ಯೋಗಿ ಜೈಲಲ್ಲಿ ಕೊಳೆಯುತ್ತಿರುವ ದಲಿತ ಬಾಲಕರು

Update: 2018-06-07 18:17 GMT

ಭಾಗ-1

‘‘ಕೋಚಿಂಗ್ ಕ್ಲಾಸ್ ಬಗ್ಗೆ ಶಿಕ್ಷಕರಲ್ಲಿ ಕೇಳಲು ಸಚಿನ್ ಹೋಗಿದ್ದ. ಆಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಏನು ಮಾಡಲು ಸಾಧ್ಯ? ನಮ್ಮ ಜಾತಿ ವ್ಯವಸ್ಥೆಯನ್ನೇ ಶಪಿಸಬೇಕು. ಆತ ಜಾಟ್ ಸಮುದಾಯಕ್ಕೆ ಸೇರಿದವನೇ ಅಥವಾ ಚಮ್ಮಾರನೇ ಎಂದು ವಿಚಾರಿಸಿಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹದಿನೈದು ವರ್ಷದ ಹುಡುಗ ಯಾವ ಅಪರಾಧ ಮಾಡಲು ಸಾಧ್ಯ?’’ ಎಂದು ಧರ್ಮವೀರ್ ಪ್ರಶ್ನಿಸುತ್ತಾರೆ.

‘‘ಪೊಲೀಸ್ ಬಂಧನದಲ್ಲಿರುವ ನನ್ನ ಮಗನ ಬಗ್ಗೆ ಕೇಳಿದಾಗಲೆಲ್ಲ ‘ಚಮ್ಮಾರರು ಮಜಾ ಅನುಭವಿಸುತ್ತಿದ್ದಾರೆ’ ಎಂಬುದಾಗಿ ಹೇಳುತ್ತಾರೆ’’ಎನ್ನುತ್ತಾರೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ 62 ವರ್ಷದ ಧರ್ಮವೀರ್ ಸಿಂಗ್. ನನ್ನ ಮಗ ಸಚಿನ್ ಸಂತ ದೇವಾಶ್ರಮ್ ಶಾಲೆಯ ವಿದ್ಯಾರ್ಥಿ. ಆತನಿಗೆ 15 ವರ್ಷ. ಎಪ್ರಿಲ್ 2ರಂದು ಪೊಲೀಸರು ಆತನನ್ನು ಬಂಧಿಸಿ, 20 ವರ್ಷ ಎಂದು ಸುಳ್ಳುಹೇಳಿ ಜೈಲಿಗೆ ತಳ್ಳಿದ್ದಾರೆ ಎಂದು ಹಳೆಕಥೆಯನ್ನು ನೆನೆಸಿಕೊಂಡು ಧರ್ಮವೀರ್ ಕಣ್ಣೀರಿಡುತ್ತಾರೆ.

ಆದಿತ್ಯನಾಥ್ ಸರಕಾರದ ಪೊಲೀಸರು, ಸಚಿನ್‌ನನ್ನು ಹತ್ಯೆ ಪ್ರಯತ್ನ, ಡಕಾಯಿತಿ ಸೇರಿದಂತೆ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ. ಧರ್ಮವೀರ್ ಅವರ ಮೂವರು ಮಕ್ಕಳಲ್ಲಿ ಸಚಿನ್ ಒಬ್ಬ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆ ದುರ್ಬಲಗೊಳಿಸುವ ಹುನ್ನಾರ ವಿರೋಧಿಸಿ ವಿವಿಧ ದಲಿತ ಸಂಘಟನೆಗಳು ಎಪ್ರಿಲ್ 2ರಂದು ಕರೆ ನೀಡಿದ್ದ ಭಾರತ್ ಬಂದ್ ಸಂದರ್ಭದಲ್ಲಿ ಈತನನ್ನು ಬಂಧಿಸಲಾಗಿತ್ತು.
ಬಂದ್ ವೇಳೆ ಪೊಲೀಸ್ ಗೋಲಿಬಾರ್ ಸೇರಿದಂತೆ ವ್ಯಾಪಕ ಹಿಂಸಾಚಾರ ಹಲವು ರಾಜ್ಯಗಳಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ನಡೆದಿತ್ತು. ಮೂವರು ಮಕ್ಕಳನ್ನು ಈ ಸಂದರ್ಭ ಪೊಲೀಸರು ಬಂಧಿಸಿದ್ದಾರೆ ಎನ್ನುವುದು ಕುಟುಂಬದವರ ಆರೋಪ. ಧರ್ಮವೀರ್ ಅವರ ಪತ್ನಿ ರಾಮೇಶ್ವರಿ (60) ಮನೆಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಮೂವರು ಮಕ್ಕಳು ಕೂಲಿಗಳಾಗಿ ದುಡಿಯುತ್ತಾರೆ. ಕಿರಿಯ ಮಗ ಮಾತ್ರ ಮನೆಯಲ್ಲಿದ್ದಾನೆ. ಕಳೆದ ಎರಡು ತಿಂಗಳಿಂದ ಜೈಲಲ್ಲಿ ಸೊರಗುತ್ತಿದ್ದಾನೆ.
‘‘ಕೋಚಿಂಗ್ ಕ್ಲಾಸ್ ಬಗ್ಗೆ ಶಿಕ್ಷಕರಲ್ಲಿ ಕೇಳಲು ಸಚಿನ್ ಹೋಗಿದ್ದ. ಆಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಏನು ಮಾಡಲು ಸಾಧ್ಯ? ನಮ್ಮ ಜಾತಿ ವ್ಯವಸ್ಥೆಯನ್ನೇ ಶಪಿಸಬೇಕು. ಆತ ಜಾಟ್ ಸಮುದಾಯಕ್ಕೆ ಸೇರಿದವನೇ ಅಥವಾ ಚಮ್ಮಾರನೇ ಎಂದು ವಿಚಾರಿಸಿಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹದಿನೈದು ವರ್ಷದ ಹುಡುಗ ಯಾವ ಅಪರಾಧ ಮಾಡಲು ಸಾಧ್ಯ?’’ ಎಂದು ಧರ್ಮವೀರ್ ಪ್ರಶ್ನಿಸುತ್ತಾರೆ.
‘‘ನನ್ನ ಮಗನ ಏಕೈಕ ಅಪರಾಧವೆಂದರೆ ಆತ ದಲಿತ ಎನ್ನುವುದು. ನಮ್ಮ ಕುಟುಂಬದ ಮಾಸಿಕ ಆದಾಯ 3ರಿಂದ 4 ಸಾವಿರ ರೂಪಾಯಿ. ಮಗ ಚೆನ್ನಾಗಿ ಓದಿದರೆ ಕುಟುಂಬದ ಭವಿಷ್ಯ ಬದಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಆತನ ಮೇಲೆ ಹಲವು ಆರೋಪಗಳನ್ನು ಹೊರಿಸಿದ್ದು, ಆತನ ಜೀವನವೇ ಜೈಲಿನಲ್ಲಿ ಬಂಧಿಯಾಗಿದೆ.’’
ಉತ್ತರ ಪ್ರದೇಶ ಸೆಕೆಂಡರಿ ಶಾಲಾ ಮಂಡಳಿ ನೀಡಿದ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ಪ್ರಕಾರ ಸಚಿನ್‌ನ ಜನ್ಮದಿನಾಂಕ 25-08-2003. ಆದರೆ ಪೊಲೀಸರು ಸಿದ್ಧಪಡಿಸಿದ ರಿಮಾಂಡ್ ಶೀಟ್‌ನಲ್ಲಿ ಈತನ ವಯಸ್ಸು 20 ಎಂದು ನಮೂದಿಸಲಾಗಿದೆ. ಕಳೆದ ಎರಡು ತಿಂಗಳಿಂದ ಸಚಿನ್ ಮೀರತ್ ಜೈಲಿನಲ್ಲಿ ಇತರ ವಯಸ್ಕ ಕೈದಿಗಳ ಜತೆಗೆ ಇದ್ದಾನೆ.


ಎಲ್ಲ ದಾಖಲೆ ಹಾಗೂ ಪುರಾವೆ ಒದಗಿಸಿದರೂ, ಶಾಲೆಯ ಹೇಳಿಕೆಯನ್ನು ಪ್ರಸ್ತುತಪಡಿಸಿದರೂ, ಕುಟುಂಬ ಸದಸ್ಯರು ದೃಢಪಡಿಸಿದರೂ, ಸಚಿನ್‌ನನ್ನು ಬಾಲಾಪರಾಧಿ ಎಂದು ಘೋಷಿಸಲು ಪೊಲೀಸರು ನಿರಾಕರಿಸಿದ್ದಾರೆ ಎನ್ನುವುದು ಕುಟುಂಬದ ಆರೋಪ.
ಕಲಿಯಾಗಾರ್ಹಿ ಮತ್ತು ಸರೈಕಾಝಿ ದಲಿತ ಕ್ವಾರ್ಟಸ್‌ಗಳಿಗೆ ‘ದ ವೈರ್’ ಭೇಟಿ ನೀಡಿದಾಗ, ಜನರು ಕಡತಗಳೊಂದಿಗೆ ಸಾಲು ನಿಂತಿದ್ದರು. ಎಲ್ಲರೂ ಅವರ ಕುಟುಂಬ ಸದಸ್ಯರು. ಎಪ್ರಿಲ್ 2ರಂದು ಬಂಧನಕ್ಕೊಳಗಾದ ದಲಿತರ ಮಗ ಅಥವಾ ಸಹೋದರ. ಇಡೀ ಪ್ರದೇಶದ ಎಲ್ಲ ದಲಿತ ಕುಟುಂಬಗಳೂ ಅದೇ ಕಥೆಯನ್ನು ಹೇಳುತ್ತವೆ.
ಸರೈಕಾಝಿಯ ರೋಶ್ನಿ (40) ಅಂಗವಿಕಲೆ. ಆಕೆಯ 14 ವರ್ಷದ ಮಗ ಅಜಯ್, ಎಪ್ರಿಲ್ 2ರಿಂದೀಚೆಗೆ ಮೀರತ್ ಜೈಲಿನಲ್ಲಿದ್ದಾನೆ. ಆಕೆಯ ಪತಿ ರಾಂಪಾಲ್ ದರ್ಜಿ ವೃತ್ತಿ ಮಾಡುತ್ತಿದ್ದರು. ನಾಲ್ಕು ವರ್ಷದ ಹಿಂದೆ ಲಿವರ್ ಕಾಯಿಲೆಯಿಂದ ಮೃತಪಟ್ಟಿದ್ದರು.
ಆಕೆಯ ಹದಿನೇಳು ವರ್ಷದ ಮಗಳು ಮಾತ್ರ ಕುಟುಂಬಕ್ಕಾಗಿ ದುಡಿಯುವವಳು. ಕ್ರಿಕೆಟ್ ಬಾಲ್ ಫ್ಯಾಕ್ಟರಿಯಲ್ಲಿ ಆಕೆ ಕೆಲಸ ಮಾಡುತ್ತಾಳೆ. ಅಜಯ್‌ನ ಆಧಾರ್ ಕಾರ್ಡ್ ವಿವರಗಳು ಹಾಗೂ ಶಾಲಾ ಪ್ರಮಾಣಪತ್ರದ ಅನ್ವಯ ಆತ ಹುಟ್ಟಿದ ದಿನಾಂಕ 20-09-2004. ಅಂದರೆ ಆತ ಬಾಲಾಪರಾಧಿ.
ಅಜಯ್ ಐದನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತ ಶಾಲೆಯಿಂದ ವಾಪಸ್ಸಾದ ಬಳಿಕ ಸಂಜೆಯ ವೇಳೆ ಕ್ರೀಡಾ ಉಡುಪುಗಳನ್ನು ಹೊಲಿದು ಕುಟುಂಬಕ್ಕೆ ನೆರವಾಗುತ್ತಾನೆ. ‘‘ಎಪ್ರಿಲ್ 2ರಂದು ಕೆಲ ಔಷಧಿ ತರಲು ಆತನನ್ನು ಅಂಗಡಿಗೆ ಕಳುಹಿಸಿದ್ದೆ. ಆದರೆ ಆತ ವಾಪಸ್ ಬರಲೇ ಇಲ್ಲ’’ ಎಂದು ರೋಶ್ನಿ ಹತಾಶೆಯಿಂದ ನುಡಿಯುತ್ತಾರೆ.
‘‘ಎರಡು ದಿನಗಳ ವರೆಗೆ ಆತನ ಚಲನವಲನಗಳ ಬಗ್ಗೆ ಯಾವ ಸುಳಿವೂ ಇರಲಿಲ್ಲ. ಪೊಲೀಸರು ಆತನನ್ನು ಬಂಧಿಸಿದ್ದು ಆ ಬಳಿಕ ತಿಳಿಯಿತು. ಪೊಲೀಸ್ ಅಧಿಕಾರಿಗಳು ಕೂಡಾ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆತ ಬಾಲಾಪರಾಧಿಗಳ ಜೈಲಿನಲ್ಲಿ ಇದ್ದಾನೆ ಎನ್ನುವುದು ನಂತರ ತಿಳಿಯಿತು. ಆತನನ್ನು ಭೇಟಿ ಮಾಡಲು ತೆರಳಿದಾಗ, ಮರದಡಿ ಕುಳಿತು ಅಳುತ್ತಿದ್ದ. ಸಾಧ್ಯವಾದಷ್ಟು ಬೇಗ ಇಲ್ಲಿಂದ ಹೊರಗೆ ಕರೆದೊಯ್ಯುವಂತೆ ಗೋಗರೆದ. ನಾನು ಅಂಗವಿಕಲೆ. ಹೆಚ್ಚು ಓಡಾಡಲು ಸಾಧ್ಯವಾಗುವುದಿಲ್ಲ. ಜೈಲಿಗೆ ಹೋಗಿ ಮಗನನ್ನು ನೋಡುವುದೂ ಕಷ್ಟ. ನಮ್ಮ ಕುಟುಂಬ ತೀರಾ ಸಂಕಷ್ಟದಲ್ಲಿದೆ. ನೀವು ಚಮ್ಮಾರರೇ ಎಂದು ಪೊಲೀಸರು ತನ್ನ ಬಳಿ ಕೇಳಿದ್ದಾಗಿ ಆತ ಹೇಳುತ್ತಾನೆ. ಹೌದು ಎಂದು ಹೇಳಿದಾಗ, ಜೈಲಿಗೆ ತಳ್ಳಿದರು’’ ಎಂದು ರೋಶ್ನಿ ವಿವರಿಸುತ್ತಾರೆ.


ನಾನು ವಿಧವೆ. ಯಾರ ಬಳಿ ನಾನು ಸಹಾಯಕ್ಕಾಗಿ ಹೋಗಲಿ? ಅಜಯ್ ಮೇಲೆ 10ಕ್ಕಿಂತ ಹೆಚ್ಚು ಆರೋಪಗಳನ್ನು ಹೊರಿಸಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಹೇಳಿ, 12 ವರ್ಷದ ಹುಡುಗ ಇಷ್ಟೊಂದು ಅಪರಾಧ ಎಸಗಲು ಸಾಧ್ಯವೇ? ನಾವು ಚಮ್ಮಾರರು ಎಂಬ ಕಾರಣದಿಂದ ನಮಗೆ ಇಷ್ಟೆಲ್ಲ ಆಗುತ್ತಿದೆಯೇ? ಎಂದು ಮುಗ್ಧವಾಗಿ ಪ್ರಶ್ನಿಸುತ್ತಾರೆ.
ಆದಿತ್ಯನಾಥ್ ಸರಕಾರವನ್ನು ಪ್ರಶ್ನಿಸುವ ರೋಶ್ನಿ, ‘‘ಅದು ಒಳ್ಳೆಯ ಸರಕಾರವಲ್ಲ. ಒಳ್ಳೆಯ ಸರಕಾರವಾಗಿದ್ದರೆ, ಅಮಾಯಕ ಬಾಲಕರು ಎರಡು ತಿಂಗಳವರೆಗೆ ಜೈಲಿನಲ್ಲಿ ಸೊರಗಬೇಕಿರಲಿಲ್ಲ. ನಮ್ಮ ಕುಟುಂಬದವರು ಜೈಲಿಗೆ ಹೋದಾಗ, ಪೊಲೀಸ್ ಪೇದೆ ಅವರನ್ನು ಓಡಿಸಿ, ನಿಮ್ಮನ್ನೂ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಮೇಲಧಿಕಾರಿಗಳ ಬಳಿಗೆ ಹೋದಾಗ, ಮೇಲಧಿಕಾರಿಗಳಿಂದ ನಮಗೆ ಯಾವ ಆದೇಶವೂ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಯೋಗಿ ಸರಕಾರದಲ್ಲಿ ಎಲ್ಲ ನ್ಯಾಯದ ನಿರೀಕ್ಷೆಯನ್ನೂ ನಾನು ಕಳೆದುಕೊಂಡಿದ್ದೇನೆ’’ ಎಂದು ಸ್ಪಷ್ಟಪಡಿಸುತ್ತಾರೆ.

ಕಲಿಯಾಗಾರ್ಹಿಯಲ್ಲಿ 35ರ ಸುಂದರಿ ಗೃಹಿಣಿ. ಆಕೆಯ ಪತಿ ನಮಕ್‌ಚಂದ್ ಕೂಲಿಕಾರ್ಮಿಕ. ತಮ್ಮ 12 ವರ್ಷದ ಮಗ ಅಭಿಷೇಕ್‌ನನ್ನು ಎಪ್ರಿಲ್ 2ರಂದು ಪೊಲೀಸರು ಬಂಧಿಸಿದ ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ‘‘ಚೌಧರಿ ಚರಣ್‌ಸಿಂಗ್ ವಿಶ್ವವಿದ್ಯಾನಿಲಯ ಬಳಿ ಅಭಿಷೇಕ್ ನೀರು ಕುಡಿಯುತ್ತಿದ್ದ. ಆತನನ್ನು ಬಂಧಿಸುವ ಮುನ್ನ ಪೊಲೀಸರು ಆತನ ಜಾತಿ ಕೇಳಿದ್ದಾರೆ.’’


‘‘ಮಗನನ್ನು ಬಾಲಾಪರಾಧಿಗಳ ಕಾರಾಗೃಹದಲ್ಲಿ ಇಡಲಾಗಿದೆ. ಪ್ರತಿ ಸೋಮವಾರ ಆತನನ್ನು ಭೇಟಿ ಮಾಡಲು ಅವಕಾಶ ಕೊಡುತ್ತಾರೆ. ಈ ಮೊದಲು ಪೊಲೀಸರು ಆತನಿಗೆ ಹೊಡೆಯುತ್ತಿದ್ದರು. ಇದೀಗ ಹೊಡೆತ ನಿಲ್ಲಿಸಿದ್ದರೂ, ಕಳೆದ ಎರಡು ತಿಂಗಳಿಂದ ಅಮಾಯಕನಾಗಿದ್ದರೂ ಆತನನ್ನು ಜೈಲಿನಲ್ಲಿ ಇಡಲಾಗಿದೆ’’ ಎಂದು ಸುಂದರಿ ಹೇಳುತ್ತಾರೆ.
‘‘ಇದು ಅವರನ್ನು ಜೈಲಿಗೆ ತಳ್ಳುವ ವಯಸ್ಸೇ?’’ ಎನ್ನುವುದು ಆಕೆಯ ಪ್ರಶ್ನೆ. ‘‘ಆತನಿಗೆ ಜಾಮೀನು ಮಂಜೂರು ಮಾಡುತ್ತಿಲ್ಲ ಮಾತ್ರವಲ್ಲದೆ, ಯಾವ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ ಎಂದೂ ಹೇಳುತ್ತಿಲ್ಲ. ಪೊಲೀಸರು ನೀನು ಚಮ್ಮಾರನೇ ಎಂದು ಕೇಳಿದ ಬಳಿಕ ಆತನನ್ನು ಬಂಧಿಸಿದ್ದಾರೆ ಎಂದು ಮಗ ಹೇಳಿದ್ದಾನೆ’’
ಅಭಿಷೇಕ್‌ನ ತಾಯಿಯ ಪ್ರಕಾರ, ಜಾಟ್ ಸಮುದಾಯದ ಕೆಲ ಯುವಕರನ್ನು ಅವರು ಬಂಧಿಸಿದ್ದಾರೆ. ಈ ಮಕ್ಕಳು ಜೈಲಿನಲ್ಲೇ ಕೊಳೆಯಬೇಕು ಇಲ್ಲವೇ ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿಸಿಹಾಕಬೇಕು ಹಾಗೂ ಜೀವನದಲ್ಲಿ ಯಶಸ್ವಿಯಾಗಬಾರದು ಎನ್ನುವುದು ಅವರ ಅಪೇಕ್ಷೆ. ದಲಿತ ಸಮುದಾಯವನ್ನು ಸರಕಾರ ನ್ಯಾಯಸಮ್ಮತವಾಗಿ ನೋಡುತ್ತಿಲ್ಲ. ಅವರು ತಪ್ಪುಮಾಡಿದವರನ್ನು ಬಂಧಿಸಬೇಕಿತ್ತು; ಅಮಾಯಕರನ್ನಲ್ಲ.
ಕೃಪೆ: thewire.in

Writer - ಪ್ರಶಾಂತ್ ಕನೋಜಿಯಾ

contributor

Editor - ಪ್ರಶಾಂತ್ ಕನೋಜಿಯಾ

contributor

Similar News

ಜಗದಗಲ
ಜಗ ದಗಲ