ಆರ್‌ಎಸಿ, ವೇಟಿಂಗ್ ಲಿಸ್ಟ್‌ನ ಟಿಕೆಟ್‌ಗಳನ್ನು ರದ್ದುಗೊಳಿಸುವುದು ಹೇಗೆ?

Update: 2018-05-10 18:24 GMT

ರೈಲು ಹೊರಡುವ ನಿಗದಿತ ಸಮಯಕ್ಕೆ ಕನಿಷ್ಠ 30 ನಿಮಿಷಗಳ ಮೊದಲು ಟಿಕೆಟ್ ರದ್ದುಗೊಳಿಸದಿದ್ದರೆ ಅಥವಾ ಟಿಡಿಆರ್‌ನ್ನು ತುಂಬದಿದ್ದರೆ ಆರ್‌ಎಸಿ ಇ-ಟಿಕೆಟ್‌ಗಳ ಹಣವನ್ನು ರೈಲ್ವೆಯು ಹಿಂದಿರುಗಿಸುವುದಿಲ್ಲ.

ದೂರ ಪ್ರಯಾಣದ ರೈಲುಗಳಲ್ಲಿ ಬರ್ತ್‌ಗಳನ್ನು ಕಾಯ್ದಿರಿಸಿ ಮುಂಗಡ ಟಿಕೆಟ್ ಖರೀದಿಸಿದ ರೈಲು ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದರೆ ಅವರ ಬರ್ತ್‌ಗಳನ್ನು ಇತರ ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ಇದಕ್ಕಾಗಿ ರಿಝರ್ವೇಷನ್ ಸಿಗದವರು ರಿಝರ್ವೇಷನ್ ಅಗೇನ್‌ಸ್ಟ್ ಕ್ಯಾನ್ಸಲೇಷನ್(ಆರ್‌ಎಸಿ) ಟಿಕೆಟ್‌ನ್ನು ಖರೀದಿಸಿರಬೇಕಾಗುತ್ತದೆ. ಇಂತಹ ಟಿಕೆಟ್ ಹೊಂದಿದ್ದರೆ ಬರ್ತ್ ಸಿಗದಿದ್ದರೂ ಸ್ಲೀಪರ್ ಕ್ಲಾಸ್‌ನಲ್ಲಿ ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಲು ಅವಕಾಶವಂತೂ ಖಂಡಿತ ದೊರೆಯುತ್ತದೆ. ನೀವು ಇಂತಹ ಆರ್‌ಎಸಿ ಟಿಕೆಟ್ ಪಡೆದುಕೊಂಡಿದ್ದರೆ ಮತ್ತು ಕಾರಣಾಂತರಗಳಿಂದ ಪ್ರಯಾಣಿಸದಿರುವ ಸಂದರ್ಭದಲ್ಲಿ ಟಿಕೆಟ್‌ನ್ನು ರದ್ದುಗೊಳಿಸುವುದು ಹೇಗೆ ಎನ್ನುವುದು ನಿಮಗೆ ಗೊತ್ತಿಲ್ಲದಿದ್ದರೆ ತಲೆ ಬಿಸಿ ಮಾಡಿಕೊಳ್ಳುವುದು ಬೇಡ. ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಮ್ ಕಾರ್ಪೊರೇಷನ್(ಐಆರ್‌ಸಿಟಿಸಿ) ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಆನ್‌ಲೈನ್ ಟಿಕೆಟ್ ಡಿಪಾಜಿಟ್ ರಿಸೀಟ್(ಟಿಡಿಆರ್) ಮೂಲಕ ರದ್ದುಗೊಳಿಸಲು ಅವಕಾಶ ಕಲ್ಪಿಸಿದೆ. ಪ್ರಯಾಣಿಕರು ತಮ್ಮ ಆರ್‌ಎಸಿ ಅಥವಾ ವೇಟಿಂಗ್ ಲಿಸ್ಟ್ ಟಿಕೆಟ್ ರದ್ದುಗೊಳಿಸಲು ಬಯಸಿದರೆ ನಿಗದಿತ ಶುಲ್ಕವನ್ನು ಮುರಿದುಕೊಂಡು ಉಳಿದ ಹಣವನ್ನು ಮರಳಿಸಲಾಗುತ್ತದೆ. ಎಲ್ಲ ಏರ್-ಕಂಡಿಷನ್ಡ್ ಕ್ಲಾಸ್‌ಗಳಿಗೆ ಆರ್‌ಎಸಿ ಅಥವಾ ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಗೆ ಈ ಶುಲ್ಕ ಪ್ರತಿ ಪ್ರಯಾಣಿಕನಿಗೆ 60 ರೂ. ಆಗಿರುತ್ತದೆ. ಆದರೆ ರೈಲು ಹೊರಡುವ ನಿಗದಿತ ಸಮಯಕ್ಕೆ ಕನಿಷ್ಠ 30 ನಿಮಿಷಗಳ ಮೊದಲು ಟಿಕೆಟ್ ರದ್ದುಗೊಳಿಸದಿದ್ದರೆ ಅಥವಾ ಟಿಡಿಆರ್‌ನ್ನು ತುಂಬದಿದ್ದರೆ ಆರ್‌ಎಸಿ ಇ-ಟಿಕೆಟ್‌ಗಳ ಹಣವನ್ನು ರೈಲ್ವೆಯು ಹಿಂದಿರುಗಿಸುವುದಿಲ್ಲ.

ಕೆಲವು ವಿಶೇಷ ಪ್ರಕರಣಗಳಲ್ಲಿ ಪ್ರಯಾಣಿಕರ ಪಟ್ಟಿ ಸಿದ್ಧಗೊಂಡಿದ್ದರೂ, ಪ್ರಯಾಣಿಕ ತನಗೆ ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಾಗದಿದ್ದರೆ ಆನ್‌ಲೈನ್ ಟಿಡಿಆರ್‌ನ್ನು ಭರ್ತಿ ಮಾಡಬಹುದು. ಆನ್‌ಲೈನ್ ಟಿಡಿಆರ್ ಸಲ್ಲಿಸಲು ಪ್ರಯಾಣಿಕರು ಐಆರ್‌ಸಿಟಿಸಿಯ ವೆಬ್‌ಸೈಟ್‌ನಲ್ಲಿ ‘ಸರ್ವಿಸಿಸ್ ಮೆನು’ವಿನಲ್ಲಿ ‘ಫೈಲ್ ಟಿಕೆಟ್ ಡಿಪಾಜಿಟ್ ರಿಸೀಟ್’(ಟಿಡಿಆರ್) ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಹಳೆಯ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರೆ ‘ಮೈ ಟ್ರಾನ್ಸಾಕ್ಷನ್’ ಮೆನುವಿನಿಂದ ‘ಓಲ್ಡ್ ಟ್ರಾನ್ಸಾಕ್ಷನ್ ಹಿಸ್ಟರಿ’ಗೆ ಹೋಗಬೇಕು. ಪ್ರಯಾಣಿಕರ ಪಾಸ್‌ವರ್ಲ್ಡ್ ದೃಢೀಕರಣಗೊಂಡ ಬಳಿಕ ಎಡಗಡೆಯಲ್ಲಿರುವ ‘ಮೈ ಟ್ರಾನ್ಸಾಕ್ಷನ್’ ಮೆನುವಿನಲ್ಲಿ ‘ಫೈಲ್ ಟಿಡಿಆರ್’ ಕೊಂಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಣ ವಾಪಸ್ ಕೋರಿಕೆಯನ್ನು ಸಂಸ್ಕರಿಸಲು ಅದನ್ನು ಐಆರ್‌ಸಿಟಿಸಿ ಸಂಬಂಧಿತ ರೈಲ್ವೆ ವಿಭಾಗಕ್ಕೆ ಕಳುಹಿಸುತ್ತದೆ. ಇಷ್ಟಾದ ಬಳಿಕ ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ಯಾವ ಖಾತೆಯಿಂದ ಹಣವನ್ನು ಪಾವತಿಸಿದ್ದರೋ ಅದೇ ಖಾತೆಗೆ ಹಣ ವಾಪಸ್ ಜಮೆಯಾಗುತ್ತದೆ.
ಗುಂಪು ಪ್ರಯಾಣದ ಪ್ರಕರಣದಲ್ಲಿ ಕೆಲವು ಪ್ರಯಾಣಿಕರು ಕನ್‌ಫರ್ಮ್ಡ್ ರಿಝರ್ವೇಷನ್ ಹೊಂದಿದ್ದು, ಇತರರು ಆರ್‌ಎಸಿ ಅಥವಾ ವೇಟಿಂಗ್ ಲಿಸ್ಟ್ ಟಿಕೆಟ್‌ಗಳನ್ನು ಹೊಂದಿದ್ದರೆ ಈ ಆರ್‌ಎಸಿ ಮತ್ತು ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗಾಗಿ ಟ್ರೇನ್ ಟಿಕೆಟ್ ತಪಾಸಕರಿಂದ (ಟಿಟಿಇ)ಸರ್ಟಿಫಿಕೇಟ್ ಪಡೆದುಕೊಂಡು ಟಿಡಿಆರ್ ಮೂಲಕ ಆನ್‌ಲೈನ್ ಪ್ರಕ್ರಿಯೆ ನಡೆಸಿ ಹಣವನ್ನು ವಾಪಸ್ ಪಡೆಯಬಹುದು. ಆದರೆ ಪ್ರಯಾಣಿಕರು ಹೊರಡುವ ತಾಣಕ್ಕೆ ರೈಲಿನ ವಾಸ್ತವ ಆಗಮನದ 72 ಗಂಟೆಗಳ ಮೊದಲು ಆನ್‌ಲೈನ್ ಟಿಡಿಆರ್ ತುಂಬಬೇಕಾಗುತ್ತದೆ. ಜೊತೆಗೆ ಟಿಟಿಇ ನೀಡಿರುವ ಮೂಲ ಸರ್ಟಿಫಿಕೇಟ್‌ನ್ನು ಅಂಚೆ ಮೂಲಕ ಗ್ರೂಪ್ ಜನರಲ್ ಮ್ಯಾನೇಜರ್ ಆಥವಾ ಐಆರ್‌ಸಿಟಿಸಿಯ ಐಟಿ, ಇಂಟರ್ನೆಟ್ ಟಿಕೆಟಿಂಗ್‌ಸರ್ವಿಸ್, ನ್ಯೂ ದಿಲ್ಲಿ ಇವರಿಗೆ ಕಳುಹಿಸಬೇಕಾಗುತ್ತದೆ.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ