ಪಾರ್ಕ್ ಎಂಬ ನಿಲ್ದಾಣ
ಪಾರ್ಕ್ ಏನೂ ಸುಮ್ಮನೆ ವಾಕಿಂಗ್ ಎಂದು ತಿರುಗುವ ರಾಟವಾಳೆಯಲ್ಲ. ಇದು ಮೈಮನಗಳನ್ನು ಹಗುರಗೊಳಿಸಿಕೊಳ್ಳುವ ನಿಲ್ದಾಣ. ಇಲ್ಲಿ ಜನ ಮಾತನಾಡುತ್ತಾರೆ. ಬಿರುಸಾಗಿ ನಡೆಯುವುದೂ ಮಾತಿನೊಂದಿಗೆ ಹಾಯಾಗಿ ಕುಳಿತಿರುವವರು ಸಧ್ಯದ ರಾಜಕೀಯ, ಪೆನ್‌ಶನ್, ಗೃಹವಾರ್ತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕೆಲವು ಸಲ ಲಾಫಿಂಗ್ ಕ್ಲಬ್‌ನವರನ್ನ ಬಲವಂತವಾಗಿ ಇವರು ನಗೋದನ್ನ ನೋಡಿ ಎಂದು ಟೀಕಿಸುತ್ತಿರುತ್ತಾರೆ.
ನಮ್ಮ ಮನೆಗೆ ಅತ್ಯಂತ ಸಮೀಪವಾಗಿ ಒಂದು ಪಾರ್ಕ್ ಇದೆ. ಪಾರ್ಕ್ ಗೆ ಆಗೀಗ ಹೋಗುವ ನಾನು, ವಾಕಿಂಗ್ ಅಂತ ಅಲ್ಲಿ ಇಲ್ಲಿ ಸುತ್ತಿ, ಕೊನೆಗೆ ಪಾರ್ಕ್‌ಗೆ ಬಂದು ಕುಳಿತುಕೊಳ್ಳುತ್ತೇನೆ. ಸ್ನೇಹಿತರು ಸಿಗದಿದ್ದರೆ ಒಬ್ಬಳೇ ಮೌನವಾಗಿ ಕುಳಿತು ಅಲ್ಲಿ ಗಿಡಮರಗಳ ಜೊತೆಗೆ, ಅಲ್ಲಿಗೆ ಬರುವ ನನ್ನಂತಹವರನ್ನು ಗಮನಿಸುತ್ತಿರುತ್ತೇನೆ. ಸಂಜೆಯಾಗುತ್ತಿದ್ದಂತೆಯೆ ನಮ್ಮ ಬಡಾವಣೆ ಯ ಉದ್ಯಾನವನವೇ ಒಂದು ಲೋಕ. ಈ ಲೋಕದಲ್ಲಿ ಇದ್ದೂ ಇಲ್ಲದಂತೆ ಕುಳಿತು ವಿವಿಧ ಚಟುವಟಿಕೆಗಳಲ್ಲಿ ನಿರತವಾಗಿರುವವರನ್ನು ಗಮನಿಸುವುದೇ ಒಂದು ಅನುಭವ.
ಸಹಜವಾಗಿ ಪಾರ್ಕ್ ಎನ್ನುವ ನಿಲ್ದಾಣ ನನ್ನ ಬಾಲ್ಯವನ್ನು ನೆನೆಯುವಂತೆ ಮಾಡಿದೆ. ಆ ದಿನಗಳಲ್ಲಿ ಹೆಂಗಸರು ಉದ್ಯಾನ ವನದಲ್ಲಿ ಕಾಲಿಟ್ಟಿದ್ದನ್ನಾಗಲಿ, ವಾಕಿಂಗ್ ಹೋಗಿದ್ದೆವು ಎಂಬ ಮಾತನ್ನಾಗಲಿ ಅರಿಯದ ಕಾಲ. ಅದು ಪುಟ್ಟ ಹುಡುಗ ಹುಡುಗಿ ಯರು ಶಾಲೆಗೆ ಹತ್ತಿರವಿದ್ದ ಉದ್ಯಾನವನಕ್ಕೆ ಓಡಿಹೋಗಿ ಪನ್ನೇರಳೆ ಹಣ್ಣಿನ ಒಂದು ಹೂವೊ, ಹೀಚೊ ಸಿಕ್ಕಿದರೆ ನಿಧಿ ಸಿಕ್ಕಿದಂತೆ ಸಂಭ್ರಮಿಸುತ್ತಿದ್ದ ಕಾಲ.
ಈಗ!
ಪಾರ್ಕ್ ಒಂದು ನಿಲ್ದಾಣ, ವಿವಿಧೋದ್ದೇಶಗಳಿಂದ ಪಾರ್ಕ್‌ಗೆ ಬರುವ ಜನಕ್ಕೆ ಗಂಡಸರು, ಹೆಂಗಸರು, ಹುಡುಗ ಹುಡುಗಿಯರು, ಪುಟಾಣಿಗಳು ಎಲ್ಲರಿಗೂ ಪಾರ್ಕ್ ಸಂಜೆಯ ಸೊಬಗಿನ ತಾಣ. ನಮ್ಮೂರ ಪಾರ್ಕಿಗೆ ಹೋಗುವ ಬನ್ನಿ. ಮುಖ್ಯದ್ವಾರದಲ್ಲೇ ಆಚೀಚೆಗೆ ಎರಡು ಬಾಳೆ ಎಲೆಗಳಂತಹ ಉದ್ದದ ಎಲೆಗಳನ್ನು ಬೀಸಣಿಗೆ ಆಕಾರದಲ್ಲಿ ಜೋಡಿಸಿಕೊಂಡಿರುವ ಮರಗಳು ನಮ್ಮನ್ನು ಸ್ವಾಗತಿಸುತ್ತವೆ. ಒಳಗೆ ಬಂದು ಯಾವುದಾದರೊಂದು ಬೆಂಚಿನ ಮೇಲೆ ಆಸೀನರಾಗಿ, ಅಥವಾ ಕಾಲುದಾರಿಯಲ್ಲಿ ವಾಕಿಂಗ್ ಎಂದು ಸುತ್ತುತ್ತಿರುವ ಮಹನೀಯರು, ಮಹಿಳೆಯರೊಡನೆ ನಡೆಯಿರಿ. ನಾನಂತೂ ಒಂದು ಬೆಂಚು ಹಿಡಿದು ಕುಳಿತು, ಪಾರ್ಕಿನ ಅಂದಿನ ಚಟುವಟಿಕೆಗಳಿಗೆ ಮೂಕಪ್ರೇಕ್ಷಕಳಾಗಿ ಬಿಡುತ್ತೇನೆ. ಕೆಲವು ವರ್ಷಗಳಿಂದ ಪಾರ್ಕಿನ ಪ್ರವೇಶದ್ವಾರದಲ್ಲೇ ಇರುವ ಬೀಸಣಿಗೆ ಯಾಕಾರದ ಎಲೆಗಳ ಮರಗಳಿಗೆ ಸಮೀಪವಾಗಿ ಸ್ನೇಹಿತರೊಡನೆ, ಒಮ್ಮಾಮ್ಮೆ ಒಂಟಿಯಾಗಿ ಕುಳಿತುಕೊಳ್ಳುವುದೇ ನನ್ನ ನೆಚ್ಚಿನ ಹವ್ಯಾಸ.
ಬೀಸಣಿಗೆ ಎಲೆಗಳ ಮರದ ಹೆಸರು ಟ್ರಾವಲರ್ಸ್ ಟ್ರೀ ಅಂತೆ. ಇದರ ಎಲೆಗಳು ಯಾವಾಗಲೂ ಪೂರ್ವ ಪಶ್ಚಿಮ ದಿಕ್ಕುಗಳ ಕಡೆಗೇ ತಿರುಗಿರುತ್ತವೆ. ಇದೊಂದು ರೀತಿಯ ದಿಕ್ಸೂಚಿ ಎಂದು ಓದಿದ ನೆನಪು ಎಲೆಗಳು ವಯಸ್ಸಾದಂತೆ ಒಣಗುತ್ತ ಎತ್ತಲೋ ತಿರುಗುತ್ತವೆ. ಹೀಗೆಯೊ ದಿಕ್ಕು ತೋರಿಸುವುದು?
ಬೇಸಿಗೆಯ ಸಂಜೆಯಲಿ ನನ್ನೆದುರಿನ ಹಸಿರುಹುಲ್ಲಿನ ಮಧ್ಯೆ ‘ಟಬೂಬಿಯಾ’ ಮರದ ತುಂಬಾ ಹಳದಿ ಹೂಗಳು ಕಂಗೊಳಿಸುತ್ತಿವೆ. ಹಸಿರ ಹುಲ್ಲಿನ ಮೇಲೆ ಉದುರಿದ ಹಳದಿ ಹೂಗಳ ಸಿಂಗಾರ. ಇದೆಲ್ಲಾ ಇನ್ನು ಕೆಲವೇ ದಿನಗಳು. ಹೂವುಗಳು ಉದುರಿ ಮರ ಬೋಳಾಗುವಾಗ ಅದುವರೆಗೆ ಸುಪ್ತವಾಗಿದ್ದ ಎಲೆಗಳು ಚಿಗುರಿ ಟಬೂಬಿಯಾ ಮರದ ಹಳದಿ ಬಣ್ಣ ಮಾಯವಾಗಿ ಮರ ಹಸಿರಾಗುತ್ತದೆ. ಅದಕ್ಕೆ ಮುನ್ನ ಅಲ್ಲಿ ನೋಡಿ, ಒಬ್ಬ ಯುವಕ ಮರದ ಕೆಳಗೆ ನಿಂತು ಹೂವುಗಳನ್ನು ದಿಟ್ಟಿಸುತ್ತಿದ್ದಾನೆ. ನನಗೆ ಒಳಗೊಳಗೆ ಸಂತೋಷ, ಧಾವಂತದ ಬದುಕಿನಲ್ಲಿ ಒಬ್ಬ ಎಳೆಯನಿಗೆ ಈ ವರ್ಣಮಯ ಮರವನ್ನು ಗಮನಿಸುವ ವ್ಯವಧಾನ ಸಿಕ್ಕಿತಲ್ಲಾ ಎಂದು!
ಆಹಾ, ಅಲ್ಲೇ ಒಬ್ಬ ಪುಟ್ಟ ಹುಡುಗಿ ನೆಲಕ್ಕೆ ಉದುರಿರುವ ಹಳದಿ ಹೂಗಳನ್ನಾಯ್ದು ಜೋಡಿಸಿ ಹಿಡಿದಿದ್ದಾಳೆ. ಮಗೂ, ಕೊಂಚ ಹೂವಿನೊಳಕ್ಕೆ ಇಣುಕು. ಅಲ್ಲಿ ಎರಡು ಜೊತೆ ಕೇಸರಗಳು ಒಂದಕ್ಕೊಂದು ಮುತ್ತಿಕ್ಕುತ್ತಿವೆ. ಇವು ಕಿಸ್ಸಿಂಗ್ ಆಂಥರ್ಸ್ ಅಂತೆ! ನಡುವೆ ಸಲಾಕೆ ಒಳ್ಳೆ ಸಿಪಾಯಿಯಂತೆ ನೆಟ್ಟಗೆ ನಿಂತು ಬಿಟ್ಟದೆ! ಇದು ಪ್ರಕೃತಿಯ ವಿಸ್ಮಯ ಮಗು!
ನಾನಂತೂ ಸುಮ್ಮನೆ ನೋಡುತ್ತ ಕುಳಿತಿರುತ್ತೇನೆ. ವಾಕಿಂಗ್ ಮಾಡುವವರು, ಪರಿಚಿತರನ್ನು ನಿಮ್ಮದು ಎಷ್ಟು ರೌಂಡ್ ಆಯ್ತು? ಎಂದು ವಿಚಾರಿಸುತ್ತಾರೆ; ಆಗಲೇ ಮುಗಿಸಿಬಿಟ್ಟಿರಾ ಅಂತಾರೆ, ಸುಮ್ಮನೆ ಒಂದು ರೌಂಡೂ ಇಲ್ಲದ ನನ್ನದು ಮೌನ ವೀಕ್ಷಣೆ. ಸೂರ್ಯ ಇಳಿಮುಖನಾಗಿ ಸಂಜೆಯಾಗುತ್ತ ಬಂದ ಹಾಗೆ ವಾತಾವರಣ ಆಹ್ಲಾದಕರವಾಗುತ್ತದೆ. ಆಗ ಆಕಾಶದ ದಕ್ಷಿಣ ಭಾಗದಲ್ಲಿ ಎಂತದೊ ಕಪ್ಪು ಬಣ್ಣ ಮೂಡುತ್ತದೆ. ಒಂದು ಕ್ಷಣದಲ್ಲಿ ಅವು ಹಕ್ಕಿಗಳಾಗುತ್ತವೆ. ತಂಡತಂಡವಾಗಿ ಹಕ್ಕಿಗಳು ಆಗಮಿಸಲಾರಂಭಿಸಿದಾಗ ಸುದೀರ್ಘವಾದ ಪಕ್ಷಿಗಳ ಪಂಕ್ತಿ ಬಾನಿನಲ್ಲಿ ಪ್ರತ್ಯಕ್ಷವಾದಾಗ, ಕುವೆಂಪು ಅವರಿಗೆ ಹಕ್ಕಿಗಳ ಸಾಲು ದೇವರು ತನ್ನಿರವನ್ನು ಸಾಬೀತು ಪಡಿಸುವಂತೆ ಕಂಡು, ಅವರು ದೇವರು ರುಜು ಮಾಡಿದನು ಎಂದು ಭಾವಪರವಶರಾಗಿದ್ದು ನೆನಪಿಗೆ ಬಂದಿತು.
ಇದೊ, ಬಂತು ಮತ್ತೊಂದು ಹಕ್ಕಿಗಳ ತಂಡ. ಇಂಗ್ಲಿಷ್ ಅಕ್ಷರ ವಿ ಆಕಾರದಲ್ಲಿ ಹಾರುವ ಹಕ್ಕಿಗಳ ಮುಂದೊಂದು ಲೀಡರ್ ಹಕ್ಕಿ! ಇವು ಯಾವುದೊ ಏರ್ ಶೋನಲ್ಲಿ ಭಾಗವಹಿಸುವ ‘ಮಿಗ್’ ವಿಮಾನಗಳಂತೆ ಸರ್ರನೆ ಸುಯ್ ಎಂದು ಮಾಯವಾಗುತ್ತವೆ. ಹಾಗೇ ನೋಡುತ್ತಿರಿ ಇನ್ನೊಂದು ಹಕ್ಕಿಗಳ ಗುಂಪು ಪ್ರತ್ಯಕ್ಷವಾಗುತ್ತದೆ. ಇದಕ್ಕೆ ಸಾಲು, ಶಿಸ್ತು ಏನೂ ಇಲ್ಲ. ದಶಕಗಳ ಹಿಂದಿನ ಸಿನೆಮಾಗಳಲ್ಲಿ ಯಾವುದೊ ಕೋಟೆಗೆ ದಾಳಿ ಮಾಡುವ ಕಾಲಾಳು ಸೈನಿಕರಂತೆ ದಂಡೆತ್ತಿ ಹೋಗುತ್ತಿರುತ್ತವೆ. ಇನ್ನು ಕೆಲವು ಜೋಡಿಯಾಗಿ, ಒಂಟಿಯಾಗಿ, ಗಂಭೀರವಾಗಿ ಹಾರುವ ನೋಟ, ಒಂದು ಕ್ಷಣ ರೆಕ್ಕೆ ಬಡಿದು, ನಂತರ ರೆಕ್ಕೆಗಳನ್ನು ನಿಶ್ಚಲವಾಗಿಸಿ, ಬಿಟ್ಟ ಬಾಣದಂತೆ ಗಾಳಿಯನ್ನು ಭೇದಿಸುವ ಹಕ್ಕಿಯನ್ನು ನೋಡಿದಾಗ ನನಗನ್ನಿಸುತ್ತದೆ, ಆಹಾ, ನಾನಾಗಬಾರದಿತ್ತೆ ಒಂದು ಹಕ್ಕಿ! ನಾನು ಹಕ್ಕಿಯಾಗಿದ್ದರೆ ಹೀಗೆಲ್ಲಾ ಯೋಚಿಸುತ್ತಿದ್ದೇನೆ?
ನಮ್ಮ ಪಾರ್ಕಿನ ಒಳಗೆ ಪಾದಯಾತ್ರೆ ಮಾಡುವ ಹಾದಿ ಮಾತ್ರ ಎಲ್ಲರಿಗೂ ಸೇರಿದ್ದು. ಉಳಿದಂತೆ ಇಂತಿಂತಹವರಿಗೆ ಈ ಭಾಗ ಎಂದು ಪಾರ್ಕ್ ಸಂದರ್ಶಕರಾದ ನಾವು ಅಘೋಷಿತವಾಗಿ ಹಂಚಿಕೊಂಡುಬಿಟ್ಟಿದ್ದೇವೆ. ಒಬ್ಬರಿಗೊಬ್ಬರು ಕಾಯುವ, ಸಂಧಿಸುವ ಹದಿಹರೆಯದ ಯುವಕ, ಯುವತಿಯರಿಗೆ ಅಗೋ ಅಲ್ಲಿ ತಂಪಾದ ನೆರಳಿರುವ ತಾಣ. ಹದಿಹರೆಯದವರು ಯಾವ ಹೊತ್ತಿನಲ್ಲಿ ಬೇಕಾದರೂ ಪಾರ್ಕಿಗೆ ಬರುತ್ತಾರೆ. ನಿಜವಾಗಿಯೂ ಪಾರ್ಕ್ ಅವರದ್ದೇ ನಿಲ್ದಾಣ. ಆ ಕಡೆ ಬೆಂಚಿನ ಮೇಲೆ ಕುಳಿತು ಒಂದು ಯುವ ಜೋಡಿ ಉಲ್ಲಾಸದಿಂದ ಮಾತಾಡುತ್ತಿದೆ. ಈ ಕಡೆ ಪಾಪ, ಒಬ್ಬ ಹುಡುಗ ಗೆಳತಿಗಾಗಿ ಕಾದೂ, ಕಾದೂ ಸುಸ್ತಾಗಿ ಕೊನೆಗೆ ಮೊಬೈಲ್ ಮೊರೆಹೊಕ್ಕಿದ್ದಾನೆ. ಅಲ್ಲಿ ಆ ಮೂಲೆಯಲ್ಲಿ ಒಬ್ಬ ಹುಡುಗಿ ತಲೆ ಕೆಳಗೆ ಹಾಕಿ ಕುಳಿತು ಬಿಟ್ಟಿದ್ದಾಳೆ, ಅವನು ಸಮಾಧಾನ ಹೇಳುತ್ತಲೇ ಇದ್ದಾನೆ. ಇವರನ್ನು ಸುಖದ ಭವಿಷ್ಯತ್ತಿಗೆ ಬಿಡೋಣ. ನಾವು ವರ್ತಮಾನದಲ್ಲಿ ಸಾಗೋಣ.
ಪಾರ್ಕಿಗೆ ಬರುವವರನ್ನೆಲ್ಲಾ ವೀಕ್ಷಿಸಬಹುದಾದ ಪಾರ್ಕಿನ ಪ್ರವೇಶದ್ವಾರದಿಂದ ನೆಟ್ಟಗೆ ಹೋಗುವ ದಾರಿಯ ಅತ್ತಿತ್ತ ನಿವೃತ್ತ ಚೇತನಗಳ ಶೃಂಗಸಭೆಗೆ ಮೀಸಲು. ಅಲ್ಲಿ ಆ ಮೂಲೆ ಲಾಫಿಂಗ್ ಕ್ಲಬ್‌ನವರಿಗೆ ಸೇರಿದ್ದು. ಅಲ್ಲಲ್ಲಿ ಕೆಲವು ಬೆಂಚುಗಳು ಸ್ತ್ರಿಲೋಕಕ್ಕೆ ಸೇರಿದ್ದು. ಪಾರ್ಕ್ ಎಂದ ಮೇಲೆ ಮಕ್ಕಳಿಗೆ ಆಟದ ತಾಣ? ಅದೂ ಇದೆ. ಪಾರ್ಕ್ ಏನೂ ಸುಮ್ಮನೆ ವಾಕಿಂಗ್ ಎಂದು ತಿರುಗುವ ರಾಟವಾಳೆಯಲ್ಲ. ಇದು ಮೈಮನಗಳನ್ನು ಹಗುರಗೊಳಿಸಿಕೊಳ್ಳುವ ನಿಲ್ದಾಣ. ಇಲ್ಲಿ ಜನ ಮಾತನಾಡುತ್ತಾರೆ. ಬಿರುಸಾಗಿ ನಡೆಯುವುದೂ ಮಾತಿನೊಂದಿಗೆ ಹಾಯಾಗಿ ಕುಳಿತಿರುವವರು ಸದ್ಯದ ರಾಜಕೀಯ, ಪೆನ್‌ಶನ್, ಗೃಹವಾರ್ತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕೆಲವು ಸಲ ಲಾಫಿಂಗ್ ಕ್ಲಬ್‌ನವರನ್ನ ಬಲವಂತವಾಗಿ ಇವರು ನಗೋದನ್ನ ನೋಡಿ ಎಂದು ಟೀಕಿಸುತ್ತಿರುತ್ತಾರೆ. ಇವರು ನಗಬೇಕೆಂದು ಬಲವಂತವಾಗಿಯಾದರೂ ನಗಲಿ, ಅದರೊಂದಿಗೆ ವ್ಯಾಯಾಮಗಳನ್ನೂ ಮಾಡುತ್ತಾರೆ, ನಂತರ ತಮ್ಮಲ್ಲೇ ಕುಶಲ ಸಂಭಾಷಣೆ ನಡೆಸುತ್ತಾರೆ. ಇದು ಇವರು ಕಂಡುಕೊಂಡಿರುವ ತಮ್ಮ ಮೈಮನಸ್ಸುಗಳನು್ನ ಹಗುರಗೊಳಿಸಿಕೊಳ್ಳುವ ಮಾರ್ಗ.
ಇನ್ನು ಮಕ್ಕಳಿಗಾಗಿ ಮೀಸಲಾಗಿರುವ ಜಾಗಕ್ಕೆ ಹೋಗೋಣ. ಅಲ್ಲಿ ನೋಡಿ ಮಕ್ಕಳಿಗೆ ಅತಿ ಪ್ರಿಯವಾದ ಜಾರುಗುಪ್ಪೆ. ಮಕ್ಕಳು ಜಾರುಗುಪ್ಪೆ ಆಟ, ಜಾರಿ ಬೀಳೊ ಆಟ ಆಡುತ್ತಿದ್ದಾರೆ. ಇನ್ನು ಕೆಲವರು ಏಣಿ ಅಂತಹ ಸಾಧನವನ್ನು ಹತ್ತಿ ಇಳಿಯುತ್ತಿದ್ದಾರೆ. ಕೆಲವು ಮಕ್ಕಳು ನೀರು ಬೀಳುವುದು ನಿಂತು ಹೋಗಿರುವ ಕೃತಕ ಜಲಪಾತವನ್ನು ಹತ್ತಿ ಮಂಗಗಳಂತೆ ನೋಡುತ್ತ ಕುಳಿತಿದ್ದಾರೆ. ಪುಟ್ಟ ಮಕ್ಕಳು ಮನೆಯಿಂದ ತಂದ ಆಟದ ಬಕೆಟ್‌ಗೆ ಮಣ್ಣು ತುಂಬುತ್ತಿದ್ದಾರೆ. ಮೈಕೈಯೆಲ್ಲಾ ಮಣ್ಣು! ಇದೊಂದು ಮಕ್ಕಳ ಮುಗ್ಧಲೋಕ.
ಮಕ್ಕಳ ಆಟವನ್ನು ವೀಕ್ಷಿಸುತ್ತಿರುವಾಗ... ಮಕ್ಕಳನ್ನು ಕರೆಯುವ ಹಾಗೆ ಆಗುತ್ತದೆ. ಮಗೂ ಇಲ್ಲಿ ಬಾ. ಉದ್ದವಾದ ತೊಟ್ಟಿನ ಮೇಲೆ ನಿಂತಿರುವ ಈ ಪುಟ್ಟ ಜುಮುಕಿಯಂತಹ ಹೂವನ್ನು ನೋಡು. ಇದು ನಮ್ಮ ಚಿಕ್ಕಂದಿನ ಖರ್ಚಿಲ್ಲದ ಆಟದ ಸಾಧನ. ಉದ್ದನೆಯ ದೇಟಿನೊಂದಿಗೆ ಹೂವನ್ನು ಕಿತ್ತು, ಹೂವಿನ ಕುತ್ತಿಗೆಯ ಕೆಳಗೆ ಎಡಗೈನ ಎರಡು ಬೆರಳುಗಳ ಉಗುರುಗಳ ನಡುವೆ ಹಿಡಿದು, ಜೊತೆಗಾರರನ್ನು ಮೂರು ಕಾಸು ಕೊಡ್ತಿಯೊ? ಇಲ್ಲಾ ಅಜ್ಜಿ ತಲೆ ಒಡಿಲೊ? ಎಂದು ಕೇಳಿ ಜುಮುಕಿಯಂತಹ ಹೂವಿನ ತಲೆಗೆ ಕೇರಂ ಆಟದ ಪಾನ್‌ಗೆ ಸ್ಟ್ರೆಕರ್‌ನಿಂದ ಹೊಡೆಯುವಂತೆ ಹೊಡೆದಾಗ ಜುಮುಕಿಯಂತಹ ಹೂವಿನ ತಲೆ ’ಪಟ್’ ಎಂದು ಎಗರಿ ಬೀಳುತ್ತಿತ್ತು. ನಮ್ಮದೆಲ್ಲಾ ಸಣ್ಣಪುಟ್ಟದರಲ್ಲೇ ಸಂತೋಷಪಡುತ್ತಿದ್ದ ಕಾಲ. ಮಗೂ, ಅಲ್ಲಿ ನೆಲದಲ್ಲಿ ತೆವಳುತ್ತಿರುವ ಗಿಡದಲ್ಲಿ ಅಜ್ಜಿತಲೆ ಹೂವು ನೆಟ್ಟಗೆ ನಿಂತಿದೆ. ಆ ಹೂವಿನೊಡನೆ ನಮ್ಮ ಒಂದಾನೊಂದು ಕಾಲದ ಆಟ ಆಡಲು ಪ್ರಯತ್ನಿಸು. ಭಯಬೇಡ.ಅದನ್ನು ಕಿತ್ತರೆ ತೋಟಗಾರ ಏನೂ ಅನ್ನುವುದಿಲ್ಲ. ಅದೊಂದು ಕಳೆಗಿಡ, ಪುನಃಪುನಃ ಹುಟ್ಟುತ್ತೆ ಇರುತ್ತದೆ. ಸೃಷ್ಟಿ ಚಲಿಸುತ್ತದೆ.
ಫ್ರಾನ್ಸ್ ದೇಶದಲ್ಲಿದ್ದ ವಿಕ್ಷಿಪ್ತ ಡಚ್ ಚಿತ್ರಕಾರ ವಿನ್ಸೆಂಟ್ ವ್ಯಾಂಗೊ ಒಬ್ಬ ಅಪ್ರತಿಮ ಕಲಾವಿದ. ತನ್ನ ವಿಕ್ಷಿಪ್ತ ಸ್ವಭಾವದಿಂದ ಅವನು ಆಗಾಗ್ಗೆ ಮಾನಸಿಕ ಶುಶ್ರೂಷಾಲಯ ಸೇರಬೇಕಾಗುತ್ತಿತ್ತು. ಹೀಗೊಮ್ಮೆ ಸೇರಿದ್ದಾಗ ಆ ಕಟ್ಟಡದ ಸುತ್ತಮುತ್ತ ಇದ್ದ ತೋಟದ ಪ್ರಶಾಂತ ವಾತಾವರಣ, ಅಲ್ಲಿನ ಗಿಡಮರಗಳ ಮೌನಸಹಚರ್ಯ ಅವನ ಉದ್ರೇಕಿತ ನರಗಳನ್ನು ಶಾಂತಗೊಳಿಸಿ, ಅವನು ಆ ಅವಧಿಯಲ್ಲಿ ತನ್ನ ಅತ್ಯುತ್ತಮ ‘ಐರಿಸ್’ಹೂಗಳ ಚಿತ್ರ ಸರಣಿಯನ್ನು ರಚಿಸಿದ. ಹೀಗೆ ಹಸಿರು ವನಗಳು ಎಲ್ಲರನ್ನು ಶಾಂತಗೊಳಿಸುವ ಪರಮೌಷಧಿ.
ಈಗಿನ ದಿನಗಳಲ್ಲಿ ವೈದ್ಯರು, ಸಂಶೋಧಕರು ತಮ್ಮ ಆಳವಾದ ಸಂಶೋಧನೆಗಳಿಂದ ಜನತೆಗೆ ನಿಸರ್ಗದತ್ತ ನಡೆಯಿರಿ. ಗಿಡಮರಬಳ್ಳಿಗಳನ್ನು ಗಮನಿಸಿ, ಅವುಗಳೊಡನೆ ಒಂದಾಗಿ, ಇದರಿಂದ ದೈಹಿಕವಾಗಿ, ಮಾನಸಿಕವಾಗಿ ಪುನಶ್ಚೇತನಗೊಳ್ಳುವಿರಿ ಎಂದು ಹೇಳುತ್ತಲೇ ಇದ್ದಾರೆ. ಹಸಿರಿನ ಮಧ್ಯೆ ಸ್ವಚ್ಛಗಾಳಿಯಲ್ಲಿ ದಿನವೂ ಒಂದಷ್ಟು ಹೊತ್ತು ನಡೆಯುವುದು ಇಂದಿನ ವೇಗದ ದಿನಗಳಲ್ಲಿ ಮಿತಿಮೀರಿದ ಒತ್ತಡವನ್ನು ಅನುಭವಿಸುವ ಮಾನವ ಮಿದುಳಿಗೆ ಒಂದು ಉದ್ವೇಗರಹಿತ ನಡಿಗೆ ಸಾಂತ್ವನಗೊಳಿಸಬಲ್ಲದು. ಪಾರ್ಕ್ ಎಂಬ ನಿಲ್ದಾಣ ಖರ್ಚಿಲ್ಲದೆ ಆರೋಗ್ಯ ಕೊಡುವ ತಾಣ ಎಂದು ತಜ್ಞರು ಹೇಳುತ್ತ ಬಂದಿರುವುದು ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ಒಂದು ಹೊಸ ಅರಿವನ್ನು ಮೂಡಿಸಿದೆ.
ಗಿಡಮರ ಬಳ್ಳಿ, ಬೀಸುವ ತಂಗಾಳಿ, ಸೂರ್ಯೋದಯ, ಸೂರ್ಯಾಸ್ತಗಳ ನಡುವೆ ಹಾರುವ ಹಕ್ಕಿ, ಮರ ಹತ್ತುವ ಬೆಕ್ಕು, ದೊಡ್ಡವರು, ಚಿಕ್ಕವರು ಎಲ್ಲರಿಂದ ಕೂಡಿರುವ ಸೊಬಗಿನ ಪಾರ್ಕ್ ಎಂಬ ನಿಲ್ದಾಣಕ್ಕೆ ಬನ್ನಿ. ನಮ್ಮ ಮೈಮನಗಳ ಭಾರ ಇಳಿಸಿ ಹಗುರಾಗೋಣ. ಪ್ರತಿದಿನ ಹೊಸ ಸೂರ್ಯೋದಯಕ್ಕೆ ಸಜ್ಜಾಗೋಣ.