ತುಮಕೂರು: ಸೊಗಡು ಶಿವಣ್ಣ ಮನೆಗೆ ಶಾಸಕ ಡಾ.ರಫೀಕ್ ಅಹಮದ್ ಭೇಟಿ

Update: 2018-04-10 17:32 GMT

ತುಮಕೂರು.ಏ.10: ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ರಫೀಕ್ ಅಹಮದ್ ಇಂದು ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಮಾಜಿ ಸಚಿವ ಎಸ್.ಶಿವಣ್ಣ ಅವರ ಮನೆಗೆ ಭೇಟಿ ನೀಡಿ, ಮತಯಾಚನೆ ನಡೆಸಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ.ರಫೀಕ್ ಅಹಮದ್ ಸೋಮವಾರದಿಂದ ತಮ್ಮ ಅಧಿಕೃತ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು, ಸೋಮವಾರ ನಗರದ 2ನೇ ವಾರ್ಡಿನ ಅಂತರಸನಹಳ್ಳಿ ಸುತ್ತಮುತ್ತಲ ಪ್ರದೇಶಗಳ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದರು. ಮಂಗಳವಾರ ಬೆಳಗ್ಗೆ ನಗರದ ಚಿಕ್ಕಪಟ್ಟೆ, ಗಾರ್ಡನ್ ರಸ್ತೆ,ಅಗ್ರಹಾರ,ಮಂಡಿಪೇಟೆ ಸೇರಿದಂತೆ 7ನೇ ವಾರ್ಡಿನಲ್ಲಿ ಮತಯಾಚನೆ ಮಾಡಿದ್ದು, ಈ ವೇಳೆ ಚಿಕ್ಕಪೇಟೆ ಮುಖ್ಯರಸ್ತೆಯಲ್ಲಿರುವ ಮಾಜಿ ಸಚಿವ ಹಾಗೂ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಸ್.ಶಿವಣ್ಣ ಅವರ ಮನೆಗೆ ಭೇಟಿ ನೀಡಿದ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು.

ಮತಯಾಚನೆಗೆ ಆಗಮಿಸಿದ ಹಾಲಿ ಶಾಸಕರನ್ನು ನಗುತ್ತಲೇ ಸ್ವಾಗತಿಸಿದ ಮಾಜಿ ಸಚಿವರು, ಅವರಿಗೆ ಕಾಫೀ, ಟೀ ನೀಡಿ ಸತ್ಕರಿಸಿದರಲ್ಲದೆ, ಪರಸ್ವರ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದರು ಎಂದು ಬಲ್ಲ ಮೂಲಗಳು ತಿಳಿಸಿವೆ. 

1994ರಿಂದ 2013ರವರೆಗೆ ನಿರಂತರವಾಗಿ 4 ಬಾರಿ ಶಾಸಕರಾಗಿದ್ದ ಎಸ್.ಶಿವಣ್ಣ, ಎರಡು ಬಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ನಡುವಿನ ಕಿತ್ತಾಟ ಮತ್ತು ಶಾಂತಿಯ ಹೆಸರಿನಲ್ಲಿ ಅಭಿವೃದ್ದಿ ನಿರ್ಲಕ್ಷಿಸಿದ್ದರ ಫಲವಾಗಿ ಕೇವಲ 16 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದರು. 2014ರ ಲೋಕಸಭಾ ಚುನಾವಣೆ ವೇಳೆಗೆ ಕೆಜೆಪಿ-ಬಿಜೆಪಿ ಒಂದಾದರೂ ಹಿಂದಿನ ತಿಕ್ಕಾಟಗಳು ಮುಂದುವರೆದಿದ್ದ ಪರಿಣಾಮ ಬಿಜೆಪಿ ಸೋಲು ಅನುಭವಿಸಿತ್ತು. ಆನಂತರದಲ್ಲಿ ಜಿ.ಎಸ್.ಬಸವರಾಜು ಮತ್ತು ಎಸ್.ಶಿವಣ್ಣ ನಡುವಿನ ಭಿನ್ನಮತ ಮತ್ತಷ್ಟು ಉಲ್ಬಣಗೊಂಡು, ಇಬ್ಬರು ತುಮಕೂರು ನಗರ ವಿಧಾನಸಭಾ ಟಿಕೇಟ್ ಪೈಪೋಟಿ ನಡೆಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಹಾಲಿ ಶಾಸಕರು ಮಾಜಿ ಶಾಸಕರ ಮನೆ ಭೇಟಿ ನೀಡಿ ಮತಯಾಚನೆ ಮಾಡಿರುವುದು ಚುನಾವಣಾ ಕಣದಲ್ಲಿ ಶಾಂತಿ ನೆಲಸಲಿದೆ ಎಂಬುದು ಒಂದು ಕಡೆಯಾದರೆ, ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬುದು ಸಾಬೀತಾದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News