ಅವರು ಬಂದರು, ಮಾತನಾಡಿದರು, ಆರೆಸ್ಸೆಸ್ ಗೆದ್ದಿತು

Update: 2018-06-12 18:25 GMT

ಭಾಗ-2

ಆರೆಸ್ಸೆಸ್‌ನ ಹಠಮಾರಿತನ ಮತ್ತು ಅಲ್ಪಸಂಖ್ಯಾತರ ವಿರುದ್ಧ ತಾನು ಹೊಂದಿದ್ದ ಹಿಂಸೆಯ ಸಿದ್ಧಾಂತವನ್ನು ಬದಲಿಸಿಕೊಳ್ಳಲು ನಿರಾಕರಿಸುವುದಕ್ಕಾಗಿ ಗೋಳ್ವಾಲ್ಕರ್‌ರವರನ್ನು ತರಾಟೆಗೆ ತೆಗೆದುಕೊಂಡಿದ್ದ ಪಟೇಲ್‌ರವರಷ್ಟು ನೇರವಾಗಿ ಮುಖರ್ಜಿ ಮಾತಾಡಬೇಕೆಂದು ಯಾರೂ ನಿರೀಕ್ಷಿಸಲಿಲ್ಲ. ಮುಖರ್ಜಿಯವರು ರಾಜತಾಂತ್ರಿಕ ಭಾಷೆ ಬಳಸಿದರು, ಆದರೆ ಅವರು ಪ್ರಾಮಾಣಿಕವಾಗಿ ಮಾತಾಡಲಿಲ್ಲ. ‘‘ಕೊಲೆ ಮತ್ತು ಗುಂಪು ಥಳಿತ’’ ಎಂದು ಹೇಳಬೇಕಾದಲ್ಲಿ ಅವರು ‘‘ಹಿಂಸೆ’’ ಎಂದರು. ‘‘ಹಿಂಸೆಯ ಹೃದಯದಲ್ಲಿ ಅಂಧಕಾರ ಇದೆ’’ ಎಂದರು. ಹಿಂಸೆಯ ತಳದಲ್ಲಿ, ಮೂಲದಲ್ಲಿ ಆರೆಸ್ಸೆಸ್ ಮತ್ತು ಅದರ ಸಹಸಂಸ್ಥೆಗಳು ಹರಡಿರುವ ಮುಸ್ಲಿಂ-ವಿರೋಧಿ ಹಾಗೂ ಕ್ರಿಶ್ಚಿಯನ್- ವಿರೋಧಿ ದ್ವೇಷ ಇದೆ ಎಂದು ಅವರು ಹೇಳಬೇಕಾಗಿತ್ತು. ಕಿಡಿಗೇಡಿ ಗುಂಪುಗಳು ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಮತ್ತು ರಾಷ್ಟ್ರೀಯತೆಯ ಹೆಸರಲ್ಲಿ ನಡೆಸಲಾಗುತ್ತಿರುವ ಗೂಂಡಾಗಿರಿಯ ಬಗ್ಗೆ ಅವರು ಮಾತಾಡಬೇಕಾಗಿತ್ತು. ಇದಕ್ಕೆ ಬದಲಾಗಿ, ಗುಜರಾತಿನ ಓರ್ವ ಗೆಳೆಯ ಸರಿಯಾಗಿಯೇ ಹೇಳಿದ ಹಾಗೆ, ಮುಖರ್ಜಿಯವರು ‘‘ಎಲ್ಲಿ ಯಾವ ಶ್ರೋತೃಗಳಿಗೆ ಬೇಕಾದರೂ ಮಾಡಬಹುದಾದ, ಯಾರು ಹೇಗೆ ಬೇಕಾದರೂ ಅರ್ಥೈಸಬಹುದಾದ ‘‘ಪವಿತ್ರವಾದ ಒಂದು ಭಾಷಣ’’ ಮಾಡಿದರು.

ಭಾರತವು ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಒಂದು ಅರ್ಥವ್ಯವಸ್ಥೆ ಎಂದು ಹೇಳಿದಾಗ ಮುಖರ್ಜಿಯವರು ಕೇವಲ ತನ್ನ ಅಭ್ಯಾಗತರನ್ನೇ ಹೊಗಳಿದರು. ಆನಂದದ ಸೂಚ್ಯಂಕ (ಹ್ಯಾಪಿನೆಸ್ ಇಂಡೆಕ್ಸ್)ದಲ್ಲಿ ಭಾರತ ತುಂಬ ಕೆಳಗೆ ಇದೆ ಎಂದು ಅವರು ದೂರಿದರು. ಆದರೆ ಆನಂದವಾಗಿ, ಸುಖವಾಗಿ ಇಲ್ಲದವರು ಯಾರೆಂದು ಅವರು ಹೇಳಲಿಲ್ಲ ಅಥವಾ ಅವರ ಅಸಂತೋಷದ, ದುಃಖದ ಮೂಲ ಯಾವುದೆಂದು ಅವರು ಗುರುತಿಸಲಿಲ್ಲ. ಗುರುತಿಸುವುದಾಗಿದ್ದಲ್ಲಿ, ಅವರು ಸಾಯುತ್ತಿರುವ/ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಾಗೂ ಒಂದು ಕೊಲೆಗಡುಕ ಆರ್ಥಿಕ ಆಡಳಿತದ ವಿರುದ್ಧ ಸೆಣೆಸಾಡುತ್ತಿರುವ ರೈತರ ಬಗ್ಗೆ ಮಾತಾಡಬಹುದಿತ್ತು ತಾವು ಈ ಮಹಾನ್ ದೇಶದಲ್ಲಿ ಅನಪೇಕ್ಷಿತರು ಅಂತ ಯಾವ ಯುವಜನತೆಗೆ ಅನ್ನಿಸುತ್ತಿದೆಯೋ ಆ ಯುವಜನಾಂಗದ ಬಗ್ಗೆ ಅವರು ಮಾತಾಡಬಹುದಿತ್ತು. ಎಲ್ಲೆಡೆ ದಾಳಿಗೊಳಗಾಗುತ್ತಿರುವ, ಹಲ್ಲೆಗೊಳಗಾಗುತ್ತಿರುವ ದಲಿತರ ಬಗ್ಗೆ ಅವರು ಮಾತಾಡಬಹುದಿತ್ತು ಮತ್ತು ಖಂಡಿತವಾಗಿಯೂ ಸರಕಾರ ಮತ್ತು ಆರೆಸ್ಸೆಸ್‌ನ ಗುರಿಯಾಗಿರುವ ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಬಗ್ಗೆ ಮಾತಾಡಬಹುತ್ತು. ಅವರು ಇದ್ಯಾವುದರ ಬಗ್ಗೆಯೂ ಮಾತಾಡಲಿಲ್ಲ. ಮಾತಾಡಿದಲ್ಲಿ ಅದು ಒಂದು ಗಂಭೀರ ಸನ್ನಿವೇಶದಲ್ಲಿ ಅಪಸ್ವರ ಎತ್ತಿದಂತಾಗುತ್ತಿತ್ತು.
ಜನರು ಧನಾತ್ಮಕತೆ (ಪಾಸಿಟಿವಿಟಿ)ಯನ್ನು ಇಷ್ಟಪಡುತ್ತಾರಾದ್ದರಿಂದ ದಿಲ್ಲಿಯ ಯಶಪಾಲ್ ಸಕ್ಸೇನಾ ಮತ್ತು ಅಸನ್ಸೋಲ್‌ನ ಇಮಾಮ್ ರಶೀದಿಯವರಂತಹ, ಮಾನವೀಯತೆಯನ್ನು ಮೆರೆದವರ ಬಗ್ಗೆ ಮಾತಾಡಬಹುದಿತ್ತು, ಈ ದೇಶದ ಜನತೆಯ ವಿರುದ್ಧ ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳು, ಸಂಘಟನೆಗಳು ನಡೆಸಿದ ಕೋಮು ಹಿಂಸೆಗೆ ಇವರ ಗಂಡು ಮಕ್ಕಳು ಬಲಿಯಾಗಿದ್ದರು ಅಥವಾ ತಮ್ಮ ದೇವಾಲಯಗಳಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟಗಳನ್ನು ಏರ್ಪಡಿಸಿದ್ಧ ಅಯೋಧ್ಯೆಯ ಸಾಧುಗಳ ಬಗ್ಗೆ ಅಥವಾ ಹಿಂದೂಗಳನ್ನು ಮುಸ್ಲಿಮರಿಗೆ ಹತ್ತಿರ ತರುತ್ತಿರುವ, ವಿಭಜನೆಯ ವಿರುದ್ಧ ಹೋರಾಡುತ್ತಿರುವ ಗುರ್ಗಾಂವ್‌ನ ನಾಗರಿಕರ ಶ್ಲಾಘ್ಯ ಪ್ರಯತ್ನಗಳ ಬಗ್ಗೆ ಹೇಳಬಹುದಿತ್ತು. ಮುಖರ್ಜಿಯವರಿಗೆ ಇವರ್ಯಾರ ನೆನಪೂ ಆಗಲಿಲ್ಲ. ಅವರು ಇವರನ್ನು ಜ್ಞಾಪಿಸಿಕೊಳ್ಳಬಹುದಿತ್ತು. ಆದರೆ ಅವರು ಜ್ಞಾಪಿಸಿಕೊಳ್ಳದಿರಲು ನಿರ್ಧರಿಸಿದರು.
ಜನಸಾಮಾನ್ಯ ಭಾರತೀಯರ ಬದುಕನ್ನು ಛಿದ್ರಗೊಳಿಸುತ್ತಿರುವ ವಿಭಜಕ ಶಕ್ತಿಗಳ ಬಗ್ಗೆ ಮಾತಾಡದೆ, ತಾನು ಇವುಗಳ ಮಟ್ಟಕಿಂತ ಮೇಲಿನವನೆಂಬಂತೆ ಎತ್ತರದಲ್ಲಿ ನಿಂತು, ಟ್ವಿಟರ್‌ನಲ್ಲಿ ತನ್ನನ್ನು @ಸಿಟಿಝನ್ ಮುಖರ್ಜಿ ಎಂದು ಕರೆದುಕೊಳ್ಳುವ ಮುಖರ್ಜಿಯವರು ಓರ್ವ ನಿಜವಾದ ನಾಗರಿಕನ ಕರ್ತವ್ಯಗಳನ್ನು ಮಾಡಲಿಲ್ಲ. ನಾಗರಿಕತೆಯೊಂದಿಗೆ ಬರುವ ಹಕ್ಕುಗಳನ್ನು ಯಾರಿಗೆ ನಿರಾಕರಿಸಲಾಗಿದೆಯೋ, ಅಂತಹವರ ಜತೆ ನಿಲ್ಲುವ ಮೂಲಕ ನಾಗರಿಕತ್ವ ಬೆಳೆದುಬರುತ್ತದೆ; ನಾಗರಿಕತ್ವವನ್ನು ಪಡೆಯಲಾಗುತ್ತದೆ. ‘‘ಶ್ರೇಷ್ಠ ಪುತ್ರನ’’ ಸಂದೇಶ ನಿಜವಾಗಿ ಏನು?
ಸಮಾವೇಶ ಮುಗಿದ ಬಳಿಕ, ‘‘ಸಂಘವು ಸಂಘವಾಗಿಯೇ ಉಳಿಯುತ್ತದೆ ಮತ್ತು ಪ್ರಣವ್ ಮುಖರ್ಜಿ ಪ್ರಣವ್ ಮುಖರ್ಜಿಯಾಗಿಯೇ ಉಳಿಯುತ್ತಾರೆ’’ ಎಂದು ಹೇಳಿದಾಗ ಭಾಗವತ್‌ರವರು ಸಮಾವೇಶದ ಪರಿಣಾಮವನ್ನು ನಿರೀಕ್ಷಿಸಿಯೇ ಹಾಗೆ ಹೇಳಿದರು.
ಭಾಗವತ್ ಹೇಳಿದ್ದು ಸರಿ, ನಾಗ್ಪುರದಲ್ಲಿ ಸ್ವಯಂ ಸೇವಕರ ಗೌರವರಕ್ಷಾ ಪರೇಡ್‌ಗೆ ರಾಷ್ಟ್ರವು ಸಿದ್ಧತೆ ನಡೆಸುತ್ತಿರುವಾಗಲೇ, ಸ್ವಯಂಸೇವಕರಲ್ಲೊಬ್ಬರು ಅವರ ಹಿರಿಯರಾದ ಕರ್ನಾಟಕದ ಬಿಜೆಪಿ ಶಾಸಕ ಬಸವನ ಗೌಡ ಯತ್ನಾಳ್, ಮುಸ್ಲಿಮರಿಗೆ ಯಾವ ಕೆಲಸವನ್ನೂ ಮಾಡಿಕೊಡಬೇಡಿ, ಅವರಿಗಾಗಿ ಕೆಲಸ ಮಾಡಬೇಡಿ ಎಂದು ಕಾರ್ಪೊರೇಟರ್‌ಗಳಿಗೆ ಹೇಳುತ್ತಿದ್ದರು.
‘‘ನಾನು ನಿಮಗೆ ಕಾರ್ಪೊರೇಟರ್‌ಗಳಿಗೆ ಹೇಳುತ್ತಿದ್ದೇನೆ. ಮುಸ್ಲಿಮರ ಕಲ್ಯಾಣಕ್ಕಾಗಿ ಶ್ರಮಿಸಬೇಡಿ, ನೀವು ಹಿಂದೂಗಳ ಕಲ್ಯಾಣಕ್ಕಾಗಿ ಮಾತ್ರ ಶ್ರಮಿಸಬೇಕು, ಕೆಲಸ ಮಾಡಬೇಕು. ನಮ್ಮನ್ನು ಅಧಿಕಾರಕ್ಕೆ ತಂದವರು ಯಾರು? ತಲೆ ಟೋಪಿ (ಸ್ಕಲ್ ಕ್ಯಾಪ್) ಅಥವಾ ಬುರ್ಖಾಧರಿಸಿ ನನ್ನ ಕಚೇರಿಗೆ ಬರಕೂಡದೆಂದು ನಾನು ನನ್ನ ಸಿಬ್ಬಂದಿಗೆ ಹೇಳಿದ್ದೇನೆ.’’
ಯತ್ನಾಳ್‌ರವರು ‘ಭಾರತದ ಶ್ರೇಷ್ಠ ಪುತ್ರ’ ಹೆಡಗೇವಾರ್‌ರವರನ್ನು ಮತ್ತು ಅವರ ಮಾತೃಸಂಸ್ಥೆ ಆರೆಸ್ಸೆಸ್‌ನ್ನು ಅನುಸರಿಸುತ್ತಿದ್ದಾರೆ; ಅವರು ಹೇಳಿದ್ದನ್ನೇ ಮಾಡುತ್ತಿದ್ದಾರೆ. ನಾವು ಅವರನ್ನು ತೀವ್ರಗಾಮಿ ಅಭಿಪ್ರಾಯಗಳಿರುವ ಒಬ್ಬ ವಿಕ್ಷಿಪ್ತ ಎಂದು ಕರೆಯುವ ಮೊದಲು, ಅವರು ಭಾರತೀಯ ಪ್ರಜಾಪ್ರಭುತ್ವವಾದಿಗಳ ಡಾರ್ಲಿಂಗ್, ಹೆಮ್ಮೆಯ ಓರ್ವ ಸ್ವಯಂಸೇವಕ, ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಓರ್ವ ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂಬುದನ್ನು ನಾವು ನಮಗೇ ಜ್ಞಾಪಿಸಿಕೊಳ್ಳಬೇಕಾಗಿದೆ. ಶಬ್ದಗಳ ಹಿಂದಿರುವ ಕ್ರೌರ್ಯವನ್ನು, ದಾಳಿಕೋರ ಸ್ವಭಾವವನ್ನು ಸುಂದರವಾದ ಶಬ್ದಗಳಿಂದ ಮರೆಮಾಚಲು ಸಾಧ್ಯವಾಗುವುದಿಲ್ಲ.
ಕೃಪೆ: thewire

Writer - ಅಪೂರ್ವಾನಂದ್

contributor

Editor - ಅಪೂರ್ವಾನಂದ್

contributor

Similar News

ಜಗದಗಲ
ಜಗ ದಗಲ