ಜಿನ್ನಾ ಭಾವಚಿತ್ರ ವಿವಾದದ ಸುತ್ತ
ಭಾರತ ಪಾಕಿಸ್ತಾನ ವಿಭಜನೆ ನಾವು ಇಂದಿಗೂ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಒಂದು ದುರಂತ. ಭಾರತ ಮತ್ತು ಪಾಕಿಸ್ತಾನ ನಾಗರಿಕ ಅಸ್ಮಿತೆಯ ಭಾಗವಾಗಿರುವ ಸ್ಮಾರಕಗಳಲ್ಲಿ ಅಳಿದುಳಿದ ಕೆಲವನ್ನು ನಾಶಮಾಡುವ ಮೂಲಕ ನಾವು, ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರ ನೆಲೆಯಾಗಿರುವ ದಕ್ಷಿಣ ಏಶ್ಯಾದ ಶಾಂತಿಯ ಭವಿಷ್ಯಕ್ಕೆ ಅಪಾರ ಹಾನಿ ಉಂಟು ಮಾಡಿದಂತಾಗುತ್ತದೆ.
ರಾಷ್ಟ್ರಗಳು ಅಸ್ತಿತ್ವಕ್ಕೆ ಬರುವ ಮೊದಲೇ ಇತಿಹಾಸ ಇರುತ್ತದೆ. ಒಂದು ರಾಷ್ಟ್ರದ ಬುನಾದಿ ಸಿದ್ಧಾಂತಕ್ಕೆ ಸರಿಯಾಗಿ ಅವುಗಳನ್ನು ನೀಟಾಗಿ ವರ್ಗೀಕರಿಸುವ, ಸೀಮಿತಗೊಳಿಸುವ ಪ್ರಯತ್ನಗಳು ಒಂದೋ ಸೋಲುತ್ತವೆ ಅಥವಾ ವಿಫಲವಾಗುತ್ತವೆ. ಪತ್ರಗಳು, ದಿನಚರಿಗಳು, ಪುಸ್ತಕಗಳು, ಹಸ್ತಪ್ರತಿಗಳು ಮತ್ತು ಇತರ ಸ್ಮಾರಕ, ಸ್ಮರಣಿಕೆಗಳನ್ನು ಸಾರ್ವಜನಿಕರ ಕಣ್ಣಿಗೆ ಕಾಣದಂತೆ ಪುರಾತತ್ವ ಇಲಾಖೆಯಲ್ಲೋ ಪತ್ರಗಾರಗಳಲ್ಲೋ ಮರೆಮಾಡಿ ಇಡಬಹುದು. ಆದರೂ ಕೂಡ ಅವುಗಳು ಇತಿಹಾಸ ಪುರುಷರನ್ನು ಅಥವಾ ಐತಿಹಾಸಿಕ ಘಟನೆಗಳನ್ನು ಅರ್ಥೈಸಲು ನೆರವಾಗುತ್ತವೆ ಮತ್ತು ಗತಕಾಲದ ನೈಜಘಟನೆಗಳನ್ನು ಹೇಳುತ್ತವೆ. ಆದರೆ ಪ್ರತಿಮೆಗಳು, ಮೂರ್ತಿಗಳು, ಕಟ್ಟಡಗಳು ಸಾರ್ವಜನಿಕ ಸ್ಥಳಗಳಲ್ಲಿದ್ದುಕೊಂಡು ಎಲ್ಲರಿಗೂ ಕಾಣಿಸುತ್ತವೆ. ಇವುಗಳು ನೋಡುಗರಲ್ಲಿ ಭಯ ಭಕ್ತಿ ಗೌರವ ಹುಟ್ಟಿಸಬಹುದು ಅಥವಾ ಕೆಲವರ ಭಾವನೆಗಳಿಗೆ ನೋವು ಉಂಟುಮಾಡಬಹುದು. ಇದು ಇತಿಹಾಸದ ಕುರಿತಾದ ನಮ್ಮ ಪರಿಕಲ್ಪನೆ, ದೃಷ್ಟಿಕೋನ ಅಥವಾ ಇವುಗಳನ್ನು ಸ್ಥಾಪಿಸಲಾದ ಕಾಲವನ್ನವಲಂಬಿಸಿರುತ್ತವೆೆ.
ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿರುವ, ಪಾಕಿಸ್ತಾನದ ನಿರ್ಮಾತೃ ಮುಹಮ್ಮದ್ ಅಲಿ ಜಿನ್ನಾರವರ ಭಾವಚಿತ್ರವು, ಆ ದಿನಗಳಲ್ಲಿ ಹಿಂದೂ-ಮುಸ್ಲಿಂ ಏಕತೆಯ ರಾಯಭಾರಿ ಎಂದು ಪ್ರಸಿದ್ಧರಾಗಿದ್ದ ವ್ಯಕ್ತಿಯೊಬ್ಬರ ನೆನಪನ್ನು ಸಂಭ್ರಮಿಸುತ್ತದೆ. ಅಂದಿನ ವರೆಗೆ ತಾನು ಸಾಗಿಬಂದಿದ್ದ ದಾರಿಯಿಂದ ಬದಿಗೆ ಸರಿದು, ಜಿನ್ನಾರವರು ಒಂದು ರಾಷ್ಟ್ರದ(ಪಾಕಿಸ್ತಾನದ) ಸೃಷ್ಟಿಗೆ ಕಾರಣರಾದರು. ಇದು ಹಲವರಿಗೆ ಇಷ್ಟವಾಗಲಿಲ್ಲ; ನಮ್ಮ ಸ್ವಾತಂತ್ರ ಹೋರಾಟದ ಹಲವು ನಾಯಕರು ಇದನ್ನು ಬಯಸಿರಲಿಲ್ಲ. ಆದರೂ ಕೂಡ, 1948ರಲ್ಲಿ ಜಿನ್ನಾರವರು ಮೃತಪಟ್ಟಾಗ, ಅವರ ಸಾವಿಗೆ ಶೋಕ ಸೂಚಿಸುವ ನಿಲುವಳಿಯೊಂದನ್ನು ಅಂಗೀಕರಿಸದಂತೆ ಭಾರತದ ಸಾಂವಿಧಾನಿಕ ಸಭೆಯನ್ನು ಯಾರೂ ತಡೆಯಲಿಲ್ಲ
ಜಿನ್ನಾರವರಿಗೆ ಸಂಬಂಧಿಸಿದ ಹಲವು ಸ್ಮಾರಕಗಳು, ಸ್ಮರಣಿಕೆಗಳು ಭಾರತದಲ್ಲಿ ಸಾರ್ವಜನಿಕ ಮುಕ್ತ ವೀಕ್ಷಣೆಗೆ ತೆರೆದ ಬಯಲಲ್ಲೇ ಇವೆ; ಇತರ ಕೆಲವು ಸಾರ್ವಜನಿಕರ ಕಣ್ಣಿಗೆ ಕಾಣಿಸದ ಜಾಗಗಳಲ್ಲಿವೆ. ಸ್ಮಾರಕ ಕಟ್ಟಡಗಳಲ್ಲಿ ಅತ್ಯಂತ ಮುಖ್ಯವಾಗಿ ಮುಂಬೈಯ ವೌಂಟ್ ಪ್ಲೆಸಂಟ್ ರಸ್ತೆಯಲ್ಲಿರುವ ಜಿನ್ನಾ ಹೌಸ್ ಇದೆ. ಮುಂಬೈಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಕಾಂಗ್ರೆಸ್ ಹೌಸ್‌ನ ಆವರಣದ ಒಳಗಿರುವ ಪೀಪಲ್ಸ್ ಜಿನ್ನಾ ಹಾಲ್ (ಪಿ. ಜೆ. ಹಾಲ್) ಇಂತಹ ಇನ್ನೊಂದು ಕಟ್ಟಡ.
ಭಾರತ ಪಾಕಿಸ್ತಾನ ವಿಭಜನೆ ನಾವು ಇಂದಿಗೂ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಒಂದು ದುರಂತ. ಭಾರತ ಮತ್ತು ಪಾಕಿಸ್ತಾನ ನಾಗರಿಕ ಅಸ್ಮಿತೆಯ ಭಾಗವಾಗಿರುವ ಸ್ಮಾರಕಗಳಲ್ಲಿ ಅಳಿದುಳಿದ ಕೆಲವನ್ನು ನಾಶಮಾಡುವ ಮೂಲಕ ನಾವು, ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರ ನೆಲೆಯಾಗಿರುವ ದಕ್ಷಿಣ ಏಶ್ಯಾದ ಶಾಂತಿಯ ಭವಿಷ್ಯಕ್ಕೆ ಅಪಾರ ಹಾನಿ ಉಂಟು ಮಾಡಿದಂತಾಗುತ್ತದೆ.
ಭಾರತದ ಜೊತೆ ತಮಗಿದ್ದ ಬಾಂಧವ್ಯವನ್ನು, ಉಭಯ ದೇಶಗಳ ನಡುವಿನ ಮಧುರ ನೆನಪುಗಳನ್ನು ಪಾಕಿಸ್ತಾನಿಯರೂ ಮರೆತಿಲ್ಲ. ಮಹಾತ್ಮಾ ಗಾಂಧಿ ಇಂದಿಗೂ ಕೂಡ ಪಾಕಿಸ್ತಾನದಲ್ಲಿ ತುಂಬ ಗೌರವಾದರಗಳಿಗೆ ಪಾತ್ರರಾಗಿರುವ ಓರ್ವ ಮಹಾತ್ಮ. ಮಹಾತ್ಮಾ ಗಾಂಧಿಯವರ ಹತ್ಯೆಯಾದ ದಿನ ತನ್ನ ಕರಾಚಿಯ ದಿನಗಳನ್ನು ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ‘ಟೈಮ್’ ಪತ್ರಿಕೆಯಲ್ಲಿ (ಮೇ.5, 1997) ಜ್ಞಾಪಿಸಿಕೊಂಡಿದ್ದಾರೆ: ‘‘ಗಾಂಧೀಜಿಯವರ ಹತ್ಯೆಯಾದಾಗ ನಾನು ಕರಾಚಿಯಲ್ಲಿ ವಾಸಿಸುತ್ತಿದ್ದೆ. ಎಲ್ಲ ಅಂಗಡಿ ಮಾಲಕರು ತಾವಾಗಿಯೇ ಅಂಗಡಿಗಳನ್ನು ಮುಚ್ಚಿದರು ಮತ್ತು ತನ್ನ ಕಣ್ಣಂಚಿನಲ್ಲಿ ಕಣ್ಣೀರು ಇಲ್ಲದ ಒಬ್ಬನೇ ಒಬ್ಬ ಮುಸ್ಲಿಂ ಅಲ್ಲಿ ಇರಲಿಲ್ಲ. ನಾನು ಬಲಪಡಿಸಬಯಸುವ ನಿಜವಾದ ನಾಗರಿಕತೆಯ ಏಕತೆಯನ್ನು ಇದು ಪ್ರತಿನಿಧಿಸುತ್ತದೆ.’’
ಪಾಕಿಸ್ತಾನವು ಲಾಹೋರಿನಲ್ಲಿರುವ ಶಾಡ್‌ಮನ್ ಚೌಕವನ್ನು ಭಾರತದ ಅತ್ಯಂತ ಪ್ರಸಿದ್ಧ ಹುತಾತ್ಮ ಭಗತ್‌ಸಿಂಗ್ ಚೌಕ್ ಎಂದು ಮರುನಾಮಕರಣ ಮಾಡಲು ಈಗ ಯೋಚಿಸುತ್ತಿದೆ. ಬಾಲಿವುಡ್ ನಟರಾದ ದಿಲೀಪ್ ಕುಮಾರ್ ಮತ್ತು ರಾಜ್‌ಕಪೂರ್‌ರವರ ನಿವಾಸಗಳನ್ನು ಈಗಾಗಲೇ ರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಲಾಗಿದೆ.
ಉರ್ದು ಲೇಖಕ ಸಾದತ್ ಹಸನ್ ಮಂಟೋರವರ ‘ಗಾರ್ಲಂಡ್’ ಕತೆಯನ್ನು ಇಲ್ಲೂ ನೆನಪಿಸಿಕೊಳ್ಳುವುದು ಒಳ್ಳೆಯದು. ದೇಶ ವಿಭಜನೆಯ ವೇಳೆ ನಡೆದ ಹಿಂಸಾಕೃತ್ಯಗಳ ಸುತ್ತ ಹೆಣೆಯಲಾಗಿರುವ ಕತೆ ಅದು, ವಿಭಜನೆಯಿಂದಾಗಿ ಲಾಹೋರ್ ಪಾಕಿಸ್ತಾನದ ಪಾಲಾಯಿತು ಮತ್ತು ಹಿಂದೆಂದೂ ಸಂಭವಿಸದಿದ್ದಂತಹ ಕೋಮು ಸನ್ನಿಗೆ ಅದು ಕಾರಣವಾಯಿತು. ಪಾಕಿಸ್ತಾನದ ಪಾಲಾದ ಪ್ರದೇಶಗಳಲ್ಲಿದ್ದ ಹಿಂದೂಗಳು ಹಾಗೂ ಸಿಕ್ಖರು ಮುಸ್ಲಿಮರ ದಾಳಿಗೆ ಗುರಿಯಾದರು; ಮತ್ತು ಮುಸ್ಲಿಮರು ತೊರೆದು ಹೋಗುತ್ತಿದ್ದ ಪ್ರದೇಶಗಳಲ್ಲಿ ಮುಸ್ಲಿಮರ ನೆತ್ತರು ಸುರಿಯುತ್ತಿತ್ತು. ಎರಡೂ ಕಡೆಗಳಲ್ಲಿ ರಕ್ತದ ಓಕುಳಿ ಹರಿಯುತ್ತಿತ್ತು. ಆಧುನಿಕ ಲಾಹೋರ್‌ನ ನಿರ್ಮಾತೃ ಮತ್ತು ಪ್ರಸಿದ್ಧ ಮಾನವತಾವಾದಿಯಾಗಿದ್ದ ಸರ್ ಗಂಗಾ ರಾಮ್‌ರವರ ಪ್ರತಿಮೆಗೆ ದೊಂಬಿ ನಿರತ ಗುಂಪೊಂದು ಕಲ್ಲುಗಳನ್ನೆಸೆಯುತ್ತಿತ್ತು. ದೊಂಬಿನಿರತನೊಬ್ಬ ಪ್ರತಿಮೆ ಇದ್ದ ಪೀಠವನ್ನು ಹತ್ತಿ ಪ್ರತಿಮೆಗೆ ಚಪ್ಪಲಿಗಳ ಒಂದು ಹಾರ ಹಾಕುತ್ತಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ದೊಂಬಿನಿರತರ ಮೇಲೆ ಗುಂಡುಹಾರಿಸಿದರು. ಆಗ ಕಿಡಿಗೇಡಿಗಳಲ್ಲಿ ಕೆಲವರಿಗೆ ಗಾಯಗಳಾದವು. ಅವರಲ್ಲೊಬ್ಬ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿದವ. ದೊಂಬಿನಿರತ ಗುಂಪಿನಲ್ಲಿ ಒಬ್ಬ ಆಗ ಕಿರುಚಿ ಹೇಳಿದ: ‘‘ಅವನನ್ನು ಸರ್‌ಗಂಗಾ ರಾಮ್ ಆಸ್ಪತ್ರೆಗೆ ಕೊಂಡುಹೋಗಿ.’’ ಕೆಲವು ದಶಕಗಳ ಹಿಂದೆ ಇಸ್ಲಾಮಿಕ್ ಮೂಲ ಭೂತವಾದಿಗಳು ಸರ್ ಗಂಗಾರಾಮ್ ಆಸ್ಪತ್ರೆಯ ಹೆಸರನ್ನು ಬದಲಿಸಬೇಕೆಂದು ಒಂದು ಚಳವಳಿ ನಡೆಸಿದ್ದರು. ಇಂದಿಗೂ ಆಸ್ಪತ್ರೆಯ ಹೆಸರು ಬದಲಾಗದೆ ಉಳಿದಿದೆ. ಸರ್ ಗಂಗಾ ರಾಮ್‌ರವರ ಸಮಾಧಿ ಲಾಹೋರ್‌ನ ಪ್ರಮುಖ ಪ್ರವಾಸೀ ಆಕರ್ಷಣೆಯಾಗಿ ಉಳಿದಿರುವುದು ಲಾಹೋರ್ ನಗರಕ್ಕೆ ಹೆಮ್ಮೆಯ ವಿಷಯವಾಗಿದೆ. ಮಂಟೊರವರ ಕತೆಯ ಕರಾಳ ಹಾಸ್ಯ ನಮಗೆ ಅರ್ಥವಾಗಬೇಕು; ನಮ್ಮದೇ ಆದ ಪರಂಪರೆಯನ್ನು ಗೇಲಿ ಮಾಡುವವರ ವಿರೋಧಾಭಾಸ ಇನ್ನಾದರೂ ನಮಗೆ ಸ್ಪಷ್ಟವಾಗಬೇಕು.