ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ವಾರ್ಡ್‍ವಾರು ಮೀಸಲಾತಿ ಪ್ರಕಟಣೆಗೆ ಕಾದು ಕುಳಿತ ಸ್ಪರ್ಧಾಕಾಂಕ್ಷಿಗಳು

Update: 2018-06-08 17:07 GMT

ಶಿವಮೊಗ್ಗ, ಜೂ. 8: ಮುಂದಿನ ನಾಲ್ಕೈದು ತಿಂಗಳಲ್ಲಿ 5 ವರ್ಷದ ಅಧಿಕಾರಾವಧಿ ಪೂರ್ಣಗೊಳ್ಳಲಿರುವ ಶಿವಮೊಗ್ಗ ಜಿಲ್ಲೆಯ 1 ಮಹಾನಗರ ಪಾಲಿಕೆ, 2 ನಗರಸಭೆ, 1 ಪುರಸಭೆ, 5 ಪಟ್ಟಣ ಪಂಚಾಯತ್ ಸೇರಿದಂತೆ ಒಟ್ಟಾರೆ 9 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪೂರ್ವಭಾವಿ ತಯಾರಿ ಕೂಡ ನಡೆಸಲಾರಂಭಿಸಿದೆ. 

ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ ರಾಜ್ಯ ಸರ್ಕಾರ ಜಿಲ್ಲೆಯ 9 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ವಾರ್ಡ್ ಪುನರ್ ವಿಂಗಡಣಾ ಪ್ರಕ್ರಿಯೆಯನ್ನು 2011 ರ ಜನಗಣತಿ ಆಧಾರದ ಮೇಲೆ ನಡೆಸಿದೆ. ಅಂತಿಮ ಅಧಿಸೂಚನೆ ಹೊರಡಿಸಿದೆ. 

ವಾರ್ಡ್ ಪುನರ್ ವಿಂಗಡಣಾ ಪ್ರಕ್ರಿಯೆ ಆಧಾರದ ಮೇಲೆ ಶಿವಮೊಗ್ಗ ಮಹಾನಗರ ಪಾಲಿಕೆ ಹೊರತುಪಡಿಸಿ ಭದ್ರಾವತಿ, ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಸೊರಬ, ತೀರ್ಥಹಳ್ಳಿ, ಹೊಸನಗರ, ಶಿರಾಳಕೊಪ್ಪ ಹಾಗೂ ಜೋಗಕಾರ್ಗಲ್ ಪಟ್ಟಣ ಪಂಚಾಯತ್ ಗಳಿಗೆ ವಾರ್ಡ್‍ವಾರು ಕರಡು ಮೀಸಲಾತಿ ಪಟ್ಟಿಯನ್ನು ಕೂಡ ಮಾರ್ಚ್ ತಿಂಗಳ ಅಂತ್ಯದಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ವಾರ್ಡ್‍ವಾರು ಮೀಸಲಾತಿ ಪಟ್ಟಿ ಪ್ರಕಟವಾಗಿರುವ ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳ ಸ್ಪರ್ಧಾಕಾಂಕ್ಷಿಗಳು, ಚುನಾವಣಾ ದಿನಾಂಕ ಪ್ರಕಟಣೆಯತ್ತ ಎದುರು ನೋಡುತ್ತಿದ್ದಾರೆ. ಸ್ಪರ್ಧೆಗೆ ಸಕಲ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದಾರೆ. ತಾವು ಕಣಕ್ಕಿಳಿಯುವ ವಾರ್ಡ್ ವ್ಯಾಪ್ತಿಯ ಮತದಾರರ ವಿಶ್ವಾಸ ಗಳಿಸುವ ಯತ್ನ ನಡೆಸಲಾರಂಭಿಸಿದ್ದಾರೆ. 

ಆದರೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ, ಇನ್ನಷ್ಟೆ ವಾರ್ಡ್‍ವಾರು ಮೀಸಲಾತಿ ಪಟ್ಟಿ ಪ್ರಕಟವಾಗಬೇಕಾಗಿದೆ. ಇದು ಸ್ಪರ್ಧಾಕಾಂಕ್ಷಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ. ರಾಜ್ಯ ಸರ್ಕಾರ ಯಾವಾಗ ವಾರ್ಡ್‍ವಾರು ಮೀಸಲಾತಿ ಪಟ್ಟಿ ಪ್ರಕಟಣೆ ಮಾಡಲಿದೆ ಎಂಬುವುದರತ್ತ ಸ್ಪರ್ಧಾಕಾಂಕ್ಷಿಗಳು ಚಿತ್ತ ಹರಿಸಿದ್ದು, ಜಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳುವಂತೆ ಮಾಡಿದೆ. 

ಪೂರ್ಣ: ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ನಡೆದ ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆ ವೇಳೆ, ಈ ಹಿಂದಿನ ನಗರಸಭೆಯ ವ್ಯಾಪ್ತಿಯಲ್ಲಿದ್ದ ಪ್ರದೇಶವನ್ನೇ ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಅದರಂತೆ ನಗರಸಭೆಯಲ್ಲಿದ್ದಂತೆ 35 ವಾರ್ಡ್‍ಗಳು ಪಾಲಿಕೆ ಆಡಳಿತದಲ್ಲಿಯೂ ಮುಂದುವರಿಯಲಿದೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವಾರ್ಡ್‍ಗಳ ವ್ಯಾಪ್ತಿಯಲ್ಲಿದ್ದ ಕೆಲ ಪ್ರದೇಶಗಳು ಅದಲು-ಬದಲಾಗಿದೆ. ಕೆಲ ವಾರ್ಡ್‍ಗಳ ಪ್ರದೇಶ ಹೆಚ್ಚಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಶಿವಮೊಗ್ಗ ಪಾಲಿಕೆಯ ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಸಿ, ಅಂತಿಮ ಅಧಿಸೂಚನೆ ಕೂಡ ಹೊರಡಿಸಿದೆ. ವಾರ್ಡ್‍ವಾರು ಮೀಸಲಾತಿ ಪ್ರಕಟಣೆ ಮಾಡುವುದಷ್ಟೆ ಬಾಕಿಯಿದೆ. ಆದರೆ ಮೀಸಲಾತಿ ಪ್ರಕಟಣೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. 

ಸಾಲುಸಾಲು ಸ್ಪರ್ಧಾಕಾಂಕ್ಷಿಗಳು: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈ ಬಾರಿ 35 ವಾರ್ಡ್‍ಗಳಲ್ಲಿಯೂ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಭಾರೀ ದೊಡ್ಡದಿದೆ. ಸಾಲುಸಾಲು ನಾಯಕರು ಅಖಾಡಕ್ಕಿಳಿಯಲು ತೆರೆಮೆರೆಯ ತಯಾರಿ ನಡೆಸುತ್ತಿದ್ದಾರೆ. ಆದರೆ ವಾರ್ಡ್‍ವಾರು ಮೀಸಲಾತಿ ಪಟ್ಟಿ ಪ್ರಕಟಣೆಯಾಗದಿರುವುದು ಸ್ಪರ್ಧಾಕಾಂಕ್ಷಿಗಳಲ್ಲಿ ಸಾಕಷ್ಟು ತಳಮಳ ಸೃಷ್ಟಿಸಿದೆ. 

ಬಹುತೇಕ ಸ್ಪರ್ಧಾಕಾಂಕ್ಷಿಗಳು, ತಾವು ಕಣಕ್ಕಿಳಿಯುವ ವಾರ್ಡ್‍ನಲ್ಲಿ ತಮ್ಮ ಸ್ಪರ್ಧೆಗೆ ಪೂರಕವಾದ ಮೀಸಲಾತಿ ಬರಲಿದೆಯಾ? ಇಲ್ಲವೇ? ಎಂಬುವುದನ್ನು ಕಾದು ನೋಡಲು ನಿರ್ಧರಿಸಿದ್ದಾರೆ. ಮೀಸಲಾತಿ ಪ್ರಕಟಣೆಯ ನಂತರವಷ್ಟೆ ಚುನಾವಣಾ ಸಿದ್ಧತೆ ಆರಂಭಿಸಲು ಯೋಜಿಸುತ್ತಿದ್ದಾರೆ. 

ಕಣಕ್ಕಿಳಿಯಲು ತಯಾರಿ ನಡೆಸುತ್ತಿರುವ ಹಾಲಿ-ಮಾಜಿಗಳು!
ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಗೆ, ವಿವಿಧ ವಾರ್ಡ್‍ಗಳಿಂದ ಕಣಕ್ಕಿಳಿಯಲು ಕೆಲ ಹಾಲಿ ಕಾರ್ಪೋರೇಟರ್ ಹಾಗೂ ಮಾಜಿ ನಗರಸಭಾ ಸದಸ್ಯರುಗಳು ಸಕಲ ತಯಾರಿ ನಡೆಸಿಕೊಳ್ಳಲಾರಂಭಿಸಿದ್ದಾರೆ. ಕೆಲ ಹಾಲಿ ಕಾರ್ಪೋರೇಟರ್ ಗಳು ತಾವು ಈ ಹಿಂದೆ ಆಯ್ಕೆಯಾಗಿ ಬಂದಿದ್ದ ವಾರ್ಡ್‍ಗಳಿಂದ ಮತ್ತೊಮ್ಮೆ ಕಣಕ್ಕಿಳಿಯುವ ಚಿಂತನೆ ನಡೆಸುತ್ತಿದ್ದಾರೆ. ಆದರೆ ತಮ್ಮ ಸ್ಪರ್ಧೆಗೆ ಅನುಕೂಲಕರವಾದ ಮೀಸಲಾತಿ ಪ್ರಕಟವಾಗಲಿದೆಯೇ? ಇಲ್ಲವೇ? ಎಂಬುವುದರತ್ತ ಗಮನ ನೆಟ್ಟಿದ್ದಾರೆ. ಮತ್ತೆ ಕೆಲ ಕಾರ್ಪೋರೇಟರ್ ಗಳು ಬೇರೆ ವಾರ್ಡ್‍ಗಳತ್ತ ಚಿತ್ತ ನೆಟ್ಟಿರುವ ಮಾಹಿತಿಗಳು ಕೇಳಿಬರುತ್ತಿವೆ. 

'ಮಹಿಳಾ ಮೀಸಲಾತಿ... ಹೊಸ ಮುಖಗಳು...'
ಕಾನೂನು ರೀತಿಯ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಕಲ್ಪಿಸಬೇಕು. ಈ ಬಾರಿ ಮಹಾನಗರ ಪಾಲಿಕೆಯ 35 ವಾರ್ಡ್‍ಗಳಲ್ಲಿ, 18 ವಾರ್ಡ್‍ಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆಯಿದೆ. ಇದು ಪುರುಷ ಸ್ಪರ್ಧಾಕಾಂಕ್ಷಿಗಳ ತಲೆಬಿಸಿಗೆ ಕಾರಣವಾಗಿದೆ. ಈ ಕಾರಣದಿಂದ ಕೆಲ ಪುರುಷ ಸ್ಪರ್ಧಾಕಾಂಕ್ಷಿಗಳು, ತಮಗೆ ಅವಕಾಶ ಸಿಗದಿದ್ದರೆ ಮಹಿಳಾ ಮೀಸಲಾತಿ ಕ್ಷೇತ್ರಗಳಲ್ಲಿ ಪತ್ನಿಯರನ್ನು ಕಣಕ್ಕಿಳಿಸುವ ಚಿಂತನೆ ಕೂಡ ನಡೆಸುತ್ತಿರುವ ಮಾಹಿತಿಗಳು ಕೂಡ ಕೇಳಿಬರುತ್ತಿದೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News