ಧರ್ಮಗಳ ಕೆಲಸ ಬೆಂಕಿ ಹಚ್ಚುವುದಲ್ಲ, ದೀಪ ಹಚ್ಚುವುದು -ಪ್ರಕಾಶ್ ರೈ

Update: 2018-04-25 06:12 GMT

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ, ಪ್ರಸಕ್ತ ದಿನಗಳಲ್ಲಿ ಜನತೆಯ ನಡುವೆ ರಾಜಕೀಯ ಹೋರಾಟದ ಮೂಲಕ ಸುದ್ದಿಯಾಗುತ್ತಿರುವವರು. ಮಾನವ ಧರ್ಮವನ್ನು ಪ್ರತಿಪಾದಿಸುತ್ತಾ, ಆಳುವ ಪಕ್ಷದ ಲೋಪಗಳನ್ನು ಎತ್ತಿ ಹಿಡಿಯುತ್ತಾ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯವನ್ನು ವಿರೋಧಿಸುವ ಮೂಲಕ ಸದಾ ಸುದ್ದಿಯಲ್ಲಿರುವವರು ಪ್ರಕಾಶ್ ರೈ. ಭಾರೀ ಅಡೆತಡೆಗಳು ಎದುರಾಗುತ್ತಿದ್ದರೂ ಅವರು ತನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ನಿಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಾ, ಜನಸಾಮಾನ್ಯರಲ್ಲಿ, ಪ್ರಜ್ಞಾವಂತರಲ್ಲಿ ರಾಜಕೀಯ ಪ್ರಜ್ಞೆಯ ಜತೆಗೆ ಪ್ರಶ್ನಿಸುವ ಮನೋಭಾವ ಹುಟ್ಟು ಹಾಕುವ ನಿಟ್ಟಿನಲ್ಲಿ ‘ಜಸ್ಟ್ ಆಸ್ಕಿಂಗ್’ ಆಂದೋಲನದ ಮೂಲಕ ಆಳುವವರನ್ನು ಪ್ರಶ್ನಿಸುತ್ತಿದ್ದಾರೆ. ಸೋಮವಾರ (ಎ. 23)ದಂದು ಕಾರ್ಯಕ್ರಮವೊಂದರ ನಿಮಿತ್ತ ಮಂಗಳೂರಿಗೆ ಬಂದಿದ್ದ ವೇಳೆ, ‘ವಾರ್ತಾಭಾರತಿ’ ಅವರನ್ನು ಮಾತಿಗೆಳೆಯಿತು. ಅದ್ಭುತ ನಟನಾಗಿ ಗುರುತಿಸಿಕೊಂಡಿರುವ ಜತೆಗೆ, ಅದ್ಭುತ ಮಾತುಗಾರನಾಗಿಯೂ ರಾಜಕೀಯ ಹೋರಾಟ ನಡೆಸುತ್ತಿರುವ ಪ್ರಕಾಶ್ ರೈ, ‘ವಾರ್ತಾಭಾರತಿ’ ಜತೆ ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

♦ ನಟನಾಗಿ ಸಾಕಷ್ಟು ಸುದ್ದಿ ಮಾಡಿರುವ ತಾವು ಪ್ರಸ್ತುತ ರಾಜಕೀಯ ಹೋರಾಟದ ಮೂಲಕ ಸುದ್ದಿಯಲ್ಲಿದ್ದೀರಿ. ಈ ಹೋರಾಟದಿಂದಾಗಿ ನಟನಾಗಿ ಪ್ರೇಕ್ಷಕರಿಂದ ದೂರವಾಗುತ್ತಿದ್ದೀರಿ ಎಂದೆನಿಸುತ್ತಿದೆಯೇ?

ಪ್ರಕಾಶ್ ರೈ:  ಬದುಕಿನಲ್ಲಿ, ಪ್ರಪಂಚದಲ್ಲಿ ಮನುಷ್ಯ ಮೊದಲು ಮನುಷ್ಯನಾಗಿ ಗುರುತಿಸಿಕೊಳ್ಳಬೇಕು. ನಟನಾ ಜೀವನದಲ್ಲಿ ಕೆಲವೊಂದು ಸನ್ನಿವೇಶ, ಪಾತ್ರಗಳನ್ನು ಗ್ರಹಿಸುವ ಮೂಲಕ ಅದರ ಹಿಂದೆ ಸಾಹಿತ್ಯ, ನಂಬಿಕೆ, ಬದುಕು ಹಾಗೂ ಆ ಬದುಕನ್ನು ನಾನು ನೋಡುವ ರೀತಿ ವೃತ್ತಿಯಲ್ಲಿ ಬೆಳೆಯಲು ಸಾಧ್ಯ ಆಯಿತು. ಕಲಾವಿದ ಸಮಾಜದಿಂದ ಬೆಳೆಯುತ್ತಾನೆ. ಕೇವಲ ಪ್ರತಿಭೆಯಿಂದ ಒಬ್ಬ ವ್ಯಕ್ತಿ ದೊಡ್ಡ ಮನುಷ್ಯನಾಗಲಾರ. ಸಮಾಜ ನಿಮ್ಮನ್ನು ಸ್ವೀಕರಿಸಿದ ರೀತಿಯಲ್ಲಿ ಹೆಚ್ಚಿನ ಮನ್ನಣೆ ಸಿಗುತ್ತಾ ಹೋಗುತ್ತದೆ. ಸಮಾಜದಿಂದ ಇಷ್ಟೊಂದು ಪಡೆದ ವ್ಯಕ್ತಿ, ಕಲಾವಿದ, ಮತ್ತೆ ಹಿಂದಿರುಗಿಸಬೇಕು. ನಟನಾಗಿ ನಾನು ಕೆಲವರಿಗೆ ಇಷ್ಟ ಇಲ್ಲ ಕೂಡಾ. ಅಲ್ಲವೇ?. ಇಷ್ಟ ಎಂಬುದು ಅವರವರ ಮನಸ್ಸು, ಭಾವನೆಗಳಿಗೆ ತಕ್ಕ ಹಾಗಿರುತ್ತದೆ. ರಾಜಕೀಯ ಪ್ರಜ್ಞೆಯೂ ಅಷ್ಟೆ. ನನ್ನ ಆತಂಕ ಪಕ್ಷದ ವಿರುದ್ಧವಲ್ಲ. ಬದಲಾಗಿ ಯೋಚನೆಗಳ ವಿರುದ್ಧ. ಸಮಾಜದಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿರಬೇಕಾದರೆ ನಟನಾಗಿ ಸಮಾಜದಿಂದ ನಾನು ಪಡೆದಿರುವುದರಿಂದ ನಾನು ಸುಖವಾಗಿರಬಹುದು. ಎಲ್ಲರೂ ಅನ್ನುವುದು ಅದೇ. ಆರಾಮವಾಗಿರಬಹುದಲ್ಲ ನೀವು? ಆರಾಮ ವಾಗಿರುವುದೆಂದರೆ ಏನು? ಮನಃಸಾಕ್ಷಿ ಎಂಬುದು ಒಂದು ಇದೆಯಲ್ಲಾ. ನಾನು ಬದುಕುವ ಸಮಾಜವೂ ಸುಂದರವಾಗಿದ್ದರೆ ನಾನು ಬದುಕಲು ಸಾಧ್ಯ ಎಂಬ ಸಾಕ್ಷಿಪ್ರಜ್ಞೆಯಿಂದ ನಾನು ಮಾತನಾಡುತ್ತಿದ್ದೇನೆ. ನಟನಾಗಿ ಸಿನೆಮಾಗಳು ಕಡಿಮೆಯಾಗಿಲ್ಲ. ಈಗಲೂ ಅಷ್ಟೇ ಬ್ಯುಸಿಯಾಗಿದ್ದೇನೆ. ಸಿದ್ಧಾಂತವನ್ನು ಮಾತನಾಡಿದಾಗ, ಅವನ ಸಿನೆಮಾಗಳನ್ನೇ ನೋಡಬಾರದು ಅನ್ನುತ್ತಾರೆ. ಅದು ಅವರಿಷ್ಟ. ಆದರೆ ನಟನೆ ಬೇರೆ, ವಾಸ್ತವ ಬೇರೆ ಎಂಬುದು ಅವರಿಗೆ ಗೊತ್ತಾಗುವುದಿಲ್ಲ. ಭಿನ್ನಾಭಿಪ್ರಾಯದ ಜತೆ ವಾಗ್ವಾದ, ಮಾತುಕತೆಗೆ ಇಳಿಯಬೇಕೇ ಹೊರತು, ಮಾತನಾಡದೆ ನಾನು ನಿನ್ನ ಸಿನೆಮಾ ನೋಡುವುದಿಲ್ಲ ಎನ್ನುವಾಗ ನಾನು ಸುಳ್ಳು ಹೇಳಿ ಬದುಕಬಾರದಲ್ಲವೇ? ನಾನು ಎಲ್ಲರನ್ನೂ ಮೆಚ್ಚಿಸಬೇಕೆಂಬ ರೀತಿಯಲ್ಲಿ ಮಾತನಾಡಬೇಕು ಅಂತೀರಾ? ಸುಳ್ಳು ಹೇಳಬೇಕೇ? ನಾನು ಆ ತರಹದವನಲ್ಲ. ನಾನು ನೇರವಾಗಿ ನಿಷ್ಠುರವಾಗಿ ನನ್ನ ಗ್ರಹಿಕೆಗಿರುವ ಪ್ರಾಮಾಣಿಕತೆಯಿಂದ ಬದುಕುವವ.

♦ ನಿಧಾನವಾಗಿ ಸಿನೆಮಾ ರಂಗದಿಂದ ರಾಜಕೀಯ ಪ್ರವೇಶ ಮಾಡುವ ಆಲೋಚನೆ ಇದೆಯಾ?

ಪ್ರಕಾಶ್ ರೈ: ಚುನಾವಣಾ ರಾಜಕೀಯಕ್ಕೆ ನಾನು ಬರುವುದಿಲ್ಲ ಎಂದು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ನಾನು ರಾಜಕೀಯ ಪ್ರಜ್ಞೆಯುಳ್ಳವನಾಗಿರುತ್ತೇನೆ. ಸಿನೆಮಾವನ್ನು ಬಿಡುವುದಿಲ್ಲ, ರಂಗಭೂಮಿಯನ್ನು ಬಿಡುವುದಿಲ್ಲ. ಸಾಹಿತ್ಯ ಓದುವುದನ್ನು ಬಿಡುವುದಿಲ್ಲ. ನನ್ನ ತೋಟದಲ್ಲಿ ರೈತನಾಗಿ ದುಡಿಯುವುದನ್ನು ಬಿಡುವುದಿಲ್ಲ. ಮಕ್ಕಳಿಗೆ ತಂದೆಯಾಗಿರುವುದನ್ನು ಬಿಡುವುದಿಲ್ಲ. ತಾಯಿಗೆ ಮಗನಾಗಿರುವುದನ್ನು ಬಿಡುವುದಿಲ್ಲ. ಗೆಳೆಯರಿಗೆ ಗೆಳಯನಾಗಿರುವುದನ್ನು ಬಿಡುವುದಿಲ್ಲ. ಯಾವುದನ್ನೂ ಬಿಡದೆ ರಾಜಕೀಯ ಪ್ರಜ್ಞೆ ಇರುವುದಾದರೆ ಯಾಕೆ ತಪ್ಪು?

♦ ನಟರಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದೀರಿ, ಆದರೆ ಈ ಹೋರಾಟ ಅಭಿಮಾನಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ ಅನ್ನಿಸುತ್ತಿದೆಯೇ?
ಪ್ರಕಾಶ್ ರೈ: 
ಟ್ವಿಟರ್, ಫೇಸ್‌ಬುಕ್‌ನಲ್ಲಿ ಗೊತ್ತಾಗುತ್ತೆ. ಕೆಲವರು ನಿಮ್ಮ ಸಿನೆಮಾ ನೋಡುವುದಿಲ್ಲ. ಇನ್ನು ಮೇಲೆ ನಿಮ್ಮ ಅಭಿಯಾನಿಯಲ್ಲ ಎಂದು ಪ್ರತಿಕ್ರಿಯಿಸುತ್ತಾರೆ. ಅದು ಅವರವರ ಭಾವಕ್ಕೆ ಬಿಟ್ಟಿದ್ದು. ನಿನ್ನ ಸಿದ್ಧಾಂತಗಳನ್ನು ನಾನು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಿನ್ನನ್ನು ನೋಡಬಾರದು, ನಿನ್ನನ್ನು ಒಪ್ಪುವುದಿಲ್ಲ ಎಂಬುದಾದರೆ ಇರಲಿ. ಅವರ ಇಷ್ಟಗಳನ್ನು ನಿರ್ಧಾರ ಮಾಡಲು ನಾನು ಯಾರು ಅಲ್ಲವೇ? ಇಷ್ಟವಾಗದವರ ಜತೆ ನಾವು ಮಾತನಾಡುವುದಿಲ್ಲ. ಅದು ಪ್ರತಿಯೊಬ್ಬರಲ್ಲೂ ಇರುತ್ತೆ ಇರಲಿ.

♦ ಈ ಹೋರಾಟ ಆರಂಭಿಸಿದಾಗ, ಈ ಮಟ್ಟದಲ್ಲಿ ವಿರೋಧ ವ್ಯಕ್ತವಾಗುವ ನಿರೀಕ್ಷೆ ಇತ್ತಾ?

ಪ್ರಕಾಶ್ ರೈ: ನನಗೀಗ 53 ವರ್ಷ. ಮೂರು ದಶಕಗಳಿಂದ ಜನರ ನಾಡಿ ಮಿಡಿತದ ಜೊತೆ ಬದುಕಿದವ ನಾನು. ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದವ ನಾನು. ಪ್ರತಿ ಕಡೆ ಹೋದಾಗ ನೀನು ನಮ್ಮವನಲ್ಲ ಎಂಬ ವಿರೋಧವನ್ನೂ ಎದುರಿಸುವ ಜತೆ, ಅವರ ಪ್ರೀತಿಯನ್ನು ಪಡೆದವ ನಾನು. ಎಲ್ಲಾ ಅಡೆತಡೆಗಳನ್ನು ಅನುಭವಿಸಿದ್ದೇನೆ. ಆದರೆ, ಒಬ್ಬರ ವಿರುದ್ಧ ಒಬ್ಬರು ಮಾತನಾಡುವಾಗ ಅಸಹ್ಯವಾದ ಭಾಷೆ, ಅಶ್ಲೀಲವಾದ ಮಾತುಗಳನ್ನು ಜನ ಇಷ್ಟರ ಮಟ್ಟಿಗೆ ಆಡಬಲ್ಲರು ಎಂಬುದನ್ನು ನಾನು ನಿರೀಕ್ಷಿಸಿರಲಿಲ್ಲ.

♦ ಪ್ರಕಾಶ್ ರೈ ಸಿನೆಮಾ ರಂಗದಲ್ಲಿ ಬ್ಯುಸಿ ನಟ. ಹಾಗಿರುವಾಗ ಈ ಹೋರಾಟಕ್ಕೆ ನಿಮ್ಮನ್ನು ಪ್ರೇರೇಪಿಸಿದ ಸಂಗತಿ ಏನು?

ಪ್ರಕಾಶ್ ರೈ: ಬದುಕು. ನಾನು ಎಲ್ಲೇ ಇದ್ದರೂ ಸಂಘಟನಾಕಾರನಾಗಿದ್ದೆ. ತಮಿಳುನಾಡು ನಿರ್ಮಾಪಕರ ಸಂಘದ ಉಪಾಧ್ಯಕ್ಷ ನಾನು. ಅಲ್ಲಿ ನಡೆಯುವ ಅನ್ಯಾಯದ ವಿರುದ್ಧ ಸಿಡಿದೆದ್ದು, ಬದಲಾವಣೆ ತಂದವ ನಾನು. ಆ ಪ್ರಯತ್ನದಲ್ಲಿ, ಈ ಹೋರಾಟಕ್ಕೆ ಗೌರಿಯ ಸಾವು ಪ್ರಮುಖ ಎನ್ನಬಹುದು. ನನ್ನ ಹೋರಾಟದ ಹೊಸ್ತಿಲಲ್ಲೇ ನಡೆದ ಘಟನೆ ಅದು. 35 ವರ್ಷಗಳ ಗೆಳತಿ. ಅದಕ್ಕಿಂತ ಹೆಚ್ಚಾಗಿ ಅವರ ತಂದೆ, ನನ್ನ ಗುರುಗಳಾದ ಲಂಕೇಶ್‌ರ ಪ್ರಭಾವದಿಂದ ಬೆಳೆದವ ನಾನು. ಲಂಕೇಶ್‌ರ ಮಗಳಿಗೆ ಈ ಪರಿಸ್ಥಿತಿ ಕರ್ನಾಟಕದಲ್ಲಿ ಆಗುವುದಾದರೆ, ತುಂಬಾ ನಿಷ್ಠುರವಾದ, ನೇರವಾದ, ನಿಖರವಾದ ಅದೆಷ್ಟೋ ಪ್ರತಿಭೆಗಳು, ಯೋಚನೆಗಳು, ಚಿಂತನೆಗಳ ಸ್ಥಿತಿ ಏನು? ಸಿದ್ಧಾಂತವೊಂದರ ವಿರುದ್ಧ ಮಾತನಾಡಿದಾಗ ಕೊಲೆಯಾಗುವ ಪರಿಸ್ಥಿತಿ ಆಗುವಾಗ ‘ನೀನು ಒಂಟಿಯಾಗಿದ್ದೀಯಾ ಪ್ರಕಾಶ್’ ಎಂದು ಗೌರಿ ನನಗೆ ಹೇಳಿದ ಹಾಗಾಯಿತು. ಹೀಗಾಗಬಾರದು. ಇದು ಆರೋಗ್ಯವಾದ ಸಮಾಜವಲ್ಲ. ಕೊಲೆಗಡುಕರು ಯಾರು ಎಂಬದನ್ನು ಕಂಡು ಹಿಡಿಯುವ ಮೊದಲು ಅದನ್ನು ವಿಜೃಂಭಿಸುವ ಸಮಾಜ, ಸಂಭ್ರಮಿಸುವವರನ್ನು ನೋಡಿದಾಗ ಇದು ತಪ್ಪು ಅನ್ನಿಸಿತು. ಸಾವು ಯಾರದ್ದಾಗಿದ್ದರೂ ಅದು ಸಂಭ್ರಮಿಸುವಂತಹದ್ದಲ್ಲ. ಒಂದು ಕೊಲೆ, ಇನ್ನೊಬ್ಬರ ನೋವು ಸಂಭ್ರಮಿಸುವಂತಹದ್ದಲ್ಲ. ಅಷ್ಟು ಪೈಶಾಚಿಕವಾದ ಆಲೋಚನೆಗಳ ಲಹರಿ ಬೆಳೆಯುವ ಪರಿಸ್ಥಿತಿ ಯಾಕಾಯಿತು? ಇದಕ್ಕೆ ಕಾರಣಗಳೇನು? ಈ ತೆರನಾದ ಪರಿಸ್ಥಿತಿ ರಾಜ್ಯದಲ್ಲಿ, ದೇಶದಲ್ಲಿ ಯಾಕೆ ಉಂಟಾಗಿದೆ ಅಂದಾಗ, ಅಂತಹ ಶಕ್ತಿಗಳು ಕಣ್ಣಿಗೆ ಕಾಣಿಸಿದಾಗ ಅದನ್ನು ಎದುರಿಸಬೇಕೆಂದು ಮುಂದಾದೆ. ನೈಸರ್ಗಿಕವಾದ ಪ್ರಕೃತಿ ಕ್ರಿಯೆ. ಯಾವುದೇ ಒಂದನ್ನು ದಮನಿಸಿದಾಗ ಮತ್ತೊಂದು ಹುಟ್ಟುವುದು ಅದು ಪ್ರಕೃತಿ ನಿಯಮ. ಮನುಷ್ಯನ ಸಹಜ ಬೆಳವಣಿಗೆ ಬಹುಶ: ನನ್ನನ್ನು ಈ ಹೋರಾಟಕ್ಕೆ ಎಳೆದೊಯ್ದಿದೆ.

♦  ಹೋರಾಟಕ್ಕೆ ಸ್ಪಂದನೆ ದೊರಕಿದೆಯೇ?
ಪ್ರಕಾಶ್ ರೈ: 
ನಾನು ಅಂದುಕೊಂಡಿದ್ದಿಕ್ಕಿಂತಲೂ ಮಿಗಿಲಾಗಿ ದೊರಕಿದೆ. ಸಾಮಾಜಿಕ ಜಾಲತಾಣಗಳ ಮೂಲಕವಾಗಿಯೂ ಜನಸಾಮಾನ್ಯರು ನನಗೆ ಬೆಂಬಲ ತೋರಿಸುತ್ತಿದ್ದಾರೆ. ನಾನು ಎಲ್ಲೇ ಮಾತಿಗೆ ಹೋದರೂ, ಅದನ್ನು ಕೇಳಬೇಕೆಂದು ಬರುತ್ತಾರೆ. ನಾನೇನು ರಾಜಕೀಯ ಪಕ್ಷದ ನಾಯಕನಲ್ಲ. ನಾನು ನಟನಾಗಿ ವೇದಿಕೆಗೆ ಹೋದಾಗ ಅಲ್ಲಿಗೆ ಬರುತ್ತಿದ್ದ ಜನರು ಬೇರೆ. ಒಬ್ಬ ರಾಜಕೀಯ ಪ್ರಜ್ಞಾವಂತನಾಗಿ ನಾನು ಹೋದಾಗ ಅಲ್ಲಿಗೆ ತಂಡೋಪತಂಡವಾಗಿ ಬರುವವರು ಬೇರೆ. ನಿಮ್ಮ ಜತೆ ನಾವಿರುತ್ತೇವೆ. ಇಂತಹದೊಂದು ಧ್ವನಿ ನಮಗೆ ಬೇಕು ಎನ್ನುವುದು ದೊಡ್ಡ ಬೆಳವಣಿಗೆ.

♦ ಹೋರಾಟ ಸಿನೆಮಾ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತಿದೆಯೇ?

ಪ್ರಕಾಶ್ ರೈ: ನನ್ನ ವಿರುದ್ಧದ ಶಕ್ತಿಗಳು ಕೆಲ ಜಾಹೀರಾತು ಫಿಲಂಗಳನ್ನು ನಿಲ್ಲಿಸಬಹುದು. ಆದರೆ ಇವರ ಮಾತುಗಳನ್ನು ಕೇಳುವ ನಿರ್ಮಾಪಕರು, ನಿರ್ದೇಶಕರು ಯಾರೂ ಇಲ್ಲ. ಇತ್ತೀಚಿನ ಹಲವು ಸಿನೆಮಾಗಳು ಹಿಟ್ ಆಗಿವೆ. ಮೋಹನ್‌ಲಾಲ್ ಜತೆ, ಪುನೀತ್ ರಾಜ್‌ಕುಮಾರ್ ಜತೆ ನಟಿಸುತ್ತಿದ್ದೇನೆ. ಬಲತ್ಕಾರದ ಬಲವಂತದ ರಾಜಕಾರಣ ನಡೆಯುತ್ತಿದೆಯೇ ಹೊರತು, ನಾನು ಯಾಕೆ ಮಾತನಾಡುತ್ತಿದ್ದೇನೆ, ಭಿನ್ನಾಭಿಪ್ರಾಯದ ಜತೆ ಚರ್ಚೆ ನಡೆಸುವ ಆಲೋಚನೆ ಇಲ್ಲ. ಇವರ ಬುದ್ಧಿ, ನನ್ನ ಸಿನೆಮಾ ನಿಲ್ಲಿಸೋದು, ಪೋಸ್ಟರ್‌ಗಳಿಗೆ ಬೆಂಕಿ ಹಚ್ಚುವುದು ಅಷ್ಟೆ. ಎಲ್ಲಿ ನೋವಾಗುತ್ತೋ ಅಲ್ಲಿ ಹೊಡೆಯೋಣ ಎಂಬ ರಣತಂತ್ರಗಳು, ಅಸಹ್ಯಗಳಿಗೆ ಹೆದರುವವ ನಾನಲ್ಲ. ಕಳೆದುಕೊಳ್ಳದಷ್ಟು ಶ್ರೀಮಂತ ನಾನಾಗಿದ್ದೇನೆ. ನೋವನ್ನು ಸಹಿಸುವ ಶಕ್ತಿವಂತನಾಗಿದ್ದೇನೆ. ಆರೈಕೆ ಮಾಡಲು, ನಂಬಿಕೆ ನೀಡಲು ಜನ ಇದ್ದಾರೆ. ಪ್ರೀತಿಸುವ ಮನಸ್ಸುಗಳಿವೆ ಇನ್ನೇನು ಬೇಕು.

♦  ಸಹೋದ್ಯೋಗಿಗಳ ಪ್ರೋತ್ಸಾಹ ಹೇಗಿದೆ?

ಪ್ರಕಾಶ್ ರೈ: ಅವರೂ ಮನುಷ್ಯರೇ ತಾನೇ? ಅವರಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ಪ್ರಕಾಶ್ ರೈ ತರಾನೇ ಎಲ್ಲರೂ ಮಾತನಾಡಲಾಗುವುದಿಲ್ಲ. ಒಬ್ಬೊಬ್ಬರ ಭಾಷೆ ಬೇರೆ ಬೇರೆಯಾಗಿರುತ್ತದೆ. ಕೆೆಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಮೂಲಕ, ಮತ್ತೆ ಕೆಲವರು ನಿಧಾನವಾಗಿ ಪ್ರತಿಕ್ರಿಯಿಸುವ ಮೂಲಕ, ಮತ್ತೆ ಕೆಲವರು ಅಗತ್ಯ ವಿಷಯಗಳನ್ನು ನನಗೆ ತಲುಪಿಸುವ ಮೂಲಕ, ‘ಜಸ್ಟ್ ಆಸ್ಕಿಂಗ್’ ನೀವು ಕೇಳಿ ಎಂದು ನನ್ನನ್ನು ಪ್ರೋತ್ಸಾಹಿಸುತ್ತಾರೆ. ಇಡೀ ಕರ್ನಾಟಕದಲ್ಲಿ ನಾವು ಜಸ್ಟ್ ಆಸ್ಕಿಂಗ್ ತಂಡವನ್ನು ಕಟ್ಟುತ್ತಿದ್ದೇವೆ. ನಿಮ್ಮ ಮಾತನ್ನು ನಮ್ಮ ಜಾಲತಾಣಗಳಿಗೆ ಕಳುಹಿಸುತ್ತೇವೆ. ನಿಮ್ಮ ಪ್ರಶ್ನೆಗಳಿಗೆ ನಾವು ಧ್ವನಿಯಾಗುತ್ತೇವೆ. ಇಂತಹ ಪ್ರೋತ್ಸಾಹ ಬೆಂಬಲ ಸಾಕಲ್ಲವೇ?

♦  ಜಸ್ಟ್ ಆಸ್ಕಿಂಗ್ ಬಗ್ಗೆ ಸ್ವಲ್ಪ ವಿವರಿಸುವಿರಾ?

ಪ್ರಕಾಶ್ ರೈ:  ಜಸ್ಟ್ ಆಸ್ಕಿಂಗ್ ರಾಜಕೀಯ ಪಕ್ಷವಲ್ಲ. ಪ್ರಜೆಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವುದು ಇದರ ಉದ್ದೇಶ. ಚುನಾವಣೆ ಹತ್ತಿರ ಬರುವುದರಿಂದ ಇದು ಚುನಾವಣೆಗಾಗಿ ಎಂಬ ಗ್ರಹಿಕೆ ಇರಬಹುದು. ಆದರೆ ಜಸ್ಟ್ ಆಸ್ಕಿಂಗ್ ಕೆಲಸ ಇರುವುದೇ ಚುನಾವಣೆ ನಂತರದಲ್ಲಿ. ಕರ್ನಾಟಕದಲ್ಲಿ ಪ್ರಜ್ಞಾವಂತರನ್ನು ಸೇರಿಸುವ ಕೆಲಸ. ಅಲ್ಲಲ್ಲಿ ಸಂಘಟನೆಗಳನ್ನು ಮಾಡುವ ಕೆಲಸ. 10 ವರ್ಷಗಳ ಕಾಲ ಉತ್ತಮ ಸಾಹಿತ್ಯ ಉತ್ಸವಗಳನ್ನು ಮಾಡುವುದು. ಯುವಕರಲ್ಲಿ ಚರ್ಚಾಸ್ಪರ್ಧೆ, ವಿಷಯಗಳ ಮಂಡನೆ, ಶಾಲಾ ಕಾಲೇಜುಗಳಿಗೆ ಹೋಗಿ ಇಂದಿನ ಪ್ರಸಕ್ತ ರಾಜಕೀಯ, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವುದು. ಪ್ರಶ್ನಿಸುವವರ ಜತೆ ಶಕ್ತಿಯಾಗಿ ನಿಲ್ಲುವ ಕೆಲಸವನ್ನು ಪ್ರಜೆಗಳು ನಿರಂತರಾಗಿ ವಿರೋಧ ಪಕ್ಷವಾಗಿರಬೇಕು. ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷ ಗೆದ್ದರೆ ಪ್ರಜೆಗಳು ನಿರ್ಣಾಯಕ ಸ್ಥಾನದಲ್ಲಿರಬೇಕು. ಯಾವುದೇ ಆಡಳಿತ ಪಕ್ಷಗಳು ಕೇವಲ ಸೀಮಿತ. ಆದರೆ ದೇಶದ ಜನತೆ ಪಕ್ಷವಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಯಾಗಿ ಬದುಕಬೇಕು. ಆಡಳಿತ ಮಾಡಲು ನಾವು ಪಕ್ಷದ ಪ್ರತಿನಿಧಿಗಳನ್ನು ಚುನಾಯಿಸುತ್ತೇವೆ ಹೊರತು ಪ್ರಜೆಗಳು ಯಾವುದೇ ಪಕ್ಷದವರಾಗಿರುವುದಿಲ್ಲ. ಚುನಾಯಿತ ಪ್ರತಿನಿಧಿಗಳು ಆಡಳಿತ ಪಕ್ಷವಾಗಿ ಎಲ್ಲರಿಗೂ ಸಮಾನ ರೀತಿಯಲ್ಲಿ ಆಡಳಿತ ನಡೆಸಬೇಕು. ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು, ಜನರಿಗೆ ಕೆಲಸ ಮಾಡಿ ಎಂದು ಎಚ್ಚರಿಸುವ, ಪ್ರಶ್ನಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

♦  ನಿಮ್ಮನ್ನು ಒಂದೊಮ್ಮೆ ಮೋದಿ ವಿರೋಧಿ, ಹಿಂದೂ ವಿರೋಧಿ, ಕಾಂಗ್ರೆಸ್ ಪರ, ಮತ್ತೊಂದು ಬಾರಿ ಎಡಪಕ್ಷಗಳ ಪರ ಅನ್ನುವುದರ ಬಗ್ಗೆ ಏನಂತೀರಿ?

ಪ್ರಕಾಶ್ ರೈ: ಮನುಷ್ಯನನ್ನು ಅನುಮಾನದಿಂದ ನೋಡುವುದು ಸಹಜ. ಅದರಲ್ಲೂ ಪ್ರಕಾಶ್ ರೈ ನಟ, ಅವನು ತಾನು ಒಳ್ಳೆಯವನು ಅಥವಾ ಹೇಳಿಕೆ ನೀಡಿದಾಕ್ಷಣ ಅದನ್ನು ಒಪ್ಪಬೇಕೆಂದಿಲ್ಲವಲ್ಲ? ಸಾಮಾನ್ಯ ಜನ ಪ್ರಕಾಶ್ ರೈ ಬಿಜೆಪಿ ಪಕ್ಷವನ್ನು ಎದುರಿಸುತ್ತಿರುವುದರಿಂದ ಅವರು ಕಾಂಗ್ರೆಸ್, ಜೆಡಿಎಸ್, ಎಡಪಕ್ಷ ಎಂದು ಆಲೋಚನೆ ಮಾಡುವುದರಲ್ಲಿ ತಪ್ಪಲ್ಲ. ಆದರೆ ಮುಂದಿನ ದಿನಗಳಲ್ಲಿ ನನ್ನ ಕೆಲಸವನ್ನು ನೋಡಿ ಜನ ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ. ಆ ತಾಳ್ಮೆ ನನಗಿದೆ. ಆದರೆ ಬಿಜೆಪಿಯವರು ನಾನು ಕಮ್ಯುನಿಸ್ಟಾ ಅಂತಾರೆ? ನನ್ನನ್ನು ಏಜೆಂಟ್ ಆಗಿ ನೋಡುತ್ತಿದ್ದಾರೆ. ಆದರೆ ನಾನು ಹೇಳುತ್ತಿದ್ದೇನೆ ನಾನೊಬ್ಬ ಪ್ರಜೆ. ಪ್ರಜೆಯಾಗಿ ಉತ್ತರ ಕೊಡಿ ಎಂದರೆ ಇಲ್ಲಾ ನೀನು ಕಮ್ಯುನಿಸ್ಟ್ ಅಂತಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವವ ಕಮ್ಯುನಿಸ್ಟ್ ಹೇಗಾಗುತ್ತಾನೆ. ನಾನು ಕಾಂಗ್ರೆಸ್ ಪಕ್ಷದ ಪರವಾಗಿಲ್ಲ. ನಾನು ಅಲ್ಲಿಯ ಸದಸ್ಯನಲ್ಲ. ಕಾರ್ಯಕರ್ತ ಅಲ್ಲ. ನಾನು ಎಂಎಲ್‌ಎ, ಎಂಪಿಯಾಗುವುದು ಬೇಡ. ಸ್ಥಾನ ಬೇಡ ಅಂತಿದ್ದೇನೆ.

 ಅಮಿತ್‌ಶಾ, ಮೋದಿ, ಅನಂತ್ ಕುಮಾರ್, ಪ್ರತಾಪಸಿಂಹರ ಬಗ್ಗೆ ಪ್ರಶ್ನಿಸುತ್ತಿದ್ದರೆ ನಾನು ಹಿಂದೂ ಧರ್ಮದ ವಿರೋಧಿ ಹೇಗಾಗುವುದು? ನಾನು ಹಿಂದೂ ವಿರೋಧಿ ಅಲ್ಲ. ಎಲ್ಲಾ ಧರ್ಮಗಳು ಸಮೃದ್ಧತೆ; ಫಲ ಅಲ್ಲ. ಧರ್ಮಗಳು ಸಹಿಷ್ಣುತೆ; ಇನ್ನೊಬ್ಬನನ್ನು ಕೊಲ್ಲಲು ಹೇಳುವುದಿಲ್ಲ. ಆದರೆ ಇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದು ತಪ್ಪು. ಹಾಗಾಗಿ ಆ ವ್ಯಕ್ತಿಗಳನ್ನು ಹೇಳುತ್ತಿದ್ದೇನೆ. ನನ್ನ ಕಣ್ಣ ಮುಂದೆ ಉದಾಹರಣೆಗಳಿವೆ. ಹಾಗಾಗಿ ನಿಮ್ಮಂತಹ ಪ್ರಜಾಪ್ರಭುತ್ವದ ವಿರುದ್ಧವಾಗಿರುವ, ಮನುಷ್ಯ ಧರ್ಮಕ್ಕೆ ವಿರೋಧವಾಗಿರುವ ನಿಮ್ಮನ್ನು ಎದುರಿಸುತ್ತಿದ್ದರೆ, ನೀವು ಮುಗ್ಧರೊಂದಿಗೆ ಬೇರೆ ರೀತಿಯ ಚಿತ್ರಣ ಕೊಡುತ್ತಿದ್ದೀರಿ. ನಾನು ಹೇಗೆ ಯಾವುದೋ ಧರ್ಮದ ವಿರೋಧಿಯಾಗಲು ಸಾಧ್ಯ? ಎಲ್ಲಾ ಧರ್ಮಗಳು ಮನುಷ್ಯನ ವಿಕಾಸಕ್ಕಿರುವುದು. ಧರ್ಮಗಳನ್ನು ವಿಸ್ತರಿಸಬೇಕಾ, ಗುಡಿಗಳನ್ನು ಕಟ್ಟಿ, ಸಮಿತಿ ಕಟ್ಟಿ, ಮಠಗಳನ್ನು ಕಟ್ಟಿ ತಪ್ಪಿಲ್ಲ. ಸರಕಾರ ಮಾಡಬೇಡಿ. ಸರಕಾರದ ಕೆಲಸ ಧರ್ಮವನ್ನು ಕಾಪಾಡುವುದಲ್ಲ. ಸರಕಾರ ಎಲ್ಲರಿಗೂ ಸೇರಿದ್ದು. ಚುನಾಯಿತರಾಗಿ ಬಂದ ಮೇಲೆ ಒಂದು ಧ್ಯೇಯವನ್ನು, ಒಂದು ಆಲೋಚನೆಯನ್ನು ಮಿಕ್ಕಿದವರ ಮೇಲೆ ಹೇರುವುದು ಇದೆಯಲ್ಲ ಇದು ನನ್ನ ಸಮಸ್ಯೆ. ಎಲ್ಲಾ ಮನುಷ್ಯ ಧರ್ಮಕ್ಕೂ ಪ್ರಪಂಚದಲ್ಲಿ ಬದುಕುವ ಹಕ್ಕಿದೆಯೇ ಹೊರತು, ನಿನ್ನ ಗುಂಪು ಚಿಕ್ಕದು, ನಿನ್ನದು ದೊಡ್ಡದು ಎಂಬಂತೆ ಧರ್ಮ ಬಲ ಆಗಬಾರದು. ಧರ್ಮ ಸಮೃದ್ಧ್ದಿಯಾಗಬೇಕು. ಧರ್ಮಗಳು ಬೆಂಕಿ ಹಚ್ಚಲು ಹುಟ್ಟಿಲ್ಲ. ದೀಪ ಹಚ್ಚಲು ಹುಟ್ಟಿರುವುದು. ಆ ದೀಪದ ಬೆಳಕಿನಲ್ಲಿ ಮನುಷ್ಯರಿಗೆ ದಾರಿ ತೋರಿಸಲಿರುವುದು ಧರ್ಮ. ಸುಡುವುದಕ್ಕೆ, ಕೊಲ್ಲುವುದಕ್ಕಾಗಿ ಅಲ್ಲ. ಆ ಮಾತುಗಳು ತಪ್ಪು. ‘‘ಹಿಂದೂಗಳೇ ಹೆಚ್ಚಾಗಿರುವ ದೇಶ ಹಿಂದೂ ಧರ್ಮವಾಗುವುದರಲ್ಲಿ ತಪ್ಪೇನು?’’ ಎಂಬ ಪ್ರಶ್ನೆ ಕೇಳುತ್ತಾರೆ. ಅಂದರೆ ಉಳಿದ ಜೈನರು, ಸಿಕ್ಖರು, ಮುಸ್ಲಿಮರು, ಕ್ರೈಸ್ತರು ಎಲ್ಲಿ ಹೋಗಬೇಕು? ನೀವು ಪೂಜಿಸುವ ಸೂರ್ಯನಿಗೆ ತಾರತಮ್ಯ ಇಲ್ಲದಿರುವಾಗ ಹುಲು ಮಾನವನಿಗೆ ತಾರತಮ್ಯವೇಕೆ?. ನಿಮ್ಮನ್ನು ಪೋಷಿಸುವ ಗಾಳಿ, ನದಿ, ಸಮುದ್ರ, ಗಿಡಪಕ್ಷಿಗಳಿಗೆ, ಹುಲು ಮನುಷ್ಯರು ಯಾವ ದೇಶದ ಬಲವನ್ನು ಮಾತನಾಡು ತ್ತಿದ್ದೀರಿ, ತಾಯ್ತನಕ್ಕೆ ಇಲ್ಲದಿರುವ ಜಾತಿ, ಧರ್ಮ ನಿಮಗೆ ಎಲ್ಲಿಂದ ಬಂತು ಎಂಬುದು ನನ್ನ ಪ್ರಶ್ನೆ. ಪ್ರಧಾನಿಯವರು ತಮ್ಮ ಸಂಸದರಿಗೆ ‘‘ನೀವು ಮಾತನಾಡಬೇಡಿ, ಮಾಧ್ಯಮಗಳಿಗೆ ಮಸಾಲ ಕೊಡಬೇಡಿ’’ ಎನ್ನುತ್ತಾರೆ. ಪ್ರಧಾನಿಯವರೇ ಅವರನ್ನು ಮಾತನಾಡಲು ಬಿಡಿ, ಅವರು ಹಾಗೆ ಮಾತನಾಡಿದರೆ ಮಾತ್ರವೇ ಅವರ ಮನಸ್ಥಿತಿ ಜನರಿಗೆ ಅರ್ಥವಾಗುವುದು. ಅವರನ್ನು ಬಾಯಿ ಮುಚ್ಚಿಸುವುದರಿಂದ ಈ ರೀತಿಯ ನಾಯಕರ ಬಗ್ಗೆ ಜನಸಾಮಾನ್ಯರಿಗೆ ತಿಳಿಯುವುದಿಲ್ಲ.

ನಾನು ನಡೆಯದ್ದನ್ನು, ಇಲ್ಲದ್ದನ್ನು ಹೇಳುತ್ತಿಲ್ಲ. ಒಬ್ಬ ಪ್ರಜೆಯಾಗಿ, ಒಬ್ಬ ಸೂಕ್ಷ್ಮ ಪ್ರಜ್ಞೆಯ ನಟನಾಗಿ, ಕಲಾವಿದನಾಗಿ ಪ್ರತಿಕ್ರಿಯಿಸಬೇಕು. ನನಗೆ ಬಾಯಿ ಮುಚ್ಚಿರಿ ಅಂತಾರೆ, ಪ್ರಕಾಶ್ ರೈ ನೀವು ಪಾಕಿಸ್ತಾನಕ್ಕೆ ಹೋಗಿ ಅಂತಾರೆ? ನಾನ್ಯಾಕೆ ಪಾಕಿಸ್ತಾನಕ್ಕೆ ಹೋಗಬೇಕು? ಹಾಲಿಡೇ ರೆಸಾರ್ಟ್‌ಗೆ ಹೋಗಲು ಹೇಳಿ. ಸುಂದರ ದೇಶಕ್ಕೆ ಹೋಗಲು ಹೇಳಿ. ಯಾಕೆ ಪಾಕಿಸ್ತಾನ ಪಾಕಿಸ್ತಾನ ಅಂತೀರಿ? ಯಾಕೆಂದರೆ ಆ ದೇಶ, ಅಲ್ಲಿನ ಧರ್ಮದ ಬಗ್ಗೆ ನಿಮ್ಮ ಮನಸ್ಥಿತಿಯದು. ನನಗೆ ಅರ್ಥವಾಗುತ್ತದೆ. ನಾನು ಕೇಳಿರುವುದಕ್ಕೆ ಉತ್ತರ ಕೊಡಿ. ಹೋಗು, ನಿನ್ನ ಸಿನೆಮಾ ನೋಡುವುದಿಲ್ಲ. ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದರೆ ಏನರ್ಥ.

♦ ಮಾನವ ಧರ್ಮವನ್ನು ಪ್ರತಿಪಾದಿಸುತ್ತಾ, ಪ್ರಜಾಪ್ರಭುತ್ವ ವನ್ನು ಬಲಪಡಿಸುವ ನಿಮ್ಮ ಈ ಹೋರಾಟಕ್ಕೆ ಜಯ ಸಿಗಲಿದೆಯೇ?

ಪ್ರಕಾಶ್ ರೈ: ನಾನು ಮಾತು ಆರಂಭಿಸಿದಾಗ ನೀನು ಒಬ್ಬನೇ ಅಂದರು. ಈಗ ಇಷ್ಟು ಜನ ಜತೆಗಿದ್ದಾರೆ. ಆಲೋಚನೆಗಳು, ಚಿಂತಕರು, ನಿವೃತ್ತ ಅಧಿಕಾರಿಗಳು, ವಕೀಲರು, ವೈದ್ಯರು, ಯುವಕರು ನಿಧಾನವಾಗಿ ಸೇರುತ್ತಿದ್ದಾರೆ. ಪ್ರಜೆಗಳು ನಾವು ಎಚ್ಚೆತ್ತುಕೊಳ್ಳಬೇಕು. ಬಹುಸಂಖ್ಯಾತರಾದ ಜನರು ಸೇರಿಕೊಂಡು ಪ್ರಶ್ನಿಸಲು ಮುಂದಾಗಬೇಕು.

♦ ಹೊಸ ಚಿತ್ರ ನಿರ್ದೇಶನ, ನಿರ್ಮಾಣ ಮಾಡುತ್ತಿದ್ದೀರಾ?
ಪ್ರಕಾಶ್ ರೈ: 
ಜುಲೈ, ಆಗಸ್ಟ್ ಬಳಿಕ ಹೊಸ ಚಲನಚಿತ್ರಗಳು ಆರಂಭವಾಗಲಿವೆ. ಪ್ರಸ್ತುತ ತಮಿಳಿನಲ್ಲಿ ಗೋಧಿಬಣ್ಣ ನಿರ್ಮಾಣವಾಗುತ್ತಿದೆ. ಎಲ್ಲಾ ಭಾಷೆಗಳಲ್ಲೂ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಜತೆಗೆ ನಿರ್ಮಾಣ, ನಿರ್ದೇಶನವೂ ಇದೆ. ಪ್ರಸ್ತುತ ಚುನಾವಣೆ ಮುಗಿಯುವವರೆಗೆ ನಾನು �

Writer - ಸಂದರ್ಶನ: ಸತ್ಯಾ ಕೆ.

contributor

Editor - ಸಂದರ್ಶನ: ಸತ್ಯಾ ಕೆ.

contributor

Similar News

ಜಗದಗಲ
ಜಗ ದಗಲ