ಬದುಕಿನ ಲಯವನ್ನು ಹಿಡಿದಿಡುವ ರಹಮತ್
ಕನ್ನಡದ ಅಪರೂಪದ ಚಿಂತಕರು, ಸಂಶೋಧಕರಲ್ಲಿ ಡಾ. ರಹಮತ್ ತರೀಕೆರೆ ಒಬ್ಬರು. ಸೂಫಿ ಚಿಂತನೆ, ಸಂಸ್ಕೃತಿ ಚಿಂತನೆಗಳ ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆ ಗಮನಾರ್ಹ. ‘ಸಣ್ಣ ಸಂಗತಿ’ ಅವರ ಇತ್ತೀಚಿನ ಕೃತಿ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಬಿಡಿ ಬರಹಗಳನ್ನು ಈ ಕೃತಿಯಲ್ಲಿ ಒಟ್ಟು ಸೇರಿಸಲಾಗಿದೆ. ನೆನಪುಗಳು, ವ್ಯಕ್ತಿ ಚಿತ್ರಗಳು, ಶ್ರದ್ಧಾಂಜಲಿಗಳು, ಪುಸ್ತಕ ವಿಮರ್ಶೆ, ತಿರುಗಾಟದ ಅನುಭವ ಮೊದಲಾದವುಗಳನ್ನು ಲಹರಿ ರೂಪದಲ್ಲಿ ಹರಿಯ ಬಿಟ್ಟಿದ್ದಾರೆ. ಅಕಡಮಿಕ್ ಶಿಸ್ತಿನಾಚೆಗೆ ತಮ್ಮ ತಿಳಿವಿನ ನೋಟವನ್ನು ಹರಿಯಬಿಟ್ಟಿದ್ದಾರೆ. ಇಲ್ಲಿ ಒಟ್ಟು 70 ಚಿಂತನಾ ಬರಹಗಳಿವೆ. ಪುಸ್ತಕ ತೆರೆದುಕೊಳ್ಳುವುದೇ ‘ಸಣ್ಣ ಸಂಗತಿ’ ತಲೆಬರಹದ ಲೇಖನದ ಮೂಲಕ. ಯಾವುದು ಸಣ್ಣದು, ಯಾವುದು ದೊಡ್ಡದು ಎನ್ನುವ ನೆಲೆಯಲ್ಲಿ ಇಲ್ಲಿ ಚರ್ಚೆ ನಡೆಸಿದ್ದಾರೆ. ಗಾತ್ರ ಸೂಚಕವಾದ ಸಣ್ಣ, ದೊಡ್ಡ ಎಂಬ ಈ ಎದುರಾಳಿ ಅಂಶಗಳು ಒಂದು ಹಂತದವರೆಗೆ ವಾಸ್ತವ. ಆದರೆ ಸಣ್ಣದು ದೊಡ್ಡದಾಗುವ, ದೊಡ್ಡದು ಸಣ್ಣದಾಗುವ ಎರಡೂ ಸೇರಿ ಮತ್ತೊಂದಾಗುವ ಚೋದ್ಯದ ಬಗ್ಗೆ ಇಲ್ಲಿ ಕುತೂಹಲಕಾರಿ ವಿವರಣೆಗಳಿವೆ.
ಪಂಡಿತ್ ರಾಮಭಾವು ಬಿಜಾಪುರೆ ಅವರೊಂದಿಗಿನ ಭೇಟಿಯ ಕ್ಷಣಗಳನ್ನು ಹಿಡಿದಿಡುವ ‘ಉಳಿದು ಹೋದ ಬಯಕೆ’ ಪುರುಷಾಹಮಿಕೆಗೆ ಬಲಿಯಾದ ಹೆಣ್ಣಿನ ಕುರಿತಂತೆ ಮಾತನಾಡುವ ‘ಸಂಗಾತಿಯ ವೌನ’, ಲಾಭಕೋರ ವೌಲ್ಯಗಳಿಗೆ ಬಲಿಯಾಗುವ ಮಕ್ಕಳ ಎಳೆತನವನ್ನು ಕಳವಳದಿಂದ ನೋಡುವ ‘ಗೆಳೆಯನ ಮಕ್ಕಳು’, ಸರಳತೆಯಲ್ಲಿ ಹುಟ್ಟುವ ಘನತೆಯನ್ನು ವಿವರಿಸುವ ‘ಸರಳತೆಯ ಘನತೆ’, ದೈನಂದಿನ ಬದುಕು, ವ್ಯವಹಾರಗಳಲ್ಲಿ ಕನ್ನಡ ಬಳಕೆಯ ಕೊರತೆಯ ಪರಿಣಾಮವನ್ನು ಹೇಳುವ ‘ಮನೆ ಖರೀದಿ ಪತ್ರ’, ಸಂತೆಯ ಸದ್ದು ಗದ್ದಲದ ಇಂಪನ್ನು ಹಿಡಿದಿಡುವ ‘ಸಂತೆಯ ಗೌಜು’, ಯುಗಾದಿಯು ಮೂಡಿಸುವ ಅನುಭವಗಳನ್ನು ಕಟ್ಟಿಕೊಡುವ ‘ಉಗಾದಿ ಚಿತ್ರಗಳು’....ಹೀಗೆ....ಸಹಜವಾಗಿ ಹರಡಿ ನಿಂತ ಕಾಡಿನೊಳಗೆ ಹೊಕ್ಕ ಅನುಭವ ನಮ್ಮದು. ಲೇಖನದಿಂದ ಲೇಖನಕ್ಕೆ ಹೊಸದಾಗುತ್ತಾ, ಭಿನ್ನ ಭಿನ್ನ ಅನುಭವಗಳನ್ನು ಕೊಡುತ್ತಾ ಹೋಗುತ್ತಾರೆ ಲೇಖಕರು. ಸಂಶೋಧಕ, ಅಧ್ಯಾಪಕ ರಹಮತ್ ತರೀಕೆರೆಗಿಂತ ಭಿನ್ನವಾದ ರಹಮತ್ ಅವರನ್ನು ಈ ಲೇಖನಗಳಲ್ಲಿ ಕಾಣಬಹುದು. ಬಹುಶಃ ಅವರ ನಿರಂತರ ಅಲೆದಾಟ, ಪ್ರವಾಸ ಇಲ್ಲಿರುವ ಪ್ರತಿ ಲೇಖನದ ಮೆೀಲೂ ತನ್ನ ಪರಿಣಾಮವನ್ನು ಬೀರಿದೆ.
ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಒಟ್ಟು ಪುಟಗಳು 260. ಮುಖಬೆಲೆ 225 ರೂ.