ಕಿಲ್ಲರ್ ರೊಬೊಟ್‌ಗೆ ತಜ್ಞರ ಬಹಿಷ್ಕಾರ

Update: 2018-04-09 18:20 GMT

ಕೃತಕ ಬುದ್ಧಿ ಮತ್ತೆ (ಆರ್ಟಿಫೀಶಿಯಲ್ ಇಂಟಲಿಜೆನ್ಸ್-ಎಐ) ಸಮುದಾಯ ‘ಕಿಲ್ಲರ್ ರೊಬೊಟ್’ಗಳನ್ನು ಸೃಷ್ಟಿಸಬೇಡಿ ಎಂದು ಸಂಶೋಧಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಸ್ವಾಯತ್ತ ಶಸ್ತ್ರಾಸ್ತ್ರ ಅಭಿವೃದ್ಧಿಯ ಜಾಗತಿಕ ಸ್ಪರ್ಧೆಯಲ್ಲಿ ಭಾಗಿಯಾಗಲು, ಸೇನಾ ಶಸ್ತ್ರಾಸ್ತ್ರಗಳಿಗೆ ಅನ್ವಯಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುತ್ತಿರುವ ದಕ್ಷಿಣ ಕೊರಿಯಾ, ದೇಯೋಜಿಯೋನ್‌ನಲ್ಲಿರುವ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು, ಕೆಎಐಎಸ್‌ಟಿಯನ್ನು ಬಹಿಷ್ಕರಿಸುವಂತೆ ಆಗ್ರಹಿಸಿ ಹೆಚ್ಚು ಕಡಿಮೆ 30 ರಾಷ್ಟ್ರಗಳ ಸುಮಾರು 60 ಕೃತಕ ಬುದ್ಧಿಮತ್ತೆ ತಜ್ಞರು ಹಾಗೂ ರೋಬೊಟಿಕ್ ತಜ್ಞರು ಪತ್ರ ಬರೆದು ಸಹಿ ಹಾಕಿದ್ದಾರೆ ಎಂದು ಬಹಿರಂಗ ಪತ್ರ ಹೇಳಿದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸೇನಾ ಶ್ರೇಣಿಯ ಕೃತಕ ಬುದ್ಧಿ ಮತ್ತೆಯ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವುದು ಹೇಗೆ ಎಂದು ಕೆಎಐಎಸ್‌ಟಿ ಸಂಶೋಧನೆ ನಡೆಸುತ್ತಲಿದೆ. ದಕ್ಷಿಣ ಕೊರಿಯಾದ ಮುಂಚೂಣಿ ಆಯುಧ ಕಂಪೆನಿ ಹನ್ವಾಹ್ ಸಿಸ್ಟಮ್ಸ್‌ನ ಸಹಯೋಗದೊಂದಿಗೆ ಕೆಎಐಎಸ್‌ಟಿ ಫೆಬ್ರವರಿ 20ರಂದು ಹೊಸ ಶಸ್ತ್ರಾಸ್ತ್ರ ಪೂರೈಕೆ ಆರಂಭಿಸಿರುವುದನ್ನು ತಿಳಿದ ಬಳಿಕ ಜಗತ್ತಿನಾದ್ಯಂತದ ಕೃತಕ ಬುದ್ಧಿಮತ್ತೆಯ ತಜ್ಞರು ಕಳವಳಗೊಂಡು ಈ ಬಹಿರಂಗಪತ್ರ ಬರೆದಿದ್ದಾರೆ. ಕೃತಕ ಬುದ್ಧಿ ಮತ್ತೆಯ ‘ಕಿಲ್ಲರ್ ರೊಬೊಟ್’ಗಳಿಂದ ಅಂತರ್‌ರಾಷ್ಟ್ರೀಯ ಸಮುದಾಯವನ್ನು ರಕ್ಷಿಸುವುದು ಹೇಗೆ ಎಂದು ವಿಶ್ವಸಂಸ್ಥೆ ಈಗಾಗಲೇ ಚರ್ಚಿಸುತ್ತಿದೆ. ‘‘ಕೃತಕ ಬುದ್ಧಿ ಮತ್ತೆಯ ಕಿಲ್ಲರ್ ರೊಬೊಟ್‌ಗಳಂತಹ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಸ್ಫರ್ದೆಗೆ ಕೆಎಐಎಸ್‌ಟಿಯಂತಹ ಪ್ರತಿಷ್ಠಿತ ಸಂಸ್ಥೆಗಳು ಉತ್ತೇಜನ ನೀಡುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ’’ ಎಂದು ಸಂಶೋಧಕರು ಪತ್ರದಲ್ಲಿ ಹೇಳಿದ್ದಾರೆ. ಕೆಎಐಎಸ್‌ಟಿಯ ನೂತನ ಯೋಜನೆಯನ್ನು ನಿರುತ್ತೇಜಿಸಲು, ಮಾನವನ ಅರ್ಥವತ್ತಾದ ನಿಯಂತ್ರಣದ ಕೊರತೆ ಇರುವ ಸ್ವಾಯತ್ತ ಶಸ್ತ್ರಾಸ್ತ್ರಗಳನ್ನು ಕೇಂದ್ರ ಅಭಿವೃದ್ಧಿಪಡಿಸುವುದಿಲ್ಲ ಎಂದು ವಿಶ್ವವಿದ್ಯಾನಿಲಯದ ಅಧ್ಯಕ್ಷರು ಸ್ಪಷ್ಟಪಡಿಸುವವರೆಗೆ ಸಂಶೋಧಕರು ವಿಶ್ವವಿದ್ಯಾನಿಲಯವನ್ನು ಬಹಿಷ್ಕರಿಸಲಿದ್ದಾರೆ. ಈ ಬಹಿಷ್ಕಾರ ಎಲ್ಲವನ್ನೂ ಒಳಗೊಳ್ಳುತ್ತದೆ. ‘‘ನಾವು ಕೆಎಐಎಸ್‌ಟಿಗೆ ಭೇಟಿ ನೀಡುವುದಿಲ್ಲ, ಕೆಎಐಎಸ್‌ಟಿ ಸಂದರ್ಶಕರಿಗೆ ಅವಕಾಶ ನೀಡುವುದಿಲ್ಲ. ಕೆಎಐಎಸ್‌ಟಿ ಭಾಗಿಯಾಗಿರುವ ಯಾವುದೇ ಸಂಶೋಧನಾ ಯೋಜನೆಗಳಿಗೆ ಕೊಡುಗೆ ನೀಡುವುದಿಲ್ಲ’’ ಎಂದು ಸಂಶೋಧಕರು ಹೇಳಿದ್ದಾರೆ.

Writer - ವಿಸ್ಮಯ

contributor

Editor - ವಿಸ್ಮಯ

contributor

Similar News