ಚುನಾವಣೆಗಳನ್ನೂ ಬಿಡದ ಜ್ಯೋತಿಷ್ಯ

Update: 2018-05-26 15:06 GMT

ಭಾಗ-45

ವೈಜ್ಞಾನಿಕ ಸತ್ಯಗಳನ್ನು ತಿಳಿಸುತ್ತಾ, ಸಮಾಜದಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ವಿಚಾರವಾದಿಗಳನ್ನು ಕಂಡರೆ ಸಮಾಜದಲ್ಲಿ ಕೆಲವರಿಗೆ ಆಗದು. ಅದೆಷ್ಟರ ಮಟ್ಟಿಗೆ ಎಂದರೆ, ಕೊಲೆ ಮಾಡಲೂ ಹೇಸುವುದಿಲ್ಲ. ಇಂತಹ ವಿಚಾರವಾದಿಗಳ ಕೊಲೆ ಪ್ರಕರಣಗಳು ನಮ್ಮ ಮುಂದೆ ಅದೆಷ್ಟೋ ನಡೆದಿವೆ. ನನಗೂ ಅಂತಹ ಬೆದರಿಕೆ ಕರೆಗಳು ಬಂದಿವೆ. ಕೊಲೆ ಯತ್ನಗಳೂ ನಡೆದಿವೆ. ಹಾಗಾಗಿ ನಾನು ಇದೀಗ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಜತೆಯಲ್ಲೇ ಇರಿಸಿಕೊಂಡು ತಿರುಗುವಂತಹ ಪರಿಸ್ಥಿತಿ.

ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಪಂಚಾಯತ್‌ನಿಂದ ಹಿಡಿದು ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ, ಯಾರು ಅಧಿಕಾರ ಪಡೆಯಲಿದ್ದಾರೆ ಎಂಬ ಜ್ಯೋತಿಷ್ಯ ಹೇಳುವವರಿಗೆ ಏನೂ ಕಮ್ಮಿಯಿಲ್ಲ. ಈ ಜ್ಯೋತಿಷಿಗಳನ್ನು ನಂಬಿ ಚುನಾವಣೆಗೆ ಸ್ಪರ್ಧಿಸುವವರೂ ಇದ್ದಾರೆ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ನಾನು ಹಲವು ಬಾರಿ ಈ ರೀತಿ ಭವಿಷ್ಯ ಹೇಳುವವರಿಗೆ ಸವಾಲು ಹಾಕಿದ್ದೆ. ನಾನು ಮುಂದಿಡುವ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿ ಆ ಉತ್ತರದಂತೆಯೇ ಫಲಿತಾಂಶವು ಹೊರಬಂದಲ್ಲಿ 10 ಲಕ್ಷ ರೂ.ಗಳನ್ನು ನೀಡುವುದಾಗಿ 2013ರ ವಿಧಾನಸಭಾ ಚುನಾವಣೆಯಲ್ಲೂ ಘೋಷಿಸಿದ್ದೆ. ಇದಕ್ಕಾಗಿ ಹಲವಾರು ಅರ್ಜಿಗಳು ಬಂದಿದ್ದವು. ಆ ಅರ್ಜಿಗಳಲ್ಲಿ ಕೆಲವರ ಒಂದೆರಡು ಉತ್ತರಗಳು ಸರಿಯಾಗಿದ್ದರೂ, ನಾನು ಕೇಳಿದ್ದಕ್ಕೆ ನಿಖರವಾದ ಉತ್ತರಗಳು ದೊರೆತಿರಲಿಲ್ಲ. ಹಾಗಾಗಿ ಆ 10 ಲಕ್ಷ ರೂ.ಗಳು ಯಾರಿಗೂ ಸಂದಾಯ ಮಾಡುವ ಪ್ರಮೇಯವೇ ಒದಗಿ ಬಂದಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೂ ಈ ಸವಾಲನ್ನು ಹಾಕಿದ್ದೆ. ಅಲ್ಲಿಯೂ ನಿಖರ ಫಲಿತಾಂಶ ದೊರೆತಿರಲಿಲ್ಲ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಈ ಸವಾಲು ಹಾಕಬೇಕೆಂದಿದ್ದೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸವಾಲು ಹಾಕುವ ಯೋಚನೆ ಇದೆ. ನೋಡೋಣ, ಏನಾಗುವುದೆಂದು. ನನ್ನ ಉದ್ದೇಶ ಇಷ್ಟೇ. ಈ ರೀತಿ ಚುನಾವಣೆಯ ಸಂದರ್ಭದಲ್ಲೂ ಜ್ಯೋತಿಷ್ಯದ ಹೆಸರಿನಲ್ಲಿ ಹಣ ಮಾಡುವ, ಮೋಸ ಮಾಡುವವರಿಗೆ ಬುದ್ಧಿ ಕಲಿಸಬೇಕೆಂಬುದು. ಜನಸಾಮಾನ್ಯರು ಇಂತಹ ಜ್ಯೋತಿಷಿಗಳಿಂದ ದೂರವಿರಬೇಕು ಎಂಬುದು. ಯಾರೋ ಒಬ್ಬ ವ್ಯಕ್ತಿ ಅಥವಾ ಪವಾಡಪುರುಷರೆಂದು ಹೇಳಿಸಿಕೊಳ್ಳುವವರ ಮಾತುಗಳು ನಿಜವಾಗುತ್ತದೆ ಎಂಬುದು ಅರ್ಥಹೀನ. ವೈಜ್ಞಾನಿಕ ಸತ್ಯಗಳಿಂದಾಚೆಗಿನ ಭವಿಷ್ಯ ಹೇಳುವ ಈ ಊಹಾಪೋಹಗಳು ಕೇವಲ ಮನುಷ್ಯನ ಮೆದುಳಿನ ಆಲೋಚನಾ ಶಕ್ತಿಯನ್ನು ಕುಂದಿಸುವ, ಆತನನ್ನು ಮಾನಸಿಕವಾಗಿ ದೌರ್ಬಲ್ಯಗೊಳಿಸುವ ಅರ್ಥಹೀನ ತರ್ಕವಷ್ಟೆ. ಇದನ್ನು ನಂಬಿ ಅದೆಷ್ಟೋ ಮಂದಿ ತಮ್ಮ ಸರ್ವಸ್ವವನ್ನೂ ಕಳೆದು ಕೊಂಡಿರುವುದು ನಮ್ಮ ಕಣ್ಣ ಮುಂದಿದ್ದರೂ ಮತ್ತೆ ಈ ನಕಲಿ ಜ್ಯೋತಿಷಿಗಳ ಬಲೆಯೊಳಗೆ ಬೀಳುತ್ತಿರುವುದನ್ನು ಕಂಡಾಗ ನನ್ನ ಮೈಮನವೆಲ್ಲಾ ಉರಿದು ಹೋಗುತ್ತದೆ.

ವೈಜ್ಞಾನಿಕ ಸತ್ಯಗಳನ್ನು ತಿಳಿಸುತ್ತಾ, ಸಮಾಜದಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ವಿಚಾರವಾದಿಗಳನ್ನು ಕಂಡರೆ ಸಮಾಜದಲ್ಲಿ ಕೆಲವರಿಗೆ ಆಗದು. ಅದೆಷ್ಟರ ಮಟ್ಟಿಗೆ ಎಂದರೆ, ಕೊಲೆ ಮಾಡಲೂ ಹೇಸುವುದಿಲ್ಲ. ಇಂತಹ ವಿಚಾರವಾದಿಗಳ ಕೊಲೆ ಪ್ರಕರಣಗಳು ನಮ್ಮ ಮುಂದೆ ಅದೆಷ್ಟೋ ನಡೆದಿವೆ. ನನಗೂ ಅಂತಹ ಬೆದರಿಕೆ ಕರೆಗಳು ಬಂದಿವೆ. ಕೊಲೆ ಯತ್ನಗಳೂ ನಡೆದಿವೆ. ಹಾಗಾಗಿ ನಾನು ಇದೀಗ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಜತೆಯಲ್ಲೇ ಇರಿಸಿಕೊಂಡು ತಿರುಗುವಂತಹ ಪರಿಸ್ಥಿತಿ. ಕಳೆದ ವರ್ಷದ ಘಟನೆ. ನಾನು ಮುಂಜಾನೆ ನನ್ನ ಮನೆಯಿಂದ ಸ್ವಿಮ್ಮಿಂಗ್ ಪೂಲ್‌ಗೆ ಹೋಗುತ್ತಿದ್ದ ವೇಳೆ ಇನ್ನಷ್ಟೇ ಬೆಳಕು ಮೂಡಬೇಕು. ಸ್ವಲ್ಪ ಕತ್ತಲು. ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ನನ್ನ ಕಾರಿನ ಎದುರಿನ ಟಯರ್ ತೋರಿಸಿ ಅದರಲ್ಲಿ ಗಾಳಿ ಇಲ್ಲ ಎಂದು ಹೇಳಿದರು. ನಾನು ಗಾಡಿ ನಿಲ್ಲಿಸಿ ಕಾರಿನ ಟಯರ್ ಚೆಕ್ ಮಾಡಬೇಕಿತ್ತು. ಆದರೆ ಆದಾಗಲೇ ನನಗೆ ಹಲವಾರು ಬೆದರಿಕೆ ಕರೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ನನ್ನ ಸುಪ್ತ ಮನಸ್ಸು ಜಾಗೃತಗೊಂಡಿತ್ತು. ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಮುಂಚೂಣಿಯಲ್ಲಿ ಗುರುತಿಸಿಕೊಂಡ ಬಳಿಕವಂತೂ ನನಗೆ ಬೆದರಿಕೆ ಮತ್ತಷ್ಟು ಹೆಚ್ಚಿತ್ತು. ಹಾಗಾಗಿ ನಾನು ಕಾರನ್ನು ನಿಲ್ಲಿಸುವುದನ್ನು ಬಿಟ್ಟು ನೇರವಾಗಿ ಸಮೀಪದ ಪೆಟ್ರೋಲ್ ಪಂಪ್ ಬಳಿಗೆ ಚಲಾಯಿಸಿದೆ. ಅಲ್ಲಿ ಇದ್ದ ಯುವಕ ನನ್ನ ಕಾರಿನ ನಾಲ್ಕೂ ಟಯರ್‌ಗಳನ್ನು ಪರಿಶೀಲಿಸಿದ. ಎಲ್ಲವೂ ಸರಿಯಾಗಿದೆ ಎಂದು ಹೇಳಿದ. ಅಲ್ಲಿಂದ ನನಗೂ ಹೊತ್ತಲ್ಲದ ಹೊತ್ತಿನಲ್ಲಿ, ಏಕಾಂಗಿಯಾಗಿ ಸುತ್ತಾಡುವುದರಿಂದ ನನ್ನ ಸುತ್ತ ಹುಟ್ಟಿಕೊಂಡಿರುವ ಶತ್ರುಗಳನ್ನು ಮತ್ತಷ್ಟು ಆಕರ್ಷಿಸಲಿದೆ ಎಂಬುದು ನನಗೂ ಅರಿವಾಯಿತು. ಸುಮಾರು ನಾಲ್ಕು ದಶಕಗಳಿಂದ ವಿಚಾರವಾದಿಯಾಗಿ, ಗ್ರಾಹಕ ಮತ್ತು ಮಾನವ ಹಕ್ಕುಗಳ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ನನಗೆ ಅರಿವಿಲ್ಲದೆಯೇ ಶತ್ರುಗಳ ಗುಂಪೂ ಹುಟ್ಟಿಕೊಂಡಿದೆ. ನಾನು ನನ್ನ ಹೋರಾಟವನ್ನು ಮುಂದುವರಿಸಿದ್ದೇನೆ. ವೈಜ್ಞಾನಿಕ ಸತ್ಯಗಳನ್ನು ಜನರಿಗೆ ತಿಳಿಯಪಡಿಸುತ್ತಾ, ಜನರಲ್ಲಿ ವೈಜ್ಞಾನಿಕ ಮನೋಭಾವ, ನ್ಯಾಯಕ್ಕಾಗಿನ ಹೋರಾಟವನ್ನು ಮುಂದುವರಿಸಿದ್ದೇನೆ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News