ಮೊಳಕಾಲ್ಮೂರು ಟಿಕೆಟ್‌ಗಾಗಿ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರಿಂದ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಯತ್ನ

Update: 2018-04-11 16:12 GMT

ಬೆಂಗಳೂರು, ಎ. 11: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಶಾಸಕ ಎಸ್.ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಬಳ್ಳಾರಿಯಲ್ಲಿನ ಸಂಸದ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಮೊಳಕಾಲ್ಮೂರು ಕ್ಷೇತ್ರದ ಹಾಲಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಕ್ಷೇತ್ರದ ಸಾವಿರಾರು ಮಂದಿ ನೂರಕ್ಕೂ ಹೆಚ್ಚು ವಾಹನಗಳಲ್ಲಿ ಬಳ್ಳಾರಿಗೆ ಧಾವಿಸಿದರು. ಇದರಿಂದ ಕ್ಷಣಕಾಲ ವಿಚಲಿತರಾದ ಬಳ್ಳಾರಿ ಪೊಲೀಸರು ಬೆಂಗಲಿಗರನ್ನು ನಗರದ ಎಪಿಎಂಸಿ ಚೆಕ್‌ಪೋಸ್ಟ್ ಬಳಿಯೇ ತಡೆದರು.

ಇದರಿಂದ ತೀವ್ರ ಆಕ್ರೋಶಗೊಂಡ ತಿಪ್ಪೇಸ್ವಾಮಿ ಬೆಂಬಲಿಗರು ರಸ್ತೆ ತಡೆ ನಡೆಸಿ ತಿಪ್ಪೇಸ್ವಾಮಿಗೆ ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಘೋಷಿಸಬೇಕು. ಸ್ಥಳಕ್ಕೆ ಸಂಸದ ಶ್ರೀರಾಮುಲು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಕೂಡಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಸಂಸದ ಶ್ರೀರಾಮುಲು ಅವರು ಇಲ್ಲದಿರುವುದರಿಂದ ಅವರ ಮನೆಗೆ ಮುತ್ತಿಗೆ ಹಾಕಲು ಅವಕಾಶ ಕೊಡುವುದಿಲ್ಲ. ಶಾಂತಿಯುತವಾಗಿ ಮೆರವಣಿಗೆ ನಡೆಸಿ ಹಿಂದಿರುಗಿ ಎಂದು ಸೂಚಿಸಿದರು.

ಎಸ್ಪಿ ಅವರ ಮಾತಿಗೆ ಸಮ್ಮತಿ ಸೂಚಿಸಿದ ತಿಪ್ಪೇಸ್ವಾಮಿ ಬೆಂಬಲಿಗರು, ನಗರದ ಎಚ್.ಆರ್.ಗವಿಯಪ್ಪ ವೃತ್ತದವರೆಗೂ ಶಾಂತಿಯುತ ರ್ಯಾಲಿ ನಡೆಸಿದರು. ಅಲ್ಲಿಂದ ಅವರು ಮುಂದಕ್ಕೆ ಹೋಗದಂತೆ ತಡೆದ ಹಿನ್ನೆಲೆಯಲ್ಲ್ಲಿ ‘ಬುಡಾ’ ಆವರಣದ ಮೂಲಕ ಬೆಂಬಲಿಗರು ವಾಪಸಾದರು.

ಮೊಳಕಾಲ್ಮೂರು ಕ್ಷೇತ್ರದ ಹಾಲಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಿದ್ದ ಶ್ರೀರಾಮುಲು ಅವರೇ ಸ್ಪರ್ಧಿಸಲು ಮುಂದಾಗಿರುವುದು ಸರಿಯಲ್ಲ. ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ಘೋಷಣೆಯಾಗುವವರೆಗೂ ಪ್ರತಿಭಟನೆ ನಿಲ್ಲದು ಎಂದು ತಿಪ್ಪೇಸ್ವಾಮಿ ಬೆಂಬಲಿಗ ಬೋರಣ್ಣ ಎಚ್ಚರಿಸಿದರು.

‘ನನ್ನ ಗೆಲುವಿಗೆ ಶ್ರೀರಾಮುಲು ಅವರ ಕೊಡುಗೆ ಏನಿಲ್ಲ. ನನ್ನ ಸ್ವಂತ ಶಕ್ತಿಯಿಂದ ಕಳೆದ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಬಹುದಿನಗಳಿಂದ ಶ್ರಮವಹಿಸಿ ಬರಡು ಭೂಮಿಯನ್ನು ಹಸನು ಮಾಡಿದ್ದು, ಇದೀಗ ಆ ಭೂಮಿಯಲ್ಲಿ ಶ್ರೀರಾಮುಲು ಕೃಷಿ ಮಾಡಲು ಬಂದರೆ ಬಿಟ್ಟುಕೊಡಲು ಸಾಧ್ಯವಿಲ್ಲ. ಕ್ಷೇತ್ರದ ಜನರೊಂದಿಗೆ ಚರ್ಚಿಸಿ, ಜನರ ತೀರ್ಮಾನದಂತೆ ನನ್ನ ಮುಂದಿನ ನಡೆ ಇರಲಿದೆ’
-ತಿಪ್ಪೇಸ್ವಾಮಿ ಮೊಳಕಾಲ್ಮೂರು ಕ್ಷೇತ್ರ ಹಾಲಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News