ಮಹಿಳಾ ನಿಷ್ಠ ಬರಹಗಳು....
ಚಂದ್ರಕಲಾ ನಂದಾವರ ಅವರು ಲೇಖಕಿಯಾಗಿ, ಕವಯಿತ್ರಿಯಾಗಿ, ಸಂಘಟಕಿಯಾಗಿ ಈಗಾಗಲೇ ನಾಡಿನಾದ್ಯಂತ ಗುರುತಿಸಿಕೊಂಡವರು. ತಮ್ಮ ಮಹಿಳಾನಿಷ್ಠ ಬರಹಗಳಿಂದ ಅವರು ಗಮನಸೆಳೆದಿದ್ದಾರೆ. ‘ಹೊಸ್ತಿಲಿನಿಂದೀಚೆಗೆ’ ಕೃತಿಯ ಬಳಿಕ ಇದೀಗ ಅವರು ‘ಹೆಣ್ಣಿಗೆ ವರ್ತಮಾನವಿಲ್ಲವೆ’ ಕೃತಿಯನ್ನು ಹೊರತಂದಿದ್ದಾರೆ. ಕೃತಿಯ ಹೆಸರೇ ಹೇಳುವಂತೆ ಈ ಕೃತಿ, ಮಹಿಳಾ ಕೇಂದ್ರಿತವಾಗಿದೆ. ಹೆಣ್ಣಿನ ಕಣ್ಣಲ್ಲಿ ಸಮಾಜವನ್ನು ನೋಡಿದ್ದು ಮಾತ್ರವಲ್ಲ, ಮಹಿಳೆಯರ ಬದುಕನ್ನು ಅರ್ಥೈಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.ಮೊದಲ ಎರಡು ಲೇಖನಗಳು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಸಮ್ಮೇಳನಕ್ಕೆ ಸಂಬಂಧಪಟ್ಟುದಾದರೆ, ಉಳಿದುದು ಮಹಿಳೆಗೆ ಸಂಬಂಧಿಸಿ ಸಾಂದರ್ಭಿಕ ಲೇಖನಗಳು. ಇಲ್ಲಿ ಒಟ್ಟು 18 ಲೇಖನಗಳಿವೆ. ‘ಮಹಿಳಾ ಸ್ವಾತಂತ್ರ ಮತ್ತು ಗಾಂಧೀಜಿ’ ಲೇಖನದಲ್ಲಿ ಗಾಂಧೀಜಿ ಹೇಗೆ ಮಹಿಳಾ ಸ್ವಾತಂತ್ರವನ್ನು ಕಂಡುಕೊಂಡಿದ್ದರು ಎನ್ನುವುದನ್ನು ವಿಶ್ಲೇಷಿಸುತ್ತಾರೆ. ಸ್ವಾತಂತ್ರ ಪೂರ್ವ ಮಹಿಳೆಯ ಸ್ವಾತಂತ್ರದ ಕಲ್ಪನೆ ಮತ್ತು ಇತ್ತೀಚಿನ ಸ್ವಾತಂತ್ರದ ಕಲ್ಪನೆಗಳನ್ನು ತುಲನೆ ಮಾಡುತ್ತಾ, ಭಾರತೀಯ ಮಹಿಳೆಯು ಸ್ವಾತಂತ್ರ, ಸಮಾನತೆಯೊಂದಿಗೆ ತನ್ನ ಅಸ್ಮಿತೆ ಹಾಗೂ ಆತ್ಮಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಡುತ್ತಾರೆ. ಹಾಗೆಯೇ ಸ್ವಾತಂತ್ರ ಮತ್ತು ಸ್ವಚ್ಛಂದತೆಯ ನಡುವಿನ ಗೆರೆಯನ್ನೂ ಅವರು ಈ ಲೇಖನದಲ್ಲಿ ಗುರುತಿಸುತ್ತಾರೆ. ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ವಿಮರ್ಶಿಸುತ್ತಾ, ಮುಸ್ಲಿಮ್ ಹೆಣ್ಣು ಮಕ್ಕಳ ಬದುಕಿನ ದುರಂತಗಳನ್ನು ಚರ್ಚಿಸುತ್ತಾರೆ. ಒಬ್ಬ ಮುಸ್ಲಿಮ್ ಲೇಖಕಿ ಎದುರಿಸಬೇಕಾದ ಸವಾಲುಗಳನ್ನೂ ಈ ಕೃತಿಯಲ್ಲಿ ಚರ್ಚಿಸುತ್ತಾರೆ. ಮದುವೆ ಹೇಗೆ ಪುರುಷನ ಸರ್ವಾಧಿಕಾರಿತನದಿಂದ ಹೆಣ್ಣಿನ ಬದುಕನ್ನು ನಿಯಂತ್ರಿಸುತ್ತಾ ಅಂತಿಮವಾಗಿ ಹೆಣ್ಣಿನ ವ್ಯಕ್ತಿತ್ವವನ್ನೇ ನಾಶ ಮಾಡಲು ಮುಂದಾಗುತ್ತದೆ ಎನ್ನುವುದನ್ನು ಈ ಲೇಖನ ಹೇಳುತ್ತದೆ. ಸಂಚಿಯ ಹೊನ್ನಮ್ಮಳ ಹದಿಬದೆಯ ಧರ್ಮವನ್ನು ‘ತನ್ನೊಡಲಿಗೆ ತನ್ನ ಮನವ ಕಾಪಿಡುವುದು’ ಎಂಬ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಆಕೆಯ ಮಾತುಗಳ ಮಿತಿಗಳನ್ನು ಉಲ್ಲೇಖಿಸುತ್ತಲೇ ಅದು ಹೆಣ್ಣನ್ನು ನೋಡಿದ ರೀತಿಯನ್ನು ಲೇಖಕಿ ವಿವರಿಸುತ್ತಾರೆ. ‘ಪ್ರಸ್ತುತ ಸಮಾಜದಲ್ಲಿ ಯುವತಿಯರು’ ಲೇಖನದಲ್ಲಿ ಆಧುನಿಕ ಮಹಿಳೆ ಎದುರಿಸುವ ಸವಾಲನ್ನು ವಿಶ್ಲೇಷಿಸುತ್ತಾರೆ. ಕೌಟುಂಬಿಕವಾಗಿ, ಸಾಮಾಜಿಕವಾಗಿ ಆಧುನಿಕ ಯುವತಿಯರು ಎದುರಿಸುತ್ತಿರುವ ಸವಾಲು ಮತ್ತು ಅದನ್ನು ನಿಭಾಯಿಸಬಹುದಾದ ದಾರಿ ಈ ಲೇಖನದಲ್ಲಿದೆ. ಮರ್ಯಾದಾ ಹತ್ಯೆ, ಮಹಿಳೆಯ ಆತ್ಮಗೌರವ, ಮಹಿಳಾ ಯಕ್ಷಗಾನ, ತುಳು ಸಂಸ್ಕೃತಿಯಲ್ಲಿ ಮಹಿಳೆ, ಕರಾವಳಿಯ ಮಾತೃಮೂಲೀಯ ಸಂಸ್ಕೃತಿಗಳ ಸ್ಥಿತ್ಯಂತರಗಳು ಇಲ್ಲಿರುವ ಇನ್ನಿತರ ಮುಖ್ಯ ಲೇಖನಗಳು. ಕೊನೆಯ ಲೇಖನದಲ್ಲಿ ಗೌರಿ ಲಂಕೇಶ್ ಅವರನ್ನು ಸ್ಮರಿಸಿದ್ದಾರೆ.
ಹೇಮಾಂಶು ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 130. ಮುಖಬೆಲೆ 125 ರೂ. ಆಸಕ್ತರು 94802 65441 ದೂರವಾಣಿಯನ್ನು ಸಂಪರ್ಕಿಸಬಹುದು.