ರೆವಿನ್ಯೂ ನಿವೇಶನಗಳಲ್ಲಿ ನಿರ್ಮಾಣಗೊಂಡ ಕಟ್ಟಡಗಳಿಗೆ ಮೂಲಸೌಲಭ್ಯ: ಸರ್ಕಾರದಿಂದ ಸಿಗದ ಸ್ಪಷ್ಟನೆ
ಶಿವಮೊಗ್ಗ, ಜೂ. 27: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮಾನುಸಾರ ಭೂ ಪರಿವರ್ತನೆಗೊಳಿಸದೆ, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ನಿರ್ಮಿಸಿದ ಬಡಾವಣೆ ಅಥವಾ ನಿವೇಶನಗಳಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಮೂಲಸೌಕರ್ಯ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದೆ. ಸದ್ಯಕ್ಕೆ ಈ ಗೊಂದಲಕ್ಕೆ ಶಾಶ್ವತ ಪರಿಹಾರ ಲಭ್ಯವಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ.
ಕಳೆದೊಂದು ವರ್ಷದ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ರೆವಿನ್ಯೂ ನಿವೇಶನಗಳಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಮೂಲಸೌಕರ್ಯ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಯಾಗಿತ್ತು. ಅಭಿವೃದ್ದಿ ಶುಲ್ಕ (ಬೆಟರ್‍ಮೆಂಟ್ ಚಾರ್ಜ್) ಪಾವತಿಸಿಕೊಂಡು ಮೂಲಸೌಕರ್ಯ ಕಲ್ಪಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಜೊತೆಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಪಡೆದುಕೊಳ್ಳಲು ಪಾಲಿಕೆಯಿಂದ ಎನ್‍ಓಸಿ ನೀಡಲು ಕೂಡ ನಿರ್ಧರಿಸಲಾಗಿತ್ತು.
ಪಾಲಿಕೆಯ ಈ ನಿರ್ಣಯದ ಕುರಿತಂತೆ, ಈ ಹಿಂದಿನ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್‍ರವರು ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆಯ ಸಲಹೆಯಂತೆ ಮುನ್ನಡೆಯಲು ನಿರ್ಧರಿಸಿದ್ದರು. ಈ ಕುರಿತಂತೆ ಪೌರಾಡಳಿತ ಇಲಾಖೆಗೆ ಪತ್ರ ಕೂಡ ಬರೆದಿದ್ದರು. ಆದರೆ ಇಲ್ಲಿಯವರೆಗೂ ಈ ಪತ್ರಕ್ಕೆ ಪೌರಾಡಳಿತ ಇಲಾಖೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಇದರಿಂದ 'ರೆವಿನ್ಯೂ ನಿವೇಶನ'ಗಳಿಗೆ ಮೂಲಸೌಕರ್ಯ ಕಲ್ಪಿಸುವ ವಿಷಯವು ಪ್ರಸ್ತುತ ಗೊಂದಲದ ಗೂಡಾಗಿ ಪರಿಣಮಿಸಿದೆ. ಹಲವು ರೀತಿಯ ಆಡಳಿತಾತ್ಮಕ ಸಮಸ್ಯೆ ಸೃಷ್ಟಿಯಾಗುವಂತೆ ಮಾಡಿದೆ.
ಪಾಲಿಕೆಯ ಅಧಿಕಾರಿಗಳಿಗೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. 'ರೆವಿನ್ಯೂ ನಿವೇಶನ'ಗಳಲ್ಲಿ ಮನೆ ಕಟ್ಟಿಕೊಂಡವರು ಮೂಲಸೌಕರ್ಯ ಕಲ್ಪಿಸುವಂತೆ ಹಾಗೂ ಎನ್‍ಓಸಿ ಕೋರಿ ಪಾಲಿಕೆ ಆಡಳಿತಕ್ಕೆ ಎಡತಾಕುತ್ತಿದ್ದಾರೆ. ಈ ಹಿಂದೆ ನೀಡಲಾಗಿದ್ದ ಎನ್‍ಓಸಿಗಳನ್ನು ಮುಂದಿಟ್ಟುಕೊಂಡು, ತಮಗೆ ಅದೇ ರೀತಿ ಎನ್‍ಓಸಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದಾರೆ.
ರದ್ದುಗೊಳಿಸಲಾಗಿತ್ತು: ಈ ಹಿಂದೆ ಭೂ ಪರಿವರ್ತನೆ ಮಾಡಿಸದೆ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ನಗರದ ವಿವಿಧೆಡೆ ಹಲವು ಬಡಾವಣೆ ನಿರ್ಮಿಸಲಾಗಿದೆ. ಇಂತಹ ಅನಧಿಕೃತ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೆ ನಿಯಮಾನುಸಾರ ನೀರು, ವಿದ್ಯುತ್ ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲವಾಗಿದೆ. ಜೊತೆಗೆ ಇಂತಹ ಮನೆಗಳಿಗೆ ಕಂದಾಯ ನಿಗದಿಪಡಿಸಿ ಸಂಗ್ರಹಿಸಲು ಪಾಲಿಕೆ ಆಡಳಿತಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಇಂತಹ ಸ್ಥಿರಾಸ್ತಿಗಳಿಗೆ ಖಾತೆಯ ದಾಖಲೆಯಿರುವುದಿಲ್ಲ.
ಪಾಲಿಕೆಯ ಮೂಲಗಳ ಪ್ರಕಾರ, ನಗರ ವ್ಯಾಪ್ತಿಯಲ್ಲಿ ಸರಿಸುಮಾರು 22 ಸಾವಿರಕ್ಕೂ ಅಧಿಕ ಮನೆಗಳು ರೆವಿನ್ಯೂ ನಿವೇಶನಗಳಲ್ಲಿ ನಿರ್ಮಾಣಗೊಂಡಿವೆ. ಕೆಲ ಸ್ಥಳೀಯ ನಿರ್ಣಯಗಳ ಆಧಾರದ ಮೇಲೆ, ಕಳೆದ ನಗರಸಭೆ ಆಡಳಿತ ಅವಧಿಯಿಂದಲೂ ರೆವಿನ್ಯೂ ನಿವೇಶನಗಳಲ್ಲಿ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ಸೌಲಭ್ಯ ಪಡೆಯಲು ಎನ್‍ಓಸಿ ನೀಡಲಾಗುತ್ತಿತ್ತು. ಇದರ ಆಧಾರದ ಮೇಲೆ ಮನೆಯವರು ನಿಗದಿತ ಮೊತ್ತ ಪಾವತಿಸಿ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಪಡೆದುಕೊಳ್ಳುತ್ತಿದ್ದರು.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿ. ಪೊನ್ನುರಾಜ್‍ರವರು ರೆವಿನ್ಯೂ ನಿವೇಶನಗಳಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದರ ಮೇಲೆ ನಿರ್ಬಂಧ ಹೇರಿದ್ದರು. ಎ.ಆರ್.ರವಿಯವರು ಆಯುಕ್ತರಾಗಿದ್ದ ವೇಳೆ ಎನ್‍ಓಸಿ ನೀಡುವುದನ್ನು ಸ್ಥಗಿತಗೊಳಿಸಿದ್ದರು. ಮತ್ತೊಂದೆಡೆ ನಗರಸಭೆ ಆಡಳಿತವು ರೆವಿನ್ಯೂ ನಿವೇಶನಗಳಲ್ಲಿನ ಕಟ್ಟಡಗಳಿಗೆ ಕಂದಾಯ ನಿಗದಿಪಡಿಸಿ ಸಂಗ್ರಹಿಸುವ ಮೂಲಕ ಮೂಲಸೌಕರ್ಯ ಕಲ್ಪಿಸಲು ಯತ್ನಿಸಿಕೊಂಡು ಬರುತ್ತಿತ್ತು.
ಕೇಬಲ್ ಬಾಬುರವರು ಪಾಲಿಕೆಯ ಮೇಯರ್ ಆಗಿದ್ದ ಅವಧಿಯಲ್ಲಿ ನಡೆದ ಸಾಮಾನ್ಯ ಸಭೆಯೊಂದರಲ್ಲಿ ಈ ವಿಷಯ ಚರ್ಚೆಯಾಗಿತ್ತು. ಬೆಟರ್‍ಮೆಂಟ್ ಶುಲ್ಕ ಕಟ್ಟಿಸಿಕೊಂಡು ರೆವಿನ್ಯೂ ನಿವೇಶನಗಳಲ್ಲಿ ನಿರ್ಮಿಸಿದ ಮನೆಗಳಿಗೆ ಎನ್‍ಓಸಿ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಈ ವಿಷಯದ ಕುರಿತಂತಿದ್ದ ಕಾನೂನಿನ ಅಡೆತಡೆಗಳನ್ನು ಗಮನಿಸಿದ ಅಂದಿನ ಆಯುಕ್ತ ಮುಲ್ಲೈ ಮುಹಿಲನ್‍ರವರು, ಈ ನಿರ್ಣಯದ ಕುರಿತಂತೆ ಪೌರಾಡಳಿತ ನಿರ್ದೇಶನಾಲಯದ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದರು. ಈ ಕುರಿತಂತೆ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ.
ಇದರಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ರೆವಿನ್ಯೂ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡವರು ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕದಂತಹ ಕನಿಷ್ಠ ಸೌಲಭ್ಯ ಪಡೆದುಕೊಳ್ಳಲು ಪಾಲಿಕೆ ಕಚೇರಿಗಳಿಗೆ ದಿನಂಪ್ರತಿ ಅಲೆದಾಡುವಂತಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.
ನಾಗರೀಕರಿಗೆ ತೊಂದರೆ : ಮಾಜಿ ಮೇಯರ್ ಕೇಬಲ್ ಬಾಬು
ಜನಸಾಮಾನ್ಯರಿಗೆ ಉಂಟಾಗುತ್ತಿದ್ದ ಅನಾನುಕೂಲ ಗಮನಿಸಿ, ತಾವು ಮೇಯರ್ ಆಗಿದ್ದ ಅವಧಿಯಲ್ಲಿ ರೆವಿನ್ಯೂ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿಕೊಂಡವರಿಗೆ ಸೂಕ್ತ ಶುಲ್ಕ ಕಟ್ಟಿಸಿಕೊಂಡು ಎನ್‍ಓಸಿ ನೀಡುವ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಈ ನಿರ್ಣಯದ ಕುರಿತಂತೆ ಪಾಲಿಕೆಯ ಅಧಿಕಾರಿಗಳು ಪೌರಾಡಳಿತ ಇಲಾಖೆಯ ನಿರ್ದೇಶನ ಕೋರಿ ಪತ್ರ ಬರೆದಿದ್ದರು. ಆದರೆ ಇಲ್ಲಿಯವರೆಗೂ ಇಲಾಖೆಯಿಂದ ಯಾವುದೇ ಸ್ಪಷ್ಟನೆ ಲಭ್ಯವಾಗಿಲ್ಲ. ಇದರಿಂದ ರೆವಿನ್ಯೂ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡವರು ವಿದ್ಯುತ್ ಹಾಗೂ ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯ ಪಡೆದುಕೊಳ್ಳಲು ಹರಸಾಹಸ ನಡೆಸುವಂತಾಗಿದೆ. ಈ ಪ್ರಕರಣ ಪ್ರಸ್ತುತ ಅಕ್ಷರಶಃ ಗೊಂದಲದ ಗೂಡಾಗಿ ಪರಿಣಮಿಸಿದೆ. ಗೊಂದಲ ಪರಿಹಾರಕ್ಕೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಸಂಕಷ್ಟದಲ್ಲಿರುವ ನಾಗರೀಕರಿಗೆ ನೆರವಾಗಬೇಕು' ಎಂದು ಮಾಜಿ ಮೇಯರ್ ಕೇಬಲ್ ಬಾಬುರವರು ಅಭಿಪ್ರಾಯಪಡುತ್ತಾರೆ.
ಸರ್ಕಾರದ ಹಂತದಲ್ಲಿ ನಿರ್ಧಾರವಾಗಲಿ : ಕಾರ್ಪೋರೇಟರ್ ಹೆಚ್.ಸಿ.ಮಾಲತೇಶ್
ರೆವಿನ್ಯೂ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಮೂಲಸೌಕರ್ಯ ಕಲ್ಪಿಸುವ ವಿಷಯದ ಸಮಸ್ಯೆಯು ಕಗ್ಗಂಟಾಗಿ ಪರಿವರ್ತಿತವಾಗುತ್ತಿದೆ. ಗೊಂದಲ ಪರಿಹಾರಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕಾಗಿದೆ. ರೆವಿನ್ಯೂ ನಿವೇಶನಗಳಲ್ಲಿ ನಿರ್ಮಾಣಗೊಂಡ ಕಟ್ಟಡಗಳಿಗೂ ಮೂಲಸೌಕರ್ಯ ಕಲ್ಪಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ. ನಿಯಮಬಾಹಿರವೆಂದು ಸೌಲಭ್ಯದಿಂದ ವಂಚಿತವನ್ನಾಗಿಸುವುದು ಸರಿಯಲ್ಲ. ಸೂಕ್ತ ಅಭಿವೃದ್ದಿ ಶುಲ್ಕ ಪಾವತಿಸಿಕೊಂಡು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಈ ಕುರಿತಂತೆ ಸರ್ಕಾರದ ಹಂತದಲ್ಲಿಯೇ ಸೂಕ್ತ ಚರ್ಚೆಯಾಗಬೇಕು' ಎಂದು ಕಾರ್ಪೋರೇಟರ್ ಹೆಚ್.ಸಿ.ಮಾಲತೇಶ್‍ರವರು ಅಭಿಪ್ರಾಯಪಡುತ್ತಾರೆ.