ಇಲೆಕ್ಟ್ರಾನಿಕ್ ಮತಯಂತ್ರ: ಇನ್ನಷ್ಟು ಪ್ರಶ್ನೆಗಳು ಉದ್ಭವ

Update: 2018-05-06 18:41 GMT

ತಯಂತ್ರಗಳಲ್ಲಿ ದೋಷಗಳು, ಅವುಗಳ ದುರ್ಭೇದ್ಯತೆ ಬಗ್ಗೆ ಶಂಕೆ, ಅವುಗಳ ದುರ್ಬಳಕೆ ಮೊದಲಾದ ವಿವಾದಗಳ ಬೆನ್ನಲ್ಲಿ ಇದೀಗ ಬಂದಿರುವ ಇನ್ನೊಂದು ಗಂಭೀರ ವರದಿ ಯಾರನ್ನಾದರೂ ಬೆಚ್ಚಿಬೀಳಿಸುವಂತಿದೆ. ಮುಂಬೈನ ಮಾಹಿತಿ ಹಕ್ಕು ಕಾರ್ಯಕರ್ತ ಮನೋರಂಜನ್ ಎಸ್. ರಾಯ್‌ರಿಗೆ ದೊರೆತಿರುವ ಮಾಹಿತಿಗಳ ಪ್ರಕಾರ ಚುನಾವಣಾ ಆಯೋಗ ಸಿಕ್ಕಾಪಟ್ಟೆಯಾಗಿ ಯಂತ್ರಗಳನ್ನು ಖರೀದಿಸಿದ ಹಾಗೆ ಕಾಣುತ್ತದೆ. ಇಷ್ಟೇ ಅಲ್ಲ, ಮತಯಂತ್ರಗಳ ಮಾರಾಟ ಮತ್ತು ಖರೀದಿಯ ಅಂಕಿಅಂಶಗಳು ಕೂಡಾ ತಾಳೆಹೋಗುತ್ತಿಲ್ಲ. ಅತ್ತ ಸಾಗಾಟದಲ್ಲಿಯೂ ಭದ್ರತಾ ಲೋಪಗಳಿರುವಂತೆ ತೋರುತ್ತಿದೆ.

ಸುಮಾರು ಒಂದು ವರ್ಷ ಕಾಲ ಎಡೆಬಿಡದೆ ಬೆಂಬತ್ತಿದ ಬಳಿಕ ಈ ಅಮೂಲ್ಯ ಮಾಹಿತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವ ರಾಯ್ ಅಭಿಪ್ರಾಯದಲ್ಲಿ ಅವು ಚುನಾವಣೆಗಳ ಮುಕ್ತ, ನ್ಯಾಯಯುತ, ವಿಶ್ವಾಸಾರ್ಹತೆಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ. ‘‘ಅಂಕಿಅಂಶಗಳಲ್ಲಿ ಕಂಡುಬರುತ್ತಿರುವ ಈ ವ್ಯತ್ಯಾಸಗಳು ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಚುನಾವಣಾ ವ್ಯವಸ್ಥೆಯ ಅಡಿಪಾಯವನ್ನೇ ದುರ್ಬಲಗೊಳಿಸಬಹುದು. ಆದುದರಿಂದ ಉತ್ಪಾದಕರು ಮತ್ತು ಚುನಾವಣಾ ಆಯೋಗಗಳೆರಡೂ ಈ ಲೋಪಗಳಿಗೆ ವಿವರಣೆ ನೀಡುವ ಅಗತ್ಯವಿದೆ’’ ಎನ್ನುತ್ತಾರೆ ರಾಯ್.

ಸಂಖ್ಯೆಗಳಲ್ಲಿ ವ್ಯತ್ಯಾಸ:
ಭಾರತದಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಪ್ರಾರಂಭವಾಗಿರುವುದು 1989ರಿಂದ. ಪ್ರಸ್ತುತವಾಗಿ ಮತಯಂತ್ರಗಳನ್ನು ಹೈದರಾಬಾದ್‌ನ ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯ (ಇಸಿಐಎಲ್) ಮತ್ತು ಬೆಂಗಳೂರಿನ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಎಂಬ ಎರಡು ಸಾರ್ವಜನಿಕ ವಲಯದ ಕಾರ್ಖಾನೆಗಳಲ್ಲಿ ಉತ್ಪಾದಿಸಲಾಗುತ್ತಿದೆ. ಇಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತದಾನ ಘಟಕ, ನಿಯಂತ್ರಣ ಘಟಕ ಮತ್ತು ಮುದ್ರಿತ ದಾಖಲೆಯ ಘಟಕ (ಇದು ಮತದಾರನಿಗೆ ತನ್ನ ಮತವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ) ಎಂಬ ಮೂರು ಘಟಕಗಳು ಇರುತ್ತವೆ.
ರಾಯ್ ಅವರಿಗೆ ಚುನಾವಣಾ ಆಯೋಗದಿಂದ ಲಭಿಸಿದ ಉತ್ತರಗಳು 1989-90ರಿಂದ ಆರಂಭಿಸಿ ಮೇ 15, 2017ರ ತನಕ ಆಯೋಗದ ವತಿಯಿಂದ ನಡೆದಿರುವ ಒಟ್ಟು ಮತಯಂತ್ರ ಖರೀದಿಯ ವಿವರಗಳನ್ನು ಹೊರಗೆಡಹುತ್ತವೆ:
13,95,306 ಮತದಾನ ಘಟಕಗಳನ್ನು ಮತ್ತು 9,30,716 ನಿಯಂತ್ರಣ ಘಟಕಗಳನ್ನು ಖರೀದಿಸಿದ ಬಗ್ಗೆ 2016-17ರಲ್ಲಿ ಸರಕಾರಕ್ಕೆ ತಿಳಿವಳಿಕೆ ನೀಡಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಒದಗಿಸಿರುವ ಮಾಹಿತಿ ಹೇಳುತ್ತದೆ.
ಬಿಇಎಲ್ ಜೂನ್ 9, 2017ರಂದು ನೀಡಿದ ಹೇಳಿಕೆಯ ಪ್ರಕಾರ 2010ರಿಂದ 2017ರ ತನಕ ಬಿಇಎಲ್‌ನಿಂದ ಆಯೋಗಕ್ಕೆ 1,90,000 ಮತದಾನ ಘಟಕಗಳನ್ನು ಮತ್ತು 1,25,000 ನಿಯಂತ್ರಣ ಘಟಕಗಳನ್ನು ಸರಬರಾಜು ಮಾಡಲಾಗಿದೆ.


ಇಸಿಐಎಲ್‌ನ ಹೇಳಿಕೆಯ ಪ್ರಕಾರ 2010ರಿಂದ 2017ರ ತನಕ ಆಯೋಗಕ್ಕೆ ಅದು 2,22,925 + 4,97,348 = 7,20,273 ಮತದಾನ ಘಟಕಗಳನ್ನು ಮತ್ತು 2,11,875 + 3,07,030 = 5,18,905 ನಿಯಂತ್ರಣ ಘಟಕಗಳನ್ನು ಸರಬರಾಜು ಮಾಡಿದೆ.
ಚುನಾವಣಾ ಆಯೋಗ ಕೊಟ್ಟಿರುವ ಅಂಕಿಅಂಶಗಳನ್ನು ಬಿಇಎಲ್, ಇಸಿಐಎಲ್ ಕೊಟ್ಟಿರುವ ಅಂಕಿಅಂಶಗಳೊಂದಿಗೆ ಹೋಲಿಸಿದಾಗ ಭಾರೀ ವ್ಯತ್ಯಾಸಗಳು ಕಂಡುಬರುತ್ತವೆ. ಇದರ ಕಡೆಗೆ ಗಮನ ಸೆಳೆಯುವ ರಾಯ್ ‘‘ಕೆಲವು ಸಾವಿರಗಳಿಂದ ಹಿಡಿದು ಕೆಲವು ಲಕ್ಷಗಳಷ್ಟು ಆಗುವ ಈ ಹೆಚ್ಚುವರಿ ಯಂತ್ರಗಳು ಎಲ್ಲಿಗೆ ಹೋಗುತ್ತಿವೆ, ಏನಾಗುತ್ತಿವೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಇದೆಲ್ಲವೂ ತುಂಬಾ ಸಂಶಯಾಸ್ಪದವಾಗಿದೆ’’ ಎನ್ನುತ್ತಾರೆ.

ಪಾವತಿಯಲ್ಲಿ ವ್ಯತ್ಯಾಸ:
2006ರಿಂದ 2016ರ ತನಕ ಪಾವತಿಯಾದ ಮೊತ್ತಗಳಲ್ಲಿ ಕೂಡಾ ದೊಡ್ಡ ಲೋಪಗಳು ಗೋಚರಿಸುತ್ತಿವೆ. ಚುನಾವಣಾ ಆಯೋಗ ಹೇಳಿರುವಂತೆ ಮತಯಂತ್ರಗಳಿಗಾಗಿ ಅದು ಮಾಡಿರುವ ವೆಚ್ಚ ರೂ. 536,01,75,485. ಅತ್ತ ಮಾಹಕಾಯ್ದೆಯಡಿ ಬಿಇಎಲ್ ನೀಡಿರುವ ಉತ್ತರವನ್ನು ನೋಡಿದರೆ ಆಯೋಗದಿಂದ ಅದಕ್ಕೆ ರೂ. 652,56,44,000 ಪಾವತಿಯಾಗಿದೆ. ಅರ್ಥಾತ್ ರೂ. 116.55 ಕೋಟಿ ಹೆಚ್ಚುವರಿ ಮೊತ್ತ ಪಾವತಿಯಾಗಿದೆ.

ಸಾಗಾಟದಲ್ಲಿ ವ್ಯತ್ಯಯ:
ಯಂತ್ರಗಳನ್ನು ಸಾಗಿಸುವ ಟ್ರಕ್ಕುಗಳ ಸಾಮರ್ಥ್ಯಕ್ಕೂ ಯಂತ್ರದ ಸೈಜಿಗೂ ಹೊಂದಾಣಿಕೆಯಾಗುತ್ತಿಲ್ಲ. ಲೆಕ್ಕ ಹಾಕಿ ನೋಡಿದರೆ 32 ಅಡಿ X  8 ಅಡಿ X  8 ಅಡಿ ಅಳತೆಯ ಒಂದು ಪೆಟ್ಟಿಗೆಯಲ್ಲಿ 199 ಮತದಾನ ಘಟಕ ಅಥವ 261 ನಿಯಂತ್ರಣ ಘಟಕಗಳನ್ನು ತುಂಬಿಸಬಹುದಾಗಿದೆ. 20 ಅಡಿ X 8 ಅಡಿ X 8 ಅಡಿ ಅಳತೆಯ ಪೆಟ್ಟಿಗೆಯಲ್ಲಿ 124 ಮತದಾನ ಘಟಕ ಅಥವ 163 ನಿಯಂತ್ರಣ ಘಟಕಗಳನ್ನು ತುಂಬಿಸಬಹುದಾಗಿದೆ.
ಬಿಇಎಲ್ ತಾನು ಒಂದೊಂದು ಪೆಟ್ಟಿಗೆಯಲ್ಲಿ 320ರಿಂದ 400 ಯಂತ್ರಗಳನ್ನು ರವಾನಿಸಿರುವುದಾಗಿ ಹೇಳುತ್ತದೆ. ಹಾಗಾದರೆ ಆಯೋಗಕ್ಕೆ ಹೆಚ್ಚುವರಿ ಯಂತ್ರಗಳನ್ನು ಕಳುಹಿಸಲಾಗಿತ್ತೇ? ಹೌದೆಂದಾದರೆ ಅವು ಏನಾದವು?

ಮತಯಂತ್ರಗಳ ಸಾಮರ್ಥ್ಯ:
ಮತಯಂತ್ರಗಳ ಮತದಾರ ಮತ್ತು ಅಭ್ಯರ್ಥಿ ಸಾಮರ್ಥ್ಯದ ಬಗ್ಗೆ ಒದಗಿಸಲಾದ ಅಂಕಿಅಂಶಗಳನ್ನು ಗಮನಿಸಿದಾಗ ಬಿಇಎಲ್, ಇಸಿಐಎಲ್‌ಗಳೆರಡೂ ನಿಗದಿತ ಪ್ರಮಾಣಕ್ಕೆ ಅನುಸಾರವಾಗಿ (standardisation) ಮಾಡದಿರುವುದು ಕಂಡುಬರುತ್ತದೆ.
ರಾಯ್ ಹೇಳುವಂತೆ 1989ರಿಂದ 2000 ತನಕ ಇಸಿಐಎಲ್ ಯಂತ್ರದ ಸಾಮರ್ಥ್ಯ 64 ಅಭ್ಯರ್ಥಿಗಳು ಮತ್ತು 3,902 ಮತದಾರರು ಆಗಿತ್ತು. 2014-15ರಲ್ಲಿ ಸಾಮರ್ಥ್ಯವನ್ನು 384 ಅಭ್ಯರ್ಥಿಗಳು ಮತ್ತು 2,000 ಮತದಾರರು ಎಂಬುದಾಗಿ ಬದಲಾಯಿಸಲಾಯಿತು. 2014-15ರಲ್ಲಿ ಅದರ ಮತಯಂತ್ರದ ಸಾಮರ್ಥ್ಯವಿದ್ದುದು 60 ಅಭ್ಯರ್ಥಿಗಳು ಮತ್ತು 8,000 ಮತದಾರರು. ಆದರೆ ಮುದ್ರಿತ ದಾಖಲೆಯ ಘಟಕದ ಸಾಮರ್ಥ್ಯ ಕೇವಲ 1,500 ಮತದಾರರು.
ಬಿಇಎಲ್ ಕೊಟ್ಟಿರುವ ಮಾಹಿತಿಯ ಪ್ರಕಾರ 2005ರ ತನಕ ಅದರ ಯಂತ್ರಗಳ ಸಾಮರ್ಥ್ಯ 3,824 ಮತದಾರರಷ್ಟಿತ್ತು. 2006ರ ತರುವಾಯ ಅದನ್ನು 2,000ಕ್ಕೆ ಇಳಿಸಲಾಯಿತು. ಪ್ರಸಕ್ತವಾಗಿ ಬಿಇಎಲ್ ಮತಯಂತ್ರಗಳ ಸಾಮರ್ಥ್ಯ ಕೇವಲ 16 ಅಭ್ಯರ್ಥಿಗಳಷ್ಟೆ. ಇಲ್ಲಿ ಯಾವುದೇ ತರ್ಕ ಅಥವಾ ಪ್ರಮಾಣೀಕರಣ ಕಾಣುತ್ತಿಲ್ಲ. ವಿನ್ಯಾಸದಲ್ಲಿನ ಈ ಬದಲಾವಣೆಗಳಿಗೆ ಮಂಜೂರಾತಿ ನೀಡಿದವರು ಯಾರು? ಎಂಬುದು ಮನೋರಂಜನ್ ರಾಯ್‌ಅವರ ಪ್ರಶ್ನೆ.
ಈ ಸಂಬಂಧ ಮುಂಬೈ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿರುವ ಮನೋರಂಜನ್ ರಾಯ್, ಮತಯಂತ್ರಗಳಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಒದಗಿಸುವಂತೆ, ಸೂಕ್ತ ತನಿಖಾ ಆಯೋಗವನ್ನು ಸ್ಥಾಪಿಸುವಂತೆ ಮತ್ತು ಆಯೋಗದ ವರದಿ ಸಲ್ಲಿಕೆಯಾಗುವ ತನಕ ಮತಯಂತ್ರಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿದ್ದಾರೆ.
(ಕೃಪೆ: IANS)

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ