ಹಲಗೆ ಮತ್ತು ಮೆದು ಬೆರಳು: ಮುಚ್ಚಿದ ಬಾಗಿಲ ಸಂದಿನಿಂದ....

Update: 2018-05-03 18:29 GMT

ಹಿರಿಯ ಕವಿಗಳಿಗೆ ಸಾಮಾಜಿಕ ತಾಣಗಳ ಕುರಿತಂತೆ ಒಂದು ಕೀಳರಿಮೆಯಿದೆ. ಅಥವಾ ಇದೊಂದು ಜನರೇಶನ್ ಗ್ಯಾಪ್ ಕೂಡ ಆಗಿರಬಹುದು. ‘ಫೇಸ್‌ಬುಕ್ ಕವಿಗಳು’ ‘ಫೇಸ್ ಬುಕ್ ಬರಹಗಾರರು’ ಎಂದ ಹಣೆಪಟ್ಟಿಯನ್ನು ತಗಲಿಸಿ ಸಾಮಾಜಿಕ ತಾಣಗಳಿಂದ ತಾವು ದೂರ ಉಳಿದಿರುವುದು ತಮ್ಮ ಹಿರಿಮೆಯೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಪತ್ರಿಕೆಗಳಲ್ಲಿ ಬರೆದಿರುವುದಷ್ಟೇ ಪ್ರಸಾದ ಎಂಬಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ. ಇಂದು ಇಂತಹ ಕವಿಗಳ ಪುಸ್ತಕಗಳು ಕನ್ನಡ ನಾಡಿನ ಎರಡು ಸಾವಿರ ಜನರನ್ನು ತಲುಪಿಸಿದರೆ ಅದೇ ದೊಡ್ಡ ಸಾಧನೆ. ಆದರೆ ಇದೇ ಸಂದರ್ಭದಲ್ಲಿ, ಸಾಮಾಜಿಕ ತಾಣಗಳು ಓದುಗರು ಮತ್ತು ಬರಹಗಾರರ ನಡುವಿನ ಪತ್ರಿಕೆ ಎಂಬ ದೊಡ್ಡ ಗೋಡೆಯನ್ನು ಕೆಡವಿ ಹಾಕಿದೆ. ಇಲ್ಲವಾದರೆ ಬರಹಗಾರರು ಪತ್ರಿಕೆಗಳ ದೊಣ್ಣೆನಾಯಕನ ಅಪ್ಪಣೆ ಪಡೆದೇ ಓದುಗರನ್ನು ತಲುಪಬೇಕಾಗಿತ್ತು. ಇಂದು ಸಾಮಾಜಿಕ ತಾಣಗಳ ಮೂಲಕ ಓದುಗರನ್ನು ನೇರವಾಗಿ ತಲುಪುವ ಸ್ವಾತಂತ್ರ ಕವಿಗೆ, ಬರಹಗಾರರಿಗೆ ದೊರಕಿದೆ. ಓದುಗರೇ ಲೇಖಕನನ್ನು ರೂಪಿಸುತ್ತಿದ್ದಾರೆ. ಹೀಗೆ ರೂಪಿಸಿದ ಅತ್ಯುತ್ತಮ ಕವಯತ್ರಿಯರಲ್ಲಿ ಕಾದಂಬಿನಿ ಹೆಸರನ್ನು ಪಟ್ಟಿ ಮಾಡಬಹುದು. ಸಾಮಾಜಿಕ ತಾಣಗಳ ಮೂಲಕ ಹೊರಹೊಮ್ಮಿದ ಕಾದಂಬಿನಿ ಎನ್ನುವ ಕವಯತ್ರಿ, ಹೊಸ ತಲೆಮಾರಿನ ಬಹುಮುಖ್ಯ ಬರಹಗಾರ್ತಿಯಾಗಿದ್ದಾರೆ. ಅವರ ‘ಹಲಗೆ ಮತ್ತು ಮೆದುಬೆರಳು’ ಕೃತಿ ಇದೀಗ ಹೊರ ಬಂದಿದೆ. ‘‘ತಾಯಿಯ ಕುರಿತು ಹೇಳು ಎಂದರು

ಉರಿಯದ ಒಲೆಯ ಮುಂದೆ
ಕೊತಕೊತನೆ ಕುದಿದವಳು ಎಂದೆ’’


ಹೀಗೆ ಧಗ್ಗೆಂದು ಬೆಳಗುವ ಒಲೆಯಂತೆ ಎದೆಯನ್ನು ಆವರಿಸುವ ಸುಮಾರು 200 ಕವಿತೆಗಳು ಇಲ್ಲಿವೆ. ಉದಯೋನ್ಮುಖ ಕವಯತ್ರಿಯೊಬ್ಬರು ಮೊದಲ ಪ್ರಯತ್ನದಲ್ಲೇ ದೊಡ್ಡ ಕೃತಿಯೊಂದನ್ನು ನೀಡಿದ್ದಾರೆ. ಕೃತಿಯನ್ನು ಮೂರು ಭಾಗವಾಗಿಸಿದ್ದಾರೆ. ಮೊದಲನೆ ಭಾಗವನ್ನು ‘ಜ್ವಾಲ ಮಾಲಾ’ ಎಂದು ಕರೆದಿದ್ದರೆ, ಎರಡನೆ ಭಾಗವನ್ನು ‘ಕಿಡಿ ಚುಕ್ಕೆ ಸಾಲು’ ಎಂದು ಗುರುತಿಸಿದ್ದಾರೆ. ಮೂರನೆಯದು ಸುಡುಸುಯ್ಲುಗಳು. ಪ್ರತಿಭಾನಂದ ಕುಮಾರ್ ಬಳಿಕ ಇಷ್ಟು ತೀವ್ರವಾಗಿ ಬರೆದ ಕವಯತ್ರಿ ಬಹುಶಃ ಕಾದಂಬಿನಿಯೇ ಇರಬೇಕು. ಅಶೋಕ್ ಶೆಟ್ಟರ್ ಹೇಳುವಂತೆ, ಕಾದಂಬಿನಿಯ ಕವಿತೆಗಳು ಎಲ್ಲಿದ್ದರೂ ಗುರುತಿಸಬಹುದು. ಅಲ್ಲಿ, ಕಾದಂಬಿನಿಯ ಹೆಸರಿಲ್ಲದೇ ಇದ್ದರೂ. ಮುನ್ನುಡಿಯಲ್ಲಿ ಅವರ ಕಾವ್ಯದ ಕುರಿತಂತೆ ಶಿವಾರೆಡ್ಡಿಯವರು ಹೀಗೆ ಹೇಳಿದ್ದಾರೆ ‘‘ಕಾದಂಬಿನಿ ಅವರ ಕಾವ್ಯದ ಅನನ್ಯತೆ ಎಂದರೆ ಅದರಲ್ಲಿರುವ ಆಲೋಚನೆಯ ಕ್ರಮ. ಅಭಿವ್ಯಕ್ತಿಯ ಭಾಷೆ, ಸ್ಥಳೀಯ ಅನುಭವಗಳ ಚಿತ್ರಣ ಮತ್ತು ಅಂಥ ಅನುಭವಗಳನ್ನು ರೂಪಕವಾಗಿಸುವ ಕ್ರಮ, ಸರಳ, ನೇರ ಭಾಷೆಯನ್ನು ಕಾವ್ಯವಾಗಿಸುವ ಕಲೆ. ಅನೇಕ ಚಳವಳಿಗಳು ಮುಂಚೂಣಿಯಲ್ಲಿರುವ ಸಂದರ್ಭದಲ್ಲಿ ಇವರ ಕಾವ್ಯ ಪ್ರಕಟಗೊಳ್ಳುತ್ತಿದ್ದರೂ, ಯಾವುದೇ ಒಂದು ಚಳವಳಿಯ ಸೆಳೆತಕ್ಕೆ ಸಿಲುಕದೇ ಎಲ್ಲ ಬಗೆಯ ಕ್ರೌರ್ಯಗಳನ್ನು ಸಂಕೀರ್ಣ ನೆಲೆಯಲ್ಲಿ ಅಭಿವ್ಯಕ್ತಿಸುತ್ತಿದ್ದಾರೆ’’ ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಈ ಕೃತಿಯನ್ನು ಹೊರತಂದಿದೆ. ಒಟ್ಟು ಪುಟಗಳು 384. ಮುಖಬೆಲೆ 300 ರೂಪಾಯಿ. ಆಸಕ್ತರು 9449886390 ದೂರವಾಣಿಯನ್ನು ಸಂಪರ್ಕಿಸಬಹುದು.
-ಕಾರುಣ್ಯಾ

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News