ವಿಧಾನಪರಿಷತ್ ನೈರುತ್ಯ ಪದವೀಧರ-ಶಿಕ್ಷಕರ ಕ್ಷೇತ್ರಗಳ ಚುನಾವಣೆ: ಜಯ ಯಾರಿಗೆ ?
ಶಿವಮೊಗ್ಗ, ಜೂ. 10: ಮಲೆನಾಡು-ಕರಾವಳಿ-ಬಯಲು ಸೀಮೆ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ವಿಧಾನ ಪರಿಷತ್ 'ನೈರುತ್ಯ ಪದವೀಧರ' ಹಾಗೂ 'ಶಿಕ್ಷಕರ' ಕ್ಷೇತ್ರ'ಗಳಿಗೆ ಜೂ. 8 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂ. 12 ರಂದು ಮೈಸೂರಿನಲ್ಲಿ ನಡೆಯಲಿದೆ. ಜಿದ್ದಾಜಿದ್ದಿನ ಅಖಾಡ ಏರ್ಪಟ್ಟಿದ್ದ ಈ ಎರಡೂ ಕ್ಷೇತ್ರಗಳಲ್ಲಿ, ಬಿಜೆಪಿ-ಕಾಂಗ್ರೆಸ್-ಜೆಡಿಎಸ್‍ನಲ್ಲಿ ಜಯ ಯಾರಿಗೆ ಎಂಬ ಕುತೂಹಲ ಮನೆ ಮಾಡಿದೆ.
ಮೈಸೂರಿನ ಮಹಾರಾಣಿ ಕಾಲೇಜ್ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣೆಗೆ ಮತ ಪತ್ರ ಬಳಕೆ ಮಾಡಿರುವುದು ಹಾಗೂ ಅಭ್ಯರ್ಥಿಗಳು ಪಡೆದ ಪ್ರಾಶಸ್ತ್ಯ ಮತಗಳ ಲೆಕ್ಕಾಚಾರ ನಡೆಸಬೇಕಾಗಿರುವುದರಿಂದ, ಫಲಿತಾಂಶ ಪ್ರಕಟಣೆ ವಿಳಂಬವಾಗಲಿದೆ.
ಬಹುತೇಕ ರಾತ್ರಿ ವೇಳೆಗೆ ಅಧಿಕೃತವಾಗಿ ವಿಜೇತ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮೊದಲ ಸುತ್ತಿನ ಮತ ಎಣಿಕೆಯಲ್ಲಿಯೇ ಯಾವುದೇ ಅಭ್ಯರ್ಥಿ ಒಟ್ಟು ಚಲಾವಣೆಯ ಮತಗಳಲ್ಲಿ ಶೇ. 50 ಕ್ಕಿಂತ 1 ಮತ ಹೆಚ್ಚು ಪಡೆದರೆ, ಅಂತಹ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ಕುತೂಹಲ: ಮಲೆನಾಡು ಪ್ರದೇಶವಾದ ಶಿವಮೊಗ್ಗ, ಚಿಕ್ಕಮಗಳೂರು ಕೊಡಗು, ಕರಾವಳಿ ಪ್ರದೇಶಗಳಾದ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಬಯಲು ಸೀಮೆ ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಹಾಗೂ ಚೆನ್ನಗಿರಿ ತಾಲೂಕುಗಳು ನೈರುತ್ಯ ಪದವೀಧರ-ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾಗುತ್ತವೆ. ಒಟ್ಟಾರೆ ಆರು ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹೊಂದಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ, ಕ್ಷೇತ್ರ ವ್ಯಾಪ್ತಿಯ 30 ಅಸೆಂಬ್ಲಿಗಳಲ್ಲಿ 27 ಕಡೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯ ಸಂಪಾದಿಸಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕೇವಲ ಮೂರು ಕಡೆ (ಭದ್ರಾವತಿ, ಶೃಂಗೇರಿ, ಮಂಗಳೂರು) ಗೆಲುವು ಸಾಧಿಸಿದ್ದಾರೆ. ಉಳಿದಂತೆ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ.
ಜೂ. 8 ರಂದು ನಡೆದ ಚುನಾವಣೆ ವೇಳೆ, ಪದವೀಧರ ಕ್ಷೇತ್ರಕ್ಕೆ ಶೇ. 76.98 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 82.80 ರಷ್ಟು ಮತದಾನವಾಗಿತ್ತು. ಸಾಕಷ್ಟು ಜಿದ್ದಾಜಿದ್ದಿ ಕೆರಳಿಸಿದ್ದ ಹಾಗೂ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಎರಡೂ ಕ್ಷೇತ್ರಗಳಲ್ಲಿಯೂ, ಮಳೆಯ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.
ಮತದಾನೋತ್ತರ ಚಿತ್ರಣ ಗಮನಿಸಿದರೆ, ಪದವೀಧರ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯನೂರು ಮಂಜುನಾಥ್, ಕಾಂಗ್ರೆಸ್‍ನಿಂದ ಎಸ್.ಪಿ.ದಿನೇಶ್, ಜೆಡಿಎಸ್‍ನಿಂದ ಅರುಣ್‍ಕುಮಾರ್ ಸೇರಿದಂತೆ ಒಟ್ಟಾರೆ 8 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ. ಗಣೇಶ್ ಕಾರ್ಣಿಕ್, ಜೆಡಿಎಸ್‍ನಿಂದ ಭೋಜೇಗೌಡ ಸೇರಿದಂತೆ ಒಟ್ಟಾರೆ 12 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪದವೀಧರ ಕ್ಷೇತ್ರ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಕಳೆದ ಮೂರು ದಶಕಗಳಿಂದ ಅಧಿಪತ್ಯ ಕಾಯ್ದುಕೊಂಡು ಬಂದಿದೆ. ಆ ಪಕ್ಷದ ಭದ್ರ ಕೋಟೆಯಾಗಿದೆ. ಕಳೆದ ಐದು ಚುನಾವಣೆಗಳಲ್ಲಿ ಆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ, ಹಾಲಿ ವಿಧಾನ ಪರಿಷತ್ ಸ್ಪೀಕರ್ ಡಿ.ಹೆಚ್.ಶಂಕರಮೂರ್ತಿರವರು ಸತತ ಜಯ ಸಾಧಿಸಿ, ದಾಖಲೆ ನಿರ್ಮಿಸಿದ್ದಾರೆ. ಬಿಜೆಪಿ ಭದ್ರ ಕೋಟೆಯಾಗಿರುವ ಈ ಕ್ಷೇತ್ರ 'ಕೈ' ವಶಕ್ಕೆ ಕಾಂಗ್ರೆಸ್ ಭಾರೀ ಕಾರ್ಯತಂತ್ರ ರೂಪಿಸಿತ್ತು. ಮತ್ತೊಂದೆಡೆ ಪ್ರಾಬಲ್ಯ ಮುಂದುವರಿಸಿಕೊಂಡು ಹೋಗಲು ಬಿಜೆಪಿ ಕೂಡ ಹೋರಾಟ ನಡೆಸಿತ್ತು.
ಕಳೆದ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಮುಖಂಡ ಡಿ.ಹೆಚ್.ಶಂಕರಮೂರ್ತಿಯವರು 13,926 (ಶೇ. 45.31) ಮತ ಪಡೆದು ಆಯ್ಕೆಯಾಗಿದ್ದರು. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್‍ರವರು 10,140 (ಶೇ. 32.98) ಮತಗಳಿಸಿದ್ದರು. ಉಳಿದಂತೆ ಜೆಡಿಎಸ್ ಮುಖಂಡ ಭೋಜೇಗೌಡರವರು 6875 (ಶೇ. 22.37) ಮತಗಳಿಸಿದ್ದರು. ಕಳೆದ ಬಾರಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿದ್ದ 57,120 ಮತದಾರರಲ್ಲಿ 30,729 ಜನರು ಮತ ಚಲಾವಣೆ ಮಾಡಿದ್ದರು. 2163 ಮತಗಳು ತಿರಸ್ಕೃತವಾಗಿದ್ದವು.
ಶಿಕ್ಷಕರ ಕ್ಷೇತ್ರ: ಈ ಹಿಂದಿನ ಎರಡೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಈ ಚುನಾವಣೆಯಲ್ಲಿಯೂ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು, ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ. ಆದರೆ ಇವರಿಗೆ ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಪ್ರಬಲ ಸ್ಪರ್ಧೆವೊಡ್ಡಿದ್ದಾರೆ. ಕಳೆದ ಬಾರಿ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಭೋಜೇಗೌಡರವರು ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ವಿಶೇಷವಾಗಿದೆ.
ಜಯ ಗಳಿಸುವ ವಿಶ್ವಾಸವಿದೆ : ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್
ಕ್ಷೇತ್ರದ ಪ್ರಜ್ಞಾವಂತ ಮತದಾರರು ಈ ಬಾರಿಯ ಚುನಾವಣೆಯಲ್ಲಿ ತಮಗೆ ಬೆಂಬಲ ವ್ಯಕ್ತಪಡಿಸಿದ್ದು, ಜಯ ಗಳಿಸುವ ವಿಶ್ವಾಸವಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರದಲ್ಲಿನ ಬಿಜೆಪಿ ಪ್ರಾಬಲ್ಯ ಕೊನೆಯಾಗಲಿದೆ' ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ದಿನೇಶ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮತದಾನದ ದಿನದಂದು ಹಲವೆಡೆ ಬಿಜೆಪಿಯು ಮತದಾರರಿಗೆ ಆಮಿಷವೊಡ್ಡುವ ಕೆಲಸ ಮಾಡಿದೆ. ಹಣ ಹಂಚಿ ಮತ ಪಡೆಯುವ ಹೀನ ರಾಜಕಾರಣ ನಡೆಸಿದೆ ಎಂದು ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಬಿಜೆಪಿ ನಾನಾ ರೀತಿಯ ಕುತಂತ್ರ ರಾಜಕಾರಣ ನಡೆಸಿದೆ. ಆದರೆ ಇವ್ಯಾವುದಕ್ಕೂ ಪ್ರಜ್ಞಾವಂತ ಮತದಾರರು ಮಣೆ ಹಾಕಿಲ್ಲ. ತನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ' ಎಂದು ಎಸ್.ಪಿ.ದಿನೇಶ್‍ರವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪದವಿ-ಶಿಕ್ಷಕರ ಕ್ಷೇತ್ರಗಳೆರೆಡರಲ್ಲಿಯೂ ಬಿಜೆಪಿ ಜಯ: ಮುಖಂಡ ಡಿ.ಎಸ್.ಅರುಣ್
ವಿಧಾನ ಪರಿಷತ್‍ನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳೆರೆಡರಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಲ್ಲಿ ಜಯ ಸಾಧಿಸುವುದು ನಿಶ್ಚಿತವಾಗಿದೆ' ಎಂದು ಬಿಜೆಪಿ ಪಕ್ಷದ ಮುಖಂಡ ಡಿ.ಎಸ್.ಅರುಣ್‍ರವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಯು ಈ ಬಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮತದಾರರನ್ನು ನೊಂದಾವಣೆ ಮಾಡಿತ್ತು. ಮಳೆಯ ನಡುವೆಯೂ ಎರಡೂ ಕ್ಷೇತ್ರಗಳಿಗೆ ಉತ್ತಮ ಮತದಾನವಾಗಿದೆ. ಇದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. 27 ವಿಧಾನಸಭೆಗಳಲ್ಲಿ ಪಕ್ಷದ ಶಾಸಕರಿದ್ದಾರೆ. ಜೊತೆಗೆ ಇತರೆ ಅಂಶಗಳ ಆಧಾರದ ಮೇಲೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತದಾರರು ಒಲವು ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿಯಲಿದೆ ಎಂದು ಹೇಳಿದ್ದಾರೆ.