ಜೀವನ ಕೌಶಲ್ಯಕ್ಕೆ ತರಬೇತಿಗಳು
ಜೀವನ ಕೌಶಲ್ಯವೆಂದರೆ, ನಮ್ಮ ಬದುಕನ್ನು ಆರೋಗ್ಯಕರವಾಗಿ ನಡೆಸುವುದಕ್ಕೆ ಅಗತ್ಯವಿರುವ ಜ್ಞಾನ ಮತ್ತು ಉಪಾಯವನ್ನು ಕಲಿಸಿಕೊಡುವುದು. ಭೌತಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ವಾಗಿರುವುದು. ಪ್ರತಿಯೊಬ್ಬರಿಗೂ ಸಂತೋಷ ಮತ್ತು ಆರೋಗ್ಯದಿಂದ ಬದುಕುವುದಕ್ಕೆ ಸಹಾಯ ಬೇಕಿರುತ್ತದೆ. ಈ ಸಹಾಯವನ್ನೇ ಮನೋಸಾಮಾಜಿಕ ಆಸರೆ ಅಥವಾ ಸೈಕೋಸೋಶಿಯಲ್ ಸಪೋರ್ಟ್ ಎನ್ನುವುದು. ಇದು ವ್ಯಕ್ತಿಗತವಾಗಿ ಮನವರಿಕೆಯಾಗಿರಬೇಕು, ತುರ್ತಿನ ಸಮಯಗಳಲ್ಲಿ ಜಾಗೃತವಾಗಿರಬೇಕು.
ಮನೋಸಾಮಾಜಿಕ ಆಸರೆ
ಶಿಕ್ಷಣದೊಂದಿಗೆ ಮಕ್ಕಳಿಗೆ ಬಹಳ ಮುಖ್ಯವಾಗಿ ನಾವು ಕಲಿಸಿಕೊಡಲೇಬೇಕಾದ ಒಂದು ವಿಷಯವೆಂದರೆ ಅದು ಜೀವನ ಕೌಶಲ್ಯ. ಹಾಗೆಯೇ ಮತ್ತೊಂದು ನೀಡಬೇಕಾದದ್ದು ಎಂದರೆ ಅದು ಮನೋಸಾಮಾಜಿಕ ಆಸರೆ. ಸೈಕೋಸೋಶಿಯಲ್ ಸಪೋರ್ಟ್ ಎನ್ನುವುದು ಬಹಳ ಮುಖ್ಯವಾದದ್ದು.
ಈಗ ಒಂದೊಂದಾಗಿ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಜೀವನ ಕೌಶಲ್ಯವೆಂದರೆ, ನಮ್ಮ ಬದುಕನ್ನು ಆರೋಗ್ಯಕರವಾಗಿ ನಡೆಸುವುದಕ್ಕೆ ಅಗತ್ಯವಿರುವ ಜ್ಞಾನ ಮತ್ತು ಉಪಾಯವನ್ನು ಕಲಿಸಿಕೊಡುವುದು. ಭೌತಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವುದು. ಪ್ರತಿಯೊಬ್ಬರಿಗೂ ಸಂತೋಷ ಮತ್ತು ಆರೋಗ್ಯದಿಂದ ಬದುಕುವುದಕ್ಕೆ ಸಹಾಯ ಬೇಕಿರುತ್ತದೆ.
ಈ ಸಹಾಯವನ್ನೇ ಮನೋಸಾಮಾಜಿಕ ಆಸರೆ ಅಥವಾ ಸೈಕೋಸೋಶಿಯಲ್ ಸಪೋರ್ಟ್ ಎನ್ನುವುದು. ಇದು ವ್ಯಕ್ತಿಗತವಾಗಿ ಮನವರಿಕೆಯಾಗಿರಬೇಕು, ತುರ್ತಿನ ಸಮಯಗಳಲ್ಲಿ ಜಾಗೃತವಾಗಿರಬೇಕು. ಸೈಕೋಸೋಶಿಯಲ್ ಆಸರೆಯಂತೂ ಸಮಾಜದಲ್ಲಿ ಅನಿರೀಕ್ಷಿತವಾಗಿ ಘಟಿಸುವ ಸಂಗತಿಗಳಲ್ಲಂತೂ ಬಹಳ ಮಹತ್ವದ ಮತ್ತು ಅಗತ್ಯದ ಪಾತ್ರವಹಿಸುತ್ತದೆ. ಅಪಾಯ ಮತ್ತು ಗಂಭೀರವಾದ ಪರಿಸ್ಥಿತಿಗಳಲ್ಲಿ, ಯುದ್ಧ, ದಂಗೆ, ಪ್ರವಾಹ, ಭೂಕಂಪ, ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳಲ್ಲಂತೂ ಇದು ಬಹಳ ಗುರುತರವಾಗಿರುತ್ತದೆ.
ಆತ್ಮಕೇಂದ್ರಿತ ಮನೋಸಾಮಾಜಿಕ ಆಸರೆ
ಮನೋಸಾಮಾಜಿಕ ಆಸರೆಯನ್ನು ನಾವು ಮಕ್ಕಳಿಗೆ ಹಲವು ವಿಧಗಳಲ್ಲಿ ಪರಿಚಯಿಸಬೇಕು ಮತ್ತು ಅಭ್ಯಾಸ ಮಾಡಿಸಬೇಕು. ಮೊದಲಿಗೆ ಕೆಲವು ಸಾಮಾನ್ಯ ಸಂತೋಷದ ನಿುಮಗಳನ್ನು ತಿಳಿದುಕೊಳ್ಳಬೇಕು.
ನಾನು ಸಂತೋಷವಾಗಿರಬೇಕಾದರೆ, ನಾನು, ನನ್ನ ಮನೆಯವರೆಲ್ಲಾ ಸಂತೋಷವಾಗಿರಬೇಕು. ಮನೆಯ ಇತರ ಸದಸ್ಯರು ರೋಗದಿಂದ, ಸಮಸ್ಯೆಯಿಂದ ಹಾಗೂ ಇತರ ತೊಂದರೆಯಿಂದ ಬಳಲುತ್ತಿದ್ದರೆ ನಾನು ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಹಾಗೆಯೇ ನನ್ನ ನೆರೆಹೊರೆಯವರು ದುಃಖದಿಂದ, ಸಮಸ್ಯೆಗಳಿಂದ ಬಳಲುತ್ತಿದ್ದರೆ, ಹಸಿವಿನಿಂದ ನರಳುತ್ತಿದ್ದರೆ, ಜಗಳ ಕದನಗಳಲ್ಲಿ ನಿರತರಾಗಿದ್ದು ಅಶಾಂತಿಯೆಬ್ಬಿಸಿಕೊಂಡಿದ್ದರೆ, ಅವರ ನೆರೆಯವನಾಗಿ ನಾನು ಶಾಂತಿಯಿಂದಲೂ, ನೆಮ್ಮದಿಯಿಂದಲೂ ಮತ್ತು ಸಂತೋಷದಿಂದಲೂ ಇರಲಾಗುವುದಿಲ್ಲ. ಹಾಗಾಗಿ, ನಾನು ನನ್ನಲ್ಲಿರುವ ವಸ್ತುಗಳನ್ನಾಗಲಿ, ಆಹಾರವನ್ನಾಗಲಿ, ತಿಳುವಳಿಕೆಯನ್ನಾಗಲಿ ಹಂಚಿಕೊಳ್ಳಲು ಸಿದ್ಧನಿರಬೇಕು. ನೆರೆಯವರ ಅಗತ್ಯವನ್ನು ತಿಳಿದುಕೊಂಡು ಹಂಚಿಕೊಳ್ಳಬೇಕು. ಹಾಗೆಯೇ, ನಮಗೆ ಇರುವ ಕೊರತೆಯನ್ನು ಅವರಿಂದ ನೀಗಿಸಲು ಸಾಧ್ಯವಿದ್ದರೆ ಸಂಕೋಚವಿಲ್ಲದೇ ಪಡೆದುಕೊಳ್ಳಬೇಕು. ತಾನು ಮತ್ತು ತನ್ನ ಸಂತೋಷವೆಂದು ಆತ್ಮಕೇಂದ್ರಿತವಾಗಿಯಾದರೂ ಇತರರ ಅಗತ್ಯ ಮತ್ತು ಸಮಸ್ಯೆಗಳ ಕಡೆಗೆ ಗಮನ ಹರಿಸುವಂತಹ ರೂಢಿಯನ್ನು ಮಕ್ಕಳಿಗೆ ಎಳೆಯ ಪ್ರಾಯದಿಂದಲೇ ಮಾಡಿಸಬೇಕಾಗುತ್ತದೆ. ಹಾಗೆಯೇ ಎಲ್ಲರೂ ಸಂತೋಷವಾಗಿರುವಾಗ, ನೆಮ್ಮದಿಯಿಂದ ಇರುವಾಗ ನಾನೂ ಅವರಲ್ಲಿ ಒಬ್ಬನಾಗಿ ಸಂತೋಷವಾಗಿ, ನೆಮ್ಮದಿಯಾಗಿರುತ್ತೇನೆ ಎಂಬ ಸಾಮುದಾಯಿಕ ವ್ಯಕ್ತಿತ್ವವೂ ಕೂಡ ಮನೋಸಾಮಾಜಿಕ ಆಸರೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಾಗುತ್ತದೆ.
ತುರ್ತನ್ನು ಗುರುತಿಸಬೇಕು
ತುರ್ತು ಎಂದರೆ ಆಗಿಂದಾಗಲೇ ಗಮನ ಹರಿಸಬೇಕಾದ ಮತ್ತು ಕೆಲಸ ಮಾಡಬೇಕಾದ ಪರಿಸ್ಥಿತಿ. ಅಂತಹ ತುರ್ತುಪರಿಸ್ಥಿತಿಗಳನ್ನು ಗುರುತಿಸುವಂತಹ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಗುರುತಿಸುವುದು ಮತ್ತು ಅದರ ಸಲುವಾಗಿ ಕೆಲಸ ಮಾಡುವುದನ್ನು ಕಲಿಸಿಕೊಡುವುದು ಪೋಷಕರ ಮತ್ತು ಶಿಕ್ಷಕ ಬಹು ಮುಖ್ಯ ಕೆಲಸವಾಗಿರುತ್ತದೆ.
ತುರ್ತುಪರಿಸ್ಥಿತಿ ಎಂದರೆ ಯಾರೋ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿ ಅವರಿಗೆ ವೈದ್ಯಕೀಯ ನೆರವು ನೀಡುವುದೆಂದಲ್ಲ. ಅಂತಹ ಕೆಲಸ ಮಾಡಲೂ ಮಕ್ಕಳಿಗೆ ಮೊದಲಿನಿಂದಲೂ ರೂಢಿ ಮಾಡಬೇಕಾಗಿರುವುದು ಸರಳವಾದ ಕೆಲಸಗಳಿಂದಲೇ.
ಉದಾಹರಣೆಗೆ, ನೆಲದ ಮೇಲೆ ನೀರು ಚೆಲ್ಲಿದೆ. ಬೇಗ ಬೇಗ ಹೋಗುವವರು ತಿಳಿಯದೆಯೇ ಅದರ ಮೇಲೆ ಕಾಲಿಟ್ಟರೆ ಜಾರಿ ಬೀಳಬಹುದು ಎಂದರೆ, ಕೂಡಲೇ ಅದನ್ನು ವರೆಸುವುದು. ಅದೇ ರೀತಿಯಲ್ಲಿ ಅನೇಕ ಸಂದರ್ಭಗಳನ್ನು ಮಕ್ಕಳಿಗೆ ಗುರುತಿಸಲು ಹೇಳಿಕೊಡಬೇಕು. ರಸ್ತೆಯಲ್ಲಿ ಬಾಳೆಹಣ್ಣು ಸಿಪ್ಪೆ ಬಿದ್ದಿರಬಹುದು. ಗಾಜಿನ ಚೂರು, ಮುಳ್ಳು ಇತ್ಯಾದಿಗಳು ಬಿದ್ದಿರಬಹುದು. ಅದು ಈಗ ನಮ್ಮ ಕಣ್ಣಿಗೆ ಬಿದ್ದಿದೆ. ನಾವು ಅದರಿಂದ ತೊಂದರೆಗೆ ಒಳಗಾಗದಂತೆ ತಪ್ಪಿಸಿಕೊಂಡಿದ್ದೇವೆ. ಆದರೆ ಇತರರಿಗೆ ಕೂಡ ತೊಂದರೆಯಾಗಬಾರದು ಎಂಬ ಕಳಕಳಿಯಿಂದ ಅದನ್ನು ಕೂಲೇ ಅಲ್ಲಿಂದ ತೆಗೆದುಹಾಕುವುದು.
ಹಸಿದವರಿಗೆ ಅನ್ನದ ತುರ್ತು, ನೀರಡಿಕೆಯಾಗಿರುವವರಿಗೆ ನೀರೊದಗಿಸುವ ತುರ್ತು, ಬಿದ್ದವರಿಗೆ ಏಳಲು ಕೈ ನೀಡುವ ತುರ್ತು, ಯಾರೋ ಎಲ್ಲಿಗೋ ಹೋಗಲು ಅಗತ್ಯವಿರುವಾಗ ಅವರನ್ನು ಕೂಡಲೇ ವಾಹನದಲ್ಲಿ ಒಯ್ಯುವ ತುರ್ತು. ಇಂತಹ ಸಣ್ಣ ಮತ್ತು ಸರಳ, ಆದರೆ ಬಹಳ ಮುಖ್ಯವಾದ ವಿಷಯ ಗಳಿಂದ ಮನೋ ಸಾಮಾಜಿಕ ಆಸರೆಯ ಪಾಠಗಳನ್ನು ಪ್ರಾರಂಭಿಸಬೇಕಾಗುತ್ತದೆ.
ಇದು ಮನೆಗಳಲ್ಲಿ ಅನೌಪಚಾರಿಕ ಶಿಕ್ಷಣವಾಗಿಯೂ, ಶಾಲೆಯಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣದ ಭಾಗವಾಗಿಯೂ ಇದ್ದಾಗ ಮಾತ್ರ ಮಕ್ಕಳು ಅದರೊಟ್ಟಿಗೆ ಬೆಳೆಯುತ್ತಾ ಸಹಕಾರ ಮತ್ತು ಕಳಕಳಿ ಇರುವಂತಹ ಪ್ರಜೆಗಳಾಗಿ ಸಮಾಜಕ್ಕೆ ದಕ್ಕುತ್ತಾರೆ.
ಮನೋಸಾಮಾಜಿಕ ಆಸರೆಗೆ ತೊಡಕಾಗಿರುವ ಕೆಲವು ಅಂಶಗಳು
1.ಯಾರೋ ತಪ್ಪಾಗಿ ಮಾಡಿರುವುದನ್ನು ನಾನೇಕೆ ಸರಿಪಡಿಸಬೇಕು ಎಂಬ ಧೋರಣೆ. ಕೆಲವರು ತಾವು ತಪ್ಪುಗಳನ್ನು ಮಾಡುವುದಿಲ್ಲ. ಹಾಗೆಯೇ ತಪ್ಪುಗಳನ್ನು ಮಾಡುವವರನ್ನು ಕಂಡು ಕೋಪ, ಸಿಡಿಮಿಡಿ ಮತ್ತು ಅಸಹನೆ. ಹಾಗಾದಾಗ, ತಪ್ಪು ಮಾಡಿದವರು ತಮ್ಮದೇ ತಪ್ಪಿನಿಂದಾಗಿ ತೊಂದರೆಗೀಡಾದಾಗ ತಾವು ಆ ತಪ್ಪು ಮಾಡದೇ ಇರುವುದರಿಂದ ತಮಗೆ ಅಂತಹ ತೊಂದರೆ ಬಂದಿಲ್ಲ ಮತ್ತು ಬರುವುದಿಲ್ಲ ಎಂಬ ಸಂತೋಷ ಬಹಳ ಮಂದಿಯಲ್ಲಿರುತ್ತದೆ. ಹಾಗಾಗಿ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು, ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು ಎಂಬಂತಹ ಧೋರಣೆಗಳಿಂದ ತಮ್ಮ ದಯಾಪರತೆಯನ್ನು ಅಥವಾ ಕಳಕಳಿಯನ್ನು ಅವರ ಕುರಿತಾಗಿ ತೋರಲು ಹೋಗುವುದಿಲ್ಲ. ಇಂತಹ ಧೋರಣೆ ಸೈಕೋಸೋಶಿಯಲ್ ಸಪೋರ್ಟ್‌ಗೆ ತೊಡಕಾಗುತ್ತದೆ.
2.ಯಾವಾಗ್ಲೂ ನಾನೇ ಯಾಕೆ ಮಾಡಬೇಕು? ಎಂಬ ಪ್ರಶ್ನೆ. ಬಹಳಷ್ಟು ಸಲ ತನ್ನ ಔದಾರ್ಯವನ್ನು, ತನ್ನದೇ ದಯಾಪರತೆಯನ್ನು, ತನ್ನ ಸಹಕಾರದ ಮನೋಭಾವವನ್ನು ತಾನೇ ಗುರುತಿಸಿಕೊಂಡು ಹೆಮ್ಮೆ ಪಡುವಂತಹ ಮಂದಿಗೆ ಯಾವಾಗ್ಲೂ ನಾನೇ ಯಾಕೆ ಮಾಡಬೇಕು ಎಂಬಂತಹ ಆಲೋಚನೆ ಬರಬಹುದು. ಆದರೆ, ಒಬ್ಬರಿಗೆ ಆಸರೆಯಾಗುವುದು ತನ್ನ ವಿಶೇಷ ಅಥವಾ ಶ್ರಮದ ಕೆಲಸ ಎಂದುಕೊಳ್ಳದೇ ಇದು ಬಹಳ ಸಹಜವಾದಂತಹ ಕೆಲಸ ಎಂಬ ಮನೋಭಾವವಿದ್ದರೆ ಈ ಪ್ರಶ್ನೆಗಳು ಬರುವುದಿಲ್ಲ.
3.ಇದರಿಂದ ನನಗೇನೂ ಪ್ರಯೋಜನವಾಗುವುದಿಲ್ಲ ಎಂಬ ಲಾಭ ನಷ್ಟದ ಆಲೋಚನೆ. ಮಾಡುವ ಕೆಲಸಗಳಿಗೆಲ್ಲಾ ಪ್ರತಿಫಲ ಬಯಸುವಂತಹ ಮಂದಿಗೆ ಇಂತಹ ಆಲೋಚನೆಗಳು ಬರುವುದು. ತನ್ನ ಆತ್ಮಸಂತೋಷಕ್ಕಾಗಿ, ಮಾನವೀಯ ದೃಷ್ಟಿಯಿಂದ ಕೆಲಸ ಮಾಡುವುದರಿಂದ ಲಾಭ ನಷ್ಟದ ಆಲೋಚನೆಗಳು ಬರುವುದಿಲ್ಲ. ಧರ್ಮಗಳಲ್ಲಿಯೂ ಸಹ ಲಾಭ ನಷ್ಟದ ಆಲೋಚನೆಗಳು ಇರದೇ ನೈತಿಕವಾದ ಜವಾಬ್ದಾರಿಯನ್ನು ಹೊತ್ತುಕೊಂಡು ಒಬ್ಬರಿಗೊಬ್ಬರು ನೆರವಾಗಲಿ ಎಂದೇ ಅನೇಕ ಔದಾರ್ಯದ ಮತ್ತು ಸಹಕಾರದ ವಿಷಯಗಳನ್ನು ಧಾರ್ಮಿಕವಾಗಿಯೇ ಪಾಲಿಸಬೇಕಾದ ಂಪ್ರದಾಯವನ್ನಾಗಿ ಮೂಡಿಸಲಾಗಿದೆ.
4.ಯಾವುದೇ ಕೆಲಸ ಮಾಡಿದರೂ ಅದರಿಂದ ನನಗೆ ಕೀರ್ತಿ, ಆರ್ಥಿಕವಾದ ಲಾಭ, ಹೆಸರು; ಹೀಗೆ ಏನಾದರೂ ದೊರಕಲೇ ಬೇಕು. ಇಲ್ಲಾಂದ್ರೆ ಮಾಡುವುದೇಕೆ? ಎಂಬ ಮನೋಭಾವ. ಹೆಸರು, ಹಣ, ಸಮಾಜದಲ್ಲಿ ಗುರುತರವಾದ ಸ್ಥಾನ ಇತ್ಯಾದಿಗಳ ಆಸೆಗಳನ್ನು ಹೊಂದಿರುವವರು ಎಲ್ಲರ ಎದುರು ಇರುವಷ್ಟು ಉದಾರಿಗಳಾಗಿ ತಾವು ಮಾತ್ರ ಇದ್ದಾಗ ಇರುವುದಿಲ್ಲ. ಇದರಿಂದ ಹುಸಿ ಮನೋಸಾಮಾಜಿಕ ಆಸರೆಗಳನ್ನು ಕೊಟ್ಟಂತಾಗುತ್ತದೆ. ಇಂತಹ ಹುಸಿ ಆಸರೆಗಳಿಂದ ಸಮಾಜಕ್ಕಾಗಲಿ, ವ್ಯಕ್ತಿಗಾಗಲಿ ಯಾವುದೇ ಒಳ್ಳೆಯದಾಗುವುದಿಲ್ಲ.
5.ಪ್ರಶಸ್ತಿಯಾದರೂ ದೊರೆಯಬೇಕು, ಪ್ರಶಂಸೆಯಾದರೂ ಸಿಕ್ಕಬೇಕು, ನೆರೆಹೊರೆಯಲ್ಲಿ ಹೊಗಳಬೇಕು ಎಂಬ ಪ್ರಶಂಸೆಯ ಆಕಾಂಕ್ಷೆ. ಪ್ರಶಂಸೆಯನ್ನು ಬಯಸಿಕೊಂಡೇ ಕೆಲಸ ಮಾಡುವುದು ಒಂದು ಬಗೆಯ ಮನೋರೋಗವೇ. ತಾವು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲೇ ಬೇಕೆಂದು ನಿರೀಕ್ಷಿಸುವುದು, ಪ್ರತ್ಯುಪಕಾರ ಮಾಡಲೇಬೇಕು ಎಂದು ನಿರ್ಬಂಧ ಹೇರುವುದು, ಪ್ರತ್ಯುಪಕಾರ ಮಾಡದಿದ್ದರೆ ಅಥವಾ ಬಹುಮಾನ್ಯತೆಯ ಕೃತಜ್ಞತೆಯನ್ನು ಅರ್ಪಿಸದಿದ್ದರೆ ಅವರನ್ನು ನಿಂದಿಸುವುದು, ತಾವು ಮಾಡಿದ ಸಹಾಯ ವ್ಯರ್ಥವಾಯಿತೆಂದು ಚಿಂತಿಸುವುದು ಅಥವಾ ಬಹಿರಂಗವಾಗಿಯೇ ಸಾಧಿಸಿ ಹೇಳುವುದು; ಇತ್ಯಾದಿಗಳೆಲ್ಲವೂ ಸೈಕೋಸೋಶಿಯಲ್ ಸಪೋರ್ಟ್ ಗೆ ಪೂರಕವಾಗಿರುವುದಿಲ್ಲ. ಅಷ್ಟು ಮಾತ್ರವಲ್ಲದೇ ಅದು ಸೇವೆ ಮತ್ತು ಸಹಾಯಕ್ಕೆ ಪೂರಕವಾಗಿರುವ ವಾತಾವರಣವನ್ನು ಕಲುಷಿತಗೊಳಿಸಿದಂತಾಗುತ್ತದೆ. ಹಾಗಾಗಿ ಮಾನಸಿಕವಾಗಿಯೇ ಮನೋಸಾಮಾಜಿಕ ಆಸರೆಯನ್ನು ನೀಡಲು ಮಕ್ಕಳಿಗೆ ಪ್ರಾರಂಭದಲ್ಲಿಯೇ ಸರಿಯಾದ ತರಬೇತಿಯನ್ನು ನೀಡಬೇಕು.
6. ಕೇಳದೇ ಇರುವ ಕಾರಣದಿಂದ ಮಾಡುವುದಿಲ್ಲ ಎಂಬ ಧೋರಣೆ. ಕೆಲವರಿಗೆ ತಮ್ಮನ್ನು ಸಹಾಯ ಕೇಳದೇ ಇದ್ದಾಗ ತಾವೇಕೆ ಮಾಡಬೇಕು? ಅಂತಹ ಸಹಾಯಗಳಿಗೆ ಬೆಲೆ ಸಿಗುವುದಿಲ್ಲ ಎಂಬ ಧೋರಣೆ ಇರುತ್ತದೆ. ಅಥವಾ ಹಾಗೆ ನಾವೇ ಮುಂದಾಗಿ ಸಹಾಯ ಮಾಡಲು, ಆಸರೆ ನೀಡಲು ಹೋದಾಗ ಅವರು ನಿರಾಕರಿಸಿದರೆ ತಾವು ಅಪಮಾನಕ್ಕೀಡಾಗುತ್ತೇವೆ, ಮುಖಭಂಗವಾಗುತ್ತದೆ ಎಂಬ ಹಿಂಜರಿಕೆಯೂ ಇರುತ್ತದೆ. ಇವುಗಳನ್ನು ಲೆಕ್ಕಿಸದೇ, ಆಸರೆಯಾಗುವುದು ಬಹಳ ಸಹಜವಾದ ವಿಷಯವೆಂಬಂತೆ ಮಕ್ಕಳಿಗೆ ರೂಢಿಸಬೇಕಾಗಿರುವುದು ನೈತಿಕ ಶಿಕ್ಷಣ.
ನೈತಿಕ ಶಿಕ್ಷಣದ ಉದ್ದೇಶ
ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಬಹು ಮುಖ್ಯವಾದ ಉದ್ದೇಶವೆಂದರೆ ಸಮಾಜದಲ್ಲಿ ಪರಸ್ಪರ ಆಸರೆಯಾಗುವಂತಹ ಮನೋಭಾವ ಸಹಜವಾಗಿಯೇ ರೂಢಿಯಾಗಬೇಕೆಂದು ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿರುವುದು. ಆದರೆ ನಮ್ಮ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ಅಥವಾ ಮಾರಲ್ ಎಜುಕೇಶನ್ ಅನ್ನು ಬಹಳ ನಿರ್ಲಕ್ಷಿಸುತ್ತಾರೆ. ಏಕೆಂದರೆ ಅವು ಪರೀಕ್ಷೆಗೆ ಅಂಕ ತೆಗೆದುಕೊಳ್ಳುವಂತಹ ವಿಷಯವಾಗಿರುವುದಿಲ್ಲ. ನೈತಿಕತೆಯನ್ನು ಕಡೆಗಣಿಸುವಂತಹ ಪಾಠವು ಶಾಲೆಯಿಂದಲೇ ಆರಂಭವಾಗುತ್ತದೆ. ನೈತಿಕ ಶಿಕ್ಷಣದಲ್ಲಿ ಯಾವುದೇ ಸ್ಪರ್ಧೆ ಇರುವುದಿಲ್ಲ, ಯಾವುದೇ ಪ್ರಶಸ್ತಿಪತ್ರವೋ, ಪ್ರಶಸ್ತಿಫಲಕವೋ ದೊರೆಯುವುದಿಲ್ಲ. ಅಂಕಗಳಿರುವುದಿಲ್ಲ. ಸಣ್ಣದಾಗಿ ಪರೀಕ್ಷೆ ಎಂದು ಇಟ್ಟರೂ ಅದು ಮುಖ್ಯ ಪದವಿಗೆ ಅಗತ್ಯವೇನೂ ಇರುವುದಿಲ್ಲ.
ಹೀಗೆ ಮಕ್ಕಳಿಗೆ ನೈತಿಕತೆಯನ್ನು ಅಲಕ್ಷಿಸಬಹುದು, ತಿರಸ್ಕರಿಸಬಹುದು, ಅದರಿಂದ ಏನೂ ಲಾಭವಾಗುವುದಿಲ್ಲ ಎಂಬ ಪಾಠ ಶಾಲೆಯಿಂದಲೇ ಆರಂಭವಾಗುತ್ತದೆ. ಇನ್ನುಮನೆಯಲ್ಲಿ ಪೋಷಕರು ತಾವು ನಂಬಿದ್ದನ್ನೇ ವೌಲ್ಯವೆಂದು ಸಾಧಿಸುತ್ತಾರೆ. ಹಾಗಾಗಿ ಮಕ್ಕಳು ಇಂದು ನೈತಿಕ ಶಿಕ್ಷಣ ಪಡೆಯುವುದರಲ್ಲಿ ಬಹಳ ಹಿಂದಿ ಬಿದ್ದಿದ್ದಾರೆ, ಮುಂದೆ ಅವರು ಸಮಾಜದಲ್ಲಿ ಮುಖ್ಯ ಪಾತ್ರವಹಿಸುವಾಗ ಅನೈತಿಕವಾಗಿ ನಡೆದುಕೊಂಡಾಗ ಇಡೀ ಸಮಾಜವೇ ಅವರ ವಿರುದ್ಧ ತಮ್ಮ ಟೀಕೆಗಳನ್ನು ಮಾಡುತ್ತಿರುತ್ತಾವೆ. ಬುಡಮೂಲ ಪೋಷಣೆ ಕೊಡದೆಯೇ, ನಂತರ ಟೀಕೆಗಳನ್ನು ಮಾಡುವುದಕ್ಕೆ, ಶಿಕ್ಷೆಗಳನ್ನು ಕೊಡುವುದಕ್ಕೆ ಮುಂದಾಗುವುದು ನಮ್ಮಲ್ಲೇನೂ ಅಪರೂಪವಲ್ಲ.