ಈ ಸರ್ಕಾರಿ ಶಾಲೆಗೆ ಪ್ರತಿಷ್ಠಿತ ಖಾಸಗಿ ಶಾಲೆಗಳಿಗಿಂತಲೂ ಅತೀ ಹೆಚ್ಚು ಬೇಡಿಕೆ
ಶಿವಮೊಗ್ಗ, ಜೂ. 12: ಒಂದೆಡೆ ಸಾಲುಸಾಲು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ, ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಕೊರತೆಯ ಕಾರಣದಿಂದಲೇ ಈಗಾಗಲೇ ಹಲವು ಸರ್ಕಾರಿ ಶಾಲೆಗಳ ಬಾಗಿಲು ಬಂದ್ ಆಗಿವೆ. ಈ ನಡುವೆ ಸರ್ಕಾರಗಳು ಕೋಟಿ ಕೋಟಿ ರೂ. ವ್ಯಯಿಸುತ್ತಿದ್ದರೂ, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಕೆಲ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಆದರೆ ಶಿವಮೊಗ್ಗ ನಗರದ ಈ ಸರ್ಕಾರಿ ಶಾಲೆ ಮಾತ್ರ ತದ್ವಿರುದ್ದ. ಈ ಶಾಲೆಗೆ ಮಕ್ಕಳ ಸೇರ್ಪಡೆ ಮಾಡಲು ಪ್ರತಿ ವರ್ಷ ಪೋಷಕರು ಮುಗಿಬೀಳುತ್ತಾರೆ. ನೂರಾರು ಮಕ್ಕಳು ಈ ಶಾಲೆಯಲ್ಲಿ ಪ್ರವೇಶ ಪಡೆಯುತ್ತಾರೆ. ಕೆಲ ಪೋಷಕರು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಬಿಡಿಸಿ, ಈ ಶಾಲೆಗೆ ಸೇರ್ಪಡೆ ಮಾಡುತ್ತಿದ್ದಾರೆ. ಆ ಮಟ್ಟಕ್ಕೆ ಈ ಸರ್ಕಾರಿ ಶಾಲೆಗೆ ಡಿಮ್ಯಾಂಡ್ ಇದೆ.
ಹೌದು. ರಾಜ್ಯದ ಏಕೈಕ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಹಲವು ದಶಕಗಳ ಇತಿಹಾಸವಿರುವ, ನಗರದ ಹೃದಯ ಭಾಗ ದುರ್ಗಿಗುಡಿ ಬಡಾವಣೆಯಲ್ಲಿರುವ ಶಾಲೆಯೇ ಸಾರ್ವಜನಿಕರ ಗಮನ ತನ್ನತ್ತ ಸೆಳೆದುಕೊಂಡಿರುವ ಶಾಲೆಯಾಗಿದೆ.
ಶಾಲೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಕೇವಲ ಬಡ-ಮಧ್ಯಮ ವರ್ಗದವರು ಮಾತ್ರವಲ್ಲ, ಶ್ರೀಮಂತ ಕುಟುಂಬದ ಮಕ್ಕಳು ಕೂಡ ಅಭ್ಯಾಸ ನಡೆಸುತ್ತಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕನ್ನಡ-ಇಂಗ್ಲಿಷ್ ಮಾಧ್ಯಮದಲ್ಲಿ ಸುಮಾರು 300 ಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಅತೀ ಹೆಚ್ಚು ಮಕ್ಕಳು ದಾಖಲಾದ ಹಿರಿಮೆಗೆ ಪಾತ್ರವಾಗಿದೆ.
ಸಾವಿರಕ್ಕೂ ಅಧಿಕ: ಈ ಶಾಲೆಯಲ್ಲಿ ಆಂಗ್ಲ ಹಾಗೂ ಕನ್ನಡ ಮಾಧ್ಯಮ ವಿಭಾಗವಿದೆ. ಎರಡೂ ವಿಭಾಗದಲ್ಲಿಯೂ 1 ರಿಂದ 10 ನೇ ತರಗತಿಯಿದೆ. ಆಂಗ್ಲ ಮಾಧ್ಯಮದಲ್ಲಿ 1 ರಿಂದ 7 ನೇ ತರಗತಿವರೆಗೆ ಅತ್ಯದಿಕ, 950 ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಇದೇ ವಿಭಾಗದ ಹೈಸ್ಕೂಲ್‍ನಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದಾರೆ.
ಉಳಿದಂತೆ ಕನ್ನಡ ಮಾಧ್ಯಮ ವಿಭಾಗದಲ್ಲಿ 1 ರಿಂದ 7 ನೇ ತರಗತಿಯವರೆಗೆ ಕೇವಲ 50 ಮಕ್ಕಳಿದ್ದು, ಹೈಸ್ಕೂಲ್ ವಿಭಾಗದಲ್ಲಿ 100 ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ ಎರಡೂ ವಿಭಾಗ ಸೇರಿ ಸುಮಾರು 1200 ಕ್ಕೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಹೆಗ್ಗಳಿಕೆ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸುವ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಶಿವಮೊಗ್ಗದ ದುರ್ಗಿಗುಡಿಯ ಈ ಸರ್ಕಾರಿ ಶಾಲೆಯಲ್ಲಿ ಹಲವು ದಶಕಗಳ ಹಿಂದಿನಿಂದಲೂ ಆಂಗ್ಲ ಮಾಧ್ಯಮ ವಿಭಾಗ ಕಾರ್ಯನಿರ್ವಹಿಸುತ್ತಿದೆ. 1 ರಿಂದ 10 ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ವಿಭಾಗವಿರುವ ರಾಜ್ಯದ ಏಕೈಕ ಸರ್ಕಾರಿ ಶಾಲೆ ಇದಾಗಿದೆ.
ಅಭಿವೃದ್ದಿ: 'ಭಾರೀ ಸಂಖ್ಯೆಯ ವಿದ್ಯಾರ್ಥಿಗಳಿದ್ದರೂ ಶಾಲೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿರಲಿಲ್ಲ. ಅವ್ಯವಸ್ಥೆಯ ಆಗರವಾಗಿತ್ತು. ಆದರೆ ಇತ್ತೀಚೆಗೆ ಜನಪ್ರತಿನಿಧಿಗಳ ವಿವಿಧ ನಿಧಿಯಡಿ ಕೊಂಚ ಅನುದಾನ ಲಭ್ಯವಾಗಿದೆ. ಸ್ಥಳೀಯ ಕಾರ್ಪೋರೇಟರ್ ಐಡಿಯಲ್ ಗೋಪಿಯವರ ಸಹಕಾರದಿಂದ ಹಲವು ಅಭಿವೃದ್ದಿ ಕೆಲಸಗಳು ಶಾಲೆಯಲ್ಲಿ ನಡೆದಿದೆ.
10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ, 3 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್, ಶಾಸಕರ ನಿಧಿಯಡಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಮಳೆಗಾಲದಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಲು ಇಂಟರ್ ಲಾಕ್, ಟೈಲ್ಸ್ ಅಳವಡಿಸುವ ಕೆಲಸ ನಡೆಯುತ್ತಿದೆ. ಸಭಾಭವನ, ಹೆಚ್ಚುವರಿ ಕೊಠಡಿ, ವೇದಿಕೆ ಸೇರಿದಂತೆ ಇನ್ನಷ್ಟು ಅಭಿವೃದ್ದಿ ಕೆಲಸಗಳಾಗಬೇಕಾಗಿದೆ. ಜನಪ್ರತಿನಿಧಿ, ಶಿಕ್ಷಣ ಇಲಾಖೆಯ ಸಹಕಾರದ ನಿರೀಕ್ಷೆಯಲ್ಲಿದ್ದೇವೆ' ಎಂದು ಶಾಲೆಯ ಶಿಕ್ಷಕರೋರ್ವರು ತಿಳಿಸುತ್ತಾರೆ.
ಒಟ್ಟಾರೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಮಕ್ಕಳು ಸೇರ್ಪಡೆಯಾಗುತ್ತಿರುವ ದುರ್ಗಿಗುಡಿ ಸರ್ಕಾರಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಪ್ರಾಮಾಣಿಕ ಗಮನ ಹರಿಸಬೇಕು. ಈ ಮೂಲಕ ಈ ಶಾಲೆಯನ್ನು ರಾಜ್ಯದಲ್ಲಿಯೇ ಮಾದರಿಯಾಗಿ ರೂಪಿಸುವ ಕೆಲಸ ಮಾಡಬೇಕಾಗಿದೆ.
ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ: ಕಾರ್ಪೋರೇಟರ್ ಐಡಿಯಲ್ ಗೋಪಿ
ದುರ್ಗಿಗುಡಿ ಸರ್ಕಾರಿ ಶಾಲೆಯು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿದೆ. ಈ ಶಾಲೆಯ ಆಂಗ್ಲ-ಕನ್ನಡ ಮಾಧ್ಯಮದಲ್ಲಿ ಸಾವಿರಾರು ಮಕ್ಕಳು ಅಭ್ಯಾಸ ನಡೆಸುತ್ತಿದ್ದಾರೆ. ಬಹುತೇಕರು ಬಡ-ಮಧ್ಯಮ ವರ್ಗದವರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಮಕ್ಕಳು ಈ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಇದು ನಿಜಕ್ಕೂ ಸಂತಸಕರ ಸಂಗತಿಯಾಗಿದೆ. ಈ ಸರ್ಕಾರಿ ಶಾಲೆ ಉಳಿಯಬೇಕು. ಹಾಗೂ ಇಲ್ಲಿನ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಪಾಲಿಕೆ ಹಾಗೂ ವಿವಿಧ ಜನಪ್ರತಿನಿಧಿಗಳ ಸಹಕಾರ ಪಡೆದು ಶೌಚಾಲಯ, ಹೊಸ ಕೊಠಡಿ, ಕಾಂಪೌಂಡ್ ನಿರ್ಮಾಣ, ಇಂಟರ್ ಲಾಕ್ ಟೈಲ್ಸ್ ಅಳವಡಿಸುವ ಕೆಲಸ ಮಾಡಿದ್ದೇನೆ. ಶಾಲೆಯಲ್ಲಿ ಇನ್ನಷ್ಟು ಅಭಿವೃದ್ದಿ ಕೆಲಸ ಮಾಡುವ ಯೋಜನೆ ರೂಪಿಸಿದ್ದೇನೆ. ಶಾಲೆಯ ಅಭಿವೃದ್ದಿಯ ನಿಟ್ಟಿನಲ್ಲಿ ಎಲ್ಲ ರೀತಿಯ ನೆರವು ನೀಡಲು ತಾವು ಸಿದ್ಧನಿದ್ದೇನೆ' ಎಂದು ಮಹಾನಗರ ಪಾಲಿಕೆ ಕಾರ್ಪೋರೇಟರ್ ಐಡಿಯಲ್ ಗೋಪಿ ತಿಳಿಸುತ್ತಾರೆ.
ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಿ : ಸಮಾಜ ಸೇವಕ ಶರವಣ
'ದುರ್ಗಿಗುಡಿ ಶಾಲೆಯಲ್ಲಿ ಅತೀ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿರುವುದು ನಿಜಕ್ಕೂ ಸಂತಸಕರ ಸಂಗತಿಯಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಕೌಶಲ್ಯಗಳ ಬೆಳವಣಿಗೆಗೂ ಒತ್ತು ನೀಡಬೇಕಾಗಿದೆ. ಪಠ್ಯೇತರ ಚಟುವಟಿಕೆಗೂ ಆದ್ಯತೆ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದುರ್ಗಿಗುಡಿ ಶಾಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಸರ್ವಾಂಗೀಣ ಅಭಿವೃದ್ದಿಗೆ ಕ್ರಮಕೈಗೊಳ್ಳಬೇಕು. ಯಾವುದೇ ಪ್ರತಿಷ್ಠಿತ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಅಭಿವೃದ್ದಿಪಡಿಸಬೇಕು' ಎಂದು ಸಮಾಜ ಸೇವಕ ಶರವಣರವರು ಹೇಳುತ್ತಾರೆ.
60 ಸಿಬ್ಬಂದಿಗಳಿದ್ದಾರೆ : ಮುಖ್ಯ ಶಿಕ್ಷಕ ದೀಪು
ಶಾಲೆಯ ಆಂಗ್ಲ ಹಾಗೂ ಕನ್ನಡ ಮಾಧ್ಯಮ ವಿಭಾಗದಲ್ಲಿ 1200 ಕ್ಕೂ ಹೆಚ್ಚು ಮಕ್ಕಳಿದ್ದಾರೆ. 60 ಬೋಧಕ - ಬೋಧಕೇತರ ಸಿಬ್ಬಂದಿಗಳಿದ್ದಾರೆ. ಖಾಸಗಿ ಶಾಲೆಗಳಿಂದಲೂ ಮಕ್ಕಳು ಸೇರ್ಪಡೆಯಾಗುತ್ತಿದ್ದಾರೆ. ಪ್ರಸ್ತುತ ವರ್ಷ ಎರಡೂ ವಿಭಾಗಗಳಲ್ಲಿ ಸುಮಾರು 300 ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ' ಎಂದು ದುರ್ಗಿಗುಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ದೀಪುರವರು ಮಾಹಿತಿ ನೀಡುತ್ತಾರೆ.