ದಾವಣಗೆರೆ: ಬಾಲ್ಯ ವಿವಾಹಕ್ಕೆ ತಡೆ

Update: 2018-04-10 16:58 GMT

ದಾವಣಗೆರೆ,ಎ.10: ಅಪ್ರಾಪ್ತೆಯ ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ತೆರಳಿ ಮದುವೆ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಡಾನ್ ಬಾಸ್ಕೋ, ಮಕ್ಕಳ ರಕ್ಷಣಾ ಘಟಕ, ಸಿಡಿಪಿಓ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಯಶಸ್ವಿಯಾದ ಘಟನೆ ನಗರದಲ್ಲಿ ಸೋಮವಾರ ನಡೆಯಿತು. 

ಇಲ್ಲಿನ ದೇವರಾಜ ಅರಸ್ ಬಡಾವಣೆಯ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಅಪ್ರಾಪ್ತೆಗೆ ಮದುವೆ ಮಾಡುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿ(1098) ಡಾನ್‍ಬಾಸ್ಕೋಗೆ ಕರೆಯೊಂದು ಬಂದ ಹಿನ್ನೆಲೆಯಲ್ಲಿ ಚೈಲ್ಡ್ ಲೈನ್ ಸಂಯೋಜಕ ಟಿ.ಎಂ. ಕೊಟ್ರೇಶ, ಸದಸ್ಯ ಬಿ.ರವಿ, ಸಿಡಿಪಿಓ ವೀಣಾ, ಮಕ್ಕಳ ಜಿಲ್ಲಾ ರಕ್ಷಣಾ ಘಟಕದ ಆಪ್ತ ಸಮಾಲೋಚಕ ಶಿವರಾಜ್‍ರನ್ನು ಒಳಗೊಂಡ ತಂಡ ಕಲ್ಯಾಣ ಮಂಟಪಕ್ಕೆ ತೆರಳಿತು. 

ಬಸವ ನಗರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಸೂರ್ಯನಾರಾಯಣ ಹಾಗೂ ಸಿಬ್ಬಂದಿ ಸಹ ತೆರಳಿದ್ದರು. ಸೋಮವಾರ ಬೆಳಿಗ್ಗೆ 6.30ಕ್ಕೆ ಕಲ್ಯಾಣ ಮಂಟಪಕ್ಕೆ ಹೋದಾಗ ತಮ್ಮ ಹುಡುಗಿಗೆ 18 ವರ್ಷವಾಗಿದೆಯೆಂದು ವಾದಿಸಿದರು. ಅಪ್ರಾಪ್ತೆ ಬದಲಿಗೆ ಮತ್ತೊಬ್ಬ ಯುವತಿಯನ್ನು ತೋರಿಸಿ, ಇದೇ ಯುವತಿಗೆ ಮದುವೆಯೆಂಬುದಾಗಿ ನಂಬಿಸಲು ವಿಫಲ ಸಾಹಸ ಮಾಡಿದರು. ಆದರೆ, ನೀವು ತೋರಿಸುತ್ತಿರುವ ಯುವತಿಯನ್ನೂ ತಕ್ಷಣವೇ ನಮ್ಮ ವಶಕ್ಕೆ ಪಡೆಯುತ್ತೇವೆಂದಾಗ ಬಚ್ಚಿಟ್ಟಿದ್ದ ಅಪ್ರಾಪ್ತೆಯನ್ನು ತಂಡದ ಎದುರು ಹಾಜರುಪಡಿಸಲಾಯಿತು. 

ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ, ಇಂಡಸ್ಟ್ರಿಯಲ್ ಏರಿಯಾದ ಬಾಲಕಿಯರ ಬಾಲ ಮಂದಿರಕ್ಕೆ ಕರೆದೊಯ್ಯಲಾಯಿತು. ಎ.10ರಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಪಾಲಕರು ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ನಂತರ ಸಮಿತಿ ಏನು ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ಬದ್ಧರಾಗಿರಬೇಕು ಎಂದು ಎಚ್ಚರಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News