ಸರಕಾರಿ ಶಾಲೆಗಳ ಉಳಿವಿಗೆ ಬೇಕು ಸೂಕ್ತ ಸರಕಾರದ ನಿಯಮ

Update: 2018-06-24 18:34 GMT

ಇತ್ತೀಚಿಗೆ ತುಂಬಾ ಚರ್ಚಿತವಾಗುತ್ತಿರುವ ವಿಷಯವೆಂದರೆ ಮುಚ್ಚುತ್ತಿರುವ ಸರಕಾರಿ ಶಾಲೆಗಳು. ಭಾರತಕ್ಕೆ ಸ್ವಾತಂತ್ರ ಬಂದು 70 ವರ್ಷಗಳು ಕಳೆದರೂ ಶಿಕ್ಷಣ ಕ್ಷೇತ್ರದಲ್ಲಿ 100ರಷ್ಟು ಸಾಕ್ಷರತೆ ಸಾಧನೆ ಸಾಧ್ಯವಾಗುತ್ತಿಲ್ಲ. 2011ರ ಜನಗಣತಿ ಪ್ರಕಾರ ಶೇ. 74ರಷ್ಟು ಜನತೆ ಮಾತ್ರ ಸಾಕ್ಷರತೆ ಹೊಂದಿದ್ದಾರೆ, ಇನ್ನೂ ಉಳಿದ ಶೇ. 26 ರಷ್ಟು ಮಕ್ಕಳು ಶಾಲೆಯನ್ನು ನೋಡದ, ಅಕ್ಷರ ಜ್ಞಾನವಿಲ್ಲದವರು ಇದ್ದಾರೆ. ಕರ್ನಾಟಕದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.
ಭಾರತ ಹಳ್ಳಿಗಳನಾಡು ವೈವಿಧ್ಯಮಯವಾದ ಭೌಗೋಳಿಕತೆ, ಜಾತಿ-ಜನಾಂಗ, ಧರ್ಮ, ಸಂಸ್ಕೃತಿ, ಶಿಕ್ಷಣ, ಭಾಷೆ ಇತ್ಯಾದಿಗಳನ್ನು ಹೊಂದಿರುವ ಈ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಜನಸಂಖ್ಯೆ ಹೆಚ್ಚಳ, ಭ್ರ್ರಷ್ಟಾಚಾರ, ಕೋಮುಗಲಭೆ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಶಿಕ್ಷಣವು ಒಂದು ಪ್ರಮುಖ ಅಸ್ತ್ರ.
ಶಿಕ್ಷಣಕ್ಕೆಂದು ಸಂವಿಧಾನದ ಮೂಲಕ 45ನೇ ಮತ್ತು 21 (ಎ) ವಿಧಿಯಲ್ಲಿ, ಎಲ್ಲರಿಗೂ ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿದೆ. ಶಿಕ್ಷಣದ ಸಾರ್ವತ್ರೀಕರಣ ಸಾಧನೆಗಾಗಿ ಬಡ ಮಕ್ಕಳನ್ನು ಆರ್‌ಟಿಇ ಮೂಲಕ ಶೇ.25 ರಷ್ಟು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶ ದೊರಕಿಸಿಕೊಡಲಾಗುತ್ತಿದೆ. ಆದರೆ ಈ ಕ್ರಮದಿಂದ ಸರಕಾರ ಖಾಸಗಿ ಶಾಲೆಗಳಿಗೆ ಅಪಾರ ಪ್ರಮಾಣದ ಹಣವಿನಿಯೋಗ ಮಾಡುತ್ತಿದೆ. 2017-18 ನೇ ಸಾಲಿನಲ್ಲಿ ಸುಮಾರು 350 ಕೋಟಿ ರೂ. ಖಾಸಗಿ ಶಾಲೆಗಳಿಗೆ ನೀಡಲಾಗಿದೆ.
ಸ್ವಾತಂತ್ರ ಸಿಕ್ಕಿದಾಗಿನಿಂದ ಇವತ್ತಿನವರೆಗೂ ಗ್ರಾಮೀಣ ಮತ್ತು ನಗರ ಪ್ರದೇಶದ ನಡುವಿನ ಶಿಕ್ಷಣದ ಅಸಮಾನತೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಶಿಕ್ಷಣದ ಮೂಲಕ ದೇಶದ ಬೆಳವಣಿಗೆ ಸಾಧ್ಯವಾಗಿದ್ದರೂ ಖಾಸಗಿ-ಸರಕಾರಿ ಎಂಬ ಭೆೇದ-ಭಾವ ಹೆಚ್ಚಾಗುತ್ತಿದೆ. ಖಾಸಗಿ ಶಾಲೆಗಳು ಶಿಕ್ಷಣದ ಹೆಸರಿನಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ.
ಈ ರೀತಿಯ ಅಸಮಾನತೆಯನ್ನು ಸಾರುವ ಶಾಲಾ ವಿಧಗಳು, ವಿಭಿನ್ನ ಪಠ್ಯಕ್ರಮಗಳು ಮತ್ತು ವಿವಿಧ ಆಡಳಿತ ಮಂಡಳಿಗಳಿಂದ ಶಿಕ್ಷಣದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗುತ್ತಿದೆ. ಆದ್ದರಿಂದ ದೇಶವ್ಯಾಪಿ 'ಏಕರೀತಿಯ ಶಿಕ್ಷಣ ವ್ಯವಸ್ಥೆ'ಯ ಅವಶ್ಯಕತೆ ಇದೆ ಮತ್ತು ಖಾಸಗಿ ಶಾಲೆಗಳು ರಾಷ್ಟ್ರೀಕೃತ ಶಾಲೆಗಳನ್ನು ಸರಕಾರ ಅವುಗಳ ನಿರ್ವಹಣೆಯನ್ನು ಮಾಡಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿದೆ.
ಇತ್ತೀಚೆಗೆ ರಾಜ್ಯ ಸರಕಾರ 10ಕ್ಕಿಂತ ಕಡಿಮೆ ಮಕ್ಕಳಿರುವ 3,450 ಏಕೋಪಾಧ್ಯಾಯ ಶಾಲೆಗಳ ವಿಲೀನಕ್ಕೆ ಚಿಂತನೆ ನಡೆಸಿದೆ. ಇದರಿಂದ 30 ಸಾವಿರ ಮಕ್ಕಳನ್ನು ಸ್ಥಳಾಂತರಿಸಬೇಕಾಗುತ್ತದೆ. ಸರಕಾರಿ ಶಾಲೆಗಳ ದಾಖಲಾತಿ ಕಡಿಮೆಯಾದಲ್ಲಿ ಶಿಕ್ಷಕರೇ ನೇರ ಹೊಣೆ ಎನ್ನುವುದು ಇನ್ನೊಂದು ವಿಪರ್ಯಾಸದ ನಿಯಮ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕದೆ, ನಿಯಮಗಳಲ್ಲಿ ಬದಲಾವಣೆ ತರದೇ, ಸರಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲಾಗದು.


ಎಲ್ಲಾ ಸರಕಾರಿ ನೌಕರರ ಮಕ್ಕಳು ಮತ್ತು ಗ್ರಾಮ ಪಂಚಾಯತ್ ಸದಸ್ಯರಿಂದ ಲೋಕಸಭೆೆ ಸದಸ್ಯರವರೆಗೆ ಎಲ್ಲಾ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಸೇರಿಸುವಂತಹ ನಿಯಮವನ್ನು ರೂಪಿಸುವುದಾದರೆ ಖಂಡಿತವಾಗಿಯೂ ಸರಕಾರಿ ಶಾಲೆಗಳ ದಾಖಲಾತಿ ಹೆಚ್ಚುತ್ತದೆ ಮತ್ತು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಅಪಾರ ಪ್ರಮಾಣದ ಹಣ ವಿನಿಯೋಗ ಮಾಡುವುದು ತಪ್ಪಿ, ಅದೇ ಹಣವನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ವಿನಿಯೋಗ ಮಾಡಿದರೆ ಅವು ಗುಣಾತ್ಮಕ ಶಿಕ್ಷಣ ನೀಡುವ ಉತ್ತಮ ಶಾಲೆಗಳಾಗಿ ಹೊರ ಹೊಮ್ಮುವುದರೊಂದಿಗೆ ಸಾಕ್ಷರತಾ ಪ್ರಮಾಣವೂ ಹೆಚ್ಚಾಗುತ್ತದೆ.
 ಎಲ್ಲಾ ಸರಕಾರಿ ನೌಕರರ ಮತ್ತು ಜನಪ್ರತಿನಿಧಿಗಳ ಮಕ್ಕಳು ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಸರಕಾರಿ ಶಾಲೆಗಳ ಬಗ್ಗೆ, ಮಕ್ಕಳ ಕಲಿಕೆಯ ಗುಣಮಟ್ಟದ ಬಗ್ಗೆ ಎಲ್ಲರೂ ಇನ್ನೂ ಹೆಚ್ಚಿನ ಕಾಳಜಿ ಹಾಗೂ ಮುತುವರ್ಜಿ ತೋರುವುದರಿಂದ ಸಲೀಸಾಗಿ ನಮ್ಮ ಶಾಲೆಗಳು ಉಳಿಯುವುದರೊಂದಿಗೆ ಶೈಕ್ಷಣಿಕ ಗುಣಮಟವೂ ಹೆಚ್ಚಾಗುತ್ತದೆ. ಸಮಾನತೆಯ ಶಿಕ್ಷಣ ಎನ್ನುವ ಪರಿಕಲ್ಪನೆಯಡಿಯಲ್ಲಿ ಸಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ.
ಇದಕ್ಕೆ ಪೂರಕವಾಗಿ ಈ ಮೊದಲೇ, ಆಗಸ್ಟ್ 2015ರಲ್ಲಿ ಅಲಹಾಬಾದ್ ಮುಖ್ಯ ನ್ಯಾಯಾಲಯ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ಈ ಕುರಿತು ಆದೇಶ ನೀಡಿದ್ದು ಮುಂದಿನ ಆರು ತಿಂಗಳುಗಳಲ್ಲಿ ವಿಧಿ ವಿಧಾನಗಳನ್ನು ರೂಪಿಸಿ ಆದೇಶ ಮಾಡಿ ಅದರ ವರದಿಯನ್ನು ಸಲ್ಲಿಸಲು ನಿರ್ದೇಶಿಸಿತ್ತು ಆದರೆ ಇಂದಿಗೂ ಆ ನಿಯಮವನ್ನು ರೂಪಿಸಲಾಗಿಲ್ಲ.
 ಕರ್ನಾಟಕದಲ್ಲಿಯೂ ಸೆಪ್ಟಂಬರ್ 2017ರಲ್ಲಿ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಈಗಾಗಲೆ ರಾಜ್ಯ ಸರಕಾರಕ್ಕೆ ಇದೇ ವಿಚಾರವಾಗಿ ಶಿಫಾರಸನ್ನು ಮಾಡಿದೆ. ಆಗಿನ ಮುಖ್ಯಮಂತ್ರಿಗಳು ಕ್ಯಾಬಿನೆಟ್‌ಗೆ ಈ ವಿಷಯವನ್ನು ತರಲು ಮಾನ್ಯ ಶಿಕ್ಷಣ ಮಂತ್ರಿಗಳಿಗೆ ಸೂಚಿಸಿದ್ದರು. ಆದರೆ ಈ ನಿಯಮ ರೂಪಿಸುವ ಕುರಿತಾದ ಯಾವುದೇ ಚರ್ಚೆಗಳು ಕ್ಯಾಬಿನೆಟ್‌ನಲ್ಲಿ ನಡೆಯದಿರುವುದು ವಿಷಾದನೀಯ.
ಹಾಗಾಗಿ ಘನತೆವೆತ್ತ ರಾಜ್ಯ ಸರಕಾರ ಈ ಐತಿಹಾಸಿಕ ಮತ್ತು ಅಭೂತಪೂರ್ವ ನಿಯಮವನ್ನು ರೂಪಿಸಿ ಶಿಕ್ಷಣದ ಅಭಿವೃದ್ಧಿಗೆ ನಾಂದಿ ಹಾಡಬೇಕು ಮತ್ತು ಇತರ ರಾಜ್ಯಗಳಿಗೆ ಮಾದರಿಯಾಗಬೇಕು ಎನ್ನುವ ಮನವಿ ಪತ್ರವನ್ನು ಈಗಾಗಲೆ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದ್ದು, ಇನ್ನೂ ಹೆಚ್ಚಿನ ಸಂಘ ಸಂಸ್ಥೆಗಳು ಮತ್ತು ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು ಸಲಹೆ ಸೂಚನೆಗಳನ್ನು ನೀಡಿ ಸೂಕ್ತ ನಿಯಮಗಳನ್ನು ರೂಪಿಸುವಲ್ಲಿ ಸಹಕಾರಿಯಾದಾಗ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News

ಜಗದಗಲ
ಜಗ ದಗಲ