ಲಂಚವೆಂಬ ಭ್ರಷ್ಟಾಚಾರ ವಿರುದ್ಧದ ಜಾಗೃತಿ

Update: 2018-04-21 16:14 GMT

       ನರೇಂದ್ರ ನಾಯಕ್

ಭಾಗ 40

ಸರಕಾರಿ ಕಚೇರಿಗಳಲ್ಲಿ ಲಂಚಾವತಾರ. ಆರ್‌ಟಿಒ, ರಿಜಿಸ್ಟ್ರಾರ್ ಕಚೇರಿ, ಸೇಲ್ಸ್ ಟ್ಯಾಕ್ಸ್, ಪೊಲೀಸ್ ಠಾಣೆ ಮೊದಲಾದ ಸರಕಾರಿ ಕಚೇರಿಗಳಲ್ಲಿ ಒಂದು ಕಾಲದಲ್ಲಿ ಲಂಚದ ಹಾವಳಿ ಬಹಳಷ್ಟಿತ್ತು. ಹಾಗೆಂದು ಈಗ ಇಲ್ಲವೆಂದಲ್ಲ. ಆದರೆ ಅದು ಅಷ್ಟಾಗಿ ಗೋಚರಿಸುವುದಿಲ್ಲ ಎಂದಷ್ಟೆ ಹೇಳಬಹುದು. ಲಂಚ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಭ್ರಮೆ ಬಳಕೆದಾರರ ಮನಸ್ಸಿನಲ್ಲಿ ಬೇರೂರಿದೆ.

ಗ್ರಾಹಕರ ಹಕ್ಕುಗಳ ಕುರಿತಾದ ನಮ್ಮ ಹೋರಾಟ ವಿಶಾಲ ವ್ಯಾಪ್ತಿಯದ್ದು. ಎಲ್ಲಾ ಕಡೆಗಳಲ್ಲಿ ಗ್ರಾಹಕರ ಸಂಘಟನೆಗಳು ಮುಖ್ಯವಾಗಿ ಸರಕು ಮತ್ತು ಸೇವೆಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಕೆದಾರರ ಆಂದೋಲವನ್ನು ವಿಶಾಲವಾದ ವ್ಯಾಪ್ತಿಯಲ್ಲಿ ಆರಂಭಿಸಿದೆವು. ವಸ್ತುಗಳು, ಸೇವೆಗಳು ಹಾಗೂ ಸಾರ್ವಜನಿಕ ಸವಲತ್ತುಗಳು ಅಂದರೆ ಸರಕಾರ ನೀಡಬೇಕಾದ ಸವಲತ್ತುಗಳ ಕುರಿತಂತೆಯೂ ನಮ್ಮ ಬಳಕೆದಾರರಿಗೆ ಜಾಗೃತಿ ಮೂಡಿಸುವ, ಹೋರಾಟ ನಡೆಸುವ ಕಾರ್ಯ ಕೈಗೆತ್ತಿಕೊಂಡಿದ್ದೆವು. ನಮ್ಮ ನಿಲುವು ಸರಕಾರಿ ಕಚೇರಿಗಳಲ್ಲಿ ನಡೆಯುವ ಕೆಲಸವೆಲ್ಲವೂ ಸಾರ್ವಜನಿಕರ ತೆರಿಗೆ ಹಣದಲ್ಲಿ. ಅಲ್ಲಿಯೂ ಬಳಕೆದಾರರಿಗೆ ಹಕ್ಕುಗಳು ಇರಬೇಕೆಂಬುದು. ದೇಶದ ಬೇರೆ ಸಂಘಟನೆಗಳಿಂದ ಭಿನ್ನವಾದ ಹೋರಾಟ, ಚಟುವಟಿಕೆ ನಮ್ಮದು.

ಬಳಕೆದಾರರ ಹಕ್ಕುಗಳ ಜತೆಯಲ್ಲಿ ಮಾಹಿತಿ ಪಡೆಯುವುದು ಬಹು ಮುಖ್ಯ. ಈ ಹಕ್ಕನ್ನು ಮುಂದಿಟ್ಟು ನಾವು ಹಲವಾರು ಸಮಸ್ಯೆಗಳನ್ನು ಬಗೆಹರಿಸಿರುವುದಲ್ಲದೆ, ಬಳಕೆದಾರರಿಗೆ ತರಬೇತಿಯನ್ನೂ ನೀಡಿದ್ದೇವೆ. ನೆನಪಿಡಬೇಕಾದ ಮುಖ್ಯವಾದ ವಿಷಯವೆಂದರೆ, ಬಳಕೆದಾರರ ಹಕ್ಕುಗಳಿಗೆ ಮಾನ್ಯತೆ ಸಿಕ್ಕಿದ್ದು, 1986ರಲ್ಲಿ ಬಳಕೆದಾರರ ರಕ್ಷಣಾ ಕಾಯ್ದೆ ಆದ ಬಳಿಕ. ಇದರಲ್ಲಿರುವ ಮಾಹಿತಿ ಪಡೆಯುವ ಹಕ್ಕಿಗೆ ಮಾನ್ಯತೆ ದೊರಕಿದ್ದು, ಆರ್‌ಟಿಐ ಕಾಯ್ದೆ ಬಂದ ಬಳಿಕವಷ್ಟೆ. ಆದರೂ ನಾವು ಕಾರ್ಯವಿಧಾನಗಳನ್ನು ಉಪಯೋಗಿಸಿ ಮಾಹಿತಿ ಪಡೆದು ಸರಕಾರಿ ಕಚೇರಿಗಳಲ್ಲಿ ಗ್ರಾಹಕರ ಹಕ್ಕನ್ನು ಯಾವ ರೀತಿಯಲ್ಲಿ ಪಡೆಯಲು ಸಾಧ್ಯ ಎಂಬುದನ್ನು ತೋರಿಸಿದ್ದೇವೆ.

ಸರಕಾರಿ ಕಚೇರಿಗಳಲ್ಲಿ ಲಂಚಾವತಾರ. ಆರ್‌ಟಿಒ, ರಿಜಿಸ್ಟ್ರಾರ್ ಕಚೇರಿ, ಸೇಲ್ಸ್ ಟ್ಯಾಕ್ಸ್, ಪೊಲೀಸ್ ಠಾಣೆ ಮೊದಲಾದ ಸರಕಾರಿ ಕಚೇರಿಗಳಲ್ಲಿ ಒಂದು ಕಾಲದಲ್ಲಿ ಲಂಚದ ಹಾವಳಿ ಬಹಳಷ್ಟಿತ್ತು. ಹಾಗೆಂದು ಈಗ ಇಲ್ಲವೆಂದಲ್ಲ. ಆದರೆ ಅದು ಅಷ್ಟಾಗಿ ಗೋಚರಿಸುವುದಿಲ್ಲ ಎಂದಷ್ಟೆ ಹೇಳಬಹುದು. ಲಂಚ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಭ್ರಮೆ ಬಳಕೆದಾರರ ಮನಸ್ಸಿನಲ್ಲಿ ಬೇರೂರಿದೆ. ಇದಕ್ಕೆ ಕಾರಣ ನಾವೇ ಎಂಬುದು ಬಹುಮುಖ್ಯ. ಲಂಚ ಪಡೆಯುವುದು ಹಾಗೂ ನೀಡುವುದು ಇದನ್ನು ಅಭ್ಯಾಸ ಮಾಡಿದ್ದು, ಸಾರ್ವಜನಿಕರೇ. ಹಾಗಾಗಿ ಸಾರ್ವಜನಿಕರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದ ಹೊರತು ಈ ಲಂಚಾವತಾರದ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ.

ಲಂಚ ಕೊಡದೆ ಕೆಲಸ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸುವ ಅಗತ್ಯ ನಮ್ಮ ಬಳಕೆದಾರರ ಸಂಸ್ಥೆಯದ್ದಾಗಿತ್ತು. ಇದನ್ನು ಹೇಗೆ ತೋರಿಸುವುದು ಎಂಬುದು ಕೂಡಾ ನಮ್ಮ ಎದುರಿಗಿದ್ದ ಬಹುದೊಡ್ಡ ಸವಾಲು. ಆಂದೋಲನದಲ್ಲಿ ತೊಡಗಿಸಿಕೊಂಡವರೇ ಇದನ್ನು ಕಟ್ಟುನಿಟ್ಟಾಗಿ ಪರಿಪರಿಪಾಲಿಸಬೇಕು. ಗ್ರಾಹಕರಿಗೆ ಮನವರಿಕೆ ಮಾಡಬೇಕೆಂಬುದನ್ನು ನಾವು ನಿರ್ಧರಿಸಿದ್ದೆವು. ನಾವು ಇದನ್ನು ಸಾಬೀತುಪಡಿಸಿದ್ದಲ್ಲಿ ಉಳಿದವರು ಇದನ್ನು ಅನುಸರಿಸುತ್ತಾರೆಂಬ ಆಸೆ ನಮ್ಮದಾಗಿತ್ತು. ಹಾಗಾಗಿ, ಯಾವುದೇ ಸಂದರ್ಭದಲ್ಲಿಯೂ ಅಕ್ರಮ ಪಾವತಿಯನ್ನು ಮಾಡದೆ, ನಮ್ಮ ಕೆಲಸ ಮಾಡಲು ಸಾಧ್ಯವಿದೆ ಎಂಬುದನ್ನು ನಾನು ಖುದ್ದಾಗಿ ತೋರಿಸಿದ್ದೇನೆ. ಎಷ್ಟು ಮಂದಿ ಇದನ್ನು ಅನುಸರಿಸಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಚಾರ. ನನ್ನ ಈ ತತ್ವವನ್ನು ನನ್ನ ತಾಯಿಯ ಮೃತ ಶರೀರವನ್ನು ಸುಡಲು ಕೊಂಡು ಹೋದಾಗ ಹಾಗೂ ನನ್ನ ಮದುವೆ ಸಂದರ್ಭದಲ್ಲಿ ಕೂಡಾ.

ಹೆಚ್ಚಾಗಿ ಇಂತಹ ವಿಷಯಗಳು ನಡೆಯುವಾಗ ಘಟನೆಗೂ ಧಾರ್ಮಿಕ ಚಟುವಟಿಕೆಗೂ ತಳಕು ಹಾಕಲಾಗುತ್ತದೆ. ವಿವಾಹವು ವೈದಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆಯುತ್ತದೆ. ಅಗತ್ಯ ಬಿದ್ದಲ್ಲಿ ವಿವಾಹವನ್ನು ರಿಜಿಸ್ಟರ್(ನೋಂದಣಿ) ಮಾಡಲಾಗುತ್ತದೆ. 1980ರಲ್ಲಿ ನನ್ನ ವಿವಾಹ ಆದಾಗ ನಾನು ಬಳಕೆದಾರರ ಹಕ್ಕುಗಳ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಅದಕ್ಕೆ ಅನ್ವಯವಾಗುವ ತತ್ವಗಳನ್ನು ನಾನು ಅಳವಡಿಸಿಕೊಂಡಿದ್ದೆ. ಆರು ವರ್ಷಗಳ ಹಿಂದೆ ಶ್ರೀಲಂಕಾದ ಕೊಲಂಬೊದ ಮುಖ್ಯ ಪತ್ರಿಕೆಯೊಂದರ ವರದಿಗಾರ್ತಿ ನನ್ನನ್ನು ಸಂದರ್ಶಿಸಿದ್ದರು. ಆ ಸಂದರ್ಭ ಆಕೆ ಕೇಳಿದ ಪ್ರಶ್ನೆಯೊಂದು ಹೀಗಿತ್ತು. ‘‘ನಿಮ್ಮ ಜೀವನದ ಸಾಧನೆ’’ ಏನೆಂಬುದಾಗಿ ಪ್ರಶ್ನಿಸಿದ್ದಳು. ಆಗ ನಾನು ನನ್ನ ಜೀವನದಲ್ಲಿಯೇ ನೀಡಿದ ಅತ್ಯುತ್ತಮ ಉತ್ತರ ‘‘ನಾನು ಯಾವತ್ತೂ ದೇವರಿಗೆ ಲಂಚ ನೀಡಿಲ್ಲ. ನಾನು ಯಾವತ್ತೂ ವ್ಯಕ್ತಿಗೆ ಲಂಚ ನೀಡಿಲ್ಲ.’’ ಎಂಬುದು ನನ್ನ ಅನಿಸಿಕೆ. ಲಂಚದಿಂದ ಹೊರತಾಗಿ ನಾನು ಈವರೆಗಿನ ಜೀವನ ನಡೆಸಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.

1980ರಲ್ಲಿ ನನ್ನ ವಿವಾಹದ ವೇಳೆ ಯೋಗ್ಯವಾದ ಸಂಗಾತಿ ಆಯ್ಕೆಗಾಗಿ ಹಲವಾರು ನಿಯಮಗಳನ್ನು ನಾನು ಮೊದಲೇ ಹಾಕಿದ್ದೆ. ಈ ಬಗ್ಗೆ ಈಗಾಗಲೇ ನಾನು ಹೇಳಿದ್ದೆ. ಅದರಲ್ಲಿ ಬಹುಮುಖ್ಯವಾಗಿದ್ದು, ನಾನು ಲಂಚ ನೀಡುವುದಿಲ್ಲ ಎಂದು. ರಿಜಿಸ್ಟ್ರಾರನ್ನು ಮನೆಗೆ ಕರೆತರಲಾಗಿತ್ತು. ಆ ಸಂದರ್ಭ 25 ರೂ. ಶುಲ್ಕ. ಅದನ್ನು ಪಾವತಿಸಿದೆ. ಅದಕ್ಕೆ ರಶೀದಿ ನೀಡಿದರು. ಮತ್ತೆ ಮೂರು ರೂ. ನೀಡಬೇಕೆಂದರು. ಯಾಕೆಂದು ಪ್ರಶ್ನಿಸಿದರೆ, ಅದು ನನ್ನ ಪ್ರಯಾಣ ವೆಚ್ಚ. ಇದಕ್ಕೆ ರಶೀದಿ ನೀಡಲಾಗುವುದಿಲ್ಲ ಎಂಬ ಉತ್ತರ ಆ ಅಧಿಕಾರಿಯದ್ದಾಗಿತ್ತು.

ಅಧಿಕೃತ ರಶೀದಿ ಬರೆಯಲಾಗದಿದ್ದರೂ, ನೀವು ಅದನ್ನು ಬರಹ ರೂಪದಲ್ಲಿ ನೀಡಿ ಎಂದು ಕೇಳಿದಾಗ, ನನ್ನ ಜತೆಗಿದ್ದವರೆಲ್ಲಾ ನನಗೆ ಮಾತುಗಳಿಂದ ಚುಚ್ಚಿದ್ದರು. ‘ಏನು ಮಾರಾಯ, ಮದುವೆ ಸಂದರ್ಭದಲ್ಲಿ 3 ರೂಪಾಯಿಗೂ ಈ ರೀತಿ ಮಾಡುತ್ತೀಯಲ್ಲಾ?’ ಎಂದು.

ನನ್ನ ಅನಿಸಿಕೆ, ಸರಕಾರಕ್ಕೆ ಪಾವತಿಯಾಗುವ ಹಣಕ್ಕೆ ರಶೀದಿ ಪಡೆಯುವುದು ನಮ್ಮ ಕರ್ತವ್ಯ. ರಶೀದಿ ಇಲ್ಲದೆ ನಾವು ಪಾವತಿಸುವ ಹಣವನ್ನು ಲಂಚವೆಂದೇ ಪರಿಗಣಿಸಲಾಗುತ್ತದೆ. ಇದು ನಾವು ಅಧಿಕಾರಿಗಳನ್ನು, ನಮ್ಮ ಸುತ್ತಮುತ್ತಲಿನವರನ್ನು ಭ್ರಷ್ಠಾಚಾರಕ್ಕೆ ಪ್ರೇರೇಪಿಸಿದಂತೆಯೇ ಸರಿ ಎಂಬುದು ನನ್ನ ಸ್ಪಷ್ಟ ನಿಲುವು.

ಸಂತಸ ಹಾಗೂ ದುಃಖದ ಸಂದರ್ಭದಲ್ಲಿ ನಾವೇನೂ ನೋಡುವುದೇ ಇಲ್ಲ. ಆ ಸಂದರ್ಭ ನಾವು ಮಾಡುವ ದುಂದುವೆಚ್ಚಗಳು, ಅನಗತ್ಯ ಖರ್ಚುಗಳು ಈ ಲಂಚಾವತಾರ, ಭ್ರಷ್ಠಾಚಾರಕ್ಕೆ ಕಾರಣವಾಗುತ್ತದೆ ಎಂಬ ಅರಿವನ್ನೂ ನಾವು ಬೆಳೆಸಿಕೊಳ್ಳುವುದಿಲ್ಲ. 1995ರ ಅಕ್ಟೋಬರ್‌ನಲ್ಲಿ ನನ್ನ ತಾಯಿ ಕೊನೆಯುಸಿರೆಳೆದರು. ಆ ಸಂದರ್ಭ ಮೃತದೇಹವನ್ನು ಸ್ಮಶಾನಕ್ಕೆ ಒಯ್ಯಲಾಯಿತು. ಅಲ್ಲಿಯವ ವಿವರಗಳನ್ನು ಬರೆದು 50 ರೂ. ನೀಡಬೇಕೆಂದು ಹೇಳಿದ. ರಶೀದಿ ಕೇಳಿದಾಗ, ಆತ ಐದು ರೂಪಾಯಿಗೆ ಮಾತ್ರವೇ ರಶೀದಿ ನೀಡುವುದು ಎಂದ. ಆಗ ನಾನು, ಹಾಗಿದ್ದರೆ ನಾನು 5 ರೂ. ಮಾತ್ರ ನೀಡುತ್ತೇನೆಂದೆ. ಆವಾಗ ಆತ ನನಗೆ ಇಲ್ಲಿ ವೇತನ ಸಾಕಾಗುವುದಿಲ್ಲ ಎಂದ. ಹಾಗಾದರೆ ನೀನು ಈ ಕೆಲಸ ಬಿಟ್ಟು ಬೇರೆ ಕೆಲಸ ನೋಡು ಎಂದೆ. ಅದಕ್ಕವ ನನಗೆ ಕೆಲಸ ಕೊಡಿಸುತ್ತೀರಾ ಎಂದು ಪ್ರಶ್ನಿಸಿದ. ಆಗ ನಾನು. ಈ ಕೆಲಸವನ್ನು ನಾನು ನಿನಗೆ ಕೊಡಿಸಿದ್ದಾ? ಪ್ರಶ್ನಿಸಿದೆ. ನಿನಗೆ ಬೇರೆ ಕೆಲಸ ನಾನು ಕೊಡಿಸಬೇಕಾಗಿಲ್ಲ ಎಂದೆ. ಆಗ ಅಲ್ಲಿದ್ದವರು, ನಿನ್ನ ಅಮ್ಮ ಸತ್ತಿದ್ದಾರೆ. ನೀನಿಲ್ಲಿ 45 ರೂಪಾಯಿಗೆ ಜಗಳ ಕಾಯುತ್ತೀಯಲ್ಲ ಎಂದು ನನ್ನನ್ನು ಮೂದಲಿಸಿದರು.

ಆಗ ನಾನೆಂದೆ, ಇದು 45 ರೂಪಾಯಿ ಪ್ರಶ್ನೆ ಅಲ್ಲ. ನಾನು ಆತನಿಗೆ ಹೆಚ್ಚುವರಿಯಾಗಿ 45 ರೂ. ಕೊಟ್ಟರೆ ಸತ್ತಿರುವ ನನ್ನ ಅಮ್ಮ ಮತ್ತೆ ಜೀವ ಪಡೆಯುತ್ತಾರಾದರೆ ನಾನು 45,000 ರೂ. ಕೊಡಲೂಬಹುದು. ನನ್ನ ತತ್ವವನ್ನು ಬಿಟ್ಟು ಲಂಚ ಕೊಡಲು ನಾನು ತಯಾರಿರುತ್ತಿದ್ದೆನೋ ಏನೋ ಎಂದು ಅವರಿಗೆ ಉತ್ತರ ನೀಡಿದ್ದೆ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News