುಲ್ ಗಾಂಧಿಯೊಂದಿಗೆ ಕುಳಿತು ಕಾಂಗ್ರೆಸ್ ಮುಖಂಡರು ತೆಗೆಸಿಕೊಂಡಿರುವ ಫೋಟೋಗೆ ಜಿ.ಟಿ. ದೇವೇಗೌಡ ವ್ಯಂಗ್ಯವಾಡಿ ನಂತರ ಮಾತನಾಡಿದರು.

ಸಿದ್ದರಾಮಯ್ಯ ಅವರ ಆಡಳಿತದಿಂದ ಕಾಂಗ್ರೆಸ್ ಪಕ್ಷ ಬೆತ್ತಲೆಯಾಗಿದೆ. ನಂಬಿದ ವ್ಯಕ್ತಿಗಳಿಗೆ ಹೇಗೆ ಮೋಸ ಮಾಡುವುದು ಎಂಬುದು ಅವರಿಗೆ ರಕ್ತದಲ್ಲಿಯೇ ಕರಗತವಾಗಿದೆ. ಅಂಬೇಡ್ಕರ್ ವಿಚಾರವಾದಿ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರಂತಹ ದಲಿತ ನಾಯಕರು ಮತ್ತೊಮ್ಮೆ ಹುಟ್ಟುವುದಿಲ್ಲ. ಅಂತಹ ನಾಯಕರನ್ನೇ ಮುಗಿಸುವ ಯತ್ನಕ್ಕೆ ಕೈ ಹಾಕಿದರು. ಸಿಎಂ ಸೂಟ್‍ಕೇಸ್‍ನಲ್ಲಿ ದಲಿತರ ಧ್ವನಿ ಅಡಗಿಸಿದರು. ಸಿದ್ದರಾಮಯ್ಯರಿಗೆ ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ಜಿ.ಟಿ. ದೇವೇಗೌಡ ಹರಿಹಾಯ್ದರು.

ಹೊರಗಿನಿಂದ ಕಾಂಗ್ರೆಸ್‍ಗೆ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮೂಲ ಕಾಂಗ್ರೆಸ್ ನಾಯಕರು ಏನೂ ಮಾಡಲು ಆಗುತ್ತಿಲ್ಲ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೆರಗು ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ. ಮುಂದೆ ಇವರಿಗೆ ಇದೆ ಗತಿ ಎಂದು ವ್ಯಂಗ್ಯವಾಡಿದರು. 

ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಲು ಜಿ.ಪರಮೇಶ್ವರ್ ಸೋಲಿಸುವಂತೆ ಕೊರಟಗೆರೆಯಲ್ಲಿ  ತಮ್ಮ ಸಮಾಜದವರು ಜೆಡಿಎಸ್‍ಗೆ ವೋಟ್ ಹಾಕುವಂತೆ ಮಾಡಿದರು. ಪರಮೇಶ್ವರ್ ಸೋತ ಮೇಲೆ ಸಿದ್ದರಾಮಯ್ಯ ಸಿಎಂ ಆಗಿದ್ದು. ಇಲ್ಲವಾದರೆ ಯಾವುದಾದರೊಂದು ಸಚಿವ ಸ್ಥಾನ ಪಡೆದು ಕುಳಿತುಕೊಳ್ಳಬೇಕಿತ್ತು. ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ಪಾದದ ಕೆಳಗೆ ಇದೆ ಎಂದು ಟೀಕಿಸಿದರು. 

ಕಾಂಗ್ರೆಸ್‍ನಲ್ಲಿ ಉಳಿಗಾಲವಿಲ್ಲ ಅಂತಾ ಜನ ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ. ಸಿದ್ದರಾಮಯ್ಯ ಜೊತೆ ಯಾರು ಬರುತ್ತಿಲ್ಲ. ಯಾವ ಊರಿನಲ್ಲೂ ಸಿಎಂಗೆ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ವೀರಶೈವ ಸಮಾಜವನ್ನು ಸಿದ್ದರಾಮಯ್ಯ ಇಬ್ಭಾಗ ಮಾಡಿದರು. ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಜನ ತೀರ್ಮಾನಿಸಿದ್ದಾರೆ. ಇವರ ಕೊನೆಯ ಚುನಾವಣೆಯಲ್ಲಿ ಸೋಲಿನ ಕಾಣಿಕೆ ಕೊಟ್ಟು ಮನೆಗೆ ಕಳುಹಿಸಲಿದ್ದಾರೆ ಎಂದು ಜಿ ಟಿ ದೇವೇಗೌಡ ಭವಿಷ್ಯ ನುಡಿದರು. 

ಕಾರ್ಯಕ್ರಮದಲ್ಲಿ ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್, ಸೋಸಲೆ ಸಿದ್ಧರಾಜು, ಮಹೇಶ್, ಪ್ರೊ.ಪಿ.ವಿ.ನಂಜರಾಜೇಅರಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News