ಇವಿಎಂ ನಿಷೇಧಿಸದ ಹೊರತು ಪ್ರಜಾಪ್ರಭುತ್ವಕ್ಕೆ ಉಳಿವಿಲ್ಲ
ಇಂದು ಜಗತ್ತಿನಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡುವ ಕೇವಲ ನಾಲ್ಕು ದೇಶಗಳಲ್ಲಿ ನಮ್ಮ ಭಾರತ ಒಂದು. ಅಂದ ಮಾತ್ರಕ್ಕೆ ಜಗತ್ತಿನ ಇತರೆಲ್ಲಾ ದೇಶಗಳು ತಂತ್ರಜ್ಞಾನದ ಬಳಕೆಯಲ್ಲಿ ಹಿಂದುಳಿದಿದೆ ಎಂದಲ್ಲ.ಇವಿಎಂನ್ನು ಕಂಡು ಹಿಡಿದ ದೇಶವೂ ಇವಿಎಂ ಬಳಸುತ್ತಿಲ್ಲ ಎಂದರೆ ಅದರಲ್ಲಿ ಬಹಳ ಗಂಭೀರವಾದ ಸಮಸ್ಯೆಯಿದೆ ಎಂದೇ ಅರ್ಥವಲ್ಲವೇ...?
ಭಾರತದಲ್ಲಿ ಇವಿಎಂ ಬಗ್ಗೆ ಇಷ್ಟೆಲ್ಲಾ ಅಪಸ್ವರ ಬಂದ ಮೇಲೂ ಇವಿಎಂಗೆ ಯಾವುದೇ ವಿಧದ ಕುಂದು ಬಂದಿಲ್ಲ ಎಂದರೆ ಇವಿಎಂನಿಂದ ಇಲ್ಲಿನ ಆಳುವ ವರ್ಗಕ್ಕೆ ದೊಡ್ಡ ಲಾಭವಿದೆ ಎಂದೇ ಅರ್ಥ.
ಇಂದು ಇವಿಎಂ ಸರಿಯಿಲ್ಲ ಅದರಿಂದಾಗಿ ಯರ್ರಾಬಿರ್ರಿಯಾಗಿ ಚುನಾವಣಾ ಅಕ್ರಮ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದರೆ ಬಿಜೆಪಿ ಅದರ ಹೊಣೆಯನ್ನು ಕಾಂಗ್ರೆಸ್ ಮೇಲೆ ಹೊರಿಸುತ್ತದೆ. ಇವಿಎಂನ್ನು ಚಲಾವಣೆಗೆ ತಂದದ್ದು ಕಾಂಗ್ರೆಸೇ ಹೊರತು ನಾವಲ್ಲ ಎಂದು ನುಣುಚಿಕೊಂಡು ಬಿಡುತ್ತದೆ. ಹೌದು ಇವಿಎಂನ್ನು ಪೂರ್ಣ ಪ್ರಮಾಣದಲ್ಲಿ ಚಲಾವಣೆಗೆ ತಂದದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ, ಆದರೆ ಅದರ ದುರ್ಬಳಕೆಯಾಗುತ್ತಿರುವುದು ಬಿಜೆಪಿ ಅವಧಿಯಲ್ಲಿ. ಒಂದು ವೇಳೆ ಕಾಂಗ್ರೆಸ್ ಇವಿಎಂ ದುರ್ಬಳಕೆ ಮಾಡುತ್ತಿದ್ದರೆ ಅದು 2014ರ ಚುನಾವಣೆಯಲ್ಲಿ ಅದರ ಇತಿಹಾಸದಲ್ಲೆಂದೂ ಕಂಡು ಕೇಳರಿಯದ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ. ಮೋದಿ ಈ ದೇಶದ ಪ್ರಧಾನಿಯೂ ಆಗುತ್ತಿರಲಿಲ್ಲ.
ಆದಾಗ್ಯೂ ಕಾಂಗ್ರೆಸ್, ಬಿಜೆಪಿಯ ಮಿತ್ರ ಪಕ್ಷ ಶಿವಸೇನೆಯೂ ಸೇರಿದಂತೆ ಇತರೆಲ್ಲಾ ಪಕ್ಷಗಳು ಇವಿಎಂ ವಿರುದ್ಧ ಆಗಾಗ ಮಾತೆತ್ತುತ್ತಿದ್ದರೂ ಅದು ಚಳವಳಿಯ ರೂಪ ಪಡೆದಿಲ್ಲ. ಮಾಯಾವತಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಮುಂತಾದವರು ಇವಿಎಂ ನಿಷೇಧದ ಕೂಗೆತ್ತಿದಾಗ ಕಾಂಗ್ರೆಸ್‌ನ ವೀರಪ್ಪಮೊಯ್ಲಿ ‘‘ನಾವು ಮುಂದುವರಿಯಬೇಕೇ ಹೊರತು, ಹಿಂದೆ ಹೋಗುವುದಲ್ಲ’’ ಎಂದು ಇವಿಎಂನ್ನು ಸಮರ್ಥಿಸಿದ್ದರು. ಹಾಗಾದರೆ ಇವಿಎಂ ಬಳಸದ ಅಮೆರಿಕ, ಚೀನಾ, ಜಪಾನ್, ಜರ್ಮನಿ, ಇಂಗ್ಲೆಂಡ್ ಮುಂತಾದ ದೇಶಗಳು ಇಂದಿಗೂ ಹಿಂದುಳಿದಿದೆಯಾ? ಇಂದಿಗೂ ಬೆರಳೆಣಿಕೆಯ ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ ಹೆಚ್ಚಿನವರು ಯಾರೂ ಇವಿಎಂ ಮೇಲಿನ ಆರೋಪದ ಬಗ್ಗೆ ಚಕಾರವೆತ್ತುತ್ತಿಲ್ಲ.
ಅನೇಕ ತಂತ್ರಜ್ಞರು ಇವಿಎಂನ್ನು ಹ್ಯಾಕ್ ಮಾಡುವುದು ನುರಿತ ತಂತ್ರಜ್ಞರಿಗೆ ಅಂತಹ ದೊಡ್ಡ ಸವಾಲಿನ ಕೆಲಸವೇನಲ್ಲ ಅಂದರೂ ಅವನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ನಮ್ಮ ಅನೇಕ ಬುದ್ಧಿಜೀವಿಗಳು, ರಾಜಕೀಯ ತಜ್ಞರು ಇವಿಎಂ ಮುಖಾಂತರ ಮೋಸ ಮಾಡಲಾಗುತ್ತಿದೆ ಎಂದರೆ ಇಂದಿಗೂ ನಂಬಲು ಸಿದ್ಧರಿಲ್ಲ. ಆದರೆ ಇವಿಎಂ ಹ್ಯಾಕ್ ಮಾಡಿರುವುದಕ್ಕೆ ಅನೇಕ ಸಾಂದರ್ಭಿಕ ಸಾಕ್ಷ್ಯಗಳು ಭಾರತದ ಉದ್ದಗಲಕ್ಕೂ ಲಭ್ಯವಾಗಿವೆ. ಇವಿಎಂನಲ್ಲಿ ನಡೆಸಲಾದ ಹೆಚ್ಚಿನೆಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರೆ, ಸ್ಥಳೀಯ ಸಂಸ್ಥೆಗಳಿಗೆ ನಡೆಸಲಾದ ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿ ಬಿಜೆಪಿಯ ಕಮಾಲ್ ಅಥವಾ ಮೋದಿ ಅಲೆ ಅಷ್ಟಾಗಿ ಕಾಣಲಿಲ್ಲ.
ಅಷ್ಟೆಲ್ಲಾ ದೂರವೇಕೆ... ಮೊನ್ನೆ ಮೊನ್ನೆ ನಡೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವಿಎಂ ಕಮಾಲ್ ಸ್ಪಷ್ಟವಾಗುತ್ತದೆ. ಮೊದಲು ಅಂಚೆ ಮತಗಳನ್ನು ಎಣಿಸಲಾಗಿತ್ತು. ಅಂಚೆ ಮತ ಎಣಿಸಿದ ಮೊದಲ ಸುತ್ತಿನಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಯಾವಾಗ ಅಂಚೆಮತ ಎಣಿಕೆ ಮುಗಿಯಿತೋ ಅಲ್ಲಿಂದ ಕಾಂಗ್ರೆಸ್‌ನ ಅವರೋಹಣ ಪ್ರಾರಂಭವಾಯಿತು. ಸಾಮಾನ್ಯವಾಗಿ ಮೇಲ್ಮಧ್ಯಮ ವರ್ಗದ ಸರಕಾರಿ ಉದ್ಯೋಗಿಗಳಲ್ಲಿ ದೊಡ್ಡ ಸಂಖ್ಯೆಯವರು ಬಿಜೆಪಿ ಬೆಂಬಲಿಗರು ಎಂಬ ನಂಬಿಕೆ ಸರ್ವೇ ಸಾಮಾನ್ಯ. ಆದರೆ ಈ ಬಾರಿ ರಾಜ್ಯ ಸರಕಾರದ ಉದ್ಯೋಗಿಗಳು ಬಹುಶಃ ಹಿಂದೆಂದಿಗಿಂತಲೂ ತುಸು ಹೆಚ್ಚಾಗಿ ಕಾಂಗ್ರೆಸ್‌ನ್ನು ಬೆಂಬಲಿಸಿರುವ ಸಾಧ್ಯತೆ ನಿಚ್ಚಳ. ಯಾಕೆಂದರೆ ಈ ಹಿಂದಿನ ಯಾವ ಸರಕಾರಗಳೂ ಮಾಡದಷ್ಟು ಅನುಕೂಲಗಳನ್ನು ಸಿದ್ದರಾಮಯ್ಯರ ಸರಕಾರ ಸರಕಾರಿ ಉದ್ಯೋಗಿಗಳಿಗೆ ಮಾಡಿದೆ. ಗರಿಷ್ಠ ಮಟ್ಟದ ವೇತನ ಏರಿಕೆ, ರಜೆಯಲ್ಲಿ ಹೆಚ್ಚಳ ಮತ್ತಿತರ ಭತ್ತೆಗಳ ಏರಿಕೆಯನ್ನೂ ಮಾಡಿದೆ. ಸಹಜವಾಗಿಯೇ ತಮ್ಮ ಹಿತ ಕಾಯ್ದವರ ಪರ ಸರಕಾರಿ ಉದ್ಯೋಗಿಗಳು ಮತ ಚಲಾಯಿಸಿದ್ದಾರೆ. ಅಂದರೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿ ಬೇರೆ ಬೇರೆ ಕಡೆ ಇದ್ದವರು ಅಂಚೆಮತವನ್ನು ಒಳ್ಳೆಯ ಪ್ರಮಾಣದಲ್ಲಿ ಕಾಂಗ್ರೆಸಿಗೇ ನೀಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿಪಕ್ಷವು ತನ್ನ ಮೂಲನೆಲೆಯಾದ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಸೀಟು ಗೆಲ್ಲಲಾಗಿಲ್ಲ ಎಂದರೆ ಅದನ್ನು ನಂಬುವುದು ಅಷ್ಟು ಸುಲಭವಲ್ಲ.
2016ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಗಲಭೆ ಪೀಡಿತ ಮುಝಫ್ಫರ್ ನಗರದ ಫಲಿತಾಂಶವನ್ನೇ ಗಮನಿಸಿ. ಶೇಕಡಾ ಎಪ್ಪತ್ತರಷ್ಟು ಮುಸ್ಲಿಂ ಮತದಾರರೇ ಇರುವ ಕ್ಷೇತ್ರದಲ್ಲಿ ಬಿಜೆಪಿ ಅನಾಯಾಸವಾಗಿ ಗೆದ್ದಿತ್ತು. ಅದೂ ಹತ್ತಾರು ಅಮಾಯಕ ಮುಸ್ಲಿಂ ಜೀವಗಳು ಬಲಿಯಾದ ಕ್ಷೇತ್ರ. ಅಲ್ಲಿ ಅಪ್ಪಿ ತಪ್ಪಿಯೂ ಒಂದೇ ಒಂದು ಮುಸ್ಲಿಂ ಓಟೂ ಬಿಜೆಪಿಗೆ ಬೀಳಲು ಸಾಧ್ಯವಿಲ್ಲದಷ್ಟು ಆಕ್ರೋಶ ಮುಸ್ಲಿಮರಿಗೆ ಬಿಜೆಪಿಯ ಮೇಲಿತ್ತು. ಮಾತ್ರವಲ್ಲ ಮುಸ್ಲಿಮೇತರರಲ್ಲಿ ದೊಡ್ಡ ಸಂಖ್ಯೆಯ ದಲಿತರಿರುವ ಕ್ಷೇತ್ರವದು. ದಲಿತರಂತೂ ಅಷ್ಟು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಲು ಇಲ್ಲದ ಪರಿಸ್ಥಿತಿ ಬೇರೆ ಇತ್ತು.
ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದ ಈ ವರೆಗೆ ಯಾವುದೇ ರಾಜ್ಯದ ಅಸೆಂಬ್ಲಿ ಉಪಚುನಾವಣೆ ಇರಲಿ, ಪಾರ್ಲಿಮೆಂಟ್ ಉಪ ಚುನಾವಣೆ ಇರಲಿ ಹೆಚ್ಚಿನ ಚುನಾವಣೆಗಳಲ್ಲಿ ಬಿಜೆಪಿ ಸೋಲುಂಡಿದೆ. ಅಲ್ಲೆಲ್ಲೂ ಇವಿಎಂ ಹ್ಯಾಕಿಂಗ್ ಆಗಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಉಪಚುನಾಣೆಗಳು ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕವಾಗಿರುವುದಿಲ್ಲ.ಇಂತಹ ಸಂದರ್ಭಗಳಲ್ಲಿ ಗೆಲುವಿಗಿಂತ ಸೋಲೇ ಅಪ್ಯಾಯಮಾನವಾಗಿರುತ್ತದೆ. ಇಂತಹ ಸೋಲುಗಳು ಬಿಜೆಪಿಯ ಮೇಲಿರುವ ಇವಿಎಂ ಹ್ಯಾಕಿಂಗಿನ ಆರೋಪವನ್ನು ಅಲ್ಲಗಳೆಯಲು ಸಹಾಯಕವಾಗುತ್ತವೆ.
ಉದಾಹರಣೆ ನೋಡಿ, 2014ರಲ್ಲಿ 282 ಪಾರ್ಲಿಮೆಂಟ್ ಸೀಟುಗಳನ್ನು ಗೆದ್ದು ಏಕಪಕ್ಷವಾಗಿ ಸರಳ ಬಹುಮತ ಪಡೆದಿದ್ದ ಬಿಜೆಪಿ ಈ ನಾಲ್ಕು ವರ್ಷಗಳಲ್ಲಿ ನಡೆದ ಉಪಚನಾವಣೆಗಳಲ್ಲಿ ಹನ್ನೆರಡು ಸ್ಥಾನಗಳನ್ನು ಕಳೆದುಕೊಂಡು ಈಗ ಇನ್ನೂರ ಎಪ್ಪತ್ತಕ್ಕೆ ಅದರ ಸ್ವಂತ ಸಂಸದರ ಸ್ಥಾನಗಳನ್ನು ಇಳಿಸಿಕೊಂಡಿವೆ.
ಇತ್ತೀಚೆಗೆ ಇವಿಎಂ ವಿರೋಧಿಗಳ ಕಣ್ಣಿಗೆ ಮಣ್ಣೆರಚಲು ವಿವಿಪ್ಯಾಟ್ ಎಂಬ ಇನ್ನೊಂದು ಹೊಸ ಆಟವನ್ನೂ ಆಡಲಾಯಿತು.
ಆದರೆ ವಿವಿಪ್ಯಾಟ್‌ನ ಮೂಲ ಉದ್ದೇಶವಾದ ಪಾರದರ್ಶಕತೆಯನ್ನು ಕಾಯಲು ಕೂಡಾ ಚುನಾವಣಾ ಆಯೋಗ ಸಿದ್ಧವಿರಲಿಲ್ಲ. ಒಂದು ವೇಳೆ ಏನಾದರೂ ಸಂಶಯವಿದ್ದರೆ ವಿವಿಪ್ಯಾಟ್ ಚೀಟಿಗಳನ್ನು ಎಣಿಸುವ ಆಯ್ಕೆಯೂ ಇದೆ ಎಂದು ಚುನಾವಣೆಗೆ ಮುಂಚೆ ಹೇಳಲಾಗಿತ್ತಾದರೂ ಕರ್ನಾಟಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಬಲವಾದ ಆರೋಪ ಕೇಳಿಬಂದು ವಿವಿಪ್ಯಾಟ್ ಮತ ಎಣಿಕೆಗೆ ಎಷ್ಟೇ ಒತ್ತಾಯ ಬಂದರೂ ಚುನಾವಣಾ ಆಯೋಗ ಒಂದೇ ಒಂದು ಬೂತಿನ ವಿವಿಪ್ಯಾಟ್ ಎಣಿಕೆಗೆ ಮುಂದಾಗಲಿಲ್ಲ.
ಅದೆಷ್ಟೋ ಬೂತುಗಳಲ್ಲಿ ಇರುವ ಒಟ್ಟು ಮತಗಳಿಗಿಂತ ಹೆಚ್ಚು ಮತಗಳು ಚಲಾವಣೆಯಾದದ್ದು ಬೆಳಕಿಗೆ ಬಂದಾಗಲೂ ವಿವಿಪ್ಯಾಟ್ ಎಣಿಕೆ ಮಾಡಲಿಲ್ಲ. ಹಾಗಾದರೆ ಈ ವಿವಿಪ್ಯಾಟ್ ಎಂಬ ಯಂತ್ರದ ಉದ್ದೇಶವಾದರೂ ಏನು? ರಾಜ್ಯದ ವಿವಿಧೆಡೆ ವಿವಿಪ್ಯಾಟ್‌ಗಳು ಮಕ್ಕಳ ಹಾಳಾದ ಆಟಿಕೆಗಳು ಬೀದಿಯಲ್ಲಿ ಎಸೆದದ್ದು ಸಿಗುವಂತೆ ಸಿಕ್ಕಿತು. ಆದಾಗ್ಯೂ ಅದರ ಕುರಿತಂತೆ ಚುನಾವಣಾ ಆಯೋಗ ಒಮ್ಮೆಯೂ ಬಾಯಿ ತೆರೆಯಲಿಲ್ಲ.
ವಿವಿಪ್ಯಾಟ್‌ನಲ್ಲಿ ನಾವು ಹಾಕಿದ ಮತಗಳು ಡಿಸ್‌ಪ್ಲೇ ಆಗಿ ನಮಗೆ ಖಚಿತವಾಗುತ್ತದೆ ಎನ್ನಲಾಗಿತ್ತು. ಅದಾಗ್ಯೂ ಹಲವೆಡೆ ಯಾವ ಚಿಹ್ನೆಗೆ ಮತ ಹಾಕಿದರೂ ಬಿಜೆಪಿಯ ಚಿಹ್ನೆಗೆ ಮತ ಬಿದ್ದದ್ದು ಸಾಬೀತಾಯಿತು. ಒಂದೊಮ್ಮೆ ಅದನ್ನು ತಾಂತ್ರಿಕ ದೋಷವೆಂದೇ ಹೇಳಿದರೂ, ಈ ತಾಂತ್ರಿಕ ದೋಷ ಕಂಡು ಬಂದೆಡೆಯೆಲ್ಲಾ ಯಾಕೆ ಬಿಜೆಪಿ ಪರ ತಾಂತ್ರಿಕ ದೋಷವೇ ಕಂಡು ಬಂದಿವೆ?
ವಿವಿಪ್ಯಾಟ್ ನಾವು ಚಲಾಯಿಸಿದ ಮತಗಳ ಡಿಸ್ ಪ್ಲೇ ಮಾಡುವುದೇನೋ ಸರಿ. ಆದರೆ ಅದು ಬಾಕ್ಸಿಗೆ ಬೀಳುವಾಗ ಅದೇ ಮುದ್ರಿತ ಚೀಟಿ ಬೀಳುತ್ತದೆಂದು ಏನು ಗ್ಯಾರಂಟಿ? ಇಷ್ಟೆಲ್ಲಾ ಮೋಸಗಳು ಖುಲ್ಲಂ ಖುಲ್ಲಾ ನಡೆಯುತ್ತಿರುವಾಗ ವಿವಿಪ್ಯಾಟ್‌ನ ಮುದ್ರಿತ ಚೀಟಿ ನಾವು ಚಲಾಯಿಸಿದಂತೆಯೇ ಬಾಕ್ಸಿಗೆ ಬೀಳುತ್ತದೆಂದು ಹೇಗೆ ಮತ್ತು ಯಾಕೆ ನಂಬಬೇಕು?
ಇತ್ತೀಚೆಗೆ ಚುನಾವಣಾ ಆಯೋಗ ಯಾವ ಮಟ್ಟಕ್ಕೆ ಇಳಿಯಿತೆಂದರೆ ಇವಿಎಂ ವಿರುದ್ಧ ಮಾತನಾಡಿದವರ ಮೇಲೆ ಕೇಸು ಜಡಿದು ಜೈಲಿಗೆ ತಳ್ಳುತ್ತೇವೆಂದು ಜನರನ್ನು ಭಯದ ವಾತಾವರಣದಲ್ಲಿ ಇಟ್ಟು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತನ್ನು ಹಿಸುಕಲು ಮುಂದಾಯಿತು. ಇವಿಎಂ ಮೇಲೆ ಯಾರಾದರೂ ಆರೋಪ ಮಾಡಿದರೆ ಅದನ್ನು ಸಾಬೀತು ಪಡಿಸಬೇಕು, ಸಾಬೀತುಪಡಿಸಲು ವಿಫಲವಾದಲ್ಲಿ ಶಿಕ್ಷೆ ನೀಡುವ ಬೆದರಿಕೆಗೆ ಆಯೋಗವೇ ಮುಂದಾಯಿತು. ಒಂದು ವೇಳೆ ಆರೋಪ ಸತ್ಯವಾಗಿರುತ್ತಿದ್ದರೆ ಇದೇ ಕಾಯ್ದೆದೆಯ ಪ್ರಕಾರ ಆಯೋಗದ ಮೇಲೆಯೂ ಕೇಸು ಜಡಿದು ಜೈಲಿಗಟ್ಟುವ ವಿಚಾರ ಯಾಕೆ ಆ ಕಾಯ್ದೆಯಲ್ಲಿಲ್ಲ?
ಮುಂಬರುವ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆ ಏನಾದರೂ ಇವಿಎಂ ನಲ್ಲೇ ನಡೆದರೆ ಅಲ್ಲಿಯೂ ಬಿಜೆಪಿ ಬಹುಮತಗಳಿಸುವುದರಲ್ಲಿ ಸಂಶಯವೇ ಬೇಡ. ಇವಿಎಂ ಚುನಾವಣೆಯಾದರೆ ಮುಂದಿನ ವರ್ಷ ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆಯಲ್ಲೂ ಬಿಜೆಪಿಯೇ ಸ್ಪಷ್ಟ ಬಹುಮತ ಪಡೆಯಲಿದೆ.
ನಮ್ಮ ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಇವಿಎಂ ನಿಷೇಧ ತುರ್ತಾಗಿ ಆಗಬೇಕಿದೆ. ಇದಕ್ಕಿರುವ ಒಂದೇ ಒಂದು ದಾರಿ ಎಲ್ಲಾ ವಿರೋಧ ಪಕ್ಷಗಳು ಇನ್ನು ಮುಂದೆ ಯಾವುದೇ ಚುನಾವಣೆ ಇವಿಎಂ ಮುಖಾಂತರ ನಡೆಯುವುದಾದರೆ ಒಕ್ಕೊರಲಿನಲ್ಲಿ ಚುನಾವಣಾ ಬಹಿಷ್ಕಾರ ಹಾಕುವುದು.