ಸಂಘ ಪರಿವಾರದ ‘‘ಆರ್ಯರು ಭಾರತದ ಮೂಲನಿವಾಸಿಗಳು’’ ಸಿದ್ಧಾಂತಕ್ಕೆ ಕೊಡಲಿಯೇಟು?
ಭಾಗ-2
ಸಂಶೋಧನೆಯ ಫಲಿತಾಂಶಗಳು
ತಳಿವಿಜ್ಞಾನ ಆಧರಿತ ಅಧ್ಯಯನದಿಂದ ಈಗಾಗಲೆ ತಿಳಿದುಬಂದಿರುವಂತೆ ಪ್ರಾಚೀನ ಭಾರತದಲ್ಲಿ ಆದಿಯ ಉತ್ತರ ಭಾರತೀಯರು ಮತ್ತು ಆದಿಯ ದಕ್ಷಿಣ ಭಾರತೀಯರು ಎಂಬ ಎರಡು ಪ್ರತ್ಯೇಕ ಜನವರ್ಗಗಳಿದ್ದವು. ಈ ಜನವರ್ಗಗಳು ಪ್ರತ್ಯೇಕವಾಗಿ ಗುರುತಿಸಿಕೊಂಡಿರು ವುದು ಸುಮಾರು ಕ್ರಿ.ಪೂ. 2000ದ ಹೊತ್ತಿಗೆ. ಇವೆರಡು ಜನವರ್ಗಗಳು ಮೂರು ಸಂಭಾವ್ಯ ಗುಂಪುಗಳ ಬಗೆ ಬಗೆಯ ಮಿಶ್ರಣಗಳಿಂದ ಜನಿಸಿರಬಹುದೆಂದು ಪ್ರಸಕ್ತ ಸಂಶೋಧನೆಯ ಫಲಿತಾಂಶ ಹೇಳುತ್ತದೆ. *ಮೊದಲನೆಯ ಗುಂಪು ಉಪಖಂಡದ ಬೇಟೆಗಾರ-ಸಂಗ್ರಹಕಾರ ಜನರದು. ಪ್ರಸಕ್ತ ಅಧ್ಯಯನದಲ್ಲಿ ಇವರನ್ನು ಪ್ರಾಚೀನ ಆದಿಯ ದಕ್ಷಿಣ ಭಾರತೀಯರು ಎಂದು ಕರೆಯಲಾಗಿದೆ. ಉಪಖಂಡದ ಅತ್ಯಂತ ಪ್ರಾಚೀನ ನಿವಾಸಿಗಳಾದ ಇವರು ಇಂದಿನ ಅಂಡಮಾನ್ ದ್ವೀಪ ನಿವಾಸಿಗಳೊಂದಿಗೆ ಸಂಬಂಧವುಳ್ಳವರು.
*ಎರಡನೆಯ ಗುಂಪು ಇರಾನಿನ ಬೇಸಾಯಗಾರರದು. ಇವರು ಉಪಖಂಡಕ್ಕೆ ಬರುವಾಗ ಗೋಧಿ, ಬಾರ್ಲಿ ಬೆಳೆಯುವ ನಿರ್ದಿಷ್ಟ ವಿಧಾನಗಳನ್ನು ತಮ್ಮೆಂದಿಗೆ ತಂದಿರುವ ಸಾಧ್ಯತೆಗಳಿವೆ.
* ಮೂರನೆಯ ಗುಂಪು ಸ್ಟೆಪ್ಪಿಯ ದನ, ಕುರಿ ಸಾಕಣೆಕಾರರದು. ಅಫ್ಘಾನಿಸ್ತಾನದ ಉತ್ತರಕ್ಕಿರುವ ಮಧ್ಯ ಏಶ್ಯಾದ ವಿಶಾಲ ಹುಲ್ಲುಗಾವಲುಗಳಲ್ಲಿ ವಾಸಿಸುತ್ತಿದ್ದ ಇವರನ್ನು ಈ ಹಿಂದೆ ಆರ್ಯರು ಎಂದು ಕರೆಯಲಾಗುತ್ತಿತ್ತು.
ಇಂದಿನ ಇರಾನ್ ದೇಶದ ಉತ್ತರಕ್ಕಿರುವ ತುರಾನ್ ಪ್ರದೇಶವನ್ನು ಬ್ಯಾಕ್ಟ್ರಿಯ-ಮಾರ್ಜಿಯಾನ ಪ್ರಾಕ್ತನ ಸಂಕೀರ್ಣ ಎಂದು ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಅಲ್ಲೊಂದು ದೊಡ್ಡ ಜನಸಮೂಹ ವಾಸ ಮಾಡುತ್ತಿತ್ತು. ಇವರ ವಂಶವಾಹಿಗಳಿಗೂ ನಮ್ಮ ಉಪಖಂಡದ ಜನರ ವಂಶವಾಹಿಗಳಿಗೂ ಹೆಚ್ಚೇನೂ ಸಂಬಂಧಗಳಿರುವಂತೆ ತೋರುವುದಿಲ್ಲ. ಆದಾಗ್ಯೂ ಇಲ್ಲಿನ ಮೂರು ವ್ಯಕ್ತಿಗಳಿಗೆ ನಿರ್ದಿಷ್ಟವಾಗಿ ಪ್ರಾಚೀನ ಆದಿಯ ದಕ್ಷಿಣ ಭಾರತೀಯರೊಂದಿಗೆ (ಇರಾನಿನ ಬೇಸಾಯಗಾರರು ಮತ್ತು ಉಪಖಂಡದ ಬೇಟೆಗಾರ-ಸಂಗ್ರಹಕಾರರ ಮಿಶ್ರತಳಿ) ಸಂಬಂಧ ಇರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಅದು ಹೇಗೆಂದರೆ ಈ ಮೂವರ ಡಿಎನ್‌ಎ ಸಿಂಧೂ ನಾಗರಿಕತೆಯ ಒಂದು ಭಾಗವಾಗಿರುವ ಸ್ವಾತ್ ಕಣಿವೆಯ ಜನರ ಡಿಎನ್‌ಎಯೊಂದಿಗೆ ತಾಳೆಯಾಗುತ್ತದೆ. ಸ್ವಾತ್ ಕಣಿವೆ ಇಂದಿನ ಪಾಕಿಸ್ತಾನದಲ್ಲಿದೆ. ಸಂಶೋಧಕರ ತಂಡಕ್ಕೆ ಸಿಂಧೂ ಕಣಿವೆಯ ಭಾರತದ ಸೈಟುಗಳಿಂದ ಪ್ರಾಚೀನ ಡಿಎನ್‌ಎ ಸ್ಯಾಂಪಲ್‌ಗಳು ಲಭ್ಯವಾಗಿರಲಿಲ್ಲ. ಆದ ಕಾರಣ ಈ ಮೂವರ ಜೀನ್ ಸ್ವರೂಪ ಸಿಂಧೂ ಕಣಿವೆಯ ಹೆಚ್ಚಿನವರ ಜೀನ್ ಸ್ವರೂಪವನ್ನು ಹೋಲುವ ವಿಷಯದಲ್ಲಿ ಖಚಿತವಾದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಮೂವರು ವ್ಯಕ್ತಿಗಳನ್ನು ನೇರವಾಗಿ ಸಿಂಧೂ ಕಣಿವೆಯ ನಿವಾಸಿಗಳೆಂದು ಕರೆಯದೆ ಕಣಿವೆಯ ಹೊರವಲಯದವರೆಂದು ಗುರುತಿಸಲಾಗಿದೆ.
ಆದಿಯ ಉತ್ತರ ಭಾರತೀಯರಲ್ಲಿ ಮತ್ತು ಆದಿಯ ದಕ್ಷಿಣ ಭಾರತೀಯರಲ್ಲಿ ಇದೇ ವಂಶ ಪರಂಪರೆ (ಇರಾನಿನ ಬೇಸಾಯಗಾರರು ಮತ್ತು ಉಪಖಂಡದ ಬೇಟೆಗಾರ-ಸಂಗ್ರಹಕಾರರ ಮಿಶ್ರಣ) ಕಂಡುಬರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಆದರೆ ಇವೆರಡರ ಮಧ್ಯೆ ಎರಡು ಪ್ರಮುಖ ವ್ಯತ್ಯಾಸಗಳಿರುವುದನ್ನು ಗುರುತಿಸಲಾಗಿದೆ:
1. ಮೊದಲ ಆದಿಯ ದಕ್ಷಿಣ ಭಾರತೀಯರಲ್ಲಿ ರುವುದು ಮೂಲತಃ ಇರಾನಿನ ಬೇಸಾಯಗಾರರು ಮತ್ತು ಉಪಖಂಡದ ಬೇಟೆಗಾರ-ಸಂಗ್ರಹಕಾರರ ಮಿಶ್ರಣ. ಇದರಲ್ಲೂ ಅಧಿಕಾಂಶ ಉಪಖಂಡದ ಬೇಟೆಗಾರ-ಸಂಗ್ರಹಗಾರರದು. 2. ಆದಿಯ ಉತ್ತರ ಭಾರತೀಯರ ವಂಶವಾಹಿ ಗಳಲ್ಲಿರುವ ಹೆಚ್ಚುವರಿ ಅಂಶವೆಂದರೆ ಸ್ಟೆಪ್ಪಿಯ ದನ, ಕುರಿ ಸಾಕಣೆಕಾರರು (ಹಿಂದಿನ ಆರ್ಯರು). ಆದಿಯ ದಕ್ಷಿಣ ಭಾರತೀಯರಲ್ಲಿ ಈ ಅಂಶ ಇಲ್ಲ.
ಅಧ್ಯಯನದ ತೀರ್ಮಾನಗಳು:
♦ ಸಿಂಧೂ ನಾಗರಿಕತೆಯ ಜನ ವಿಕಸನಗೊಂಡಿರುವುದು ಇರಾನಿನ ಬೇಸಾಯಗಾರರು ಮತ್ತು ಉಪಖಂಡದ ಬೇಟೆಗಾರ-ಸಂಗ್ರಹಕಾರರ ಕೂಡುವಿಕೆಯಿಂದ.
♦ ಸ್ಟೆಪ್ಪಿ ಹುಲ್ಲುಗಾವಲುಗಳ ದನ, ಕುರಿ ಸಾಕಣೆಗಾರರು ಕ್ರಿ.ಪೂ. 2000 ಸುಮಾರಿಗೆ ದಕ್ಷಿಣ ದಿಕ್ಕಿಗೆ ವಲಸೆ ಹೊರಟು ನಮ್ಮ ಉಪಖಂಡಕ್ಕೆ ತಲುಪಿದಾಗ ಸಿಂಧೂ ನಾಗರಿಕತೆಯ ಜನರೊಂದಿಗೆ ಮುಖಾಮುಖಿಯಾಗಿದ್ದಾರೆ. ಇದರ ಪರಿಣಾಮವಾಗಿ ಹಠಾತ್ತಾದ ಸಾಮಾಜಿಕ ಬದಲಾವಣೆಗಳು ಸಂಭವಿಸಿವೆ.
♦ ಆನಂತರ ಸಿಂಧೂ ಕಣಿವೆಯ ಜನರಲ್ಲಿ ಕೆಲವರು ದಕ್ಷಿಣ ದಿಕ್ಕಿನತ್ತ ಚಲಿಸಿದರು. ಇವರು ಅಲ್ಲಿನ ಬೇಟೆಗಾರ-ಸಂಗ್ರಹಕಾರರೊಂದಿಗೆ ಬೆರೆತಾಗ ಆದಿಯ ದಕ್ಷಿಣ ಭಾರತೀಯ ಜನವರ್ಗ ಜನಿಸಿದೆ.
♦ ಅದೇ ವೇಳೆ ಉಪಖಂಡದ ಉತ್ತರ ಭಾಗದಲ್ಲಿ ಸ್ಟೆಪ್ಪಿಯ ದನ, ಕುರಿ ಸಾಕಣೆಕಾರರು ಮತ್ತು ಸಿಂಧೂ ಕಣಿವೆಯ ಜನರ ಕೂಡುವಿಕೆಯ ಫಲವಾಗಿ ಆದಿಯ ಉತ್ತರ ಭಾರತೀಯ ಜನವರ್ಗದ ಜನನವಾಗಿದೆ.
♦ ತದನಂತರ ಭಾರತೀಯ ಉಪಖಂಡದಲ್ಲಿ ಕಂಡುಬಂದಿರುವ ಬಹುತೇಕ ಜನವರ್ಗಗಳು ವಿಕಸನಗೊಂಡಿರುವುದು ಆದಿಯ ಉತ್ತರ ಭಾರತೀಯರು ಮತ್ತು ಆದಿಯ ದಕ್ಷಿಣ ಭಾರತೀಯರ ಸಮ್ಮಿಶ್ರಣದ ಫಲವಾಗಿ.
ಒಟ್ಟಾರೆಯಾಗಿ ಇದರರ್ಥ ಹಾಲಿ ಭಾರತೀಯ ಜನವರ್ಗಗಳ ಪೈಕಿ ಹೆಚ್ಚಿನವುಗಳ ಪೂರ್ವಿಕರು ಸಿಂಧೂ ನಾಗರಿಕತೆಯ ಜನವರ್ಗದಿಂದ ಅರ್ಥಾತ್ ಇರಾನಿನ ಬೇಸಾಯಗಾರರು ಮತ್ತು ಉಪಖಂಡದ ಬೇಟೆಗಾರ-ಸಂಗ್ರಹಕಾರರ ಸಮ್ಮಿಳನದಿಂದ ಹುಟ್ಟಿರುವ ಜನವರ್ಗ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಮೂಲತಃ ಸಿಂಧೂ ನಾಗರಿಕತೆಯ ಜನರೇ ಇವತ್ತಿನ ಬಹುತೇಕ ಭಾರತೀಯ ಜನವರ್ಗಗಳ ಪೂರ್ವಿಕರು. ಇಡೀ ಉಪಖಂಡದ ಜನವರ್ಗಗಳನ್ನು ತೆಗೆದುಕೊಂಡರೆ ಅವುಗಳ ಏಕೈಕ ಪ್ರಮುಖ ಪೂರ್ವಜರೆಂದರೆ ಸಿಂಧೂ ಹೊರವಲಯಕ್ಕೆ ಸಂಬಂಧಿಸಿದ ಜನರು.
ಸ್ಟೆಪ್ಪಿಜನರ ವಲಸೆ ಮತ್ತು ಭಾರತದ ಪುರೋಹಿತ ವರ್ಗ
ಸ್ಟೆಪ್ಪಿ ಹುಲ್ಲುಗಾವಲುಗಳ ದನ, ಕುರಿ ಸಾಕಣೆಕಾರರು ಕ್ರಿ.ಪೂ. 2000ರ ಆಸುಪಾಸಿನಲ್ಲಿ ಅಲ್ಲಿಂದ ಗುಳೇ ಹೋಗಿದ್ದಾರೆ. ಅವರಲ್ಲಿ ಒಂದು ಗುಂಪು ಭಾರತೀಯ ಉಪಖಂಡಕ್ಕೆ ಬಂದರೆ ಇತರ ಗುಂಪುಗಳು ಪಶ್ಚಿಮ ಯುರೋಪಿಗೆ ವಲಸೆ ಹೋಗಿವೆ. ಇಂಡೋ-ಯುರೋಪಿಯನ್ ಭಾಷೆಗಳು ಮತ್ತು ಸಂಸ್ಕೃತಿಗಳ ಹರಡುವಿಕೆ ಈ ರೀತಿಯಲ್ಲಿ ನಡೆದಿರಬಹುದೆಂದು ಊಹಿಸಬಹುದು. ಸಂಶೋಧಕರ ಪ್ರಕಾರ 140 ಭಾರತೀಯ ಗುಂಪುಗಳ ಪೈಕಿ 10 ಗುಂಪುಗಳಲ್ಲಿ ಸ್ಟೆಪ್ಪಿ ಜನರ ಅಂಶ ಜಾಸ್ತಿ ಇರುವುದಾಗಿ ಕಂಡುಬಂದಿದೆ. ಇದು ಸಾಮಾನ್ಯವಾಗಿ ಕಂಡುಬರುವುದು ವೈದಿಕ ಸಂಸ್ಕೃತಿಯ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರಬಹುದಾದ ಪುರೋಹಿತ ವರ್ಗಗಳಲ್ಲಿ. ಇದನ್ನು ನೋಡುವಾಗ ಸ್ಟೆಪ್ಪಿಜನರ ವಲಸೆ ಮತ್ತು ಭಾರತದ ಪುರೋಹಿತ ಜಾತಿ, ಸಂಸ್ಕೃತಿಗಳ ನಡುವೆ ಸಂಬಂಧಗಳಿರುವ ಹಾಗೆ ಕಾಣುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಪ್ರಸಕ್ತ ಸಂಶೋಧನೆ ಸಂಘ ಪರಿವಾರದ ಆರ್ಯರು ಭಾರತದಿಂದ ಇತರೆಡೆಗಳಿಗೆ ಹರಡಿದ ಸಿದ್ಧಾಂತದ ಬುನಾದಿಗೆ ಕೊಡಲಿಯೇಟು ನೀಡಿದೆ. ಮುಂದಿನ ದಿನಗಳಲ್ಲಿ ಸಿಂಧೂ ಕಣಿವೆಯ ರಾಖಿಗರಿ ಸೈಟಿನಿಂದ (ಭಾರತದ ಹರ್ಯಾಣಾದಲ್ಲಿದೆ) ಡಿಎನ್‌ಎ ಸ್ಯಾಂಪಲ್‌ಗಳು ಲಭ್ಯವಾದಾಗ ಆ ಬುನಾದಿ ಸಂಪೂರ್ಣ ಕುಸಿದುಬೀಳುವುದರಲ್ಲಿ ಸಂಶಯವಿಲ್ಲ.
**********
(ಆಧಾರ: scroll.inನಲ್ಲಿ ರೋಹನ್ ವೆಂಕಟರಾಮಕೃಷ್ಣನ್ ಲೇಖನ ಮತ್ತು ಎ.ಜಿ. ನೂರಾನಿಯವರ ಕೃತಿ Savarkar and Hindutva’ )