ಪ್ರತಿಕೂಲವಾಗುತ್ತಿರುವ ನ್ಯಾಯ

Update: 2018-05-02 18:34 GMT

ಕೇಂದ್ರದಲ್ಲಿ ಆಳ್ವಿಕೆಯಲ್ಲಿರುವ ಸರಕಾರವು ನಿಸ್ಸಂಶಯವಾಗಿ ಮುಸ್ಲಿಂ ವಿರೋಧಿ ರಾಜಕೀಯದಲ್ಲಿ ತೊಡಗಿದೆ. ಭಾರತದ ಪ್ರಭುತ್ವವು ಬಹುಸಂಖ್ಯಾತ ದುರಭಿಮಾನಿ ಧೋರಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಜಾಸತ್ತಾತ್ಮಕ ಗಣರಾಜ್ಯದ ಮೌಲ್ಯಗಳನ್ನ್ನು ಮತ್ತು ಸಂಸ್ಥೆಗಳನ್ನು ಸರ್ವನಾಶಗೊಳಿಸುತ್ತಿದೆ. ಪ್ರಭುತ್ವವನ್ನು ಉಳ್ಳವರ ಕೈಯಲ್ಲಿರುವ ಸಾಧನವನ್ನಾಗಿ ಮಾಡುತ್ತಿದೆ. ನಮ್ಮ ನಾಗರಿಕ ಸಮಾಜ, ರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ಈ ಸವಾಲನ್ನು ಸ್ವೀಕರಿಸಿ ಗಣರಾಜ್ಯವನ್ನು ಕಾಪಾಡಿಕೊಳ್ಳುವ ಯುದ್ಧದಲ್ಲಿ ಗೆಲ್ಲಬಲ್ಲವೇ? ಇದು ಈ ಕಾಲಘಟ್ಟದ ಜೀವನ್ಮರಣದ ಪ್ರಶ್ನೆಯಾಗಿದೆ.

ತ್ತೀಚಿನ ದಿನಗಳಲ್ಲಿ ದೇಶದ ಹಲವು ಪ್ರಮುಖ ಭಯೋತ್ಪಾದನಾ ವಿರೋಧಿ ಪ್ರಕರಣಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವಂಥ ಒಂದು ನಿರ್ದಿಷ್ಟ ಮಾದರಿಯು ಕಂಡುಬರುತ್ತಿದೆ. ಮಕ್ಕಾ-ಮಸೀದಿ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಸೀಮಾನಂದ, ನರೋದ ಪಾಟಿಯಾ ಪ್ರಕರಣದ ಮಾಯಾ ಕೊಡ್ನಾನಿ ಮತ್ತು ಸೊಹ್ರಾಬುದ್ದೀನ್ ಹಾಗೂ ತುಳಸಿ ಪ್ರಜಾಪತಿ ಪ್ರಕರಣದಲ್ಲಿನ ಇತರ ಆರೋಪಿಗಳು ನ್ಯಾಯ ಪ್ರಕ್ರಿಯೆಯ ದಿಕ್ಕನ್ನೇ ಬದಲಿಸಿದ ಪ್ರಶ್ನಾರ್ಹ ಕಾನೂನು ನಡಾವಳಿಗಳ ಫಲಾನುಭವಿಗಳಾಗಿದ್ದಾರೆ. ಈ ಬೆಳವಣಿಗೆಗಳು ನ್ಯಾಯಾಂಗ ಪ್ರಕ್ರಿಯೆಗಳನ್ನು ಮೂಲೆಗುಂಪು ಮಾಡಬೇಕೆಂಬ ಸರಕಾರದ ಕುತಂತ್ರ ಕಾರ್ಯಸೂಚಿಗಳನ್ನು ಎತ್ತಿ ತೋರಿಸುತ್ತದೆ.

 ಮಕ್ಕಾ ಮಸೀದಿಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ರೂವಾರಿಯೆಂಬ ಆಪಾದನೆ ಹೊತ್ತಿದ್ದ ಅಸೀಮಾನಂದ ಮತ್ತು ಇತರ ನಾಲ್ವರನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎನ್‌ಐಎ) ವಿಶೇಷ ನ್ಯಾಯಾಲಯವು 2018ರ ಎಪ್ರಿಲ್ 16ರಂದು ಖುಲಾಸೆ ಮಾಡಿತು. ಆರೋಪಗಳನ್ನು ಸಾಬೀತು ಮಾಡುವಂಥ ಯಾವುದೇ ನಿರ್ಣಾಯಕ ಸಾಕ್ಷಿಗಳನ್ನು ಒದಗಿಸಲು ಪ್ರಾಸಿಕ್ಯೂಷನ್ (ಸರಕಾರಿ ವಕೀಲರು) ವಿಫಲವಾದದ್ದೇ ಆರೋಪಿಗಳು ಖುಲಾಸೆಯಾಗಲು ಪ್ರಮುಖ ಕಾರಣವೆಂದು ನ್ಯಾಯಾಲಯವು ಹೇಳಿತು. 2007ರ ಮೇ ತಿಂಗಳಲ್ಲಿ ಹೈದರಾಬಾದಿನ ಚಾರ್‌ಮಿನಾರ್ ಬಳಿ ಇರುವ 17ನೇ ಶತಮಾನದ ಮಕ್ಕಾ ಮಸೀದಿ ಬಳಿ ಬಲವಾದ ಬಾಂಬ್ ಒಂದು ಸ್ಫೋಟಗೊಂಡು ಶುಕ್ರವಾರದ ನಮಾಝಿಗೆ ಬಂದಿದ್ದ ಒಂಬತ್ತು ಜನರನ್ನು ಬಲಿತೆಗೆದುಕೊಂಡು 58 ಜನರನ್ನು ತೀವ್ರವಾಗಿ ಗಾಯಗೊಳಿಸಿತು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬೇಕಾಬಿಟ್ಟಿಯಾಗಿ ಹಲವಾರು ಅಮಾಯಕ ಮುಸ್ಲಿಂ ಯುವಕರನ್ನು ಭಯೋತ್ಪಾದನಾ ಕಾಯ್ದೆಯಡಿ ಬಂಧಿಸಿದರು. ಮತ್ತು ಅವರಿಗೆ ವಿಧವಿಧವಾದ ಚಿತ್ರಹಿಂಸೆಗಳನ್ನು ಕೊಟ್ಟು ಈ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐನ ಹಸ್ತವಿದೆಯೆಂದು ಒಪ್ಪಿಕೊಳ್ಳುವಂತೆ ಮಾಡಲು ಯತ್ನಿಸಿದರು. ಆದರೆ ಸಿಬಿಐನ ತನಿಖೆಯು ಈ ಸ್ಫೋಟದ ಯೋಜನೆ ಮಾಡಿದ್ದು ಕೇಸರಿ ಭಯೋತ್ಪಾದಕರೆಂಬುದನ್ನು ಬಯಲುಗೊಳಿಸುವ ಮೂಲಕ ಪ್ರಾಸಿಕ್ಯೂಷನ್ನಿನ ಕಟ್ಟುಕಥೆಗನ್ನು ಬಯಲುಗೊಳಿಸಿತು.
ಈ ಪ್ರಕರಣದ ಪ್ರಮುಖ ಆರೋಪಿಯಾದ ಅಸೀಮಾನಂದ 2010ರಲ್ಲಿ ನ್ಯಾಯಾಧೀಶರ ಮುಂದೆ ಸ್ವಯಂ ತಪ್ಪೊಪ್ಪಿಗೆ ಹೇಳಿಕೆಯೊಂದನ್ನು ನೀಡಿದ್ದಲ್ಲದೆ ನಂತರ ಕ್ಯಾರಾವಾನ್ ಪತ್ರಿಕೆಗೆ ಒಂದು ಸುದೀರ್ಘವಾದ ಸಂದರ್ಶನವನ್ನು ಕೊಟ್ಟು ಈ ಸ್ಫೋಟದ ಹಿಂದಿನ ಷಡ್ಯಂತ್ರಗಳನ್ನು ಬಯಲುಮಾಡಿದ್ದ. ಆತನ ಆ ಸ್ವಯಂ ತಪ್ಪೊಪ್ಪಿಗೆ ಹೇಳಿಕೆಯ ಪ್ರಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಉನ್ನತ ನಾಯಕರು ಮತ್ತು ಇತರ ಕೇಸರಿ ಸಂಘಟನೆಗಳು ತಮ್ಮ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ದೇಶವ್ಯಾಪಿ ಹರಡಿಕೊಂಡಿರುವ ತಮ್ಮ ಸಂಘಟನಾ ಜಾಲದ ಮೂಲಕ ಮುಸ್ಲಿಮರ ಮೇಲೆ ಭಯೋತ್ಪಾದನಾ ದಾಳಿಯನ್ನು ನಡೆಸುವ ಯೋಜನೆಯನ್ನು ಮಾಡಿದ್ದರು. ಅದರ ಭಾಗವಾಗಿಯೇ ಈ ಸ್ಫೋಟವನ್ನೂ ನಡೆಸಲಾಗಿತ್ತು. ಅಂತಿಮವಾಗಿ 2011ರಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು ಮತ್ತು ಆ ವೇಳೆಗಾಗಲೇ ಬಲವಾದ ಸಾಕ್ಷಿಗಳನ್ನು ಸಂಗ್ರಹಿಸಲಾಗಿತ್ತಾದ್ದರಿಂದ ಎನ್‌ಐಎಯು ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಾತರಿ ಮಾಡುತ್ತದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎನ್‌ಐಎಯು ತಪ್ಪಿತಸ್ಥರು ತಮ್ಮ ತಪ್ಪೊಪ್ಪಿಗೆ ಹೇಳಿಕೆಯನ್ನು ಹಿಂದಕ್ಕೆ ಪಡೆಯಲು ದಾರಿ ಮಾಡಿಕೊಡುತ್ತಿದೆ ಹಾಗೂ ಸಾಕ್ಷಿಗಳು ಉಲ್ಟಾ ಹೊಡೆಯುವಂತೆಯೂ ಮಾಡುತ್ತಿದೆ. ಈ ಅರ್ಥದಲ್ಲಿ ಎನ್‌ಐಎ ನ್ಯಾಯಾಲಯದ ತೀರ್ಪು ನಿರೀಕ್ಷಿತವೇ ಆಗಿದ್ದರೂ ಆಾತಕಾರಿಯಾಗಿದೆ.
2002ರಲ್ಲಿ ಗುಜರಾತಿನ ನರೋದಾ ಪಾಟಿಯಾದಲ್ಲಿ ನಡೆದ ನರಹತ್ಯೆಯ ಪ್ರಕರಣದಲ್ಲಿ ಬಿಜೆಪಿ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಮಾಯಾ ಕೊಡ್ನಾನಿ ಮತ್ತು ಇತರ 17 ಜನರನ್ನು ಗುಜರಾತಿನ ಹೈಕೋರ್ಟು ಖುಲಾಸೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇದು ಪ್ರಾಸಿಕ್ಯೂಷನ್‌ಗೆ ಆದ ಮತ್ತೊಂದು ಆಘಾತ. ಅದಕ್ಕೆ ಕಾರಣ ಆರೋಪಗಳನ್ನು ಸಂದೇಹಕ್ಕಾಸ್ಪದವಿಲ್ಲದೆ ರುಜುವಾತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದದ್ದು. ಆದ್ದರಿಂದ ಆರೋಪಿಗಳಿಗೆ ಅನುಮಾನದ ಲಾಭವನ್ನು ನೀಡಿ ಖುಲಾಸೆ ಮಾಡಲಾಯಿತು. ಗುಜಾರಾತ್ ಹತ್ಯಾಕಾಂಡಲ್ಲಿ ಅತಿಹೆಚ್ಚು ಮುಸ್ಲಿಮರ ಹತ್ಯೆಗೆ ಕಾರಣವಾದ ಘಟನೆಗೆ ಪ್ರಚೋದನೆ ನೀಡಿ 97 ಮುಸ್ಲಿಮರ ಮಾರಣಹೋಮಕ್ಕೆ ಕಾರಣವಾದ ಆರೋಪದ ಮೇಲೆ ಮಾಯಾ ಕೊಡ್ನಾನಿಯವರನ್ನು 2009ರಲ್ಲಿ ಬಂಧಿಸಲಾಗಿತ್ತು. ನಂತರದಲ್ಲಿ 28 ವರ್ಷಗಳ ಕಾಲ ಜೈಲುಶಿಕ್ಷೆಯನ್ನು ಕೆಳಗಿನ ಕೋರ್ಟು ನೀಡಿತ್ತು. 2012ರಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ಕೋರ್ಟು ಮಾಯಾ ಕೊಡ್ನಾನಿಯವರನ್ನು ನರೋದಾ ಪಾಟಿಯಾ ಗಲಭೆಗಳ ಸೂತ್ರಧಾರಿಯೆಂದು ಕರೆದಿದ್ದಲ್ಲದೆ ಆ ಪ್ರದೇಶದಲ್ಲಿ ಮುಸ್ಲಿಮರನ್ನು ಕೊಲ್ಲುತ್ತಾ ಲೂಟಿ ಹೊಡೆಯುತ್ತಿದ್ದ ಗುಂಪುಗಳಿಗೆ ಸ್ಥಳದಲ್ಲಿ ಹಾಜರಿದ್ದು ಖುದ್ದು ಪ್ರಚೋದನೆ ನೀಡುತ್ತಿದ್ದುದನ್ನು ಸಹ ದಾಖಲಿಸಿತ್ತು. ಆಗ ಆಕೆ ಗುಜರಾತ್ ವಿಧಾನಸಭೆಯ ಸದಸ್ಯರಷ್ಟೇ ಆಗಿದ್ದರು. ಆ ನಂತರ ಆಕೆಗೆ ಭಡ್ತಿ ಕೊಟ್ಟು 2007ರಲ್ಲಿ ಮಂತ್ರಿಯನ್ನಾಗಿ ಮಾಡಲಾಯಿತು. ಆದರೆ ಆಕೆ ಅಪರಾಧ ನಡೆದ ಸ್ಥಳದಲ್ಲಿ ಖುದ್ದು ಹಾಜರಿದ್ದರೆಂದು ಸಾಬೀತು ಮಾಡುವಷ್ಟು ಸಾಕ್ಷಿಗಳು ದೊರೆಯದ ಕಾರಣವನ್ನು ಮುಂದೆ ಮಾಡಿ ಗುಜರಾತಿನ ಹೈಕೋರ್ಟು ಆಕೆಯನ್ನು 2018ರ ಎಪ್ರಿಲ್ 20ರಂದು ಖುಲಾಸೆ ಮಾಡಿತು. ಇದು ಹಾಲಿ ಸರಕಾರವು ನ್ಯಾಯಾಂಗದ ಮೇಲೆ ಹೇಗೆ ಅನಪೇಕ್ಷಿತ ಪ್ರಭಾವವನ್ನು ಹೊಂದಿದ್ದು ನ್ಯಾಯಪ್ರಕ್ರಿಯೆಯನ್ನು ತನ್ನ ಅಪರಾಧಿ ಕೃತ್ಯಗಳಿಗೆ ಪೂರಕವಾಗಿ ಬಗ್ಗಿಸುತ್ತಿದೆ ಎಂಬುದನ್ನೂ ಸಾಬೀತು ಮಾಡುತ್ತದೆ.


ನ್ಯಾಯಾಲಯಗಳ ಈ ತೀರ್ಪುಗಳು ಹೊರಬರುತ್ತಿರುವ ಸಂದರ್ಭದಲ್ಲೇ ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿ ಪೊಳ್ಳು ಎನ್‌ಕೌಂಟರ್ ಪ್ರಕರಣಗಳಲ್ಲೂ ಇಬ್ಬರು ಸಾಕ್ಷಿಗಳು ಉಲ್ಟಾ ಹೊಡೆದು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆಂಬ ವರ್ತಮಾನ ಬಂದಿದೆ. ಸೊಹ್ರಾಬುದ್ದೀನ್ ಮತ್ತು ಅವರ ಪತ್ನಿ ಕೌಸರ್ ಬೀ ಹಾಗೂ ಅವರ ಸಹಾಯಕ ಪ್ರಜಾಪತಿಯವರುಗಳು 2005ರ ನವೆಂಬರ್‌ನಲ್ಲಿ ಹೈದರಾಬಾದಿನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಪ್ರಯಾಣ ಮಾಡುತ್ತಿದ್ದರು. ಆಗ ಅವರನ್ನು ಗುಜರಾತ್ ಪೊಲೀಸ್‌ನ ಭಯೋತ್ಪಾದನಾ ವಿರೋಧಿ ದಳದವರು ಅಪಹರಿಸಿದರು. 2005ರ ನವೆಂಬರ್‌ನಲ್ಲೇ ಸುಳ್ಳು ಎನ್‌ಕೌಂಟರ್ ಎಂಬ ಆರೋಪವಿರುವ ಘಟನೆಯಲ್ಲಿ ಸೊಹ್ರಾಬುದ್ದೀನ್‌ನನ್ನು ಕೊಲ್ಲಲಾಯಿತು. ಆನಂತರ ಆತನ ಪತ್ನಿಯ ಮೇಲೆ ಅತ್ಯಾಚಾರ ಮಾಡಿ ಕೊಂದುಹಾಕಲಾಯಿತೆಂಬ ಆರೋಪವೂ ಇದೆ. ಒಂದು ವರ್ಷದ ಆನಂತರ ಪ್ರಜಾಪತಿಗೂ ಇದೇ ಗತಿಯಾಯಿತು. ನಿರೀಕ್ಷಿತವಾಗಿಯೇ ಸಾಕ್ಷಿಗಳು ಈ ಹಿಂದೆ ತಾವುಗಳು ಸಿಬಿಐಗೆ ಕೊಟ್ಟ ಹೇಳಿಕೆಗಳಿಂದ ಹಿಂದೆ ಸರಿದರು. ಈವರೆಗೆ ಈ ಪ್ರಕರಣದಲ್ಲಿ 52 ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ. ನ್ಯಾಯಾಲಯವು ಈವರೆಗೆ 76 ಸಾಕ್ಷಿಗಳ ವಿಚಾರಣೆ ನಡೆಸಿದೆ.

ಎಲ್ಲಾ ಪ್ರಕರಣಗಳನ್ನು ಒಂದಾಗಿ ಬಂಧಿಸಿಡುವ ಸೂತ್ರ ಯಾವುದು?
ಮೊದಲನೆಯದಾಗಿ ನ್ಯಾಯಾಂಗ ವ್ಯವಸ್ಥೆಯು ನ್ಯಾಯವನ್ನು ಒದಗಿಸುವಲ್ಲಿ ಅಸಮರ್ಥವಾಗಿದೆ ಎಂಬುದನ್ನು ಇದು ಸಾಬೀತು ಮಾಡುತ್ತದೆ. ಈ ಮೂರೂ ಪ್ರಕರಣಗಳ ಬೆಳವಣಿಗೆಗಳಿಂದ ಅನ್ಯಾಯಕ್ಕೆ ಗುರಿಯಾದವರು ಮತ್ತು ಅವರ ಕುಟುಂಬಗಳು ನ್ಯಾಯದಿಂದ ವಂಚಿತರಾಗಿದ್ದಾರೆ. ಅಪರಾಧವನ್ನು ಎಸಗಿದವರು ನ್ಯಾಯಾಲಯದ ತೀರ್ಮಾನಗಳನ್ನು ತಮ್ಮ ಪರವಾಗಿ ಬರುವಂತೆ ಮಾಡಿಕೊಳ್ಳಲು ಯಶಸ್ವಿಯಾಗಿರುವುದು ಅವರಲ್ಲಿ ಭ್ರಮನಿರಸನ ಉಂಟು ಮಾಡಿದ್ದರೆ ಅದಕ್ಕೆ ಸಾಕಷ್ಟು ಕಾರಣಗಳಿವೆ.
  ಎರಡನೆಯದಾಗಿ ಅಪರಾಧ ತನಿಖಾ ವ್ಯವಸ್ಥೆಯು ಪ್ರಬಲ ಅಪರಾಧಿಗಳ ವಿರುದ್ಧ ನಿಲ್ಲಲಾಗದಷ್ಟು ಅಸಹಾಯಕವಾಗಿದೆ. ಸ್ಥಳಿಯ ಪೊಲೀಸರಾಗಲಿ, ಸಿಬಿಐಯಾಗಲಿ ಅಥವಾ ಎನ್‌ಐಎ ಆಗಲಿ ಕಣ್ಣೆದುರಿರುವ ಸಾಕ್ಷಿಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ. ಅಂಥಾ ಸಾಕ್ಷಿಗಳನ್ನು ರಕ್ಷಿಸಿಕೊಂಡಿದ್ದರೆ ಯಾವುದೇ ಸಕ್ರಿಯ ಕಾನೂನು ವ್ಯವಸ್ಥೆಯಲ್ಲಿ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆಯಾಗುತ್ತಿತ್ತು. ಸಾಕ್ಷಿಗಳು ಉಲ್ಟಾ ಹೊಡೆದು ಪ್ರತಿಕೂಲ ಸಾಕ್ಷಿಗಳಾಗುವುದು, ನ್ಯಾಯಾಧೀಶರ ವರ್ಗಾವಣೆಗಳು ಮತ್ತು ತನಿಖಾ ಸಂಸ್ಥೆಗಳನ್ನೇ ಬದಲಾಯಿಸುವಂಥ ಬೆಳವಣಿಗೆಗಳು ಅತ್ಯಂತ ಕಳವಳಕಾರಿಯಾಗಿವೆ. ಇದು ನಮ್ಮ ತನಿಖಾ ವ್ಯವಸ್ಥೆಯ ಬಗ್ಗೆ ಮತ್ತು ನ್ಯಾಯಾಂಗದ ಬಗ್ಗೆ ಸಾರ್ವಜನಿಕರು ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಮುಂದೆ ಇಂಥಾ ಬೆಳವಣಿಗೆಗಳು ನಮ್ಮ ಗಣರಾಜ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಲಿವೆ. ಸೊಹ್ರಾಬುದ್ದೀನ್ ಪ್ರಕರಣವನ್ನು ವಿಚಾರಣೆ ಮಾಡುತ್ತಿದ್ದ ನ್ಯಾಯಾಧೀಶ ಲೋಯಾ ಅವರ ಸಾವಿನ ಸುತ್ತಲಿನ ವಿವಾದವು ಈ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಅದರಲ್ಲೂ ಈ ಪ್ರಕರಣದಲ್ಲಿ ಆಗಿರಬಹುದಾದ ಕರ್ತವ್ಯಲೋಪಗಳನ್ನು ಸಾಕ್ಷಿಗಳು ಹೆಚ್ಚೆಚ್ಚು ಬಯಲಿಗೆ ತರುತ್ತಿದ್ದರು ಅದನ್ನು ಗುರುತಿಸಲು ನಿರಾಕರಿಸುತ್ತಿರುವ ಸುಪ್ರೀಂ ಕೋರ್ಟು ಈ ಆತಂಕವನ್ನು ದುಪ್ಪಟ್ಟು ಮಾಡಿದೆ.
 ಮೂರನೆಯದಾಗಿ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಮುಂದಿಟ್ಟಿರುವ ದೋಷಾರೋಪಗಳಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳಾದ ಅಭಿನವ್ ಭಾರತ್, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಆರೆಸ್ಸೆಸ್ ಮತ್ತು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಗೆ ಸೇರಿದ ಸದಸ್ಯರು ಭಾಗವಹಿಸಿದ್ದರೆಂದು ನಮೂದಾಗಿದೆ. ಅವರಲ್ಲಿ ಅಸೀಮಾನಂದ, ಬಾಬು ಬಜರಂಗಿ, ಕೊಡ್ನಾನಿ ಮತ್ತು ಗುಜರಾತಿನ ಅಂದಿನ ಗೃಹಮಂತ್ರಿ ಅಮಿತ್ ಶಾ ಅವರದ್ದು ಪ್ರಮುಖವಾದ ಹೆಸರುಗಳು. ಇವರೆಲ್ಲರೂ ಜೈಲುವಾವನ್ನೂ ಸಹ ಅನುಭವಿಸಿ ಬಂದಿದ್ದಾರೆ.

ಕೇಂದ್ರದಲ್ಲಿ ಆಳ್ವಿಕೆಯಲ್ಲಿರುವ ಸರಕಾರವು ನಿಸ್ಸಂಶಯವಾಗಿ ಮುಸ್ಲಿಂ ವಿರೋಧಿ ರಾಜಕೀಯದಲ್ಲಿ ತೊಡಗಿದೆ. ಭಾರತದ ಪ್ರಭುತ್ವವು ಬಹುಸಂಖ್ಯಾತ ದುರಭಿಮಾನಿ ಧೋರಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಜಾಸತ್ತಾತ್ಮಕ ಗಣರಾಜ್ಯದ ಮೌಲ್ಯಗಳನ್ನು ಮತ್ತು ಸಂಸ್ಥೆಗಳನ್ನು ಸರ್ವನಾಶಗೊಳಿಸುತ್ತಿದೆ. ಪ್ರಭುತ್ವವನ್ನು ಉಳ್ಳವರ ಕೈಯಲ್ಲಿರುವ ಸಾಧನವನ್ನಾಗಿ ಮಾಡುತ್ತಿದೆ. ನಮ್ಮ ನಾಗರಿಕ ಸಮಾಜ, ರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ಈ ಸವಾಲನ್ನು ಸ್ವೀಕರಿಸಿ ಗಣರಾಜ್ಯವನ್ನು ಕಾಪಾಡಿಕೊಳ್ಳುವ ಯುದ್ಧದಲ್ಲಿ ಗೆಲ್ಲಬಲ್ಲವೇ? ಇದು ಈ ಕಾಲಘಟ್ಟದ ಜೀವನ್ಮರಣದ ಪ್ರಶ್ನೆಯಾಗಿದೆ.
ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ