ಮುಸ್ಲಿಂ ಅಸ್ಮಿತೆ ಮತ್ತು ಭಾರತೀಯತೆ

Update: 2018-05-14 18:30 GMT

ದೇಶದ ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮನಾದ ತಮ್ಮ ಒಬ್ಬ ವ್ಯಕ್ತಿಯ ಹೆಸರು ಹೇಳಲು ಇಂದಿಗೂ ಸಾಧ್ಯವಾಗದ ಸಂಘ ಪರಿವಾರದವರು ಭಾರತದ ಜನತೆಗೆ ರಾಷ್ಟ್ರಾಭಿಮಾನದ ಪಾಠ ಕಲಿಸಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರದಲ್ಲಿ ತಾವು ಹಿಂದೂ ರಾಷ್ಟ್ರವಾದಿ ಎಂದು ಘೋಷಿಸಿದರು. ಹಿಂದೂ ರಾಷ್ಟ್ರವಾದಿ ಅಥವಾ ಮುಸ್ಲಿಂ ರಾಷ್ಟ್ರವಾದಿ ಎಂದು ಘೋಷಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂಬ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾಗಲೇ ಇಲ್ಲ!


ಭಾಗ-2

  ಧರ್ಮ ಮತ್ತು ರಾಜಕಾರಣ

ನಮ್ಮ ದೇಶದ ಚರಿತ್ರೆ ವೈವಿಧ್ಯಮಯವಾಗಿದೆ. ಅದನ್ನು ತಿರುಚಲು ಬಿಡಬಾರದು. ಧರ್ಮ ಮತ್ತು ರಾಜಕಾರಣ ಒಂದಾಗಿದ್ದು ಭಾರತೀಯ ಇತಿಹಾಸದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಧರ್ಮವು ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ತಮ್ಮದೇ ಆದ ಧಾರ್ಮಿಕ ಸಮಾಜಕ್ಕೆ ಸೇರಿದ್ದಾಗಿತ್ತು. ಜನರು ಧರ್ಮವಂತರಾಗಿದ್ದರು ಆದರೆ ಧರ್ಮವಾದಿಗಳಾಗಿರಲಿಲ್ಲ. ಅವರು ತಮ್ಮ ಧರ್ಮವನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಆಚರಿಸುತ್ತಿ ದ್ದರು. ‘‘ನಿಮ್ಮ ಧರ್ಮ ನಿಮಗೆ, ನಮ್ಮ ಧರ್ಮ ನಮಗೆ. ಆದರೆ ನಾವೆಲ್ಲ ಕೂಡಿ ಬದುಕುವ ನೆಲ ನಮ್ಮೆಲ್ಲರದು. ನಮ್ಮ ನೆಲಕ್ಕೆ ಅಂದರೆ ಎಲ್ಲ ಜಾತಿ, ಧರ್ಮ ಮತ್ತು ವಿವಿಧ ಜನಾಂಗಗಳಿಂದ ಕೂಡಿದ ನಮ್ಮ ದೇಶಕ್ಕೆ ವಿಧೇಯರಾಗಿರಬೇಕು’’ ಎಂಬುದು ಅವರ ಸ್ಥಾಯಿಭಾವವಾಗಿತ್ತು. 14ನೇ ಶತಮಾನದ ಬಹಮನಿ ಸಾಮ್ರಾಜ್ಯ ಹಸನ್ ಎಂಬ ವ್ಯಕ್ತಿಯಿಂದ ಪ್ರಾರಂಭವಾಯಿತು. ಆತ ತನಗೆ ಸಹಾಯ ಮಾಡಿದ ಗಂಗೂ ಎಂಬ ಬ್ರಾಹ್ಮಣನ ಹೆಸರನ್ನು ತನ್ನ ತಂದೆಯ ಸ್ಥಾನದಲ್ಲಿಟ್ಟು ಹಸನ್ ಗಂಗೂ ಬಹಮನಿ ಎನಿಸಿಕೊಂಡ!
15ನೇ ಶತಮಾನದಲ್ಲಿ ವಿಜಯಪುರದಲ್ಲಿ ಆದಿಲ್‌ಶಾಹಿ ಸಾಮ್ರಾಜ್ಯ ಸ್ಥಾಪಿಸಿದ ಯೂಸುಫ್ ಆದಿಲ್ ಖಾನ್ ಮರಾಠಾ ಮಹಿಳೆ ಪೂಂಜಿಖಾತೂನ್ (ಲಕ್ಷ್ಮೀಬಾಯಿ)ಳನ್ನು ಮದುವೆಯಾಗಿ ಪಟ್ಟದ ರಾಣಿಯಾಗಿಸಿದ. ಅವಳಿಂದ ಆದಿಲ್‌ಶಾಹಿ ಸಂತತಿ ಆರಂಭವಾಯಿತು.

16ನೇ ಶತಮಾನದ ಎರಡನೇ ಇಬ್ರಾಹೀಂ ಆದಿಲ್‌ಶಾಹಿ ‘ಕಿತಾಬೇ ನೌರಸ್’ ಎಂಬ ಸಂಗೀತಗ್ರಂಥ ರಚಿಸಿ ಗಣಪತಿ ಸರಸ್ವತಿಯರನ್ನು ಹೊಗಳಿದ. 16ನೇ ಶತಮಾನದಲ್ಲಿ ಬಾಬರ್ ದಿಲ್ಲಿಯಲ್ಲಿ ತನ್ನ ಸಾಮ್ರಾಜ್ಯ ಸ್ಥಾಪನೆ ಮಾಡಿದ. ‘‘ಹಿಂದೂಗಳ ಭಾವನೆಗೆ ಧಕ್ಕೆ ತಗಲದಂತೆ ಆಡಳಿತ ನಡೆಸು’’ ಎಂದು ಮಗ ಹುಮಾಯೂನ್‌ಗೆ ತಿಳಿಸಿದ. ಹುಮಾಯೂನ್ ಮಗ ಅಕ್ಬರ್ ಚಕ್ರವರ್ತಿ ರಜಪೂತ ಮಹಿಳೆ ಜೋಧಾಬಾಯಿಯನ್ನು ಮದುವೆಯಾದ. ಅವನ ದರ್ಬಾರಿನ ನವರತ್ನಗಳಲ್ಲಿ ಹಿಂದೂಗಳದ್ದೇ ಸಿಂಹಪಾಲಾಗಿತ್ತು.

ಹಳದಿಘಾಟ್ ಮೈದಾನದಲ್ಲಿ ಅಕ್ಬರ್ ಮತ್ತು ರಾಣಾಪ್ರತಾಪಸಿಂಹ ಅವರ ಮಧ್ಯೆ ಯುದ್ಧವಾದಾಗ ಅಕ್ಬರ್ ಸೇನಾಪತಿ ರಾಜಾ ಮಾನಸಿಂಗ್ ಆಗಿದ್ದ. ರಾಣಾ ಪ್ರತಾಪ ಸೇನಾಪತಿ ಹಕೀಂ ಖಾನ್ ಸೂರ್ ಆಗಿದ್ದ.

17ನೇ ಶತಮಾನದ ಛತ್ರಪತಿ ಶಿವಾಜಿಯ 23 ಅಧಿಕಾರಿಗಳು ಮುಸ್ಲಿಮರಾಗಿದ್ದರು. ಶಿವಾಜಿಯ ಹಿಂದವೀ ಸ್ವರಾಜ್ಯದ ಮುಖ್ಯ ಸರನೋಬತ್, ಅಂದರೆ ಒಂದೂವರೆ ಲಕ್ಷ ಸೈನ್ಯದ ಸರ್ವೋಚ್ಚ ಅಧಿಕಾರಿ ನೂರ್ ಖಾನ್ ಬೇಗ್. ಆ ಸೈನ್ಯದಲ್ಲಿ 60 ಸಾವಿರ ಮುಸ್ಲಿಂ ಸೈನಿಕರಿದ್ದರು. ತೋಪುಖಾನೆಯ ಮುಖ್ಯಸ್ಥ ಇಬ್ರಾಹೀಂ ಖಾನ್. ಯುದ್ಧ ನೌಕೆಪಡೆಯ ಮುಖ್ಯಸ್ಥ ದರಿಯಾ ಸಾರಂಗ್.
ಶಿವಾಜಿಯ 21 ಅಂಗರಕ್ಷಕರಲ್ಲಿ 13 ಜನ ಮುಸ್ಲಿಮರಿದ್ದರು. ಬಹಳ ಜವಾಬ್ದಾರಿಯುತವಾದ ಶಿವಾಜಿಯ ವಕೀಲ, ಕಾನೂನು ಮಂತ್ರಿ ಮತ್ತು ಪಾರ್ಸಿಯಲ್ಲಿ ರಹಸ್ಯ ಪತ್ರ ಬರೆಯುವಾತ ಕಾಜಿ ಹೈದರ್. ಆಗ್ರಾದಿಂದ ಶಿವಾಜಿ ಪಾರಾಗಲು ಸಹಾಯ ಮಾಡಿ ಔರಂಗಜೇಬನ ಸೈನಿಕರಿಂದ ಹತನಾದವ ನಂಬಿಗಸ್ಥ ಸೇವಕ ಮದರಿ ಮೆಹತರ್.

ಅಫ್ಝಲ್ ಖಾನ್ ಭೇಟಿಯ ಸಂದರ್ಭದಲ್ಲಿ ಕೊಲೆ ಮಾಡುತ್ತಾನೆ ಎಂದು ಶಿವಾಜಿಗೆ ಎಚ್ಚರಿಸಿ ಗುಪ್ತ ಆಯುಧ ವ್ಯಾಘ್ರನಖದೊಂದಿಗೆ ಹೋಗಲು ತಿಳಿಸಿದವ ಗುಪ್ತ ದಳ ಅಧಿಕಾರಿ ಮತ್ತು ವಿಜಾಪುರದ ಗುಪ್ತ ಸಂದೇಶ ಕಳಿಸುವ ಹೊಣೆ ಹೊತ್ತಿದ್ದ ರುಸ್ತುಂ ಎ ಜಮಾನ್. ಭೇಟಿ ಸಂದರ್ಭದಲ್ಲಿ ಅಫ್ಝಲ್ ಖಾನ್ ಶಿವಾಜಿಯನ್ನು ಅಪ್ಪಿಕೊಂಡು ಕೊಲ್ಲಲು ಯತ್ನಿಸಿದ. ಆದರೆ ಶಿವಾಜಿ ವ್ಯಾಘ್ರನಖದಿಂದ ಅಫ್ಝಲ್ ಖಾನ್‌ನ ಕೊಲೆ ಮಾಡಿದ. ಆ ವೇಳೆಯಲ್ಲಿ ಶಿವಾಜಿಯ ಕೊಲೆ ಮಾಡಲು ಯತ್ನಿಸಿದಾತ, ಅಫ್ಝಲ್‌ಖಾನ್‌ನ ಅಧಿಕಾರಿ ಕೃಷ್ಣಾಜಿ ಭಾಸ್ಕರ ಕುಲಕರ್ಣಿ. ಶಿವಾಜಿಯ ಎರಡನೇ ಗುರು ಯಾಕೂತ್ ಬಾಬಾ, ಮೂರನೇ ಗುರು ಮೌನಿ ಬಾಬಾ ಕೂಡ ಮುಸ್ಲಿಮರೇ ಆಗಿದ್ದರು. ಶಿವಾಜಿ ತನ್ನ ರಾಜಧಾನಿ ರಾಯಗಡದಲ್ಲಿ ಮಂದಿರದ ಜೊತೆ ಈದ್ಗಾ ನಿರ್ಮಾಣ ಮಾಡಿದ.

18ನೇ ಶತಮಾನದಲ್ಲಿ ಅಂದರೆ 1763 ರಿಂದ 1793ರ ವರೆಗೆ ಬಿಹಾರದ ಬಕ್ಸರ್‌ನಿಂದ ಹಿಡಿದು ಬಂಗಾಲದ ಮಿಡ್ನಾಪುರದ ವರೆಗೆ ಸತತವಾಗಿ ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರ ಜೊತೆ 300 ಫಕೀರರ ಬೆಂಬಲದೊಂದಿಗೆ ಹೋರಾಡುತ್ತ ಮಿಡ್ನಾಪುರದಲ್ಲಿ ಯುದ್ಧ ಮಾಡುತ್ತಲೇ ಹುತಾತ್ಮನಾದವ ಮಜ್ನು ಶಾ ಎಂಬ ವೀರ ಫಕೀರ. ಆಗ ಆತನ ಬಲಗೈ ಬಂಟನಾಗಿದ್ದಾತ ಭವಾನಿ ಪಾಠಕ ಎಂಬ ಸನ್ಯಾಸಿ. 1799ರಲ್ಲಿಟಿಪ್ಪು ಹುತಾತ್ಮನಾಗುವ ವರೆಗೆ ಆತನ ಪ್ರಧಾನಿಯಾಗಿದ್ದಾತ ದಿವಾನ್ ಪೂರ್ಣಯ್ಯ. 19ನೇ ಶತಮಾನದಲ್ಲಿ ನಡೆದ ಪ್ರಥಮ ಸ್ವಾತಂತ್ರ ಸಂಗ್ರಾಮದ ನಾಯಕತ್ವ ವಹಿಸಿದವರು ಬಹದೂರ್ ಶಾ ಝಫರ್.

20ನೇ ಶತಮಾನದಲ್ಲಿ ಕೊನೆಯ ವರೆಗೆ ಹೈದಾರಬಾದ್ ನಿಜಾಮನ ಪ್ರಧಾನಿಯಾಗಿದ್ದಾತ ಕಿಶನ್‌ರಾವ್. 1965ರಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದಾಗ ಆಗಿನ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಅವರು ದೇಶ ರಕ್ಷಣೆಗಾಗಿ ಧನ ಸಹಾಯ ಮಾಡಲು ಜನತೆಗೆ ಕರೆ ನೀಡಿದರು. ಆಗ ಹೈದರಾಬಾದ್‌ನಿಜಾಮ ಮೀರ್ ಉಸ್ಮಾನ್ ಅಲಿ ಅವರು 5,000 ಕಿಲೋ ಚಿನ್ನವನ್ನು ದೇಶ ರಕ್ಷಣೆಗಾಗಿ ಕೊಟ್ಟರು. ದೇಶದ ಯಾವುದೇ ರಾಜ ಮನೆತನದವರು ಮತ್ತು ಬಂಡವಾಳಶಾಹಿಗಳು ಹೀಗೆ ತಮ್ಮ ಸಂಪತ್ತಿನ ಬಹುಭಾಗವನ್ನು ದೇಶಕ್ಕಾಗಿ ಕೊಡಲು ಮುಂದೆ ಬರಲಿಲ್ಲ.

 ಹೀಗೆ ಹಿಂದೂ ಮುಸ್ಲಿಂ ಸಾಮರಸ್ಯದ ಬಹುದೊಡ್ಡ ಇತಿಹಾಸವನ್ನು ಭಾರತ ಹೊಂದಿದೆ. ಎಲ್ಲಿಯೂ ಧರ್ಮ ಮತ್ತು ರಾಜಕಾರಣದ ಕಲಬೆರಕೆ ಕಾಣ ಸಿಗುವುದಿಲ್ಲ. ಜನರು ತಮ್ಮ ಧರ್ಮ ಮತ್ತು ತಮ್ಮ ರಾಜರಿಗೆ ನಿಷ್ಠರಾಗಿದ್ದರು. ಮುಸ್ಲಿಂ ರಾಜನ ಹಿಂದೂ ಸೈನಿಕರು ನಿಷ್ಠೆಯಿಂದ ಹಿಂದೂ ರಾಜನ ಸೈನಿಕರ ವಿರುದ್ಧ ಹೋರಾಡುತ್ತಿದ್ದರು. ಅದೇ ರೀತಿ ಹಿಂದೂ ರಾಜನ ಮುಸ್ಲಿಂ ಸೈನಿಕರು ಅಂಥದೇ ನಿಷ್ಠೆಯಿಂದ ಮುಸ್ಲಿಂ ರಾಜನ ಸೈನಿಕರೊಂದಿಗೆ ಹೋರಾಡುತ್ತಿದ್ದರು.

ದೇಶದ ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮನಾದ ತಮ್ಮ ಒಬ್ಬ ವ್ಯಕ್ತಿಯ ಹೆಸರು ಹೇಳಲು ಇಂದಿಗೂ ಸಾಧ್ಯವಾಗದ ಸಂಘ ಪರಿವಾರದವರು ಭಾರತದ ಜನತೆಗೆ ರಾಷ್ಟ್ರಾಭಿಮಾನದ ಪಾಠ ಕಲಿಸಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರದಲ್ಲಿ ತಾವು ಹಿಂದೂ ರಾಷ್ಟ್ರವಾದಿ ಎಂದು ಘೋಷಿಸಿದರು. ಹಿಂದೂ ರಾಷ್ಟ್ರವಾದಿ ಅಥವಾ ಮುಸ್ಲಿಂ ರಾಷ್ಟ್ರವಾದಿ ಎಂದು ಘೋಷಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂಬ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾಗಲೇ ಇಲ್ಲ! ಗಾಂಧಿ, ನೆಹರೂ, ರವೀಂದ್ರನಾಥ ಟಾಗೋರ್ ಅವರಂಥ ರಾಷ್ಟ್ರಪ್ರೇಮಿಗಳು ರಾಷ್ಟ್ರವಾದದ ಕ್ರೌರ್ಯದ ಕುರಿತು ಧ್ವನಿ ಎತ್ತಿದ್ದಾರೆ. ರಾಷ್ಟ್ರವಾದಿ ಹಿಟ್ಲರ್ ಎಂಥ ಕ್ರೂರಿಯಾಗಿದ್ದ ಎಂಬುದನ್ನು ಅವರೆಲ್ಲ ಕಣ್ಣಾರೆ ಕಂಡವರಾಗಿದ್ದರು.

ಇಂದು ದೇಶದಲ್ಲಿ ರಾಷ್ಟ್ರಪ್ರೇಮಿಗಳನ್ನು ರಾಷ್ಟ್ರವಾದಿಗಳನ್ನಾಗಿಸುವ ಮತ್ತು ಧರ್ಮವಂತರನ್ನು ಧರ್ಮವಾದಿಗಳನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಆ ಮೂಲಕ ದೇಶದಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಸಿ ದೇಶದ ಮೇಲೆ ಹಿಡಿತ ಸಾಧಿಸಲು ಕೋಮುವಾದಿ ಶಕ್ತಿಗಳು ಸತತ ಪ್ರಯತ್ನ ಮಾಡುತ್ತಿವೆ. ಗಾಂಧಿ ಧರ್ಮವಂತರಾಗಿದ್ದರು. ತಾನೊಬ್ಬ ಸನಾತನ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದರು. ಗೋಡ್ಸೆ ಹಿಂದೂ ಧರ್ಮವಾದಿಯಾಗಿದ್ದ. ಧರ್ಮವಂತ ಗಾಂಧೀಜಿಯನ್ನು ಧರ್ಮವಾದಿ ಗೋಡ್ಸೆ ಕೊಂದುಬಿಟ್ಟ. ಧರ್ಮವಾದಿಗಳು ತಮ್ಮೆಳಗಿನ ಧರ್ಮವಂತರನ್ನು ಮತ್ತು ಇತರ ಧರ್ಮದವರನ್ನು ಸಹಿಸುವುದಿಲ್ಲ. ಅವರಿಗೆ ಬಹುತ್ವದಲ್ಲಿ ನಂಬಿಕೆ ಇಲ್ಲ. ತಮ್ಮೆಳಗಿನ ಉದಾರವಾದಿಗಳನ್ನೂ ಅವರು ದ್ವೇಷಿಸುತ್ತಾರೆ. ಅವರು ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಏಕತಾನತೆಯನ್ನು ಬಯಸುತ್ತಾರೆ. ಈ ವಾದ ದೇಶದಲ್ಲಿ ಸರ್ವಾಧಿಕಾರವನ್ನು ತರುವಂಥದ್ದಾಗಿದೆ.

ಧರ್ಮ ರಾಜಕಾರಣ ಮತ್ತು ಜಾತಿ ರಾಜಕಾರಣ

 ನಮ್ಮ ದೇಶದಲ್ಲಿ ಧರ್ಮ ಮತ್ತು ಜಾತಿಗಳು ಮತ ಚಲಾಯಿಸುತ್ತವೆ ಹೊರತಾಗಿ ಮನುಷ್ಯರು ಮತ ಚಲಾಯಿಸುವುದಿಲ್ಲ ಎನ್ನುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಜಾತಿ ರಾಜಕಾರಣ ಸಹಜವಾಗಿಯೆ ಧರ್ಮರಾಜಕಾರಣವನ್ನು ಬಯಸುವುದಿಲ್ಲ. ಏಕೆಂದರೆ ಹಿಂದೂಧರ್ಮ ಜಾತಿಗಳ ಆಗರವಾಗಿದ್ದು ಸವರ್ಣೀಯರು ಶೂದ್ರರನ್ನು ಮತ್ತು ಪಂಚಮರನ್ನು ಸದಾ ಶೋಷಣೆಗೆ ಒಳಪಡಿಸುತ್ತಲೇ ಬಂದಿದ್ದಾರೆ. ನಿಜವಾದ ಅರ್ಥದಲ್ಲಿ ಹಿಂದೂ ಧರ್ಮ ಎಂದರೆ ಬ್ರಾಹ್ಮಣಿಕೆಯ ಧರ್ಮವಾಗಿದೆ. ಈ ಬ್ರಾಹ್ಮಣವಾದವನ್ನು ಯಥಾಸ್ಥಿತಿವಾದಿ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಲ್ಲಿನ ಕರ್ಮಠರು ಮಾತ್ರ ಬಯಸುತ್ತಾರೆ. ಕೆಲ ಶೂದ್ರರು ತಾವು ಕೂಡ ಸವರ್ಣೀಯರು ಎಂಬ ಭ್ರಮೆಯಲ್ಲಿ ತೇಲಾಡುತ್ತಾರೆ. ಇಂಥ ಶೂದ್ರರು ಮತ್ತು ಗುಲಾಮಿಗಿರಿಯನ್ನು ಒಪ್ಪಿಕೊಂಡ ಕೆಲ ಪಂಚಮರು ಕೋಮುವಾದಿ ಭಾರತೀಯ ಜನತಾ ಪಕ್ಷದ ಅಡಿಯಾಳುಗಳಾಗಿದ್ದಾರೆ. ಆದರೆ ಬ್ರಾಹ್ಮಣ ಮತ್ತು ಇತರ ಸವರ್ಣೀಯ ಕುಲದಲ್ಲಿ ಜನಿಸಿದ ಅನೇಕರು ಬಹುತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ.

ಧರ್ಮರಾಜಕಾರಣದ ಹೆಸರಿನಲ್ಲಿ ಕೋಮುವಾದವನ್ನು ಬೆಳೆಸುತ್ತಿರುವ ಭಾರತೀಯ ಜನತಾ ಪಕ್ಷ ತನ್ನ ಪ್ರಾಬಲ್ಯಕ್ಕಾಗಿ ಕೆಳಜಾತಿಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುವಲ್ಲಿ ಸದಾ ತಲ್ಲೀನವಾಗಿರುತ್ತದೆ. ಹಿಂದೂ ಧರ್ಮದಲ್ಲಿನ ಎಲ್ಲ ಜಾತಿಗಳು ತಮ್ಮ ಅಸ್ಮಿತೆಗಾಗಿ ಹೋರಾಡುತ್ತಲೇ ಇರುತ್ತವೆ. ‘ನಾವು ಹಿಂದೂಗಳೆಂದು ಗರ್ವದಿಂದ ಹೇಳಿರಿ’ ಎಂಬುದನ್ನು ವಿವಿಧ ಜಾತಿಗಳವರು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಲು ಸಾಧ್ಯವಾಗುವುದು ಕೋಮುಗಲಭೆಗಳಲ್ಲಿ ಮಾತ್ರ. ಆ ಸಂದರ್ಭದಲ್ಲಿ ಎಲ್ಲ ಜಾತಿಗಳ ಜನರು ಮುಸ್ಲಿಮರ ಬಗ್ಗೆ ಸಂಶಯ ತಾಳುವಂಥ ವಾತಾವರಣ ಸೃಷ್ಟಿಸಲಾಗುತ್ತಿದೆ. ಈ ಕೋಮುವಾದಿ ಅಂಟುರೋಗ ಭಾರತದ ಹಳ್ಳಿಗಳನ್ನೂ ಪ್ರವೇಶಿಸಿದೆ.

ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆಯಂಥ ಪಕ್ಷಗಳು ಅಧಿಕಾರಕ್ಕೆ ಬರುವುದಕ್ಕೆ ಮೊದಲು ಕೋಮುಗಲಭೆಗಳನ್ನು ಸೃಷ್ಟಿಸುತ್ತ ವಿವಿಧ ಜಾತಿಗಳ ಮತಗಳನ್ನು ಪಡೆಯುವುದು ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ವಿವಿಧ ಜಾತಿಗಳವರು, ದಲಿತರು, ಅಲ್ಪಸಂಖ್ಯಾತರು ಮತ್ತು ಸವರ್ಣೀಯ ಪ್ರಜ್ಞಾವಂತರು ಒಂದಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದಂಥ ಕೋಮುವಾದಿ ಪಕ್ಷಗಳನ್ನು ಸೋಲಿಸುವುದು ಐತಿಹಾಸಿಕ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನಿಭಾಯಿಸದಿದ್ದರೆ ಫ್ಯಾಶಿಸ್ಟರು ಈ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಬಹುತ್ವದ ಭಾರತವನ್ನು ಕೊಲೆಗಡುಕ ಭಾರತವನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News