ಇಂದು ವಿಶ್ವ ಅಸ್ತಮಾ ದಿನ

Update: 2018-04-30 18:30 GMT

 ತಡೆಗಟ್ಟುವುದು ಹೇಗೆ?
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವ್ಯಕ್ತಿಯು ಯಾವ ಕಾರಣಕ್ಕಾಗಿ ಅಸ್ತಮಾರೋಗಕ್ಕೆ ತುತ್ತಾಗುತ್ತಾನೆ ಎಂಬುದನ್ನು ಅರಿತು ಅಲರ್ಜಿ ಕಾರಕ ವಸ್ತುಗಳನ್ನು ವ್ಯಕ್ತಿಯ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು. ಉದಾ: ಧೂಳು, ಧೂಮಪಾನದ ಹೊಗೆ, ಆಸ್ಪ್ಪರೀನ್ ಮುಂತಾದ ನೋವು ನಿವಾರಕ ಔಷಧಿಗಳು, ಸಾಕು ಪ್ರಾಣಿಗಳ ರೋಮ, ಅಲರ್ಜಿಕಾರಕ ಆಹಾರ ಪದಾರ್ಥಗಳು. ಚಾಕಲೆಟ್ ಇತ್ಯಾದಿ. ಜೀವನ ಶೈಲಿಯ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡಿ ವಾತವರಣದಲ್ಲಿನ ಅಲರ್ಜಿಕಾರಕ ವಸ್ತುಗಳು ಅಥವಾ ರಾಸಾಯನಿಕಗಳ ಸಂಪರ್ಕಕ್ಕೆ ಬರದಂತೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.

ಪ್ರತೀ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವಾದ್ಯಂತ ಅಸ್ತಮಾರೋಗದ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸೈರ್ಯವನ್ನು ನೀಡುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. 1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತೀ ವರ್ಷ ನಡೆಸಲಾಗುತ್ತದೆ. ಬಾರ್ಸಿಲೋನಾದಲ್ಲಿ ನಡೆದ ಮೊದಲ ವಿಶ್ವ ಅಸ್ತಮಾ ಸಮಾವೇಶದ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
 ಏನಿದು ಅಸ್ತಮಾ ಕಾಯಿಲೆ?
ಅಸ್ತಮಾ ಎನ್ನುವುದು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಕಾಯಿಲೆಯಾಗಿದೆ. ಶ್ವಾಸಕೋಶಗಳು (Lungs) ನಮ್ಮ ದೇಹದ ಅತ್ಯಂತ ಕ್ರಿಯಾತ್ಮಕವಾದ ಅಂಗವಾಗಿದ್ದು ದೇಹದ ಎಲ್ಲಾ ಜೀವಕೋಶಗಳಿಗೆಅತೀ ಅಗತ್ಯವಾದ ಆಕ್ಸಿಜನ್ (ಆಮ್ಲಜನಕ)ನ ಪೂರೈಕೆಯನ್ನು ಮಾಡುವ ಗುರುತರವಾದ ಜವಾಬ್ದಾರಿ ಯನ್ನು ಹೊಂದಿರುತ್ತದೆ. ನಾವು ಮೂಗಿನ ಮೂಲಕ ಒಳಗೆಳೆದುಕೊಂಡ ಗಾಳಿ ಶ್ವಾಸನಾಳಗಳು ಅಥವಾ ಶ್ವಾಸಮಾರ್ಗಗಳ ಮೂಲಕ ಶ್ವಾಸಕೋಶಕ್ಕೆ ತಲುಪುತ್ತದೆ. ಶ್ವಾಸಕೋಶಗಳಲ್ಲಿರುವ ಚಿಕ್ಕ ಚಿಕ್ಕ ಗಾಳಿ ಚೀಲಗಳ ಮುಖಾಂತರ ನಾವು ಸೇವಿಸಿದ ಗಾಳಿಯಲ್ಲಿನ ಆಮ್ಲಜನಕ ಶ್ವಾಸಕೋಶದ ಒಳಗಿರುವ ರಕ್ತನಾಳಗಳ ಒಳಗೆ ಸೇರಿಕೊಂಡು ದೇಹದ ಇತರ ಎಲ್ಲಾ ಅಂಗಾಂಗಗಳಿಗೆ, ಜೀವಕೋಶಗಳಿಗೆ ರಕ್ತದ ಮುಖಾಂತರ ಪೂರೈಕೆಯಾಗುತ್ತಲಿರುತ್ತದೆ. ಈ ಆಮ್ಲಜನಕದ ಪೂರೈಕೆಯಲ್ಲಿ ಸ್ವಲ್ಪವಾದರೂ ವ್ಯತ್ಯಾಸ ವಾದಲ್ಲಿ ಉಸಿರಾಟದ ತೊಂದರೆ ಉಂಟಾಗಿ ಮನುಷ್ಯನಿಗೆ ಚಡಪಡಿಕೆ ಉಂಟಾಗುತ್ತದೆ. ಅಸ್ತಮಾ ಎನ್ನುವ ರೋಗ ಮುಖ್ಯವಾಗಿ ಈ ಶ್ವಾಸನಾಳಗಳಿಗೆ ಮತ್ತು ಶ್ವಾಸಕೋಶದ ಚಿಕ್ಕಚಿಕ್ಕ ಗಾಳಿಚೀಲಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು ಸುದೀರ್ಘ ಕಾಲದ ಚಿಕಿತ್ಸೆ ಮತ್ತು ನಿರಂತರವಾದ ಆರೈಕೆ ಅತೀ ಆವಶ್ಯಕ.
ಅಸ್ತಮಾ ರೋಗದ ಲಕ್ಷಣಗಳು
1.ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದುಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಸದ್ದು ಬರುವುದು.

2.ಎದೆ ಬಿಗಿಹಿಡಿತ, ಉಸಿರು ಕಿರಿದಾಗುವುದು, ಉಸಿರಾಡಲು ಕಷ್ಟವಾಗುವುದು
3.ವಿಪರೀತವಾದ ದೀರ್ಘಕಾಲಿಕ ಕೆಮ್ಮು

4.ವಿಪರೀತ ಮತ್ತು ನಿರಂತರ ಕೆಮ್ಮಿನಿಂದಾಗಿ ನಿದ್ರಾಹೀನತೆ ಮತ್ತು ಅಸಹನೆ ನಿರುತ್ಸಾಹ... ಆಟೋಟ ಮತ್ತು ಇತರ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ.
ಚಿಕಿತ್ಸೆ ಹೇಗೆ?
ಅಸ್ತಮಾ ಎನ್ನುವುದು ದೀರ್ಘಕಾಲಿಕ ಕಾಯಿಲೆಯಾಗಿದ್ದು ಸಂಪೂರ್ಣ ವಾಗಿ ರೋಗವನ್ನು ಗುಣಪಡಿಸುವುದು ಸಾಧ್ಯವಿಲ್ಲದ ಮಾತು. ಆದರೆ ಪರಿಣಾಮಕಾರಿಯಾದ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನದ ಮೂಲಕ ರೋಗದ ಲಕ್ಷಣಗಳನ್ನು ನಿಯಂತ್ರಿಸಬಹುದು. ಸಾಮಾನ್ಯವಾಗಿ ಅಸ್ತಮಾ ಚಿಕಿತ್ಸೆಯಲ್ಲಿ ಎರಡು ಬಗೆಯ ಮೂಲ ಔಷಧಗಳನ್ನು ಬಳಸಲಾಗುತ್ತದೆ.

1. ಅಸ್ತಮಾ ಆಘಾತವನ್ನು ತಡೆಯುವ ನಿಯಂತ್ರಣ ಔಷಧಿಗಳು: ಈ ರೀತಿಯ ಔಷಧಿಗಳು ಅಸ್ತಮಾ ರೋಗ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತವೆ ಮತ್ತು ಅಸ್ತಮಾ ರೋಗಕ್ಕೆ ಕಾರಣವಾಗಿರುವ ಉರಿಯೂತದಂತಹ ತೊಂದರೆಗಳು ಮರುಕಳಿಸದಂತೆ ಮತ್ತು ನಿರಂತರವಾಗಿರ ದಂತೆ ನಿಯಂತ್ರಿಸುತ್ತದೆ. ಆದರೆ ಅಸ್ತಮಾ ರೋಗದ ಸಂಪೂರ್ಣ ನಿಯಂತ್ರಣಕ್ಕಾಗಿ ರೋಗಿಗಳು ಈ ಔಷಧಿಗಳನ್ನು ಪ್ರತೀ ದಿನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರೋಗಿಗಳು ಸಹಜ ಸ್ಥಿತಿ ಯಲ್ಲಿರುವ ಸಮಯದಲ್ಲಿಯೂ ಈ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೇದಬಹುದಾದ ಅಥವಾ ಶ್ವಾಸದ ಮುಖಾಂತರ ಒಳಗೆಳೆದುಕೊಳ್ಳಬಹುದಾದ ಸ್ವಿರಾಯ್ಡಿಗಳು ಬಹಳ ಪರಿಣಾಮ ಕಾರಿಯಾದ ಮತ್ತು ದೀರ್ಘಕಾಲಿಕ ಅಸ್ತಮಾ ನಿಯಂತ್ರಣಕ್ಕಾಗಿ ಬಳಸುವ ಔಷಧಿಗಳಾಗಿರುತ್ತವೆೆ.

2. ಕ್ಷಿಪ್ರ ಉಪಶಮನಕಾರಿ ಔಷಧಿಗಳು: ಸಾಮಾನ್ಯವಾಗಿ ಅಸ್ತಮಾ ಆಘಾತದ ಸಂದರ್ಭ ಈ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ಬಳಸಲಾಗುತ್ತದೆ. ಈ ಔಷಧಿಗಳು ಜೀವ ಸಂರಕ್ಷಣಾ ಔಷಧಿಗಳಾಗಿದ್ದು ಅಸ್ತಮಾ ಕೆರಳಿದ ತಕ್ಷಣ ಉಪಶಮನ ದೊರಕಲು ತೆಗೆದುಕೊಳ್ಳಬೇಕಾಗುತ್ತದೆ. ಈ ಜೀವ ರಕ್ಷಕ ಔಷಧಿಗಳು ಶ್ವಾಸನಾಳಗಳನ್ನು ಹಿಗ್ಗಿಸಿ ಗಾಳಿಯ ಚಲನೆಯನ್ನು ಹೆಚ್ಚಿಸಿ ರೋಗದ ಲಕ್ಷಣಗಳನ್ನು ಕುಗ್ಗಿಸಿ ತ್ವರಿತ ಆರಾಮ ನೀಡುತ್ತವೆೆ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News

ಜಗದಗಲ
ಜಗ ದಗಲ