ಕೆಇಬಿ ವಿರುದ್ಧದ ಬಳಕೆದಾರರ ಹೋರಾಟ!
ಭಾಗ-46
ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು ಮಾಡುವ ಮಂಡಳಿಗೆ, ಕರೆಂಟ್ ಇಲ್ಲದ ಬೋರ್ಡ್, ಕತ್ತಲೆಯ ಬೋರ್ಡ್ ಇತ್ಯಾದಿ ಹೆಸರುಗಳಿಂದ ಜನರು ತಮಾಷೆ ಮಾಡುವ ಸಮಯವೊಂದಿತ್ತು. ಬಳಕೆ ದಾರರ ಆಂದೋಲನ ಆರಂಭಿಸಿದ್ದೇ ನಮ್ಮ ಏರಿಯಾದ ಟ್ರಾನ್ಸ್ ಫಾರ್ಮರ್‌ನ ಸಮಸ್ಯೆಯಿಂದಾಗಿ. ದಿನವೊಂದಕ್ಕೆ ಸುಮಾರು 20ರಷ್ಟು ಬಾರಿ ವಿದ್ಯುತ್ ಕಡಿತ. ದೂರು ನೀಡಿದರೆ, ಟ್ರಾನ್ಸ್‌ಫಾರ್ಮರ್ ಸರಿ ಇಲ್ಲ, ಲೋಡ್ ತೆಗೆದುಕೊಳ್ಳುವುದಿಲ್ಲ ಎಂಬಿತ್ಯಾದಿ ಸಬೂಬು. ಇಂತಹ ಸಂದರ್ಭಗಳಲ್ಲಿ ನಾವೂ ಅವರಲ್ಲಿ ಪ್ರಶ್ನಿಸಲಾರಂಭಿಸಿದೆವು.‘ನಾವು ಪಡೆಯುವ ವಿದ್ಯುತ್‌ಗೆ ಬಿಲ್ ಹಣ ಪಾವತಿ ಮಾಡುವಾಗ, ನಿಮಗೆ ಲೋಡ್ ತೆಗೆದುಕೊಳ್ಳುವ ಟ್ರಾನ್ಸ್ ಫಾರ್ಮರ್ ಹಾಕಲೇನು ಕಷ್ಟ’ ಎಂದು. ಅದಕ್ಕಾಗಿ ಅದೊಂದು ದಿನ ಬೆಳಗ್ಗಿನಿಂದ ಅದೆಷ್ಟು ಸಾರಿ ವಿದ್ಯುತ್ ಕಡಿತ ಆಗಿದೆ ಎಂಬ ಬಗ್ಗೆ ಸಮಗ್ರ ಪಟ್ಟಿ ಮಾಡಿದೆವು. ಸತತ ಸುಮಾರು 7 ದಿನಗಳಲ್ಲಿ 80ರಷ್ಟು ಬಾರಿ ವಿದ್ಯುತ್ ಕಡಿತ!
ಈ ಪಟ್ಟಿಯನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಚೀಫ್ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ಬಳಕೆದಾರರ ವೇದಿಕೆ ವತಿಯಿಂದ ಮನವಿಯೊಂದಿಗೆ ಸಲ್ಲಿಸಲಾಯಿತು. ಬಳಕೆದಾರರಾಗಿ ನಮಗೆ ಯಾವ ರೀತಿ ಸೇವೆ ನೀಡಲಾಗುತ್ತಿದೆ. ವಿದ್ಯುಚ್ಛಕ್ತಿ ನಿಯಮಗಳ ಪ್ರಕಾರ ಯಾವ ರೀತಿ ಸೇವೆ ಒದಗಿಸಬೇಕು ಎಂಬುದಾಗಿಯೂ ಮನವಿಯಲ್ಲಿ ಪ್ರಶ್ನಿಸಿ ದೆವು. ಅವರದಕ್ಕೆ ಉತ್ತರವಾಗಿ, ಇದನ್ನು ಸರಿಪಡಿಸುವುದಾಗಿ ನಮಗೆ ಭರ ವಸೆ ನೀಡಿದರು. ಅದರಂತೆ ಉನ್ನತ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್‌ಅಳವಡಿಸಿ ಸಮಸ್ಯೆ ಸಾಕಷ್ಟು ಬಗೆಹರಿಯಿತು. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ವಿರುದ್ಧದ ನಮ್ಮ ಪ್ರಥಮ ಹೋರಾಟ ಇದಾಗಿತ್ತು. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯನ್ನೂ ಲಂಚಾವತಾರ ಬಿಟ್ಟಿಲ್ಲ ವೆಂದೇ ಹೇಳಬೇಕು. ಹಿಂದೆಲ್ಲಾ ವಿದ್ಯುತ್ ಕಂಬ ಹತ್ತಿ ಏನಾದರೂ ದೋಷ ಸರಿಪಡಿಸಬೇಕಾದರೂ ಹಣ ನೀಡದೆ ಕೆಲಸವಾಗುತ್ತಿರಲಿಲ್ಲ. ಸುಮಾರು 30 ವರ್ಷಗಳ ಹಿಂದಿನ ಘಟನೆಯಿದು. ಒಂದು ಬಾರಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಅಮ್ಮ ನನ್ನನ್ನುದ್ದೇಶಿಸಿ, ವಿದ್ಯುತ್‌ಕಡಿತ ಆಗಿತ್ತು, ಫೋನ್ ಮಾಡಿದಾಗ ಲೈನ್‌ಮ್ಯಾನ್ ಬಂದು, ವಿದ್ಯುತ್ ಕಂಬ ಹತ್ತಿ ಸರಿ ಪಡಿಸಿದ. ನಾನು ಅವನಿಗೆ 20 ರೂ. ಕೊಟ್ಟೆ. ಅದನ್ನು ಆತ ನನ್ನ ಮುಖಕ್ಕೆ ಬಿಸಾಕಿದ. ಯಾಕೆ ಎಂದು ಕೇಳಿದರೆ, ಕಂಬ ಹತ್ತಿದ್ದಕ್ಕೆ 20 ರೂಪಾಯಿಯೇ? 50 ರೂಪಾಯಿ ಕೊಡಿ ಎಂದು ಕೇಳಿದ. ನನಗೆ ಭಯ ಆಯಿತು. ನಾನು ಕೊಟ್ಟು ಬಿಟ್ಟೆ ಎಂದರಾಕೆ. ನಾನು ಆಗ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ಪತ್ರ ಬರೆದೆ. ಈ ದಿನದಂದು ವಿದ್ಯುತ್ ಕಂಬ ಹತ್ತಿ ರಿಪೇರಿಗೆ ಬಂದ ಲೈನ್‌ಮ್ಯಾನ್ ಮನೆಯವರನ್ನು ದಬಾಯಿಸಿ ಹೋಗಿದ್ದಾನೆ. ನೀವು ಲೈನ್‌ಮ್ಯಾನ್‌ಗಳಿಗೆ ಸಂಬಳ ಕೊಡುತ್ತಿಲ್ಲವೇ? ನಾವು ಹಣ ಪಾವತಿಸಬೇಕೇ? ಪಾವತಿಸಬೇಕಿದ್ದರೆ ಎಷ್ಟು ಕೊಡಬೇಕು ಎಂದು ಅದನ್ನು ನಿಗದಿಪಡಿಸಿ ತಿಳಿಸಿ. ಏಳು ದಿನಗಳೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ನಾನು ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದೆ. ಮರುದಿನವೇ ಲೈನ್‌ಮ್ಯಾನ್ ಬಂದವ, ನೀವು ನನಗೆ ಹಣ ಕೊಡುವುದೂ ಬೇಡ, ದೂರು ಕೊಡುವುದೂ ಬೇಡ ಎಂದು ಹಿಂದೆ ಪಡೆದಿದ್ದ 50 ರೂ. ಕೊಟ್ಟು ಹೋದ. ಸ್ವಲ್ಪ ಸಮಯದ ಬಳಿಕ ಜೆಇಮನೆಗೆ ಬಂದು, ತಾಯಿ ಬಳಿ, ಇಲ್ಲಿ ಮೂರು ಮಂದಿ ಲೈನ್‌ಮ್ಯಾನ್‌ಗಳಿದ್ದಾರೆ. ಕೆಲಸ ಮಾಡುವವ ಆತನೊಬ್ಬ. ಅವನ ವಿರುದ್ಧ ದೂರು ನೀಡಲಾಗಿದೆ. ಆತನ ಕೆಲಸ ಹೋಗು ತ್ತದೆ. ಇದರಿಂದ ಆತನ ಕುಟುಂಬಕ್ಕೆ ತೊಂದರೆ ಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಮಧ್ಯಾಹ್ನ ಮನೆಗೆ ಹೋದಾಗ ನನ್ನ ಅಮ್ಮ, ನೀನು ದೂರು ಕೊಡಲು ಯಾಕೆ ಹೋಗಿದ್ದು ಎಂದು ನನ್ನನ್ನು ದಬಾಯಿಸಿದರು. ಏನಾಯ್ತು ಎಂದು ಕೇಳಿದರೆ, ನಿನಗ್ಯಾಕೆ ಹಣ ಕೊಟ್ಟಿದ್ದು, ನೀನು ಸುಮ್ಮ ನಿರು ಎಂದು ನನ್ನನ್ನೇ ಬಾಯಿ ಮುಚ್ಚಿಸಿಬಿಟ್ಟರು. ಆ ಘಟನೆ ಅಲ್ಲಿಗೇ ನಿಂತಿತು. ಇಂತಹ ರಾಜಿ ಸಂಧಾನಗಳು ನಮ್ಮಿಳಗೆ ನಡೆಯು ತ್ತಿರುತ್ತವೆ. ಇದರಿಂದಾಗಿಯೇ ಈ ರೀತಿಯ ಲಂಚ ಪಡೆಯಲು, ಭ್ರಷ್ಟತೆಗೆ ಅವಕಾಶಗಳು ದೊರೆಯುವುದು. ನನ್ನ ಬಿ.ಎನ್. ಲ್ಯಾಬೊರೆಟರೀಸ್ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲೂ ಘಟನೆಯೊಂದು ನಡೆಯಿತು. ಒಂದು ಕಟ್ಟಡದ ವಿದ್ಯುತ್ ಸಂಪರ್ಕ ನನ್ನ ಸಹೋದರ ಸಂಬಂಧಿ ಹೆಸರಿನಲ್ಲಿತ್ತು. ಅದನ್ನು ಬದಲಾಯಿಸಲು ಆತ ಅರ್ಜಿಗೆ ಸಹಿ ಹಾಕಿ ಮೆಸ್ಕಾಂಗೆ ನೀಡಿ ಬಂದಿದ್ದ. ಕೆಲ ದಿನಗಳ ನಂತರವೂ ಆತನ ಹೆಸರಿಗೇ ನೋಟಿಸ್ ಬಂದಿತ್ತು. ಈ ಬಗ್ಗೆ ವಿಚಾರಿಸಿದಾಗ, ಅರ್ಜಿ ಕಳೆದುಹೋಗಿದೆ ಎಂಬ ಉತ್ತರ. ಮತ್ತೊಂದು ಅರ್ಜಿ ನೀಡಲು ಹೇಳಿ ಹೋದರು. ಹಿಂದೆ ಕೊಟ್ಟಿದ್ದಾಗ ಅದರ ಪ್ರತಿ ನಮ್ಮಲ್ಲಿ ಇರಲಿಲ್ಲ. ಎರಡನೆ ಬಾರಿ ನಾವು ಅರ್ಜಿ ನೀಡಿದಾಗ ಅದರ ಒಂದು ಪ್ರತಿ ಯೊಂದನ್ನು ನಾವು ಇರಿಸಿಕೊಂಡಿದ್ದೆವು. ಐದಾರು ವರ್ಷಗಳ ಬಳಿಕ ಹೆಚ್ಚುವರಿ ಡೆಪಾಸಿಟ್ ಕಟ್ಟಲು ನೋಟಿಸೊಂದು ಬಂತು. ಆದರೆ ಹೆಸರು ಮಾತ್ರ ಬದಲಾಗಿರ ಲಿಲ್ಲ. ಹೆಚ್ಚುವರಿ ಡೆಪಾಸಿಟ್ ಕಟ್ಟಲು ಇನ್ನೂ ಹೆಸರು ಬದಲಾ ಗಿಲ್ಲವಲ್ಲ ಯಾಕೆ ಎಂದು ಪ್ರಶ್ನಿಸಿದೆ. ದಾಖಲಾತಿ ಕೊಟ್ಟಿದ್ದೇನಲ್ಲಾ ಎಂದರೆ ಅದು ಕಳೆದು ಹೋಗಿದೆ ಎಂಬ ಉತ್ತರ. ಇನ್ನೊಂದು ಸೆಟ್ ಮಾಡಲು ಮತ್ತೆ ಸುಮಾರು ಎರಡು ಸಾವಿರ ರೂ. ಖರ್ಚು ಮಾಡಬೇಕು. ಹಿಂದಿನ ಕೇಸ್‌ವರ್ಕರ್ ಇಲ್ಲ. ಆತ ನಿವೃತ್ತನಾಗಿದ್ದಾನೆ ಎಂಬ ಸಬೂಬು ಬೇರೆ. ಆತನ ಪಿಂಚಣಿ ತಡೆ ಹಿಡಿಯಿರಿ ಎಂದೆ. ಈ ಬಗ್ಗೆ ಜಗಳ ಆಯಿತು. ನೀವು ಕಟ್ಟದಿದ್ದರೆ ಸಂಪರ್ಕ ಕಡಿತ ಗೊಳಿಸುವುದಾಗಿ ಜೆಇ ಬೆದರಿಸಿದ. ಹಾಗೆ ನಾನು ಪಟ್ಟು ಹಿಡಿದಾಗ, ಕೊನೆಗೆ ಮೂರು ದಿನಗಳಲ್ಲಿ ಹೆಸರು ನನ್ನ ಹೆಸರಿಗೆ ಬದಲಾಯಿಸಲ್ಪಟ್ಟಿತು.