ಶಿವಮೊಗ್ಗ: ಸರಿಯಾಗಿ ಬೆಳಗುತ್ತಿಲ್ಲ ಸ್ಮಾರ್ಟ್‍ಸಿಟಿಯ ನೂರಾರು ಎಲ್‍ಇಡಿ ಸ್ಟ್ರೀಟ್ ಲೈಟ್‍ಗಳು

Update: 2018-06-01 17:23 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜೂ. 1: ಒಂದೆಡೆ ಮಹಾನಗರ ಪಾಲಿಕೆಯ ಅನುದಾನ ಬಳಸಿಕೊಳ್ಳಲು ಅವಕಾಶ ನೀಡದ ಅಧಿಕಾರಿಗಳು ಮತ್ತೊಂದಡೆ ಸ್ಮಾರ್ಟ್ ಸಿಟಿ ಯೋಜನೆಯಡಿಯೂ ಆಗದ ಕೆಲಸ, ಇದರಿಂದ ಶಿವಮೊಗ್ಗ ನಗರದ ಬೀದಿ ದೀಪ ನಿರ್ವಹಣೆಯು ಅಕ್ಷರಶಃ ಅವ್ಯವಸ್ಥೆಯ ಆಗರವಾಗಿ ಪರಿಣಮಿಸುವಂತೆ ಮಾಡಿದೆ. ಇದರಿಂದ ನಗರದ ಹಲವೆಡೆ ಕತ್ತಲು ಆವರಿಸುವಂತಾಗಿದೆ.

ಹೌದು. ನಗರದ ಬಹುತೇಕ ವಾರ್ಡ್‍ಗಳಲ್ಲಿ ಸಾವಿರಾರು ರೂ. ವೆಚ್ಚದಲ್ಲಿ ಅಳವಡಿಕೆ ಮಾಡಲಾಗಿರುವ ಎಲ್‍ಇಡಿ ಲೈಟ್‍ಗಳ ದುರಸ್ತಿ ಹಾಗೂ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹೊಸದಾಗಿ ಲೈಟ್‍ಗಳ ಅಳವಡಿಕೆಯೂ ಮಾಡುತ್ತಿಲ್ಲ. ಮಳೆಗಾಲ ಆರಂಭದ ಸಮಯದಲ್ಲಿ ಹಲವು ಏರಿಯಾಗಳಲ್ಲಿ ಕತ್ತಲು ಆವರಿಸುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಸಾರ್ವಜನಿಕರು ಶಿಕ್ಷೆ ಅನುಭವಿಸುವಂತಾಗಿದೆ. 

ಎಲ್‍ಇಡಿ ಲೈಟ್‍ಗಳ ಅವ್ಯವಸ್ಥೆಯ ಬಗ್ಗೆ ಕೆಲ ಕಾರ್ಪೋರೇಟರ್‍ಗಳು ಕೂಡ ಅಸಮಾಧಾನ ಹೊರಹಾಕುತ್ತಾರೆ. 'ಈಗಾಗಲೇ ಈ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. 'ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರಸ್ತುತ ಉದ್ಭವವಾಗಿರುವ ಎಲ್ಲ ಗೊಂದಲಗಳಿಗೆ ಅಧಿಕಾರಿಗಳೇ ಕಾರಣಕರ್ತರಾಗಿದ್ದಾರೆ' ಎಂದು ದೂರುತ್ತಾರೆ. 

ಕಗ್ಗಂಟು: ಕಳೆದ ಕೆಲ ತಿಂಗಳುಗಳ ಹಿಂದೆ ಬೀದಿ ದೀಪಗಳ ನಿರ್ವಹಣೆಗಾಗಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಈ ಹಿಂದಿನ ಆಯುಕ್ತ ಮುಲ್ಲೈ ಮುಹಿಲನ್‍ರವರು ಈ ಟೆಂಡರ್ ರದ್ದುಪಡಿಸಿದ್ದರು. ನಗರದ ಬೀದಿ ದೀಪಗಳ ನಿರ್ವಹಣೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನದಡಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಬೀದಿ ದೀಪಗಳ ನಿರ್ವಹಣೆ, ಹೊಸದಾಗಿ ಲೈಟ್‍ಗಳ ಅಳವಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಯೋಜನೆ ರೂಪಿಸಲಾಗಿಲ್ಲ. ಅನುದಾನವೂ ಬಿಡುಗಡೆಯಾಗಿಲ್ಲ. ಮತ್ತೊಂದೆಡೆ ಈ ಹಿಂದೆ ಬೀದಿ ದೀಪ ನಿರ್ವಹಣೆಗೆಂದು ಕರೆಯಲಾಗಿದ್ದ ಕೋಟ್ಯಾಂತರ ರೂ. ಟೆಂಡರನ್ನು ಕೂಡ ರದ್ದುಪಡಿಸಲಾಗಿರುವುದರಿಂದ, ಸದ್ಯ ನಿರ್ವಹಣೆ ದುಸ್ತರವಾಗಿ ಪರಿಣಮಿಸಿದೆ. 

ರಿಪೇರಿಯಾಗುತ್ತಿಲ್ಲ: ತಲಾ ಒಂದಕ್ಕೆ ಸುಮಾರು 20 ರಿಂದ 25 ಸಾವಿರ ರೂ. ವೆಚ್ಚ ಮಾಡಿ ವಿವಿಧ ವಾರ್ಡ್‍ಗಳಲ್ಲಿ ಸರಿಸುಮಾರು 600 ಕ್ಕೂ ಅಧಿಕ ಎಲ್‍ಇಡಿ ಲೈಟ್ ಅಳವಡಿಕೆ ಮಾಡಲಾಗಿದೆ. ಇದರಲ್ಲಿ ಹಲವು ಲೈಟ್‍ಗಳು ದುರಸ್ತಿಗೀಡಾಗಿ ಹಲವು ತಿಂಗಳಾಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಒಂದೇ ಒಂದು ಎಲ್‍ಇಡಿ ಲೈಟ್ ರಿಪೇರಿಯಾಗಿಲ್ಲ ಎಂದು ಕೆಲ ಕಾರ್ಪೋರೇಟರ್ ಗಳು ದೂರುತ್ತಾರೆ. 

'ಎಲ್‍ಇಡಿ ಲೈಟ್ ಅಳವಡಿಕೆ ಮಾಡಿದವರು ಇಂತಿಷ್ಟು ವರ್ಷಗಳ ಕಾಲ ಅವರೇ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಆದರೆ ಅವರು ಸಮರ್ಪಕವಾಗಿ ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ. ಮತ್ತೊಂದೆಡೆ ಹಾಲಿ ಬೀದಿ ದೀಪ ನಿರ್ವಹಣೆ ಜವಾಬ್ದಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಈ ಎಲ್‍ಇಡಿ ಲೈಟ್ ರಿಪೇರಿ ಹೊಣೆ ತಮಗೆ ಸೇರಿಲ್ಲವೆಂದು ಹೇಳುತ್ತಿದ್ದಾರೆ. 

ಮತ್ತೊಂದೆಡೆ ಸಾರ್ವಜನಿಕರು ಕಾರ್ಪೋರೇಟರ್ ಗಳಿಗೆ ಲೈಟ್ ರಿಪೇರಿ ಮಾಡಿಸುವಂತೆ ದುಂಬಾಲು ಬೀಳುತ್ತಿದ್ದಾರೆ. ಇನ್ನೊಂದೆಡೆ ಪಾಲಿಕೆಯ ಸಂಬಂಧಿಸಿದ ಎಂಜಿನಿಯರ್ ಗಳು ಸೂಕ್ತ ಪರಿಹಾರ ಕ್ರಮಕೈಗೊಳ್ಳುತ್ತಿಲ್ಲ. ಯಾರಿಗೆ ದೂರು ಹೇಳಬೇಕೆಂಬುವುದೆ ಗೊತ್ತಾಗದಂತಹ ಸ್ಥಿತಿ ನಿರ್ಮಾಣವಾಗಿದೆ' ಎಂದು ಕಾರ್ಪೋರೇಟರ್ ಸಿ.ಹೆಚ್.ಮಾಲತೇಶ್‍ರವರು ದೂರುತ್ತಾರೆ. 

ಒಟ್ಟಾರೆ ಶಿವಮೊಗ್ಗ ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಇನ್ನಾದರೂ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಬೀದಿ ದೀಪಗಳ ಸಮರ್ಪಕ ನಿರ್ವಹಣೆಯತ್ತ ಗಮನಹರಿಸಲಿದೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ. 

ಅಧಿಕಾರಿಗಳ ನಿರ್ಲಕ್ಷ್ಯ: ಉಪ ಮೇಯರ್ ವಿಜಯಲಕ್ಷ್ಮೀ ಪಾಟೀಲ್
'ನಗರದ ಹಲವೆಡೆ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕುರಿತಂತೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ತಮಗೆ ಬರುತ್ತಿವೆ. ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿದರೂ ರಿಸೀವ್ ಮಾಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಕಾಲಮಿತಿಯಲ್ಲಿ ಬೀದಿ ದೀಪ ಅವ್ಯವಸ್ಥೆ ಸರಿಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದು ಉಪ ಮೇಯರ್ ವಿಜಯಲಕ್ಷ್ಮೀ ಸಿ. ಪಾಟೀಲ್‍ರವರು ತಿಳಿಸಿದ್ದಾರೆ. 

ಪ್ರತಿಯೊಂದಕ್ಕೂ ಚುನಾವಣೆ ನೆಪ: ಕಾರ್ಪೋರೇಟರ್ ಸಿ.ಹೆಚ್.ಮಾಲತೇಶ್

ಪಾಲಿಕೆಯ ಕೆಲ ಅಧಿಕಾರಿ-ಸಿಬ್ಬಂದಿಗಳು ಜನರ ಕೆಲಸ ಮಾಡುವುದನ್ನೇ ಮರೆತಿದ್ದಾರೆ. ಪ್ರತಿಯೊಂದಕ್ಕೆ ಚುನಾವಣಾ ನೀತಿ ಸಂಹಿತೆಯ ನೆಪ ಮುಂದಿಡುತ್ತಾರೆ. ಪ್ರಸ್ತುತ ನಗರದ ಹಲವೆಡೆ ನೂರಾರು ಎಲ್‍ಇಡಿ ಲೈಟ್‍ಗಳು ದುರಸ್ತಿಗೀಡಾಗಿವೆ. ಇಲ್ಲಿಯವರೆಗೂ ಇವುಗಳ ರಿಪೇರಿಗೆ ಕ್ರಮಕೈಗೊಂಡಿಲ್ಲ. ಹೊಸ ಲೈಟ್‍ಗಳ ಅಳವಡಿಕೆಗೂ ಅವಕಾಶವಾಗುತ್ತಿಲ್ಲ. ತಕ್ಷಣವೇ ಆಯುಕ್ತರು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು' ಎಂದು ಪಾಲಿಕೆಯ ಕಾರ್ಪೋರೇಟರ್ ಸಿ.ಹೆಚ್.ಮಾಲತೇಶ್ ಆಗ್ರಹಿಸುತ್ತಾರೆ. 

'ಹೇಳುವವರು ಕೇಳುವವರ್ಯಾರು ಇಲ್ಲ: ವಿರೋಧ ಪಕ್ಷದ ನಾಯಕ ಮೋಹನ್ ರೆಡ್ಡಿ
'ಪಾಲಿಕೆಯಲ್ಲಿ ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದ್ದು, ಆಡಳಿತವು ಸಂಪೂರ್ಣ ಅವ್ಯವಸ್ಥೆ ಆಗರವಾಗಿದೆ. ಹತ್ತು ಹಲವು ಸಮಸ್ಯೆಗಳು ಎದುರಾಗಿದ್ದರೂ, ಅಧಿಕಾರಿಗಳು ಪರಿಹಾರಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಬೀದಿ ದೀಪಗಳ ನಿರ್ವಹಣೆಯಂತೂ ಅವ್ಯವಸ್ಥೆಯ ಆಗರವಾಗಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು' ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಮೋಹನ್ ರೆಡ್ಡಿಯವರು ಒತ್ತಾಯಿಸುತ್ತಾರೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News