ಬೇಳೆಕಾಳು ಬೆಳೆಗಾರರ ಮುಗಿಯದ ಬವಣೆ
ಭಾರತದ ಹೊರಗಡೆ ಬೇಳೆಕಾಳುಗಳಿಗೆ ದೊಡ್ಡ ಬೇಡಿಕೆಯಿಲ್ಲದಿರುವಾಗ ಒಂದು ಸಮಗ್ರ ಮತ್ತು ಸರಿಯಾದ ಸ್ಥಳೀಯ ನೀತಿಯಿಂದ ಮಾತ್ರ ಬೆಲೆ ಸ್ಥಿರೀಕರಣವನ್ನು ಸಾಧಿಸಲು ಸಾಧ್ಯ. ಬಂಪರ್ ಬೆಳೆ ಬಂದ ಸಂದರ್ಭದಲ್ಲಿ ರೈತರಿಂದ ನಿರ್ದಿಷ್ಟ ಪ್ರಮಾಣದ ಬೆಳೆಯನ್ನು ಸೂಕ್ತವಾದ ಬೆಲೆಗೆ ಖರೀದಿಸುವ ಖಾತರಿಯನ್ನು ಸರಕಾರವು ನೀಡಬೇಕು. ಸರಕಾರವು ಆಮದಿನ ಪ್ರಮಾಣದ ಮೇಲೆ ನಿರ್ಬಂಧವನ್ನೂ ವಿಧಿಸಬೇಕು ವುತ್ತು ರಫ್ತನ್ನೂ ನಿಯಂತ್ರಿಸಬೇಕು.
ಹಾಲಿ ಮಾರುಕಟ್ಟೆಗೆ ಅಪಾರ ಪ್ರಮಾಣದ ಬೇಳೆಕಾಳುಗಳ ಆವಕವಾಗಿರುವುದೇ ಇಂದು ಬೇಳೆಕಾಳುಗಳ ಬೆಲೆ ಕುಸಿದಿರಲು ಪ್ರಧಾನ ಕಾರಣ. ಸತತವಾಗಿ ಎರಡನೇ ವರ್ಷವೂ ಬೇಳೆಕಾಳುಗಳ ಬೆಲೆಯು ಕುಸಿದಿದ್ದು ಬೇಳೆಕಾಳುಗಳನ್ನು ಬೆಳೆದ ರೈತರಿಗೆ ಈ ಎರಡನೇ ವರ್ಷವೂ ಸರಿಯಾದ ಬೆಲೆ ದಕ್ಕಲಿಲ್ಲ. ಆದರೆ 2014-15ರಲ್ಲಿ ಸಂಪೂರ್ಣವಾಗಿ ಬೇರೆ ಪರಿಸ್ಥಿತಿಯಿತ್ತು. ಆಗ ಬೇಳೆಕಾಳುಗಳ ಉತ್ಪಾದನೆಯಲ್ಲೂ ಕುಸಿತವಾಗಿ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಅಭಾವವುಂಟಾಗಿದ್ದರಿಂದ ಬೆಲೆಗಳು ಗಗನ ಮುಟ್ಟಿದ್ದವು. ಇದರಿಂದಾಗಿ ಅದನ್ನು ಕೊಳ್ಳುವುದೂ ಕಡಿಮೆಯಾಗಿ ದೈನಂದಿನ ಆಹಾರದಲ್ಲಿ ಬೇಳೆಕಾಳುಗಳ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿತ್ತು. ಆ ನಂತರದಲ್ಲಿ ಬೇಳೆಕಾಳುಗಳನ್ನು ಬೆಳೆಯುವ ಕ್ಷೇತ್ರದ ವಿಸ್ತೀರ್ಣದಲ್ಲೂ ಹೆಚ್ಚಳವಾಯಿತು. ಅದರಿಂದಾಗಿ ಬೇಳೆಕಾಳುಗಳ ಅಧಿಕ ಉತ್ಪಾದನೆಯಾಗಿ ಈಗ 2018ರಲ್ಲಿ ಅಧಿಕ ಸರಬರಾಜಿನ ಕಾರಣದಿಂದಾಗಿ ಬೆಲೆಯು ಕುಸಿದಿದೆ. ಬೇಳೆಕಾಳುಗಳ ಉತ್ಪಾದನೆ ಮತ್ತು ಬೆಲೆ ನಿಯಂತ್ರಣದ ಬಗ್ಗೆ ಸರಿಯಾದ ನೀತಿಯನ್ನು ರೂಪಿಸುವಲ್ಲಿ ಸರಕಾರ ವಿಫಲವಾಗಿದೆ.
2014-15ರಲ್ಲಿ ಬೇಳೆಕಾಳುಗಳ ಉತ್ಪಾದನೆಯು ಅದರ ಹಿಂದಿನ ವರ್ಷಕ್ಕಿಂತ ಶೇ.9.7ರಷ್ಟು ಕುಸಿತ ಕಂಡಿತು. ಸತತ ಬರದಿಂದಲೂ ಮತ್ತು ವ್ಯಾಪಾರಿಗಳು ಕಾಳಸಂಗ್ರಹ ಮಾಡಿದ್ದರಿಂದಲೂ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಅಭಾವವುಂಟಾಯಿತು. ಬೇಳೆಕಾಳುಗಳನ್ನು ಬೆಳೆಯುತ್ತಿದ್ದ ಶೇ.88ರಷ್ಟು ಪ್ರದೇಶವು ಮಳೆಯಾಶ್ರಿತವಾದದ್ದರಿಂದ ಬರದ ಅಪಾಯ ಅತಿ ಹೆಚ್ಚಿತ್ತು. 2015-16ರಲ್ಲಿ ದೇಶದೊಳಗೆ 16.35 ಮಿಲಿಯನ್ ಟನ್ನುಗಳಷ್ಟು ಬೇಳೆಕಾಳುಗಳನ್ನು ಉತ್ಪಾದನೆ ಮಾಡಿದರೆ 5.79 ಮಿಲಿಯನ್ ಟನ್‌ನಷ್ಟು ಬೇಳೆಕಾಳುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಯಿತು. ಹೀಗಾಗಿ ದೇಶದೊಳಗಿನ ಬಳಕೆಗೆ ಕೇವಲ 21.89 ಮಿಲಿಯನ್ ಟನ್‌ನಷ್ಟು ಬೇಳೆಕಾಳುಗಳು ಮಾತ್ರ ಲಭ್ಯವಿತ್ತು. ಈ ಸಮಯದಲ್ಲಿ ತಡವಾಗಿ ಮಧ್ಯಪ್ರವೇಶ ಮಾಡಿದ ಸರಕಾರ ತಾನೇ ಕೊಳ್ಳುವ ಮೂಲಕ ಬೆಲೆಯನ್ನು ನಿಯಂತ್ರಣಕ್ಕೆ ತರಲು, ತೊಗರಿ, ಉದ್ದು ಮತ್ತು ಕಡಲೆ ಬೇಳೆಗಳ ಮುಕ್ತ ಆಮದು, ಬೇಳೆಕಾಳುಗಳ ರಫ್ತಿನ ಮೇಲೆ ನಿಷೇಧ ಮತ್ತು ಅತ್ಯಗತ್ಯ ಸರಕುಗಳ ಕಾಯ್ದೆಯಡಿ ಬೇಳೆಕಾಳುಗಳ ಸಂಗ್ರಹಕ್ಕೆ ಮಿತಿಯನ್ನು ಹೇರುವಂಥ ಕ್ರಮಗಳನ್ನು ತೆಗೆದುಕೊಂಡಿತು. ಮಾರುಕಟ್ಟೆಯಲ್ಲಿ ಬೆಲೆಯ ಸ್ಥಿರೀಕರಣವನ್ನು ಸಾಧಿಸಲು 20 ಲಕ್ಷ ಟನ್‌ನಷ್ಟು ಬೇಳೆಕಾಳುಗಳನ್ನು ಆಪತ್ ಸಂಗ್ರಹವನ್ನಾಗಿಟ್ಟುಕೊಳ್ಳಲು ಸಹ ಸರಕಾರ ನಿರ್ಧರಿಸಿತು. ಬೇಳೆೆಕಾಳುಗಳನ್ನು ಬೆಳೆಯುವ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಅದಕ್ಕೆ ಕೊಡುತ್ತಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ನಂತರದ ವರ್ಷಗಳಲ್ಲಿ ಹೆಚ್ಚಿಸಿತು.
ಆದರೆ ಮಾರುಕಟ್ಟೆ ಪರಿಸ್ಥಿತಿಯು ಅಂದಿಗಿಂತ ಇಂದು ಭಿನ್ನವಾಗಿದೆ. ಒಳ್ಳೆಯ ಮಳೆ ಮತ್ತು ಉತ್ತಮವಾದ ಕನಿಷ್ಠ ಬೆಂಬಲ ಬೆಲೆಯ ಕಾರಣದಿಂದಾಗಿ ಬೇಳೆಕಾಳು ಬೆಳೆಯುತ್ತಿದ್ದ ವಿಸ್ತೀರ್ಣ ಹಾಗೂ ಉತ್ಪತ್ತಿ ಎರಡೂ ಹೆಚ್ಚಾಗಿದೆ. 2016-17ರಲ್ಲಿ ಬೇಳೆಕಾಳುಗಳ ಸ್ಥಳೀಯ ಉತ್ಪಾದನೆ 22.95 ಮಿಲಿಯನ್ ಟನ್‌ಗಳಷ್ಟಾದರೆ, 6.61 ಮಿಲಿಯನ್ ಟನ್‌ಗಳಷ್ಟು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಲಾಯಿತು. ಹೀಗಾಗಿ ಆ ಸಾಲಿನಲ್ಲಿ 29.42 ಮಿಲಿಯನ್ ಟನ್‌ಗಳಷ್ಟು ಬೇಳೆಕಾಳುಗಳು ಬಳಕೆಗೆ ಲಭ್ಯವಿತ್ತು. ಇದು ಹಿಂದಿನ ವರ್ಷಗಳಿಗೆ ಹೋಲಿಸಿ ದಲ್ಲಿ ಸಾಕಷ್ಟು ಜಾಸ್ತಿಯೇ ಆಗಿತ್ತು. 2017-18ರ ಸಾಲಿಗೆ ಮಾಡಿರುವ ಉನ್ನತ ಮುಂದಂದಾಜಿನ ಪ್ರಕಾರ ಬೇಳೆಕಾಳುಗಳ ಉತ್ಪಾದನೆಯು 24.51 ಮಿಲಿಯನ್ ಟನ್‌ಗಳಷ್ಟಾಗಿದ್ದು ದಾಖಲೆಯನ್ನು ಸೃಷ್ಟಿಸಿದೆ. ಇದು ಕಳೆದ ವರ್ಷಕ್ಕಿಂತ 1.37 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದ್ದರೆ, ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆಗೆ ಹೋಲಿಸಿದರೆ 5.66 ಮಿಲಿಯನ್ ಟನ್‌ಗಳಷ್ಟು ಹೆಚ್ಚು. 2017ರ ಎಪ್ರಿಲ್- ಡಿಸೆಂಬರ್ ನಡುವೆ 5.1 ಮಿಲಿಯನ್ ಟನ್‌ಗಳಷ್ಟು ಕಾಳುಗಳನ್ನು ಆಮದು ಸಹ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಬೇಡಿಕೆೆಗಿಂತ ಸರಬರಾಜೇ ಹೆಚ್ಚಾಗಿ ಬಿಟ್ಟಿದೆ. ಹೀಗಾಗಿ ಬೆಲೆಗಳು ಕುಸಿಯಲು ಪ್ರಾರಂಭಿಸಿದವು. ಬೇಳೆಕಾಳುಗಳ ಬಾಬ್ತಿನಲ್ಲಿ ಸರಾಸರಿ ಸಗಟು ಬೆಲೆ ಸೂಚ್ಯಂಕವು 2017-18ರಲ್ಲಿ 26.7ರಷ್ಟು ಇಳಿಕೆಯನ್ನೇ ದಾಖಲಿಸಿದೆ. ಬಹುಪಾಲು ಬೇಳೆಕಾಳುಗಳ ಬೆಲೆ ಮಾರಾಟ ಮಂಡಿಗಳಲ್ಲಿ ಹಿಂದಿನ ವರ್ಷಕ್ಕಿಂತ ಶೇ.30ರಷ್ಟು ಇಳಿಕೆಯನ್ನೇ ದಾಖಲಿಸಿವೆ. ಕನಿಷ್ಠ ಬೆಂಬಲ ಬೆಲೆಯನ್ನು ನಾಮಮಾತ್ರಕ್ಕೆ ಸ್ವಲ್ಪಹೆಚ್ಚಿಸಿದರೂ ಹಲವಾರು ರಾಜ್ಯಗಳ ಮಂಡಿಗಳಲ್ಲಿ ರೈತರಿಗೆ ಸರಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯೇ ದಕ್ಕಿದೆ. ವಾಸ್ತವವಾಗಿ ಕನಿಷ್ಠ ಬೆಂಬಲ ಬೆಲೆಯನ್ನೇ ಆಧರಿಸಿಯೇ ಮಂಡಿಗಳಲ್ಲಿನ ಬೆಲೆಯೂ ನಿಗದಿಯಾಗಬೇಕಿತ್ತು.
ಕೃಷಿ ಬೆಲೆ ಮತ್ತು ದರ ಆಯೋಗ ಅಥವಾ ಸಿಎಸಿಪಿ ಲೆಕ್ಕಾಚಾರದಲ್ಲಿ ಸಿ-2 ಎಂದು ಕರೆಯಲ್ಪಡುವ ಬೆಳೆಯುವ ವೆಚ್ಚವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ. ಏಕೆಂದರೆ ಒಳಸುರಿಗಳ ದರವು 2015-16ರಲ್ಲಿ ಶೇ.2.8ರಷ್ಟಿದ್ದರೆ, 2016-17ರಲ್ಲಿ ಶೇ.3.7ರಷ್ಟಾಗಿತ್ತು. ಇದರರ್ಥವೇನೆಂದರೆ ಪ್ರತಿ ಘಟಕದಷ್ಟು ಬೇಳೆಕಾಳುಗಳ ಉತ್ಪಾದನೆಗೆ ರೈತರ ಆದಾಯ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತಾ ಹೋಗಿದೆ. ಸರಕಾರವು ಸಕ್ರಿಯವಾಗಿ ಮಧ್ಯಪ್ರವೇಶ ಮಾಡಿ ರೈತರ ಬೆಳೆಯನ್ನು ಕೊಂಡುಕೊಳ್ಳುವ ನೀತಿಯನ್ನು ಅನುಸರಿಸದಿದ್ದರಿಂದ ರೈತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಆದ್ದರಿಂದ ಕನಿಷ್ಠ ಬೆಂಬಲ ಬೆಲೆಯು ರೈತರಿಗೆ ಖಾತರಿಯಾದ ಮಾರುಕಟ್ಟೆಯನ್ನಾಗಲಿ ಅಥವಾ ಬೆಲೆಯನ್ನಾಗಲೀ ಒದಗಿಸಿಕೊಡುವಲ್ಲಿ ವಿಫಲವಾಗಿದೆ.
ಬೇಳೆಕಾಳುಗಳ ಮಾರುಕಟ್ಟೆಯಲ್ಲಿ ಈ ರೀತಿ ಪದೇ ಪದೇ ಕಾಣಿಸುವ ಕೊರತೆ ಅಥವಾ ಹೆಚ್ಚಳಗಳು ಮತ್ತು ಬೆಲೆಗಳಲ್ಲಿನ ಏಳು-ಬೀಳುಗಳು ಈ ಬೆಳೆಯು ಋತುಬದ್ಧ ಬೆಲೆ ಚಕ್ರಕ್ಕೆ ಗುರಿಯಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತವೆ. ಇಂದು ಬೆಳೆಗಾರರು ಎದುರಿಸುತ್ತಿರುವ ಹಾಲಿ ಬಿಕ್ಕಟ್ಟು ಈ ಹಿಂದೆ ಬೇಳೆಕಾಳುಗಳ ಅಭಾವದಿಂದಾಗಿ ಉಂಟಾದ ಬಿಕ್ಕಟ್ಟಿಗಿಂತ ಭಿನ್ನವಾದ ಪರಿಹಾರವನ್ನು ಕೇಳುತ್ತವೆ. ಅಗತ್ಯಕ್ಕಿಂತ ಹೆಚ್ಚಾಗಿರುವ ಸರಬರಾಜನ್ನು ಜೀರ್ಣಿಸಿಕೊಳ್ಳುವ ದಾರಿಗಳನ್ನು ಪರಿಶೀಲಿಸಬೇಕು. ಮಾರುಕಟ್ಟೆಗೆ ಹರಿದುಬಂದಿರುವ ಅಧಿಕ ಸರಬರಾಜಿನಿಂದ ಗ್ರಾಹಕರಿಗೆ ಅನುಕೂಲವಾದರೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಮತ್ತು ರೈತರು ಮತ್ತು ಗ್ರಾಹಕರಿಗೆ ನಷ್ಟ ಉಂಟುಮಾಡಿ ವ್ಯಾಪಾರಿಗಳು ಲಾಭ ಮಾಡಿಕೊಳ್ಳದಂತೆಯೂ ನೋಡಿಕೊಳ್ಳಬೇಕು.
ಜಗತ್ತಿನ ಅತಿಹೆಚ್ಚು ಬೇಳೆಕಾಳುಗಳ ಉತ್ಪಾದಕ ಮತ್ತು ಗ್ರಾಹಕ ಎರಡೂ ಭಾರತವೇ ಆಗಿರುವ ಸಂದರ್ಭದಲ್ಲಿ ಯಾವ ಬಗೆಯ ಮಧ್ಯಪ್ರವೇಶಗಳ ಅಗತ್ಯ ಬೀಳುತ್ತದೆ? ಭಾರತದ ಹೊರಗಡೆ ಬೇಳೆಕಾಳುಗಳಿಗೆ ದೊಡ್ಡ ಬೇಡಿಕೆಯಿಲ್ಲದಿರುವಾಗ ಒಂದು ಸಮಗ್ರ ಮತ್ತು ಸರಿಯಾದ ಸ್ಥಳೀಯ ನೀತಿಯಿಂದ ಮಾತ್ರ ಬೆಲೆ ಸ್ಥಿರೀಕರಣವನ್ನು ಸಾಧಿಸಲು ಸಾಧ್ಯ. ಬಂಪರ್ ಬೆಳೆ ಬಂದ ಸಂದರ್ಭದಲ್ಲಿ ರೈತರಿಂದ ನಿರ್ದಿಷ್ಟ ಪ್ರಮಾಣದ ಬೆಳೆಯನ್ನು ಸೂಕ್ತವಾದ ಬೆಲೆಗೆ ಖರೀದಿಸುವ ಖಾತರಿಯನ್ನು ಸರಕಾರವು ನೀಡಬೇಕು. ಸರಕಾರವು ಆಮದಿನ ಪ್ರಮಾಣದ ಮೇಲೆ ನಿರ್ಬಂಧವನ್ನೂ ವಿಧಿಸಬೇಕು ವುತ್ತು ರಫ್ತನ್ನೂ ನಿಯಂತ್ರಿಸಬೇಕು.
ಇವೆಲ್ಲವೂ ತಕ್ಷಣ ತೆಗೆದುಕೊಳ್ಳಬೇಕಿರುವ ಕ್ರಮಗಳಾಗಿದ್ದರೆ, ಕೊರತೆಯಿಂದಲೋ ಅಥವಾ ಹೆಚ್ಚಳದಿಂದಲೋ ಒಟ್ಟಿನಲ್ಲಿ ಬೆಲೆಯ ಏಳುಬೀಳುಗಳಿಗೆ ಗುರಿಯಾಗುವ ರೈತರಿಗೆ ಸೂಕ್ತವಾದ ಬೆಲೆಗಳು ದೊರಕುವ ನೀತಿಗಳನ್ನು ಮತ್ತು ಸಾಂಸ್ಥಿಕ ರಚನೆಗಳನ್ನೂ ಸರಕಾರಗಳು ರೂಪಿಸುವ ಅಗತ್ಯವಿದೆ. ರೈತರು ತಮ್ಮನಡುವೆ ರೈತಾಪಿಯ ಸಹಕಾರಿಗಳು ಅಥವಾ ಉತ್ಪಾದಕ ಕಂಪೆನಿಗಳನ್ನೂ ರಚಿಸಿಕೊಳ್ಳುವಂತೆ ಪ್ರೋತ್ಸಾಹಿಸಿ ಮಾರುಕಟ್ಟೆಯಲ್ಲಿ ರೈತಾಪಿಯ ಚೌಕಾಶಿಮಾಡುವ ಶಕ್ತಿಯನ್ನೂ ಹೆಚ್ಚಿಸುವ ಮತ್ತು ಬೆಲೆಗಳ ಏರಿಳಿತದಲ್ಲಿ ಶಾಮೀಲಾಗಿ ಲಾಭ ಗಿಟ್ಟಿಸಿಕೊಳ್ಳುವ ಮಧ್ಯವರ್ತಿಗಳ ಹಾವಳಿಯಿಂದ ಪಾರಾಗುವಂಥ ನೀತಿಗಳು ಇದರಲ್ಲಿ ಸೇರಿಕೊಳ್ಳಬೇಕು. ಉತ್ತಮ ಬೀಜಗಳ ಲಭ್ಯತೆ, ನೀರಾವರಿ ಸೌಲಭ್ಯಗಳು ಮತ್ತು ಉಗ್ರಾಣ ಮತ್ತು ಶೈತ್ಯಾಗಾರಗಳಂಥ ಸಂಗ್ರಹ ಸೌಲಭ್ಯಗಳ ಅಗತ್ಯವಿರುವುದನ್ನು ಗಮನಿಸಬೇಕು. ಆಗ್ರೋ-ಕಂಪೆನಿಗಳ ಜೊತೆ ದೀರ್ಘಕಾಲೀನ ಒಪ್ಪಂದಗಳನ್ನು ಮಾಡಿಕೊಳ್ಳುವ ಮುಖಾಂತರವೂ ಬೆಲೆಯ ಏಳುಬೀಳುಗಳಿಂದ ರೈತರು ಸ್ವಲ್ಪಮಟ್ಟಿಗೆ ಬಚಾವಾಗಬಹುದು. ರಾಜ್ಯ ಸರಕಾರಗಳು ರೈತರ ಬೆಳೆಗಳನ್ನು ಸಕ್ರಿಯವಾಗಿ ಮತ್ತು ವಿಸ್ತೃತವಾಗಿ ಕೊಳ್ಳುವ ನೀತಿಗಳನ್ನು ರೂಪಿಸಬೇಕಿರುವುದು ಮಾತ್ರವಲ್ಲದೆ, ಅಧಿಕವಾಗಿ ಲಭ್ಯವಾಗುವ ಬೇಳೆಕಾಳುಗಳನ್ನು ಪಡಿತರ ವ್ಯವಸ್ಥೆಯ ಮೂಲಕ ಬಡವರ ಬಳಕೆಗೆ ಲಭ್ಯವಾಗುವಂತಹ ವಿತರಣಾ ನೀತಿಯನ್ನೂ ರೂಪಿಸಬೇಕಿದೆ. ಇದು ಪೌಷ್ಟಿಕಾಂಶ ಕೊರತೆಯಿಂದ ನರಳುತ್ತಿರುವ ಜನಸಂಖ್ಯೆಯು ಹೆಚ್ಚಿರುವ ರಾಜ್ಯಗಳಲ್ಲಿ ಇನ್ನೂ ಹೆಚ್ಚಿಗೆ ಅಗತ್ಯವಿದೆ.
ಕೃಪೆ: Economic and Political Weekly