ಮಗು ಆಸಿಫಾಳ ಅತ್ಯಾಚಾರವೂ.... ಕಾಶಿ ವಿಶ್ವನಾಥ ಮಂದಿರ ಧ್ವಂಸವೂ.....
ಈ ಮನುಷ್ಯರೂಪಿ ರಕ್ಕಸರಿಗೆ ಯಾವುದೋ ಜಾನುವಾರಿನ ತಲೆ ಪ್ರಾರ್ಥನಾ ಮಂದಿರದ ಕಾಂಪೌಂಡಿನೊಳಗೆ ಬಿದ್ದರೆ ಅದು ಪರಮ ಅಪವಿತ್ರವಾಗುತ್ತದೆ. ಆದರೆ ಭಾರತಮಾತೆಯ ಅಮಾಯಕ ಮುದ್ದು ಕಂದ ಆಸಿಫಾಳನ್ನು ದೇವಸ್ಥಾನದೊಳಗೆ ಸರಣಿ ಅತ್ಯಾಚಾರಗೈದರೆ ದೇವಸ್ಥಾನದ ಪಾವಿತ್ರ್ಯತೆಗೆ ಕಿಂಚಿತ್ತೂ ಭಂಗವುಂಟಾಗುವುದಿಲ್ಲ.
ಅಂದರೆ ತಮ್ಮದಲ್ಲದ ವಿಶ್ವಾಸದ ಒಂದು ಹೆಣ್ಣು ಮಗುವನ್ನು ಅತ್ಯಾಚಾರಗೈಯುವುದು, ತಮ್ಮದಲ್ಲದ ವಿಶ್ವಾಸದ ಓರ್ವ ಮಾನವನನ್ನು ಕೊಲ್ಲುವುದು ಯಾವುದೇ ಧಾರ್ಮಿಕ ವಿಶ್ವಾಸದ ಪ್ರಕಾರ ಅಪರಾಧವಲ್ಲವೆಂದಾದರೆ ಅದು ಯಾವುದೇ ಧರ್ಮವಿರಲಿ ಅದು ಧರ್ಮವಲ್ಲ ದುಷ್ಕರ್ಮ...
ಒಮ್ಮೆ ಚಕ್ರವರ್ತಿ ಔರಂಗಜೇಬ್ ತನ್ನ ಅಧೀನದ ಹಿಂದೂ ರಾಜರು ಮತ್ತು ಅವರ ಪರಿವಾರದ ಜೊತೆ ಬಂಗಾಲಕ್ಕೆ ಹೊರಟಿದ್ದ. ದಾರಿ ಮಧ್ಯೆ ಬನಾರಸ್ ಸಮೀಪಿಸುತ್ತಿದ್ದಂತೆಯೇ ಹಿಂದೂ ರಾಜರುಗಳು " ಗಂಗೆಯಲ್ಲಿ ಮಿಂದು ಕಾಶಿ ವಿಶ್ವನಾಥನ ಪೂಜೆಗೈಯಲು ತಮ್ಮ ರಾಣಿಯರಿಗೆ ಅವಕಾಶ ಮಾಡಿಕೊಡಬೇಕೆಂಬ ಕೋರಿಕೆಯನ್ನು ಔರಂಗಜೇಬನಲ್ಲಿಟ್ಟರು. ಅವರ ಕೋರಿಕೆಯನ್ನು ಸಂತಸದಿಂದಲೇ ಔರಂಗಜೇಬ್ ಮನ್ನಿಸಿದ. ಮಾತ್ರವಲ್ಲ ಅವರ ರಕ್ಷಣೆಗಾಗಿ ದಾರಿಯಲ್ಲಿ ಐದು ಮೈಲು ಉದ್ದಕ್ಕೆ ಸೈನ್ಯವನ್ನೂ ನಿಯೋಜಿಸಿದ.
ಗಂಗೆಯಲ್ಲಿ ಮಿಂದು ಪೂಜೆ ಪುರಸ್ಕಾರ ಮುಗಿಸಿ ಒಬ್ಬ ರಾಣಿಯ ಹೊರತಾಗಿ ಉಳಿದೆಲ್ಲರೂ ಮರಳಿದರು. ಆ ರಾಣಿಯನ್ನು ಎಷ್ಟೇ ಹುಡುಕಿದರೂ ಪತ್ತೆಯಾಗಲಿಲ್ಲ. ವಿಷಯ ತಿಳಿದು ಕೆಂಡಾಮಂಡಲನಾದ ಔರಂಗಜೇಬ್ ಆಕೆಯನ್ನು ತಕ್ಷಣ ಹುಡುಕಿ ತರುವಂತೆ ತನ್ನ ಅಧಿಕಾರಿಗಳಿಗೆ ಆದೇಶಿಸಿದ. ರಾಣಿಯನ್ನು ಹುಡುಕುತ್ತಾ ಬಂದ ಅಧಿಕಾರಿಯೊಬ್ಬನ ನೇತೃತ್ವದ ತಂಡ ವಿಶ್ವನಾಥ ಮಂದಿರದೊಳಕ್ಕೆ ಬಂತು. ಹಾಗೆ ಹುಡುಕುತ್ತಾ ಬಂದವರು ಗೋಡೆಯಲ್ಲಿ ನೆಟ್ಟಿದ್ದ ಗಣೇಶನ ವಿಗ್ರಹವೊಂದರ ಬಳಿ ಬಂದರು. ಅದನ್ನು ಅಲ್ಲೇ ಅಲುಗಾಡಿಸಬಹುದಿತ್ತು. ಸ್ವಲ್ಪ ದೂಡಿದಾಗ ನೆಲಮಾಳಿಗೆಗೆ ಹೋಗುವ ಮೆಟ್ಟಿಲುಗಳು ಕಂಡವು. ನೆಲಮನೆಗೆ ಇಳಿದು ನೋಡಬೇಕಾದರೆ ರಾಣಿ ರೋಧಿಸುವ ದೃಶ್ಯ ಕಂಡಿತು. ಆ ನೆಲಮನೆಯು ದೇವತಾಮೂರ್ತಿಯೊಂದರ ಆಸನದ ಸರಿಯಾಗಿ ಕೆಳಗಡೆ ಇತ್ತು. ಸುದ್ಧಿ ಔರಂಗಜೇಬನಿಗೂ ತಲುಪಿತು. ರೋಷಾವಿಷ್ಟನಾದ ಔರಂಗಜೇಬನ ಬಳಿಗೆ ಕುಪಿತರಾದ ರಾಜರು ಆಗಮಿಸಿ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದರು. ಅವರ ಪ್ರತಿಭಟನೆಗೆ ಮಣಿದ ಔರಂಗಜೇಬ್ " ಇಂತಹ ನೀಚ ಕೃತ್ಯದಿಂದ ಪವಿತ್ರ ಸ್ಥಳವು ಅಪವಿತ್ರಗೊಂಡಿರುವುದರಿಂದ ವಿಶ್ವನಾಥನ ಮೂರ್ತಿಯನ್ನು ಬೇರೆಡೆಗೆ ಸ್ಥಳಾಂತರಿಸತಕ್ಕದ್ದು, ಇಂತಹ ನೀಚ ಕೃತ್ಯ ದೇವಸ್ಥಾನದೊಳಗೆ ನಡೆದಿರುವುದರಿಂದ ಅಪವಿತ್ರಗೊಂಡ ದೇವಸ್ಥಾನವನ್ನು ಕೂಡಲೇ ನೆಲಸಮಗೊಳಿಸತಕ್ಕದ್ದು ಮತ್ತು ಅತ್ಯಾಚಾರಿ ಮಹಂತನನ್ನು ಕೂಡಲೇ ಬಂಧಿಸಿ ಶಿಕ್ಷಿಸತಕ್ಕದ್ದು" ಎಂದು ಆದೇಶಿಸಿದ.
(ಆಧಾರ : ಹಿಂದೂ ಮಂದಿರ್ ಔರ್ ಔರಂಗಜೇಬ್ ಕಿ ಫರ್ಮಾನ್ ಡಾ.ಬಿಶ್ವಂಬರ್ ನಾಥ್ ಪಾಂಡೆ ಮತ್ತು ವಿಂಗ್ ಎಂಡ್ ರಾಕ್ ಡಾ.ಪಟ್ಟಾಭಿ ಸೀತಾರಾಮಯ್ಯ.)
ಈ ಮೇಲೆ ಉಲ್ಲೇಖಿಸಿದ ಇತಿಹಾಸದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣ ಮತ್ತು ವರ್ತಮಾನದ ಮಗು ಆಸಿಫಾ ಪ್ರಕರಣದಲ್ಲಿ ಎಷ್ಟು ಸಾಮ್ಯತೆಯಿದೆ ಗಮನಿಸಿ.
ಇತಿಹಾಸ ಮತ್ತು ವರ್ತಮಾನ ಎರಡರಲ್ಲೂ ದೇವಸ್ಥಾನದೊಳಗೆ ಅತ್ಯಾಚಾರ ನಡೆದಿದೆ ಮತ್ತು ಎರಡರಲ್ಲೂ ಅರ್ಚಕನ ಪಾತ್ರವಿದೆ. ಅಂದು ಚಕ್ರವರ್ತಿ ದೇವಸ್ಥಾನ ಅಪವಿತ್ರಗೊಂಡದ್ದರಿಂದ ದೇವತಾ ಮೂರ್ತಿಗಳನ್ನು ಸ್ಥಳಾಂತರಿಸಿ ದೇವಸ್ಥಾನ ನೆಲಸಮ ಮಾಡಿಸಿದ. ಮುಸ್ಲಿಮನೊಬ್ಬ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುವುದಾದರೆ ವಾರಗಳ ಕಾಲ ಮುಸ್ಲಿಂ ಹೆಣ್ಣು ಮಗುವೊಂದನ್ನು ದೇವಸ್ಥಾನದೊಳಗೆ ಬಚ್ಚಿಟ್ಟದ್ದು ಮಾತ್ರವಲ್ಲ ಆ ಮುದ್ದು ಕಂದಮ್ಮಳ ಮೇಲೆ ಅಷ್ಟೂ ಮಂದಿ ಅತ್ಯಾಚಾರಗೈದಿದ್ದರೆ ಇನ್ನು ಆ ದೇವಸ್ಥಾನ ಅದೆಷ್ಟು ಅಪವಿತ್ರವಾಗಿರಬೇಡ...?