ಮೋದಿ ನೀತಿಗಳನ್ನು ಬಹಿರಂಗವಾಗಿ ಟೀಕಿಸುವ ಅಪರೂಪದ ಬಿಜೆಪಿ ನಾಯಕಿ ಸಾಧ್ವಿ ಸಾವಿತ್ರಿಬಾಯಿ ಫುಲೆ

Update: 2018-06-05 18:28 GMT

ಭಾಗ-2

‘‘ಈ ಮಾರ್ಗದಲ್ಲಿ ಬಹುಶಃ ಭೀತಿಯೇ ವಿಲಾಸ. ಇತರರ ನೋವನ್ನು ಅನುಭವಿಸಿ, ಅದರ ಯಾತನೆಯಲ್ಲಿ ಬದುಕುವುದೇ ಜೀವನ. ನಮ್ಮ ಜನರ ಮೇಲೆ ನಡೆಯುವ ದೌರ್ಜನ್ಯವನ್ನು ನೋಡಿ. ಅವರ ಗ್ರಾಮಗಳನ್ನು ಹೇಗೆ ಸುಟ್ಟುಹಾಕಲಾಗುತ್ತಿದೆ, ಕುದುರೆ ಸವಾರಿ ಮಾಡಿದ್ದಕ್ಕೆ ಅಥವಾ ಮೀಸೆ ಬೆಳೆಸಿದ್ದಕ್ಕೆ ಅವರನ್ನು ಹೇಗೆ ಹತ್ಯೆ ಮಾಡಲಾಗುತ್ತಿದೆ. ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಹೇಗೆ ಕೊಲ್ಲಲಾಗುತ್ತಿದೆ ನೋಡಿ’’ ಎಂದು ಫುಲೆ ಹೇಳುತ್ತಾರೆ. 

ಫುಲೆ ಇಷ್ಟು ನಿರ್ಭೀತರಾಗಿರಲು ಏನು ಕಾರಣ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಮುಂದಿನ ಪರಿಣಾಮಗಳ ಬಗ್ಗೆ ಅವರಿಗೆ ಯೋಚನೆ ಇಲ್ಲವೇ? ಬಹುಶಃ ಅವರಿಗೆ ಬಾಲ್ಯದಿಂದಲೇ ಹೆದರಿಕೆ ಎಂದರೇನು ಎನ್ನುವುದೇ ತಿಳಿಯದು ಅಥವಾ ಹಲವು ವರ್ಷಗಳ ಹಿಂದೆ ಅವರು ತೆಗೆದುಕೊಂಡ ಪ್ರತಿಜ್ಞೆ ಇದಕ್ಕೆ ಕಾರಣವಾಗಿರಬಹುದು.

ಹುಟ್ಟೂರು ಬಹರೀಚ್‌ನ ಹುಸೈನ್‌ಪುರ ಮೃದಂಗಿ ಗ್ರಾಮದಲ್ಲಿ, ಮೇಲ್ವರ್ಗದವರಾಗಲೀ, ಕೆಳವರ್ಗದವರಾಗಲೀ ಯಾರೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಕೃಷಿಕೂಲಿ ಕಾರ್ಮಿಕರಾಗಿದ್ದ ಈಕೆಯ ತಂದೆಯ ಯೋಚನೆಯೇ ಭಿನ್ನ. ಸಾವಿತ್ರಿ ಪ್ರತಿದಿನ ಮುಂಜಾನೆ ಶಾಲೆಗೆ ಗೋಕುಲಪುರ ಗ್ರಾಮಕ್ಕೆ ಒಂದೂವರೆ ಕಿಲೋಮೀಟರ್ ನಡೆಯಬೇಕಿತ್ತು. ಆಕೆ ಶಾಲೆಯ ಏಕೈಕ ವಿದ್ಯಾರ್ಥಿನಿ. ಭಿನ್ನವಾಗಿದ್ದು ಎಲ್ಲ ಭೀತಿಯನ್ನು ಮೆಟ್ಟಿನಿಲ್ಲಲು ಬಹುಶಃ ಇದು ಕಾರಣ.
ಎಂಟನೇ ತರಗತಿಯಲ್ಲಿ ಒಮ್ಮೆ ಈಕೆ ತಮ್ಮ ಪ್ರಾಂಶುಪಾಲರನ್ನು ಕುರಿತು, ‘‘ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಇರುವ ವಿದ್ಯಾರ್ಥಿವೇತನವನ್ನು ನೀವೇಕೆ ನನಗೆ ಕೊಡುತ್ತಿಲ್ಲ’’ ಎಂದು ಪ್ರಶ್ನಿಸಿದ್ದರು. ‘‘ಏಕೆಂದರೆ ನನ್ನ ಕಾರಣದಿಂದಾಗಿ ನೀನು ಪ್ರಥಮ ದರ್ಜೆ ಪಡೆದಿರುವುದು’’ ಎಂದು ಪ್ರಾಚಾರ್ಯರು ಉತ್ತರಿಸಿದ್ದರು ಎಂದು ಫುಲೆ ನೆನಪಿಸಿಕೊಳ್ಳುತ್ತಾರೆ: ‘‘ನಾನು ಬಿಡದೆ, ‘ನಾನು ಚೆನ್ನಾಗಿ ಓದಿದ ಕಾರಣದಿಂದ ನಾನು ಪ್ರಥಮದರ್ಜೆ ಪಡೆದೆ’ ಎಂದು ತಿರುಗೇಟು ನೀಡಿದೆ.’’
ಇದಕ್ಕಾಗಿ ಪ್ರಾಂಶುಪಾಲರು ಈಕೆಯ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ತಡೆ ಹಿಡಿದರು. ಮೂರು ವರ್ಷ ಕಾಲ ಮನೆಯಲ್ಲೇ ಕುಳಿತ ಫುಲೆ, ತನ್ನ ದಾಖಲೆಗಳನ್ನು ಪಡೆಯುವ ಸಲುವಾಗಿ ಪ್ರಾಚಾರ್ಯರ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ‘‘ಆ ಬಳಿಕ ನನ್ನ ಗುರು ಅಕ್ಷಯವಾರ್ ನಾಥ್ ಕನ್ನೋಜಿಯಾ ನನ್ನನ್ನು ಬಿಎಸ್ಪಿ ನಾಯಕಿ ಮಾಯಾವತಿ ಬಳಿಗೆ ಕರೆದೊಯ್ದರು’’ ಎಂದು ನೆನಪಿಸಿಕೊಳ್ಳುತ್ತಾರೆ.

ರಾಜಕೀಯದ ಮೊದಲ ಹೆಜ್ಜೆ
1995ರಲ್ಲಿ ಮಾಯಾವತಿ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಆದರೆ ಅಧಿಕಾರಾವಧಿ ಕೇವಲ ಐದು ತಿಂಗಳಿಗೆ ಸೀಮಿತವಾಯಿತು. ಫುಲೆ ತಮ್ಮ ಅಹವಾಲನ್ನು ಮಾಯಾವತಿಯ ಸಾರ್ವಜನಿಕ ದರ್ಬಾರ್‌ನಲ್ಲಿ ಹೇಳಿಕೊಂಡರು. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಮಾಯಾವತಿ ಸೂಚಿಸಿದರು. ‘‘ಪ್ರಾಚಾರ್ಯರಿಂದ ನನ್ನ ಪ್ರಮಾಣಪತ್ರಗಳು ಸಿಗುವಂತೆ ಅವರು ಮಾಡಿಕೊಟ್ಟರು. ಬೆಹನ್‌ಜಿ ನನಗೆ ಸ್ಫೂರ್ತಿಯಾದರು. ಅವರು ಮುಖ್ಯಮಂತ್ರಿಯಾಗುವುದಾದರೆ ನಾನೇಕೆ ಆಗಬಾರದು ಎಂದು ಯೋಚಿಸುವಂತೆ ಮಾಡಿದರು’’ ಎಂದು ನೆನಪಿನ ಬುತ್ತಿ ತೆರೆಯುತ್ತಾರೆ.
ಸ್ಥಳೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ಫುಲೆ ಬಿಎ ವರೆಗೂ ಶಿಕ್ಷಣ ಮುಂದುವರಿಸಿದರು. ಆದರೆ ಅವರ ಹೊಸ ಗುರಿ ರಾಜಕೀಯವಾಗಿತ್ತು. ಉತ್ತರ ಪ್ರದೇಶದಲ್ಲಿ 1995ರ ಅಕ್ಟೋಬರ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಕೆಲವೇ ತಿಂಗಳಲ್ಲಿ, ಲಕ್ನೋದಲ್ಲಿ ದಲಿತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರಾಂತೀಯ ಸಶಸ್ತ್ರ ಸೀಮಾ ಬಲ ಗುಂಡು ಹಾರಿಸಿತು. ಫುಲೆಯವರ ಕಣಕಾಲಿನ ಹಿಂಭಾಗಕ್ಕೆ ಗುಂಡು ನಾಟಿ ಪ್ರಜ್ಞೆ ಕಳೆದುಕೊಂಡರು. ‘‘ನಾನು ಆಸ್ಪತ್ರೆಯಲ್ಲಿ ಚೇತರಿಸಿಕೊಂಡೆ. ನನ್ನನ್ನು ಸೆರೆಮನೆಗೆ ಕಳುಹಿಸಲಾಯಿತು’’ ಎಂದು ನೆನಪಿಸಿಕೊಳ್ಳುತ್ತಾರೆ. ‘‘ಆ ವೇಳೆಗೆ ನಾನು ಎಂದೂ ವಧುವಾಗಲಾರೆ. ಗಂಡ ಮತ್ತು ಮನೆಗೆ ಸೀಮಿತವಾಗಲಾರೆ. ಬಹುಜನ ಸಮಾಜಕ್ಕಾಗಿ ದುಡಿಯುತ್ತೇನೆ ಎಂಬ ಗಟ್ಟಿ ನಿರ್ಧಾರ ಕೈಗೊಂಡೆ.’’
ವಧು? ಫುಲೆಗೆ ಆರು ವರ್ಷ ಇದ್ದಾಗಲೇ ಆಕೆಯ ಮದುವೆ ಮುಗಿದಿತ್ತು. ಈ ಘಟನೆ ಅವರಿಗೆ ನೆನಪಿಲ್ಲ. ಆದರೆ ವಿವಾಹ ಪ್ರಕ್ರಿಯೆ ಪೂರ್ಣಗೊಳ್ಳುವುದು ಮಗು ದೊಡ್ಡವಳಾಗಿ ಗಂಡನ ಮನೆ ಸೇರಿದಾಗ. ‘‘ಜೈಲಿನಿಂದ ಬಿಡುಗಡೆಯಾದ ಬಳಿಕ ತಂದೆ ತಾಯಿಯರಲ್ಲಿ, ನಾನು ವಿವಾಹವಾಗುವುದಿಲ್ಲ. ಬಹುಜನ ಸಮಾಜಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದೆ. ಆ ಬಳಿಕ ಪೋಷಕರು ಹಾಗೂ ಗಂಡನ ಪೋಷಕರು ಪರಸ್ಪರ ಚರ್ಚಿಸಿ, ಆತನ ವಿವಾಹವನ್ನು ತಂಗಿಯ ಜತೆ ನೆರವೇರಿಸಲು ಸಮ್ಮತಿ ಸೂಚಿಸಿದರು.
ವಿವಾಹ ದಿಬ್ಬಣ ಮನೆಬಾಗಿಲಿಗೆ ಬಂದಾಗ ಫುಲೆ, ಬಾಲ್ಯದ ಪತಿಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸಿದರು. ಜತೆಗೆ ಎಂದೂ ತಾನು ವಿವಾಹವಾಗುವುದಿಲ್ಲ. ಬದಲಾಗಿ ದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತೇನೆ ಎಂಬ ಪ್ರತಿಜ್ಞೆ ಕೈಗೊಂಡರು. ‘‘ನನ್ನ ಸಮಾಜವೇ ನನ್ನ ಕುಟುಂಬ. ನಾನು ಎಂದಿಗೂ ಮನೆ ಅಥವಾ ಒಂದಿಂಚು ಭೂಮಿಯನ್ನೂ ಹೊಂದುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಚುನಾವಣೆಗೆ ಹಣ ಸೇರಿದಂತೆ ನಾನು ಏನೇನು ಹೊಂದಿದ್ದೇನೆಯೋ ಅದೆಲ್ಲ ಬಹುಜನ ಸಮಾಜದಿಂದ ಬಂದದ್ದು.’’
2000ದಲ್ಲಿ ಫುಲೆಯವರನ್ನು ಬಹುಜನ ಸಮಾಜ ಪಕ್ಷದಿಂದ ಅಮಾನತು ಮಾಡಲಾಯಿತು. ಆದರೆ ಯಾಕಾಯಿತು ಎಂಬ ಸುಳಿವು ಕೂಡಾ ತಮಗಿಲ್ಲ ಎಂದು ಫುಲೆ ಹೇಳುತ್ತಾರೆ. ಬಿಜೆಪಿಗೆ ಸೇರಿ ಎರಡು ಬಾರಿ ಸೋತು 2012ರಲ್ಲಿ ಶಾಸಕಿಯಾದರು. 2014ರಲ್ಲಿ ಬಹರೀಚ್ ಸಂಸದೆಯಾದರು. ಬಿಜೆಪಿ ವಿರುದ್ಧ ಕೂಡಾ ರಣಕಹಳೆ ಮೊಳಗಿರುವುದರಿಂದ ತನ್ನ ಸ್ವಂತ ಹಾದಿಯನ್ನು ಮತ್ತೊಮ್ಮೆ ಏಕಾಂಗಿಯಾಗಿ ಹಿಡಿಯಲು ಸಜ್ಜಾದಂತಿದೆ.
‘‘ಈ ಮಾರ್ಗದಲ್ಲಿ ಬಹುಶಃ ಭೀತಿಯೇ ವಿಲಾಸ. ಇತರರ ನೋವನ್ನು ಅನುಭವಿಸಿ, ಅದರ ಯಾತನೆಯಲ್ಲಿ ಬದುಕುವುದೇ ಜೀವನ. ನಮ್ಮ ಜನರ ಮೇಲೆ ನಡೆಯುವ ದೌರ್ಜನ್ಯವನ್ನು ನೋಡಿ. ಅವರ ಗ್ರಾಮಗಳನ್ನು ಹೇಗೆ ಸುಟ್ಟುಹಾಕಲಾಗುತ್ತಿದೆ, ಕುದುರೆ ಸವಾರಿ ಮಾಡಿದ್ದಕ್ಕೆ ಅಥವಾ ಮೀಸೆ ಬೆಳೆಸಿದ್ದಕ್ಕೆ ಅವರನ್ನು ಹೇಗೆ ಹತ್ಯೆ ಮಾಡಲಾಗುತ್ತಿದೆ. ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಹೇಗೆ ಕೊಲ್ಲಲಾಗುತ್ತಿದೆ ನೋಡಿ’’ ಎಂದು ಫುಲೆ ಹೇಳುತ್ತಾರೆ. ಜನರ ಯಾತನೆಯ ಕಾರಣದಿಂದಲೇ ಬಹುಜನರ ಹಕ್ಕಿನ ಹೋರಾಟಕ್ಕಾಗಿ ಎದ್ದು ನಿಂತಿದ್ದಾರೆ. ಈ ಕಾರಣದಿಂದಾಗಿಯೇ ಮೋದಿ ಅಥವಾ ಪಕ್ಷದ ಅವಕೃಪೆಯ ಬಗ್ಗೆ ಕೂಡಾ ತಲೆ ಕೆಡಿಸಿಕೊಂಡಿಲ್ಲ.
ಕೃಪೆ: scroll.in

Writer - ಎಜಾಝ್ ಅಶ್ರಫ್

contributor

Editor - ಎಜಾಝ್ ಅಶ್ರಫ್

contributor

Similar News

ಜಗದಗಲ
ಜಗ ದಗಲ