ಧಾರವಾಡ: ಅಕ್ರಮವಾಗಿ ಸಾಗಿಸುತ್ತಿದ್ದ 7 ಕೆಜಿ ಚಿನ್ನ ವಶ

Update: 2018-04-10 12:52 GMT

ಧಾರವಾಡ, ಎ.10: ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಸುಮಾರು 2.55 ಕೋಟಿ ರೂ. ಮೌಲ್ಯದ 7 ಕೆಜಿ 722 ಗ್ರಾಂ ಬಂಗಾರವನ್ನು ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಳ್ನಾವರ ಸಮೀಪದ ಕಡಬಗಟ್ಟಿ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ.

ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ಈ ಅಪಾರ ಪ್ರಮಾಣದ ಬಂಗಾರವನ್ನು ಗೋವಾದಿಂದ ಹುಬ್ಬಳ್ಳಿಯ ಕಡೆಗೆ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕಡಬಗಟ್ಟಿ ಎಸ್.ಎಸ್.ಟಿ ಚೆಕ್‌ಪೋಸ್ಟ್‌ನಲ್ಲಿ ಇದನ್ನು ವಶಪಡಿಸಿಕೊಳ್ಳಲಾಯಿತು.

ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಈ ಚಿನ್ನ ಸಾಗಿಸುತ್ತಿರಬಹುದು ಎಂಬ ಸಂಶಯದ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ನೇತೃತ್ವದ ತಂಡ ದಾಳಿ ನಡೆಸಿ ಚಿನ್ನವನ್ನು ವಶಪಡಿಸಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಜಿಯ ಪ್ರತೀಕ್ ಹಾಗೂ ರಾಜಸ್ಥಾನದ ವಿಕ್ರಮಸಿಂಗ್ ದೇಸಿಂಗ್ ರಾಠೋಡ ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ಡಿಸಿಎಫ್ ಮಹೇಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಡಿವೈಎಸ್ಪಿ ಚಂದ್ರಶೇಖರ್, ಚುನಾವಣಾಧಿಕಾರಿ ಡಾ.ಔದ್ರಾಮ ಸೇರಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News