ಇಂದು ಅಕ್ಕ ಗೌರಿ ಬದುಕಿರುತ್ತಿದ್ದರೆ....
ಪಿ.ಲಂಕೇಶ್ ಕಾಲವಾಗಿ ಅನೇಕ ವರ್ಷಗಳ ತನಕ ದೇಶ ಮತ್ತು ರಾಜ್ಯದ ಯಾವುದೇ ರಾಜಕೀಯ ಮತ್ತು ಸಾಮಾಜಿಕ ಪ್ರಕ್ಷುಬ್ದತೆಯ ಸಂದರ್ಭಗಳಲ್ಲಿ ಲಂಕೇಶರ ಪ್ರತಿಸ್ಪಂದನೆ ಮತ್ತು ಮೊಣಚಾದ ಬರಹಗಳನ್ನು ಓದಿಕೊಂಡಿದ್ದವರು, ಅರಿತವರು ಮತ್ತು ಅವರ ನಿಕಟವರ್ತಿಗಳು ಆಗಾಗ " ಇಂದು 'ಮೇಷ್ಟ್ರು' ಬದುಕಿದ್ದಿದ್ದರೆ....? ಎಂಬ ಪ್ರಶ್ನೆ ಅಥವಾ ದುಗುಡವನ್ನು ತೋಡುವ ಮೂಲಕ ನಾಡಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಆವರಿಸಿದ ಶೂನ್ಯವನ್ನು ಅಥವಾ ನಿರ್ವಾತವನ್ನು ನೆನೆಸುತ್ತಾ ಸಂಕಟಪಡುತ್ತಿದ್ದರು.
ನಾನು ಮೇಷ್ಟ್ರ ಕಾಲದವನಲ್ಲ, ಅವರ ಮಗಳು 'ಅಕ್ಕ' ಗೌರಿ ಲಂಕೇಶ್ ಕಾಲದಲ್ಲಿ ಆ್ಯಕ್ಟಿವಿಸಂ ಮತ್ತು ಜರ್ನಲಿಸಂಗೆ ಬಂದವನು. ಬರವಣಿಗೆಯಲ್ಲಿ ನನ್ನನ್ನು ಬೆಳೆಸಿದವರೂ ಅಕ್ಕ. ನಾನು ಅರಿತ ಮತ್ತು ಓದಿಕೊಂಡ ಪ್ರಕಾರ ಸಾಹಿತ್ಯಿಕವಾಗಿ ಲಂಕೇಶ್ ಅವರ ಸನಿಹಕ್ಕೆ ಬರಲು ಅಕ್ಕನಿಗೆ ಸಾಧ್ಯವಾಗಿರಲಿಲ್ಲ. ಅಕ್ಕನೇ ಸ್ವತಃ ತನ್ನನ್ನೆಲ್ಲೂ ಸಾಹಿತಿಯೆಂದು ಕರೆಸಿಕೊಂಡಿರಲಿಲ್ಲ. ಆದರೆ ಓರ್ವ ಹೋರಾಟಗಾರ್ತಿಯಾಗಿ ಆ್ಯಕ್ಟಿವಿಸ್ಟ್ ಜರ್ನಲಿಸ್ಟ್ ಆಗಿ ಅವರಪ್ಪ ಲಂಕೇಶರೂ ಗೌರಿಯ ಸನಿಹ ಸುಳಿಯಲು ಸಾಧ್ಯವಿರಲಿಲ್ಲ. ಅಂತಹ ಅಪ್ರತಿಮ ಧೈರ್ಯ, ಬದ್ದತೆ ಮತ್ತು ಜನಪರತೆಯ ಗಣಿಯಾಗಿದ್ದರು ಅಕ್ಕ ಗೌರಿ ಲಂಕೇಶ್. ಅವರು ಕೇವಲ ಹದಿನೈದು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ದಮನಿತ, ಶೋಷಿತ ಜನತೆಗಾಗಿ ಮಾಡಿದ್ದು ಅಷ್ಟು ಅಗಾಧವಾದದ್ದು. ಒಟ್ಟಿನಲ್ಲಿ ಅವರು ಓರ್ವ ಪತ್ರಕರ್ತೆ ಮತ್ತು ಹೋರಾಟಗಾರ್ತಿಯಾಗಿಯೇ ಗುರುತಿಸಿದವರು ಮತ್ತು ಆ ಐಡೆಂಟಿಟಿಗೆ ಅತ್ಯಂತಿಕವಾಗಿ ನ್ಯಾಯ ಕಲ್ಪಿಸಿದವರು. ಅವರೆಲ್ಲೂ ತನ್ನನ್ನು ಪ್ರತ್ಯೇಕವಾಗಿ ಸ್ತ್ರೀವಾದಿಯಾಗಿ ಗುರುತಿಸಿಕೊಂಡದ್ದನ್ನು ಕಳೆದ ಹದಿಮೂರು ವರ್ಷಗಳ ನಿಕಟ ಒಡನಾಟದಲ್ಲಿ ನಾನು ಕಂಡಿಲ್ಲ. ಆದರೆ ಅವರೊಳಗೊಂದು ಅಸಾಮಾನ್ಯ ಮಹಿಳಾಪರ ಧ್ವನಿಯಿತ್ತು. ಅದು ಮಹಿಳೆಯರ ಮೇಲೆ ಜಗತ್ತಿನ ಯಾವ ಮೂಲೆಯಲ್ಲಿ ಅನ್ಯಾಯ ಅಕ್ರಮ ಅತ್ಯಾಚಾರ ನಡೆದರೆ ಅಸಾಧ್ಯ ಪ್ರಕ್ಷುಬ್ಧತೆಗೊಳಗಾಗುತ್ತಿತ್ತು. ಮತ್ತು ಮುಂದಿನ ವಾರದ ತನ್ನ ಸಂಪಾದಕೀಯ ಅಂಕಣದಲ್ಲಿ ತನ್ನೊಳಗಿನ ಎಲ್ಲ ಆಕ್ರೋಶವನ್ನು, ರೋಷವನ್ನು ಅದರಲ್ಲಿ ತೋರಿಸುತ್ತಿದ್ದರು. ಅದರಲ್ಲೆಲ್ಲೂ ಕೃತಕತೆಯ ಲವಲೇಶವೂ ಇರುತ್ತಿರಲಿಲ್ಲ. ಒಳಗೊಂದು ಹೊರಗೊಂದು ಎಂಬ ಎರಡು ಮುಖಗಳೋ, ವ್ಯಕ್ತಿತ್ವವೋ ಅಕ್ಕನಿಗಿರಲಿಲ್ಲ.
ಯಾಕೋ ಕಥುವಾ ಮತ್ತು ಉನ್ನಾವೊ ಪ್ರಕರಣಗಳ ವಿರುದ್ಧ ನಮ್ಮ (ಪ್ರಗತಿಪರರ) ಧ್ವನಿ ಕರ್ನಾಟಕದಲ್ಲಿ ಕೇಳಬೇಕಾದಷ್ಟು ದೊಡ್ಡ ಪ್ರಮಾಣದಲ್ಲಿ ಕೇಳಿ ಬರುತ್ತಿಲ್ಲ. ನಾವೆಲ್ಲಾ ಬಿಜೆಪಿಯನ್ನು ಸೋಲಿಸುವದರ ಬಗ್ಗೆಯೇ ಯೋಚಿಸುತ್ತಿದ್ದೇವೆ. ಒಂದು ವೇಳೆ ಅಕ್ಕ ಇರುತ್ತಿದ್ದರೆ ಸದ್ಯ ಚುನಾವಣೆ ಇತ್ಯಾದಿಗಳ ಕುರಿತ ಮಾತುಗಳನ್ನು ಸ್ವಲ್ಪ ದಿನದ ಮಟ್ಟಿಗಾದರೂ ಬದಿಗಿರಿಸಿ ಇವೆರಡೂ ಪ್ರಕರಣಗಳ ಮೇಲೆ ಕೇಂದ್ರೀಕರಿಸುತ್ತಿದ್ದರು. ಮೊಟ್ಟಮೊದಲು ಅವರು ತನ್ನ ಬೆಂಗಳೂರಿನ ಕೆಲ ಸಂಗಾತಿಗಳನ್ನು ಸೇರಿಸಿ ಟೌನ್ ಹಾಲ್ ಮುಂದೆ ಪ್ರಕರಣ ಬೆಳಕಿಗೆ ಬಂದ ದಿನವೇ ಧರಣಿ ಕೂತು ಬಿಡುತ್ತಿದ್ದರು. ತನ್ನ ಬರಹ ಮತ್ತು ಹೋರಾಟಗಳಿಂದಾಗಿ ಮೋದಿ, ಆದಿತ್ಯನಾಥ್, ಆರೆಸ್ಸೆಸನ್ನು ಅರೆದು ಉಪ್ಪಿನಕಾಯಿ ಹಾಕಿಬಿಡುತ್ತಿದ್ದರು. ಅದಕ್ಕಾಗಿ ಅಷ್ಟು ಕೇಸುಗಳನ್ನು ಮೈಮೇಲೆಳೆದುಕೊಳ್ಳುತ್ತಿದ್ದರು.
ನಾವಿಂದು ಲಕ್ಷ ಲಕ್ಷ ಗೌರಿಗಳಾಗಿಯೂ ಕನ್ನಡ ನಾಡಿನಲ್ಲಿ ಕಥುವಾ ಮತ್ತು ಉನ್ನಾವೋ ಪ್ರಕರಣಗಳ ವಿರುದ್ಧ ನಮ್ಮ ಧ್ವನಿ ಏನೇನು ಸಾಲದು ಎಂದು ನನಗನಿಸುತ್ತಿದೆ. ಅಕ್ಕ ಇದ್ದಿದ್ದರೆ ಪತ್ರಿಕೆಯ ಒಂದಿಡೀ ಸಂಚಿಕೆಯನ್ನು ಕಥುವಾದ ಬಾಲಕಿಗಾಗಿ ಮತ್ತು ಉನ್ನಾವೋದ ತಂಗಿ ಮತ್ತು ಆಕೆಯ ಮೃತ ಅಪ್ಪನಿಗಾಗಿ ಮೀಸಲಿಡುತ್ತಿದ್ದರು.
ಜಾರ್ಖಂಡ್ ನಲ್ಲಿ ಸೋನಿ ಸೋರಿ ಎಂಬ ಹೋರಾಟಗಾತಿ ಹೆಣ್ಮಗಳ ಮೇಲೆ ಪೊಲೀಸ್ ಮತ್ತು ಅರೆಸೇನಾ ಪಡೆ ಎಸಗಿದ ದೌರ್ಜನ್ಯದ ಕುರಿತಂತೆ ಅಕ್ಕ ಮನಮುಟ್ಟುವಂತೆ ಹತ್ತಾರು ಲೇಖನಗಳನ್ನು ಬರೆದರು. ಸೋನಿ ಸೋರಿಯ ಗುಪ್ತಾಂಗದೊಳಗೆ ಕಲ್ಲುಗಳನ್ನು ತುರುಕಿ ರಾಕ್ಷಸರು ಮಾಡಿದ ದೌರ್ಜನ್ಯ ವನ್ನು ಸವಿವರವಾಗಿ ಬರೆದು ಜನರ ಆಕ್ರೋಶ ಭುಗಿಲೇಲುವಂತೆ ಮಾಡಿದ್ದರು.
ಇರೋಮ್ ಶರ್ಮಿಳಾ ಹೋರಾಟದ ಕುರಿತಂತೆ ಅಕ್ಕನಷ್ಟು ಬರಹ ಪ್ರಕಟಿಸಿದ ಕನ್ನಡ ಪತ್ರಿಕೆ ಇನ್ನೊಂದಿರಲಾರದು. ಅಸ್ಸಾಮ್ ರೈಫಲ್ಸ್ ಅರೆಸೇನಾ ಪಡೆ ಮಣಿಪುರದ ಆದಿವಾಸಿ ಮಹಿಳೆಯರ ಮೇಲೆ ಎಸಗಿದ ದೌರ್ಜನ್ಯದ ಕುರಿತೂ ಅಕ್ಕ ಬರೆದಷ್ಟು ಕನ್ನಡದ ಯಾವ ಪತ್ರಿಕೆಯೂ ಬರೆದಿರಲಿಕ್ಕಿಲ್ಲ. ಮಣಿಪುರದ ಮಹಿಳೆಯರು "Indian Army rape us" ಎಂಬ ಬ್ಯಾನರ್ ಹಿಡಿದು ಬೆತ್ತಲೆ ಪ್ರತಿಭಟನೆಗೈದದ್ದನ್ನು ಜನಮಾನಸದಲ್ಲಿ ಆಕ್ರೋಶ ಭುಗಿಲೇಳುವ ರೀತಿಯಲ್ಲಿ ಬರೆದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪತ್ರಿಕೆಯ ಮುಖಪುಟವಿಡೀ ಯಡಿಯೂರಪ್ಪರ ಒಂದೇ ಫೋಟೋ ತುಂಬಿಸಿ ಅದಕ್ಕೆ "ಕಳ್ಳ" ಎಂಬ ಟೈಟಲ್ ಕೊಟ್ಟಿದ್ದರು. ಅಧಿಕಾರಸ್ಥ ಮುಖ್ಯಮಂತ್ರಿಯೊಬ್ಬನನ್ನು ಈ ರೀತಿ ಪತ್ರಿಕೆಯ ಮುಖಪುಟದಲ್ಲಿ ಬರೆಯುವ ಧೈರ್ಯವನ್ನು ದೇಶದ ಯಾವೊಂದು ಪತ್ರಿಕೆಯೂ ತೋರಿದ ಉದಾಹರಣೆ ಇಲ್ಲ. ಮೋದಿ ಸರಕಾರ ಅಧಿಕಾರಕ್ಕೇರಿದಾಗ ಅದನ್ನು ಪ್ರತಿಭಟಿಸಿ ಪತ್ರಿಕೆಯ ಮುಖಪುಟವನ್ನು ಯಾವೊಂದು ಶೀರ್ಷಿಕೆಯೂ ನೀಡದೇ ಸಂಪೂರ್ಣ ಕಪ್ಪು ವರ್ಣದಲ್ಲಿ ಪ್ರಕಟಿಸಿ 'ಬ್ಲ್ಯಾಕ್ ಡೇ' ಆಚರಿಸಿದ್ದರು.
ಕಥುವಾ, ಉನ್ನಾವೋದಲ್ಲಿ ಇಂತಹ ಅಮಾನುಷ ಕೃತ್ಯಗಳು ನಡೆದು ಜಗತ್ತಿಗೇ ಜಗತ್ತು ತಿರಸ್ಕಾರ ಭಾವದಿಂದ ನೋಡುವ ಈ ಸಂದರ್ಭದಲ್ಲಿ ಅಕ್ಕ ಬದುಕಿರುತ್ತಿದ್ದರೆ ಎಂದು ಅಕ್ಕನ ಆಕ್ರೋಶದ ಮುಖ ಮತ್ತೆ ಮತ್ತೆ ನೆನಪಾಗುತ್ತಿದೆ.