ಚುನಾವಣಾ ವೆಚ್ಚ ನಿರ್ವಹಣೆಗೆ ಪ್ರತ್ಯೇಕ ಬ್ಯಾಂಕ್ ಖಾತೆ ಕಡ್ಡಾಯ: ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ

Update: 2018-04-13 17:40 GMT

ಮಂಡ್ಯ, ಎ.13: ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಮೇಲೆ ನಿಗಾ ಇಡಲಾಗುತ್ತಿದ್ದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ವೆಚ್ಚದ ನಿರ್ವಹಣೆಯನ್ನು ಸುಗಮಗೊಳಿಸಲು ಪ್ರತ್ಯೇಕ ಹೊಸ ಬ್ಯಾಂಕ್‍ಖಾತೆಯನ್ನು ಕಡ್ಡಾಯವಾಗಿ ತೆರೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚಿಸಿದ್ದಾರೆ. 

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಚುನಾವಣೆ ವೆಚ್ಚದ ನಿರ್ವಹಣೆ ಸಂಬಂಧ ಕರೆದಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚಿತವಾಗಿ ಬ್ಯಾಂಕ್‍ಖಾತೆಯನ್ನು ತೆರೆಯಬೇಕು. ನಾಮಪತ್ರ ಸಲ್ಲಿಸುವ ದಿನಾಂಕದಂದು ಚುನಾವಣಾಧಿಕಾರಿಗೆ ಬ್ಯಾಂಕ್‍ಖಾತೆ ವಿವರ ನೀಡಬೇಕು ಎಂದರು.

ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದ ಎಲ್ಲಾ ಹಣವನ್ನು ಈ ಖಾತೆಗೆ ಜಮೆ ಮಾಡಬೇಕು. ಅಭ್ಯರ್ಥಿಯ ಸ್ವಂತ ಹಣ ಅಥವಾ ಬೇರೆ ಮೂಲಗಳಿಂದ ಪಡೆದ ಹಣವಾಗಿದ್ದರೂ ಸಹ ಈ ಖಾತೆಗೆ ಜಮೆ ಮಾಡಿಕೊಳ್ಳಬೇಕು. ಬ್ಯಾಂಕ್‍ಖಾತೆಯನ್ನು ಅಭ್ಯರ್ಥಿಯು ತನ್ನ ಹೆಸರಿನಲ್ಲಿ ಅಥವಾ ತನ್ನ ಚುನಾವಣಾ ಏಜೆಂಟ್ ಹೆಸರಿನಲ್ಲಿ ಜಂಟಿಯಾಗಿ ತೆರೆಯಬಹುದು. ಅಭ್ಯರ್ಥಿಯ ಕುಟುಂಬ ಸದಸ್ಯರು ಅಥವಾ ಅನ್ಯ ವ್ಯಕ್ತಿಗಳ ಹೆಸರಿನಲ್ಲಿ ತೆರೆಯುವಂತಿಲ್ಲ ಎಂದು ಅವರು ಹೇಳಿದರು.

ಎಲ್ಲಾ ಬ್ಯಾಂಕ್‍ಗಳಿಗೆ ಮತ್ತು ಅಂಚೆ ಕಚೇರಿಗಳಿಗೆ ಬ್ಯಾಂಕ್ ಖ್ಯಾತೆ ತೆರೆಯಲು ವ್ಯವಸ್ಥೆ ಮಾಡಲು, ಖಾತೆಗಳಿಗೆ ಹಣಜಮೆ ಮಾಡಲು ಹಾಗೂ ಖಾತೆಯಿಂದ ಹಣ ಹಿಂಪಡೆಯಲು ಆದ್ಯತೆ ನೀಡಬೇಕೆಂದು ತಿಳಿಸಲಾಗಿದೆ. ಚುನಾವಣೆ ವೆಚ್ಚಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಅಯೋಗವು 20,000 ರೂ.ಕ್ಕಿಂತ ಕಡಿಮೆ ಮೊತ್ತದ ದೇಣಿಗೆ/ಸಾಲವನ್ನು ನಗದಾಗಿ ಸ್ವೀಕರಿಸಲು ಅವಕಾಶ ಕಲ್ಪಿಸಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ವೆಚ್ಚ ನಿರ್ವಹಣೆ ನೋಡಲ್ ಅಧಿಕಾರಿ ರವಿಕುಮಾರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News