ನೀನು ಗಂಡಸೇ ಆಗಿದ್ದರೆ ಬಳ್ಳಾರಿಯಲ್ಲಿ ಗೆದ್ದು ತೋರಿಸು: ಶ್ರೀರಾಮುಲುಗೆ ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಸವಾಲು

Update: 2018-04-14 13:54 GMT
ಶ್ರೀರಾಮುಲು, ಶಾಸಕ ತಿಪ್ಪೇಸ್ವಾಮಿ

ಚಿತ್ರದುರ್ಗ, ಎ. 14: ‘ನೀನು ಗಂಡಸೇ ಆಗಿದ್ದರೆ, ನಾಯಕನೇ ಆಗಿದ್ದರೆ, ನಿನ್ನ ಜಿಲ್ಲೆ(ಬಳ್ಳಾರಿ)ಯಲ್ಲೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ನೀನು ಸ್ಪರ್ಧಿಸಿ ಗೆದ್ದು ತೋರಿಸು’ ಎಂದು ಟಿಕೆಟ್ ವಂಚಿತ ಹಾಲಿ ಶಾಸಕ ತಿಪ್ಪೇಸ್ವಾಮಿ, ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲುಗೆ ಬಹಿರಂಗ ಸವಾಲು ಹಾಕಿದ್ದಾರೆ.

ಶನಿವಾರ ಇಲ್ಲಿನ ಮೊಳಕಾಲ್ಮೂರು ಕ್ಷೇತ್ರದ ತನ್ನ ಸ್ವಗ್ರಾಮದಲ್ಲಿ ಬೆಂಬಲಿಗರ ಸಭೆಯ ಬಳಿಕ ಮಾತನಾಡಿದ ಅವರು, ಬಳ್ಳಾರಿ ಗಣಿ ಧೂಳಿಗೆ ಇಲ್ಲಿನ ಜನರು ಹೆದರುವುದಿಲ್ಲ. ಇದು ಮದಕರಿನಾಯಕ ಕಟ್ಟಿದ ಜಿಲ್ಲೆ. ನಿನ್ನ ಲಾಂಗು-ಮಚ್ಚಿಗೆ ನಾವು ಬೆದರುವುದಿಲ್ಲ ಎಂದು ಎಚ್ಚರಿಸಿದರು.

ಶತಾಯಗತಾಯ ಶ್ರೀರಾಮುಲು ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುತ್ತೇನೆ. ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ತಾನು ಸ್ಪರ್ಧಿಸುವುದು ಖಚಿತ. ನಾನು ಯಾವ ಪಕ್ಷದವರನ್ನೂ ಟಿಕೆಟ್‌ಗಾಗಿ ಸಂಪರ್ಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೋಲಿನ ಭೀತಿಯಿಂದ ದುರ್ಗಕ್ಕೆ: ಬಳ್ಳಾರಿಯಲ್ಲಿ ಸೋಲಿನ ಭೀತಿಯಿಂದ ಶ್ರೀರಾಮುಲು ಚಿತ್ರದುರ್ಗಕ್ಕೆ ಬಂದಿದ್ದಾರೆ. ಅಲ್ಲದೆ, ತನಗೆ ಟಿಕೆಟ್ ಕೊಡಿಸುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳದ ಬಿಜೆಪಿಗೆ ಮತ ಹಾಕಬೇಡಿ ಎಂದು ತಿಪ್ಪೇಸ್ವಾಮಿ ಕರೆ ನೀಡಿದರು.

ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಲ್ಲಿದ್ದ ನಾಗೇಂದ್ರ, ಆನಂದ್ ಸಿಂಗ್ ಅವರೆಲ್ಲ ಶ್ರೀರಾಮುಲು ಅವರನ್ನು ಬಿಟ್ಟು ಹೋಗಿದ್ದೇಕೆಂದು ನನಗೆ ಗೊತ್ತು. ಇಲ್ಲಿನ ಕೆಲ ಸ್ಥಳೀಯರು ಅವರ ಮಾತು ಕೇಳಿದ್ದಾರೆ. ಅಂತಹ ಜನರ ಮಾತಿನಿಂದ ಎಲ್ಲರೂ ಹಾಳಾಗಬೇಕಾಗುತ್ತದೆ ಎಂದು ಬೆಂಬಲಿಗರನ್ನು ಎಚ್ಚರಿಸಿದರು.

‘ಪದೇ ಪದೇ ಸೋಲು ಖಚಿತ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಶ್ರೀರಾಮುಲು ಹೇಳುತ್ತಾರೆ. ಆದರೆ, ಮಾತು ಕೊಟ್ಟು ಮೋಸ ಮಾಡುವ ನಿನ್ನ ರಕ್ತ ಎಂತಹದ್ದು. ನಿನ್ನದು ಮಾತು ತಪ್ಪುವ ರಕ್ತವೇ? ಮೋಸ ಮಾಡಿದ ರಕ್ತ’ ಎಂದು ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದರು.

ಮೊಳಕಾಲ್ಮೂರು ಕ್ಷೇತ್ರದ ಜನತೆ ನನ್ನ ಜೊತೆಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಎಲ್ಲ ಸಮುದಾಯದವರೂ ನನ್ನೊಂದಿಗೆ ಇದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನನ್ನ ಕುಟುಂಬಕ್ಕೆ ಅನ್ಯಾಯ ಮಾಡಿದೆ ಎಂದು ತಿಪ್ಪೇಸ್ವಾಮಿ ದೂರಿದರು.

ನನ್ನ ಸಹೋದರನ ಕೈಯಲ್ಲಿ ಅನ್ನ ತಿಂದು ಆತನನ್ನೇ ಇಂದು ಜೈಲಿಗೆ ಕಳುಹಿಸಿದ್ದು, ಬಳ್ಳಾರಿ ಗಣಿ ಧೂಳಿಗೆ ಚಿತ್ರದುರ್ಗದ ಕೋಟೆ ನಾಡಿನ ಜನ ಹೆದರುವುದಿಲ್ಲ ಎಂದು ಎಚ್ಚರಿಸಿದ ಅವರು, ಮೊಳಕಾಲ್ಮೂರು ಕ್ಷೇತ್ರದ ಚುನಾವಣೆಯಲ್ಲಿ ಶ್ರೀರಾಮುಲು ಸೋಲಿಸುವೆ ಎಂದು ಗುಡುಗಿದರು.​

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News