20ನೇ ಶತಮಾನದ ಶರಣ ಡಾ. ಫ.ಗು. ಹಳಕಟ್ಟಿ

Update: 2018-07-01 18:40 GMT

ಹಳಕಟ್ಟಿಯವರು ಸುಮಾರು 30 ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು! ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳಾಗಿದ್ದ ಪ್ರಹ್ಲಾದ ಬಾಳಾಚಾರ್ಯ ಗಜೇಂದ್ರಗಡಕರ ಅವರು ಹಳಕಟ್ಟಿಯವರ ಕುರಿತು ಮಾತನಾಡುವ ಪ್ರಸಂಗದಲ್ಲಿ ‘‘ಒಂದು ವೇಳೆ ಹಳಕಟ್ಟಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲೇ ಮುಂದುವರಿದಿದ್ದರೆ ನನಗಿಂತಲೂ ಮುಂಚೆಯೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗುತ್ತಿದ್ದರು’’ ಎಂದು ಹೇಳಿದ್ದರು.

12ನೇ ಶತಮಾನದ ಶರಣರ ಚಳವಳಿ ವಿಶ್ವದಲ್ಲೇ ವಿಶಿಷ್ಟ ವಾಗಿದೆ. ಜಮೀನುದಾರಿ ಪದ್ಧತಿಯನ್ನು ಹೋಗಲಾಡಿಸಿ, ಅದಕ್ಕೆ ಪರ್ಯಾಯವಾದ ರೈತಾಪಿ ಪದ್ಧತಿಯನ್ನು ಜಾರಿಗೊಳಿಸಿ ಸಕಲ ಕಾಯಕಜೀವಿಗಳನ್ನು ವಿಮೋಚನೆಗೊಳಿಸುವ ಮಹಾ ಉದ್ದೇಶ ವನ್ನು ಆ ಚಳವಳಿ ಹೊಂದಿತ್ತು. 12ನೇ ಶತಮಾನಕ್ಕೆ ಮೊದಲು ಇಂಥ ಒಂದು ಚಳವಳಿ ಜಗತ್ತಿನ ಯಾವುದೇ ಮೂಲೆಯಲ್ಲೂ ನಡೆದಿರಲಿಲ್ಲ. ರೈತಾಪಿ ವ್ಯವಸ್ಥೆಯನ್ನು ತರುವುದು ಈ ಚಳವಳಿಯ ಮುಖ್ಯ ಗುರಿಯಾಗಿದ್ದರೂ ಅದಕ್ಕೆ ಪೂರಕವಾದ ಇನ್ನೂ ಅನೇಕ ಬದಲಾವಣೆಯ ಸಾಧ್ಯತೆಗಳನ್ನು ಅದು ಹೊಂದಿತ್ತು. ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ದುರವಸ್ಥೆಗೆ ಕಾರಣವಾದ ವೈದಿಕ ವ್ಯವಸ್ಥೆಯ ಪರಿಚಯವನ್ನು ಮಹಿಳೆಯರು, ಶೂದ್ರರು ಮತ್ತು ದಲಿತರು ಮೊದಲು ಮಾಡಿ ಎಲ್ಲ ಕಾಯಕಜೀವಿಗಳಿಗೆ ಮಾಡಿಕೊಡುವುದರ ಮೂಲಕ ಅವರನ್ನು ಪರ್ಯಾಯ ರೈತಾಪಿ ವ್ಯವಸ್ಥೆಗೆ ಮುನ್ನಡೆಸುವಂಥ ವಾತಾವರಣ ಸೃಷ್ಟಿಸಬೇಕಿತ್ತು. ಅದಕ್ಕಾಗಿ ಬಸವಣ್ಣನವರು ಆ ಎಲ್ಲ ಕಾಯಕ ಜೀವಿಗಳಿಗೆ ಪರ್ಯಾಯ ಜೀವನವಿಧಾನಕ್ಕೆ ಸಂಬಂಧಿಸಿದ ‘ಶರಣ ಸಂಕುಲ’ವೆಂಬ ಮಾದರಿ ಸಮಾಜ ನಿರ್ಮಾಣ ಮಾಡಿದರು. ಆ ಸಮಾಜಕ್ಕೆ ತನ್ನದೇ ಆದ ಸೈದ್ಧಾಂತಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಇತ್ತು. ವೈದಿಕರ ಕರ್ಮಸಿದ್ಧಾಂತವನ್ನು ಕೊನೆಗಾಣಿಸಿ ಕಾಯಕ ಸಿದ್ಧಾಂತವನ್ನು ಕಾರ್ಯಗತಗೊಳಿಸುವುದೇ ಈ ಚಳವಳಿಯ ಮುಖ್ಯ ಉದ್ದೇಶವಾಗಿತ್ತು. ಆದ್ದರಿಂದ ಈ ಚಳವಳಿ ಎಲ್ಲ ರೀತಿಯ ಹೊಸತನದಿಂದ ಕೂಡಿತ್ತು. ಜೀವನಮೌಲ್ಯಗಳಿಂದ ಕೂಡಿದ ಸಾಹಿತ್ಯವನ್ನೊಳಗೊಂಡ ವಚನಗಳು ಈ ಚಳವಳಿಯ ಮೌಲ್ಯವನ್ನು ಹೆಚ್ಚಿಸಿದವು. ಈ ವಚನಗಳು ಸಾಹಿತ್ಯ ಮಾತ್ರ ವಾಗಿರದೆ ಅನುಭಾವ ಎಂಬ ತತ್ತ್ವಜ್ಞಾನ, ಯೋಗ್ಯ ಉತ್ಪಾದನೆಯ ಸಂಕೇತವಾದ ಕಾಯಕ, ಸದ್ಬಳಕೆಯ ಪ್ರತೀಕವಾದ ಪ್ರಸಾದ ಪ್ರಜ್ಞೆ ಹಾಗೂ ಯೋಗ್ಯ ಸಾಮಾಜಿಕ ವಿತರಣೆಯ ಪ್ರತೀಕವಾದ ದಾಸೋಹ ಪದ್ಧತಿಯ ಅರ್ಥವ್ಯವಸ್ಥೆಯಿಂದ ಈ ಸಮಾಜ ಪರಿ ಪೂರ್ಣ ಸ್ವಾವಲಂಬಿ ಸಮಾಜವಾಗಿತ್ತು. ವರ್ಣವ್ಯವಸ್ಥೆಯನ್ನು ಮೀರಿ ನಿಂತು ವೈದಿಕರ ಮನುವಾದಿ ವ್ಯವಸ್ಥೆಗೆ ಸಂಪೂರ್ಣವಾಗಿ ಮುಖಾಮುಖಿಯಾಗಿತ್ತು. ಈ ಎಲ್ಲ ವಿಚಾರಗಳನ್ನು ಒಳಗೊಂಡ ವಚನಗಳು ಸಹಜವಾಗಿಯೆ ಓದುಗರ ಗಮನ ಸೆಳೆಯುತ್ತಿದ್ದವು.

ಮರುಳಶಂಕರದ್ಯಾವರು 1886ರ ಸುಮಾರಿಗೆ ಮೊದಲ ಬಾರಿಗೆ ಕಲ್ಲಚ್ಚಿನಲ್ಲಿ ಬಸವಣ್ಣನವರ ವಚನಗಳನ್ನು ಪ್ರಕಟಿಸಿದರು. ನಂತರ 20ನೇ ಶತಮಾನದ ಆರಂಭ ಘಟ್ಟದಲ್ಲೇ ಫ.ಗು. ಹಳಕಟ್ಟಿ ಅವರ ಕಣ್ಣಿಗೆ ಬೀಳತೊಡಗಿದ ವಚನ ಸಾಹಿತ್ಯ ಇಂದು ಅವರ ಸತತ ಪ್ರಯತ್ನದ ಫಲವಾಗಿ ವಿಶ್ವಸಾಹಿತ್ಯದ ಮಟ್ಟಕ್ಕೆ ಏರಿದೆ.

ಫಕೀರಪ್ಪಹಳಕಟ್ಟಿ ಅವರು ಗುರುಬಸಪ್ಪ ಮತ್ತು ದಾನಮ್ಮ ನವರ ಹಿರಿಯ ಮಗನಾಗಿ 1880ನೇ ಜುಲೈ 2ರಂದು ಧಾರವಾಡ ದಲ್ಲಿ ಜನಿಸಿದರು. 1883ನೇ ಜೂನ್ 5ರಂದು ತಾಯಿ ತೀರಿ ಕೊಂಡರು. ತಂದೆ ಬಹಳ ಆಸಕ್ತಿಯಿಂದ ಮಗನನ್ನು ಬೆಳೆಸಿದರು. ಗುರುಬಸಪ್ಪಅವರು ಶಿಕ್ಷಣ ಇಲಾಖೆಯಲ್ಲಿ ಹಿರಿಯ ಗುಮಾಸ್ತ ರಾಗಿದ್ದರು. ಆದರೆ ಸಾಹಿತಿಯಾಗಿ ಜನಪ್ರಿಯರಾಗಿದ್ದರು. ಮನೆಯ ವಾತಾವರಣದಲ್ಲೇ ಫಕೀರಪ್ಪಅವರಿಗೆ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿತು. ಐದು ವರ್ಷಗಳ ನಂತರ ಗುರುಬಸಪ್ಪ ಅವರು ನೀಲವ್ವ ಎಂಬವರನ್ನು ಮದುವೆಯಾದರು. ಫಕೀರಪ್ಪನವರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ವಾತಾವರಣ ಮನೆಯಲ್ಲಿ ಸೃಷ್ಟಿಯಾಗಿತ್ತು.

1896ರಲ್ಲಿ ಫಕೀರಪ್ಪಅವರು ಧಾರವಾಡದಲ್ಲಿ ಮ್ಯಾಟ್ರಿಕ್‌ಪಾಸುಮಾಡಿದರು. ಅದೇ ವರ್ಷ ಬೆಳಗಾವಿಯ ತಮ್ಮಣ್ಣಪ್ಪಚಿಕ್ಕೋಡಿ ಅವರ ಮಗಳು ಭಾಗೀರಥಿ ಜೊತೆ ಮದುವೆ ಮಾಡ ಲಾಯಿತು. ಮುಂದಿನ ವಿದ್ಯಾಭ್ಯಾಸಕ್ಕಾಗಿ ದೂರದ ಮುಂಬೈಗೆ ಹೋಗಬೇಕಾಯಿತು. ಅಲ್ಲಿನ ಝೇವಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಕನ್ನಡ ಕುಲಪುರೋಹಿತ ಎಂದು ನಂತರದ ದಿನಗಳಲ್ಲಿ ಪ್ರಸಿದ್ಧರಾದ ಆಲೂರ ವೆಂಕಟರಾಯರು ಕೂಡ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. 1901ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿ ಅವರು 1904ರಲ್ಲಿ ಕಾನೂನು ಪದವಿ ಪಡೆದು ಧಾರವಾಡಕ್ಕೆ ಮರಳಿದರು. ಮೊದಲ ಮಗ ಮಹಾಲಿಂಗ 1903ರಲ್ಲಿ ಜನಿಸಿದ್ದ. ಧಾರವಾಡ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. ಕೆಲ ತಿಂಗಳುಗಳ ನಂತರ ಅವರು ವರ್ಗವಾಗಿ ಬೆಳಗಾವಿಗೆ ಹೋಗಬೇಕಾಯಿತು. ಅಲ್ಲಿಂದ ವಿಜಾಪುರಕ್ಕೆ ವರ್ಗ ಮಾಡಿಸಿಕೊಂಡರು. ನಂತರ ವಿಜಾಪುರದಲ್ಲಿ ಸ್ವತಂತ್ರ ವಕೀಲಿ ವೃತ್ತಿ ಪ್ರಾರಂಭಿಸಿದರು.

ಫಕೀರಪ್ಪನವರು ವಿದ್ಯಾರ್ಥಿಯಾಗಿದ್ದಾಗ 1903ರಲ್ಲಿ ರಬಕವಿ ಬನಹಟ್ಟಿಗೆ ಹೋಗಿದ್ದರು. ಅಲ್ಲಿ ಶಿವಲಿಂಗಪ್ಪಮಂಚಾಲಿ ಎಂಬವರ ಮನೆಯ ದೇವರ ಜಗಲಿಯ ಮೇಲೆ ಚಾಮರಸನ ‘ಪ್ರಭುಲಿಂಗ ಲೀಲೆ’ ಮತ್ತು ‘ಷಟ್‌ಸ್ಥಲ ತಿಲಕ’ ಗ್ರಂಥಗಳನ್ನು ನೋಡಿದರು. ಅಲ್ಲಿಂದ ತಾಳೆಗ್ರಂಥಗಳನ್ನು ಸಂಗ್ರಹಿಸುವ ಉತ್ಸಾಹ ಮುಂದುವರಿ ಯಿತು. ಹಳ್ಳಿ ಪಟ್ಟಣಗಳನ್ನು ಸುತ್ತುತ್ತ ವಚನಕಟ್ಟುಗಳ ಸಂಗ್ರಹ ಮಾಡತೊಡಗಿದರು. ವಕೀಲ ವೃತ್ತಿಯಿಂದ ದೂರ ಸರಿಯುತ್ತ ವಚನಗ್ರಂಥ ಪ್ರಕಟನೆಯಲ್ಲೇ ತಲ್ಲೀನರಾದರು. ತಮ್ಮ ಎಲ್ಲ ಏಳು ಮಕ್ಕಳಿಗೆ ಶರಣ ಸಂಸ್ಕೃತಿಯ ಪರಿಚಯ ಮಾಡಿಸುವ ಮೂಲಕ ಸರಳ ಜೀವನದ ಪಾಠ ಕಲಿಸಿದರು. 1915ರಲ್ಲಿ ವಕೀಲ ವೃತ್ತಿ ಬಿಟ್ಟು ಸಂಪೂರ್ಣವಾಗಿ ವಚನ ಸಂಗ್ರಹ, ಸಂಶೋಧನೆ ಮತ್ತು ಪ್ರಕಟನೆ ಯಲ್ಲೇ ತೊಡಗಿದ ಕಾರಣ ಬಡತನ ಜೊತೆಗೂಡಿತು. ಅವರು ನೇಕಾರ ಸಮಾಜದವರಾಗಿದ್ದರು. ಆ ಕಾಲದಲ್ಲಿ ಜನರಿಗೆ ವಚನದ ಮಹತ್ವ ಅಷ್ಟೊಂದು ಗೊತ್ತಿರದ ಕಾರಣ ಅವರಿಗೆ ಸಹಾಯಹಸ್ತ ಚಾಚುವವರು ಕೂಡ ಬಹಳ ಕಡಿಮೆ ಇದ್ದರು. ಆದರೆ ಯಾವ ಸಮಸ್ಯೆಯೂ ಅವರನ್ನು ವಚನ ಸೇವೆಯಿಂದ ದೂರ ಸರಿಸಲಿಲ್ಲ.
ತಾವು ಸಂಪಾದಿಸಿದ ‘ವಚನಶಾಸ್ತ್ರಸಾರ’ ಹಸ್ತಪ್ರತಿಯನ್ನು ಗ್ರಂಥ ರೂಪದಲ್ಲಿ ತರುವುದಕ್ಕಾಗಿ ಹಳಕಟ್ಟಿ ಅವರು 1922ರಲ್ಲಿ 500 ರೂಪಾಯಿಗಳ ಜೊತೆಗೆ ಮಂಗಳೂರಿನ ಬಾಸೆಲ್ ಮಿಷನ್ ಮುದ್ರಣಾಲಯಕ್ಕೆ ಕಳುಹಿಸಿಕೊಟ್ಟರು. ಕ್ರೈಸ್ತ ಧರ್ಮಪಂಡಿತರು ಅದರ ಮಹತ್ವವನ್ನು ಅರಿತರು. ವಚನ ಚಿಂತನೆಗೂ ಬೈಬಲ್ ವಿಚಾರಗಳಿಗೂ ಮೂಲಭೂತವಾದ ವ್ಯತ್ಯಾಸವಿಲ್ಲ ಎಂಬುದನ್ನು ಅವರು ಮನಗಂಡರು. ಅಂತೆಯೆ ಹಣದ ಜೊತೆ ಹಸ್ತಪ್ರತಿಯನ್ನೂ ವಾಪಸ್ ಕಳುಹಿಸಿದರು. ಹಳಕಟ್ಟಿಯವರು ಮರುವರ್ಷವೇ ಬೆಳಗಾವಿಗೆ ಹೋಗಿ ಮತ್ತೊಂದು ಮುದ್ರಣಾಲಯದಿಂದ ಆ ಗ್ರಂಥವನ್ನು ಪ್ರಕಟಿಸಿದರು.

1925ರಲ್ಲಿ ವಚನಗ್ರಂಥಗಳ ಮುದ್ರಣಕ್ಕಾಗಿ ವಿಜಯಪುರದಲ್ಲಿ ಇದ್ದ ಮನೆಯನ್ನು ಮಾರಿ ‘ಹಿತಚಿಂತಕ ಮುದ್ರಣಾಲಯ’ ಸ್ಥಾಪಿಸಿ ದರು. 1926ರಲ್ಲಿ ‘ಶಿವಾನುಭವ’ ಎಂಬ ತ್ರೈಮಾಸಿಕ ಪತ್ರಿಕೆ ಪ್ರಾರಂಭಿ ಸಿದರು. ಲಿಂಗಾಯತ ಧರ್ಮದ ಜೀವಾಳವಾಗಿದ್ದ ಈ ಪತ್ರಿಕೆ ಎರಡು ವರ್ಷಗಳ ನಂತರ ಮಾಸಪತ್ರಿಕೆಯಾಯಿತು. ಇದನ್ನವರು ಜೀವಿತದ ಕೊನೆಯವರೆಗೂ ನಡೆಸಿದರು. 1928ರಲ್ಲಿ ‘ನವಕರ್ನಾಟಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಮಾಜಿಕ, ರಾಜಕೀಯ ಮತ್ತು ಕರ್ನಾಟಕ ಏಕೀಕರಣದಂಥ ವಿಷಯಗಳಿಗೆ ಇಲ್ಲಿ ಪ್ರಾಶಸ್ತ್ಯ ಇರುತ್ತಿತ್ತು. ಮುದ್ರಣದ ಕೆಲಸಗಾರರನ್ನು ಅವರು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಜ್ಞಾನವನ್ನು ಕ್ರಿಯೆಯಾಗಿಸುವಲ್ಲಿ ಅವರು ಸದಾ ನಿರತರಾಗಿರುತ್ತಿದ್ದರು.
ಅವರು ಈ ಎಲ್ಲ ಎಡೆಬಿಡದ ಕಾರ್ಯಗಳ ಮಧ್ಯೆ ಕೂಡ ಇತರ ಜವಾಬ್ದಾರಿಗಳನ್ನು ಹೊತ್ತುಕೊಂಡದ್ದು ಅಗಾಧವಾಗಿದೆ. ಅವರ ಮಾರ್ಗದರ್ಶನದಲ್ಲಿ ವಿಜಯಪುರದಲ್ಲಿ 1910ರಲ್ಲಿ ಬಿಜಾಪುರ ಲಿಂಗಾಯತ್ ಡಿಸ್ಟ್ರಿಕ್ ಎಜ್ಯುಕೇಷನ್ (ಬಿ.ಎಲ್.ಡಿ.ಇ) ಸಂಸ್ಥೆ ಪ್ರಾರಂಭವಾಯಿತು. 1912ರಲ್ಲಿ ವಿಜಯಪುರದಲ್ಲಿ ಸಿದ್ಧೇಶ್ವರ ಬ್ಯಾಂಕ್ ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾದರು. 1914ರಲ್ಲಿ ಶ್ರೀ ಸಿದ್ಧೇಶ್ವರ ಹೈಸ್ಕೂಲ್ ಪ್ರಾರಂಭಿಸಿದರು. 1917ರಲ್ಲಿ ಬಿಜಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1919ರಲ್ಲಿ ವಿಜಾಪುರ ನಗರ ಸಭೆಯ ಉಪಾಧ್ಯಕ್ಷರಾದರು. 1920ರಲ್ಲಿ ಮುಂಬೈ ವಿಧಾನ ಪರಿಷತ್ ಸದಸ್ಯರಾದರು. 1922ರಲ್ಲಿ ಬಸವೇಶ್ವರ ವಚನಗಳ ಇಂಗ್ಲಿಷ್ ಅನುವಾದ ಪ್ರಕಟಿಸಿದರು. 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. 1928ರಲ್ಲಿ ಧಾರವಾಡದಲ್ಲಿ ಜರುಗಿದ ಕರ್ನಾಟಕ ಏಕೀಕರಣ ಪರಿಷತ್ತಿನ ಮೂರನೆಯ ಸಮ್ಮೇಳನದ ಅಧ್ಯಕ್ಷರಾದರು. 1929ರಲ್ಲಿ ವಿಜಾಪುರ ನಗರಸಭೆಯ ಶಾಲಾ ಸಮಿತಿ ಅಧ್ಯಕ್ಷರಾದರು. 1931ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾದರು. 1933ರಲ್ಲಿ ಧಾರವಾಡದಲ್ಲಿ ನಡೆದ 10ನೇ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದರು. 1934ರಲ್ಲಿ ವಿಜಾಪುರದಲ್ಲಿ ಬರಗಾಲ ನಿವಾರಣೆಗಾಗಿ ಆರಂಭಿಸಿದ ‘ವಿಲ್ಸನ್ ಯಾಂಟಿ ಫ್ಯಾಮಿನ ಇನ್‌ಸ್ಟಿಟ್ಯೂಟ್’ ಕಾರ್ಯದರ್ಶಿಯಾದರು. 1956ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪದವಿ ಸ್ವೀಕರಿಸಿದರು. 1956ರಲ್ಲಿ ಬೆಳಗಾವಿಯಲ್ಲಿ ನಾಗನೂರು ಶಿವಬಸವ ಸ್ವಾಮಿಗಳು ಅರ್ಪಿಸಿದ ನಿಧಿ ಮತ್ತು ಮಾನಪತ್ರ ಸ್ವೀಕರಿಸಿದರು. ಅದೇ ವರ್ಷ ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಾನಪತ್ರ ಸ್ವೀಕರಿಸಿದರು.
1964ನೇ ಮೇ 25ರಂದು ಪತ್ನಿ ಭಾಗೀರಥಿ ನಿಧನರಾದರು. 1964ನೇ ಜೂನ್ 29ರಂದು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ನಿಧನರಾದರು.
ಹಳಕಟ್ಟಿಯವರು ಸುಮಾರು 30 ಸಂಸ್ಥೆಗಳಲ್ಲಿ ಕ್ರಿಯಾಶೀಲ ರಾಗಿದ್ದರು! ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಗಳಾಗಿದ್ದ ಪ್ರಹ್ಲಾದ ಬಾಳಾಚಾರ್ಯ ಗಜೇಂದ್ರಗಡಕರ ಅವರು ಹಳಕಟ್ಟಿಯವರ ಕುರಿತು ಮಾತನಾಡುವ ಪ್ರಸಂಗದಲ್ಲಿ ‘‘ಒಂದು ವೇಳೆ ಹಳಕಟ್ಟಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲೇ ಮುಂದುವರಿದಿದ್ದರೆ ನನಗಿಂತಲೂ ಮುಂಚೆಯೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗುತ್ತಿದ್ದರು’’ ಎಂದು ಹೇಳಿದ್ದರು. ಆದರೆ ಹಳಕಟ್ಟಿ ಅವರು ಸುಖದ ಸುಪ್ಪತ್ತಿಗೆಯಲ್ಲಿ ಇರಿಸುವ ಉದ್ಯೋಗವನ್ನು ತೊರೆದು ಇಡೀ ವಚನ ಸಾಹಿತ್ಯವನ್ನು ಪ್ರಕಟಿಸುವ ಮಹಾ ಕಾರ್ಯವನ್ನು ಮಾಡಿದರು. ಅವರ ತ್ಯಾಗದಿಂದಾಗಿ ನಮಗೆ ಈ ಅಮೂಲ್ಯ ವಚನಸಾಹಿತ್ಯ ದೊರಕಿದೆ. ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪಡೆದ ನಂತರ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಆಗ ಕೂಡ ಅವರು ಇದ್ದ ಒಂದು ತೇಪೆ ಹಚ್ಚಿದ ಖಾದಿ ಕೋಟ್ ಅನ್ನು ಹಾಕಿಕೊಂಡೇ ಊಟಕ್ಕೆ ಕುಳಿತರು. ಕುಲಸಚಿವರು ಬಂದು ಕೋಟು ತೆಗೆದಿಟ್ಟು ಊಟಕ್ಕೆ ಕುಳಿತುಕೊಳ್ಳಲು ವಿನಮ್ರವಾಗಿ ಸೂಚಿಸಿದರು. ಆಗ ಹಳಕಟ್ಟಿ ಅವರು ಒಳಗೆ ಅಂಗಿ ಬಹಳ ಹರಿದು ಹೋಗಿದೆ ಎಂದು ತಿಳಿಸಿದರು!
ಅವರು ‘ಶಿವಾನುಭವ’ ಪತ್ರಿಕೆಯ ಪ್ರಸಾರಕ್ಕಾಗಿ ಊರೂರು ತಿರುಗಿದರು. ಜನ ಅಷ್ಟೊಂದು ಆಸಕ್ತಿ ತೋರಿಸದಿದ್ದರೂ ಅವರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆಯಲಿಲ್ಲ. ಮನೆಯಲ್ಲಿ ಅನೇಕ ಕಷ್ಟನಷ್ಟಗಳು ಸಂಭವಿಸಿದರೂ ಎದೆಗುಂದಲಿಲ್ಲ. ವಿಷಮ ಜ್ವರವಿದ್ದಾಗ, ಹೊಟ್ಟೆನೋವಿನಿಂದ ನರಳುವಾಗ ಮತ್ತು ರೈಲು ಪ್ರವಾಸ ಮಾಡುವಾಗ ಕಾಲು ಜಾರಿ ಪೆಟ್ಟಾಗಿ ಆರು ತಿಂಗಳು ಹಾಸಿಗೆಯಲ್ಲಿ ಇದ್ದಾಗ ಕೂಡ ಅವರು ವಚನ ಸಂಶೋಧನಾ ಮತ್ತು ಪ್ರಕಟನಾ ಕಾರ್ಯವನ್ನು ನಿಲ್ಲಿಸಲಿಲ್ಲ.
ಅವರ ಮಗ ಚಂದ್ರಶೇಖರ್‌ಗೆ ದಿಲ್ಲಿಯಲ್ಲಿ ಉನ್ನತ ಹುದ್ದೆ ಸಿಕ್ಕಿತು. ಆದರೆ ಅವರು ಅಕಾಲ ಮೃತ್ಯುವಿಗೆ ಒಳಗಾದರು. ಆಗ ಹಳಕಟ್ಟಿಯವರು ಎಲ್ಲವನ್ನೂ ಸಹಿಸಿಕೊಂಡು ದಿಲ್ಲಿಗೆ ಹೋಗಿ ಮಗನ ಶವಸಂಸ್ಕಾರ ಮಾಡಿಬಂದರು! ಅವರ ಬದುಕೊಂದು ನೋವಿನ ಮತ್ತು ಸಾಹಸಗಾಥೆಯಾಗಿದೆ. ಅವರು ನಿಜವಾದ ಭಾರತರತ್ನ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ