ಎಂಎಲ್‍ಸಿ ಸ್ಥಾನಕ್ಕೆ ಬೆಂಬಲಿಗರ ನೇಮಕಕ್ಕೆ ಯಡಿಯೂರಪ್ಪ-ಈಶ್ವರಪ್ಪ ಬಿಗಿ ಪಟ್ಟು?
ಶಿವಮೊಗ್ಗ, ಮೇ 30: ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಜೂನ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಶಿವಮೊಗ್ಗ ಜಿಲ್ಲೆಯ ಓರ್ವರಿಗೆ ಅವಕಾಶ ಸಿಗುವುದು ನಿಶ್ಚಿತವಾಗಿದ್ದು, ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪರವರು ತಮ್ಮ ಬೆಂಬಲಿಗರಿಗೆ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ತೀವ್ರ ಲಾಬಿ ನಡೆಸುತ್ತಿರುವ ಮಾಹಿತಿಗಳು ಬಿಜೆಪಿ ಪಾಳಯದಿಂದ ಕೇಳಿಬರುತ್ತಿದೆ.
ತಮ್ಮ ಕಟ್ಟಾ ಬೆಂಬಲಿಗ, ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಪರವಾಗಿ ಬಿ.ಎಸ್.ವೈ. ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಈಶ್ವರಪ್ಪ ರವರು, ಹಾಲಿ ಎಂಎಲ್‍ಸಿ ಎಂ.ಬಿ.ಭಾನುಪ್ರಕಾಶ್‍ಗೆ ಮತ್ತೊಮ್ಮೆ ಎಂಎಲ್‍ಸಿಯಾಗಿ ಮುಂದುವರಿಸುವಂತೆ ವರಿಷ್ಠರಿಗೆ ಆಗ್ರಹಿಸುತ್ತಿದ್ದಾರೆ. ಈ ಇಬ್ಬರು ನಾಯಕರು ತಮ್ಮ 'ಬೆಂಬಲಿಗರಿಗೆ' ಅವಕಾಶ ಕಲ್ಪಿಸಬೇಕೆಂಬ ನಿಲುವುಗಳಿಗೆ ಬಲವಾಗಿ ಅಂಟಿಕೊಂಡಿದ್ದಾರೆ. ಪಟ್ಟು ಸಡಿಲಿಸುತ್ತಿಲ್ಲ. ಬಿಜೆಪಿ ಮೂಲಗಳ ಅನುಸಾರ, ಎಸ್.ರುದ್ರೇಗೌಡಗೆ ಹೆಚ್ಚಿನ ಅವಕಾಶವಿದೆ. ಈ ಕಾರಣದಿಂದಲೇ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಗೆ, ಈಶ್ವರಪ್ಪ ಗೈರು ಹಾಜರಾಗಿದ್ದಾರೆಂದು ಕಾರಣ ಹೇಳಲಾಗುತ್ತಿದೆ.
ಇನ್ನೊಂದೆಡೆ ತಮ್ಮ ಆಯ್ಕೆಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಎಸ್.ರುದ್ರೇಗೌಡ ತಿಳಿಸಿದ್ದಾರೆ. ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ತಮ್ಮನ್ನು ಎಂಎಲ್‍ಸಿಯಾಗಿ ಆಯ್ಕೆ ಮಾಡುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದಾಗಿದೆ. ಆದರೆ ತಮ್ಮ ನಿಯೋಜನೆಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬ ವರದಿಗಳಲ್ಲಿ ಯಾವುದೇ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾದುದಾಗಿದೆ' ಎಂದು ಹೇಳಿದ್ದಾರೆ.
ಟಿಕೆಟ್ ಆಕಾಂಕ್ಷಿಯಾಗಿದ್ದರು: ಎಸ್.ರುದ್ರೇಗೌಡರವರು ಬಿ.ಎಸ್.ವೈ. ಕಟ್ಟಾ ಬೆಂಬಲಿಗರಾಗಿದ್ದಾರೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಅವರನ್ನು ಬಿ.ಎಸ್.ವೈ. ಕಣಕ್ಕಿಳಿಸಿದ್ದರು. ಕೇವಲ 278 ಮತಗಳ ಅಂತರದಲ್ಲಿ ರುದ್ರೇಗೌಡ ಪರಾಭವಗೊಂಡಿದ್ದರು.
ನಂತರ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಶಿವಮೊಗ್ಗ ನಗರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಈಶ್ವರಪ್ಪ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಸ್ವತಃ ಬಿ.ಎಸ್.ವೈ.ರವರು, ಎಸ್.ರುದ್ರೇಗೌಡರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಲಾಗುವುದು, ಈ ಮೂಲಕ ಅವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆ ಭರವಸೆಯಂತೆ ಬಿ.ಎಸ್.ವೈ.ರವರು ಎಸ್.ರುದ್ರೇಗೌಡರನ್ನು ಎಂ.ಎಲ್.ಸಿ. ಯಾಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬೆಂಬಲಿಗನಿಗೆ ಪಟ್ಟು: ಹಾಲಿ ಎಂಎಲ್‍ಸಿ ಎಂ.ಬಿ.ಭಾನುಪ್ರಕಾಶ್‍ರವರು ಕೆ.ಎಸ್.ಈಶ್ವರಪ್ಪ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಈಶ್ವರಪ್ಪ ರವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಬಿ.ಎಸ್.ವೈ. ವಿರುದ್ದ ಬಂಡೆದ್ದ ವೇಳೆ, ವರಿಷ್ಠರ ಹಂತದಲ್ಲಿ ಎಂ.ಬಿ.ಭಾನುಪ್ರಕಾಶ್‍ರವರು ಈಶ್ವರಪ್ಪ ಪರವಾಗಿ ನಿಂತುಕೊಂಡಿದ್ದರು. ಬಿ.ಎಸ್.ವೈ. ವರ್ತನೆಯ ಬಗ್ಗೆಯೂ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ಕಾರಣದಿಂದ ಎಂ.ಬಿ.ಭಾನುಪ್ರಕಾಶ್‍ರನ್ನು ಮತ್ತೊಮ್ಮೆ ಎಂ.ಎಲ್.ಸಿ.ಯಾಗಿಸಲು ಈಶ್ವರಪ್ಪ ಶತಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಿಜೆಪಿ ಪಾಳಯದಿಂದ ಕೇಳಿಬರುತ್ತಿದೆ.
ಮತ್ತೆ ಭಿನ್ನಾಭಿಪ್ರಾಯ?: ಕಳೆದ ಕೆಲ ವರ್ಷಗಳಿಂದ ನಾನಾ ಕಾರಣಗಳಿಂದ ಬಿ.ಎಸ್.ವೈ- ಈಶ್ವರಪ್ಪ ನಡುವೆ ವೈಮನಸ್ಸು ತಲೆದೋರಿತ್ತು. ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿಯೂ ಇದು ಕಾಣಿಸಿಕೊಂಡಿತ್ತು. ಆದರೆ ಈ ಇಬ್ಬರು ನಾಯಕರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಿದ್ದರು. ಈಶ್ವರಪ್ಪ ಗೆಲುವು ಸಾಧಿಸುವಲ್ಲಿ ಯಶ ಕಂಡಿದ್ದರು.
ಈ ಇಬ್ಬರು ನಾಯಕರ ನಡುವೆ ಎಲ್ಲವೂ ಸರಿಯಾಯಿತು ಎನ್ನುವ ವೇಳೆಗೆ, ಇದೀಗ ತಮ್ಮ ಬೆಂಬಲಿಗರಿಗೆ ಎಂಎಲ್‍ಸಿ ಪಟ್ಟ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಮುಂದೇನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
'ನಾಯಕರ ನಡುವೆ ಯಾವುದೇ ಗೊಂದಲವಿಲ್ಲ' : ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ
'ಎಂಎಲ್‍ಸಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವಿಷಯದಲ್ಲಿ ಯಾವುದೇ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾದುದಾಗಿದೆ. ಈಶ್ವರಪ್ಪರವರ ಜೊತೆಗೆ ತಾನು ಚರ್ಚೆ ನಡೆಸಿದ್ದು, ತನ್ನನ್ನು ಎಂಎಲ್‍ಸಿಯಾಗಿ ನೇಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ತಾನು ಬದ್ಧವಿರುವುದಾಗಿ' ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.