ದಾವಣಗೆರೆ: ಆಸ್ತಿ ವಿವಾದ; 250ಕ್ಕೂ ಅಧಿಕ ಅಡಿಕೆ ಮರಗಳ ನಾಶ

Update: 2018-04-09 18:05 GMT

ದಾವಣಗೆರೆ,ಎ.09: ಆಸ್ತಿ ವಿಚಾರವಾಗಿ ಫಲ ನೀಡುತ್ತಿದ್ದ ಸುಮಾರು 250ಕ್ಕೂ ಅಧಿಕ ಅಡಿಕೆ ಮರಗಳನ್ನು ಜೆಸಿಬಿ ಯಂತ್ರದಿಂದ ನೆಲಸಮಗೊಳಿಸಿದ ಘಟನೆ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಹೊಲದಲ್ಲಿ ಭಾನುವಾರ ರಾತ್ರಿ ನಡೆದಿದೆ.

ತಾಲೂಕಿನ ಹುಣಸೇಕಟ್ಟೆ ಗ್ರಾಮದ ಶೇಖರಯ್ಯ ಎಂಬುವರಿಗೆ ಪಿತ್ರಾರ್ಜಿತವಾಗಿ ಬಂದಿದ್ದ 1 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ರಾತ್ರೋರಾತ್ರಿ ಜೆಸಿಬಿ ಯಂತ್ರದಿಂದ ನೆಲಸಮ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಅಡಿಕೆ ಸಸಿ ಸಾಕಿ, ಅವುಗಳು ಫಲ ಬಿಡುವಂತೆ ಮಾಡುವಲ್ಲಿ ಶೇಖರಯ್ಯ ಮತ್ತು ಕುಟುಂಬ ಸಾಕಷ್ಟು ಶ್ರಮ, ಹಣ ಹಾಕಿತ್ತು. ಅಡಿಕೆ ತೋಟಕ್ಕೆಂದೇ ಲಕ್ಷಾಂತರ ರು. ಸಾಲ ಮಾಡಿಕೊಂಡು, ಫಸಲು ಬರುತ್ತಿದ್ದಂತೆ ಸಾಲ ತೀರಿಸುವ ಉದ್ದೇಶ ಹೊಂದಿದ್ದರು. ಆದರೆ, ಆಸ್ತಿಯ ವಿಚಾರಕ್ಕೆ ಶೇಖರಯ್ಯ ಬಂಧುಗಳ ಪೈಕಿ ಇಬ್ಬರು ಜೆಸಿಬಿ ಯಂತ್ರದಿಂದ ಮರ ನೆಲಸಮ ಮಾಡಿಸಿದ್ದಾರೆ ಎನ್ನಲಾಗಿದೆ.

ಶೇಖರಯ್ಯಗೆ ಪಿತಾರ್ಜಿತವಾಗಿ ಬಂದಿದ್ದ 1 ಎಕರೆಯಲ್ಲಿ ಅಡಿಕೆ ಬೆಳೆದಿದ್ದರು. ಅಡಿಕೆ ಬೆಳೆದು, ಫಸಲಿಗೆ ಬರುವವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕೆಲ ವರ್ಷಗಳಿಂದಲೂ ಶೇಖರಯ್ಯ ಅಡಿಕೆ ಬೆಳೆದಿದ್ದ 1 ಎಕರೆ ಜಮೀನು ತಮಗೆ ಸೇರಬೇಕೆಂದು ಬಂಧುಗಳಾದ ವೀರಯ್ಯ, ರಾಚಯ್ಯ ತಕರಾರು ತೆಗೆದಿದ್ದರು. ಈ ವಿಚಾರದಲ್ಲಿ ಸಾಕಷ್ಟು ರಾಜಿ ಪಂಚಾಯಿತಿಗಳು ಸಹ ನಡೆದಿದ್ದವು ಎನ್ನಲಾಗಿದೆ. 

ಪಂಚಾಯಿತಿಯಲ್ಲಿ ಯಾರೂ ಹೊಂದಾಣಿಕೆಗೆ ಮಾಡಿಕೊಳ್ಳಲಿಲ್ಲ. ಅಂತಿಮವಾಗಿ 1 ಎಕರೆ ಜಮೀನಿನ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪಿತ್ರಾರ್ಜಿತವಾಗಿ ಬಂದಿದ್ದ ಜಮೀನನ್ನು ಶೇಖರಯ್ಯ ನೋಡಿಕೊಂಡಿದ್ದರು. 

ಈ ಹಿಂದಿನಿಂದಲೂ ಇಬ್ಬರಿಗೂ 9 ಎಕರೆ ಜಮೀನು ನೀಡಿದ್ದು, ಶೇಖರಯ್ಯಗೆ ಕೇವಲ 7 ಎಕರೆ ಜಮೀನು ಮಾತ್ರ ನೀಡಲಾಗಿತ್ತು. ವಾಸ್ತವ ಹೀಗಿದ್ದರೂ ಕಳೆದೊಂದು ದಶಕದಿಂದಲೂ ಇಬ್ಬರೂ 1 ಎಕರೆ ಜಮೀನಿನಲ್ಲಿ ತಮಗೂ ಪಾಲು ಬೇಕೆಂಬುದಾಗಿ ಒತ್ತಾಯ ಮಾಡುತ್ತಿದ್ದರು. 4 ವರ್ಷದ ಹಿಂದಷ್ಟೇ 40 ಅಡಿಕೆ ಗಿಡ ಕಡಿದು ಹಾಕಿ, ಬೆದರಿಕೆ ಹಾಕಿದ್ದರು ಎಂದು ಶೇಖರಯ್ಯ ಆರೋಪಿಸುತ್ತಾರೆ.

ಜಮೀನು ವಿಚಾರ ನ್ಯಾಯಾಲಯದಲ್ಲಿದ್ದರೂ, ತಮಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ಅಡಿಕೆ ಮರ ನಾಶ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಬೆಳೆ ನಾಶ ಮಾಡಿದವರಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಶೇಖರಯ್ಯ ಒತ್ತಾಯಿಸುತ್ತಾರೆ. 

ಅಡಿಕೆ ಬೆಳೆಗಳನ್ನು ಕಳೆದುಕೊಂಡ ರೈತ ಶೇಖರಯ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News