ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಇಲ್ಲವೇ?
ಶಿವಮೊಗ್ಗ, ಜೂ. 26: ಮುಂಬರುವ 17 ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿರುವ ಹಿನ್ನೆಲೆಯಲ್ಲಿ, ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್‌ನ ಓರ್ವ ಸಂಸತ್ ಸದಸ್ಯರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಸಾಧ್ಯತೆ ಬಹುತೇಕ ಕಡಿಮೆ ಎಂಬ ಮಾತುಗಳು ಕೇಳಿಬರಲಾರಂಭಿಸಿದ್ದು, ಇದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭಾ ಸದಸ್ಯರುಗಳಾಗಿದ್ದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು ಹಾಗೂ ಜೆಡಿಎಸ್‌ನ ಸಿ.ಎಸ್.ಪುಟ್ಟರಾಜುರವರು ಕ್ರಮವಾಗಿ ಶಿಕಾರಿಪುರ, ಮೊಳಕಾಲ್ಮೂರು ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ವಿಧಾನಸಭೆ ಹಾಗೂ ಲೋಕಸಭೆ ಸದಸ್ಯತ್ವದಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬೇಕಾಗಿದ್ದ ಕಾರಣದಿಂದ, ಈ ಮೂವರು ನಾಯಕರು ಸಂಸತ್ ಸದಸ್ಯತ್ವಕ್ಕೆ ಕಳೆದ ಮೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಈ ಕಾರಣದಿಂದ ಬಿ.ಎಸ್.ಯಡಿಯೂರಪ್ಪರವರು ಆಯ್ಕೆಯಾಗಿದ್ದ ಶಿವಮೊಗ್ಗ, ಶ್ರೀರಾಮುಲು ಆಯ್ಕೆಯಾಗಿದ್ದ ಬಳ್ಳಾರಿ ಹಾಗೂ ಸಿ.ಎಸ್.ಪುಟ್ಟರಾಜು ಆಯ್ಕೆಯಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು.
ಮುಂಬರುವ 2019 ರ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಈ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದ್ದು, ಈಗಾಗಲೇ ಮೂರು ರಾಜಕೀಯ ಪಕ್ಷಗಳೂ ಚುನಾವಣೆಯ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದವು. ಕೆಲ ಕ್ಷೇತ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಪೂರ್ವಭಾರಿ ತಯಾರಿ ಕೂಡ ನಡೆಸಲಾರಂಭಿಸಿದ್ದರು. ಆಗಸ್ಟ್-ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದವು. ಉಪ ಚುನಾವಣೆ ಪೂರ್ಣಗೊಂಡು ಕೇವಲ ಐದಾರು ತಿಂಗಳ ಅವಧಿಯಲ್ಲಿಯೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಎದುರಾಗಲಿರುವ ಕಾರಣದಿಂದ, ಉಪ ಚುನಾವಣೆಯು ರಾಜಕೀಯ ಪಕ್ಷಗಳಿಗೆ ಅಕ್ಷರಶಃ ಹೊರೆಯಾಗಿಯೂ ಪರಿಣಮಿಸಿತ್ತು.
ಅನುಮಾನ?: 2019 ಏಪ್ರಿಲ್ - ಮೇ ತಿಂಗಳುಗಳ ಮಧ್ಯಂತರದ ಅವಧಿಯಲ್ಲಿ 17 ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಕೇವಲ ಏಳೆಂಟು ತಿಂಗಳ ಅವಧಿಯ ಮೊದಲು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದರಿಂದ ಅನಗತ್ಯ ಆರ್ಥಿಕ ಹೊರೆ ಬೀಳಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇನ್ನೊಂದೆಡೆ ಉಪ ಚುನಾವಣೆಯ ಬಗ್ಗೆ ರಾಜಕೀಯ ಪಕ್ಷಗಳಲ್ಲಿಯೂ ಕೂಡ ನಿರಾಸಕ್ತಿಯ ಭಾವನೆಯಿದೆ.
ಮತ್ತೊಂದೆಡೆ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ, ನಿಯಮಾನುಸಾರ ಚುನಾಯಿತ ಸದಸ್ಯರ ರಾಜೀನಾಮೆ ಅಥವಾ ಇತರೆ ಕಾರಣಗಳಿಂದ ತೆರವಾಗುವ ಕ್ಷೇತ್ರಗಳಿಗೆ ಆರು ತಿಂಗಳೊಳಗೆ ಮರು ಚುನಾವಣೆ ನಡೆಸಬೇಕು. ಒಂದು ವೇಳೆ ನೂತನವಾಗಿ ಚುನಾಯಿತಗೊಳ್ಳುವ ಸದಸ್ಯರ ಕಾರ್ಯನಿರ್ವಹಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿದ್ದರೆ, ಅಂತಹ ಕ್ಷೇತ್ರಗಳಿಗೆ ಚುನಾವಣೆಯ ಅಗತ್ಯವಿಲ್ಲ ಎಂಬ ನಿಯಮವಿದೆ. ಈ ಕಾರಣದಿಂದ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.
ಸಂಸದರ ರಾಜೀನಾಮೆಯಿಂದ ತೆರವಾಗಿರುವ ಮೂರು ಲೋಕಸಭಾ ಕ್ಷೇತ್ರಗಳಿಗೆ, ಉಪ ಚುನಾವಣೆ ನಡೆಸುವ ಕುರಿತಂತೆ ಇಲ್ಲಿಯವರೆಗೂ ಕೇಂದ್ರ ಚುನಾವಣಾ ಆಯೋಗದಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಮೂಲಗಳು ಹೇಳುತ್ತವೆ. ಇನ್ನೊಂದೆಡೆ ಸಂಬಂಧಿಸಿದ ಜಿಲ್ಲಾಡಳಿತಗಳು ಕೂಡ ಮತದಾರರ ಪಟ್ಟಿ ತಯಾರಿ ಮತ್ತಿತರ ಯಾವುದೇ ಸಿದ್ಧತೆಗಳನ್ನು ಕೂಡ ಇಲ್ಲಿಯವರೆಗೂ ಆರಂಭಿಸಿಲ್ಲ. ಇದೆಲ್ಲವನ್ನು ಗಮನಿಸಿದರೆ ಉಪ ಚುನಾವಣೆ ಅನುಮಾನವಾಗಿದೆ.
ಉಪ ಚುನಾವಣೆ ನಡೆದರೆ ಬಿಜೆಪಿ ಗೆಲುವು ಖಚಿತ: ಬಿ.ವೈ.ರಾಘವೇಂದ್ರ
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆಯೇ? ಇಲ್ಲವೇ? ಎಂಬುವುದರ ಬಗ್ಗೆ ತನಗೆ ಸ್ಪಷ್ಟ ಮಾಹಿತಿಯಿಲ್ಲ. ಈ ಕುರಿತಂತೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ. ಒಂದು ವೇಳೆ ಉಪ ಚುನಾವಣೆ ನಡೆದರೆ, ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಜಯ ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ 2014 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ತಂದೆ ಬಿ.ಎಸ್.ಯಡಿಯೂರಪ್ಪರವರು ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ದಾಖಲೆಯ ಜಯ ಸಂಪಾದಿಸಿದ್ದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕಡೆ ಬಿಜೆಪಿ ಅಭ್ಯರ್ಥಿಗಳು ಸಂಪಾದಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಪರಿಣಾಮಕಾರಿಯಾಗಿದೆ. ಎದುರಾಳಿ ಯಾರೇ ಆದರೂ ಬಿಜೆಪಿ ಜಯ ನಿಶ್ಚಿತವಾಗಿದೆ ಎಂದಿದ್ದಾರೆ.
ತಾನು ಲೋಕಸಭಾ ಸದಸ್ಯರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕೇಂದ್ರೀಯ ವಿಶ್ವ ವಿದ್ಯಾಲಯ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ, ರೈಲ್ವೆ ಕ್ಷೇತ್ರಕ್ಕೆ ಅನುದಾನ ಸೇರಿದಂತೆ ಹತ್ತು ಹಲವು ಯೋಜನೆಗಳ ಕಾರ್ಯಗತಕ್ಕೆ ಗಮನಹರಿಸಿದ್ದೆ ಎಂದು ಇದೇ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.