ಆ ಮಹಿಳೆ ಆ ವ್ಯಕ್ತಿಯನ್ನು ಇನ್ನೂ ದೇವರೆಂದು ಪೂಜಿಸುತ್ತಿದ್ದಾರೆ...!

Update: 2018-07-02 18:37 GMT

 ಅವರು ನೂರಾರು ಭದ್ರತಾ ಸಿಬ್ಬಂದಿಯಿಂದ ಯಾವ ಮನೆಯಲ್ಲಿ ರಕ್ಷಿಸಲ್ಪಟ್ಟಿದ್ದಾರೋ, ಆ ವಿಸ್ತಾರವಾದ ಮನೆಯನ್ನಾದರೂ ಕನಿಷ್ಠ ಪಕ್ಷ ಒಮ್ಮೆ ನೋಡುತ್ತೇನೆಂದು ಯಾವ ಮಹಿಳೆ ತುಂಬಾ ಆಸೆ ಪಟ್ಟಿದ್ದರೋ, ಆ ಮಹಿಳೆ ವಿವಾಹ ಪ್ರಮಾಣ ಪತ್ರವಿಲ್ಲವೆಂಬ ಕಾರಣಕ್ಕಾಗಿ ಯಾವ ಮಹಿಳೆ ಪಾಸ್‌ಪೋರ್ಟ್‌ಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಯಿತೋ, ತಾನು ಮಾಡಿರದ ತಪ್ಪಿಗಾಗಿ ಯಾವ ಮಹಿಳೆ ಇಷ್ಟೊಂದು ವರ್ಷಗಳ ಕಾಲ ಮೌನವಾಗಿ ಯಾತನೆಯನ್ನು ಅನುಭವಿಸಿದ್ದರೋ ಮತ್ತು ತನ್ನ ಸಹೋದರನ ಕುಟುಂಬದ ಜೊತೆ ಬದುಕುತ್ತಾ ಬಂದಿದ್ದಾರೋ, ಆ ಮಹಿಳೆ ಇನ್ನೂ ಕೂಡ ಆ ವ್ಯಕ್ತಿಯನ್ನು ದೇವರೆಂದು ಪೂಜಿಸುತ್ತಿದ್ದಾರೆ.

ಇದು ಒಂದು ಕಾಲದಲ್ಲಿ ಚಹಾ ಮಾರಿ, ಆನಂತರ ಒಂದು ಸಮುದಾಯಕ್ಕೆ ಕನಸುಗಳನ್ನು ಮಾರಿದ ಮತ್ತು ವಿಶ್ವದ ಅತ್ಯಂತ ಬೃಹತ್ತಾದ ಪ್ರಜಾಪ್ರಭುತ್ವದಲ್ಲಿ ಅಧಿಕಾರದ ತುತ್ತ ತುದಿಗೇರಿದ ವ್ಯಕ್ತಿಯ ಕಥೆಯಲ್ಲ ಮತ್ತು ವಿಶ್ವದಲ್ಲಿ ಅತ್ಯಂತ ಬೃಹತ್ತಾದ ಸಾಂಸ್ಕೃತಿಕ ಸಂಘಟನೆಯ ಅಂಚಿನಿಂದ ಅದರ ಶಿಖರವೇರಿದ ವ್ಯಕ್ತಿಯ ಕಥೆಯಲ್ಲ.

ಇದು ಆ ವ್ಯಕ್ತಿಯ ಬಾಲ್ಯದ ಶೌರ್ಯ ಮತ್ತು ಧೈರ್ಯವನ್ನು ಮತ್ತೊಮ್ಮೆ ಮೆಲುಕು ಹಾಕುವಂತಹ, ಬಾಲಿವುಡ್‌ನ ಸಿನೆಮಾವನ್ನೂ ಮೀರಿಸಬಲ್ಲ ಕಥೆಯೂ ಅಲ್ಲ ಅಥವಾ ಆ ವ್ಯಕ್ತಿ ಗುರುವೊಬ್ಬರನ್ನು ಹುಡುಕುತ್ತಾ ಅಥವಾ ತನ್ನ ಆಧ್ಯಾತ್ಮಿಕ ಗುರಿಯನ್ನು ಈಡೇರಿಸಲಿಕ್ಕೆ ಹಿಮಾಲಯದಲ್ಲಿ ನಡೆಸಿದ ಅಲೆದಾಟಗಳ ಕತೆಯೂ ಅಲ್ಲ.
ಅತ್ಯಂತ ದೊಡ್ಡದಾದ ಜನಸಮುದಾಯಕ್ಕೆ ಒಂದು ಹೊಸ ಸಂದೇಶವನ್ನು ಕಲ್ಪಿಸಲಿಕ್ಕಾಗಿ ‘ವೃತ್ತಿಪರ ಹಾಗೂ ಅಪರೂಪದ ಪರಿಣತ’ರನ್ನು ಪಡೆಯಲು ಒಂದು ದಶಕದ ಹಿಂದೆ ಅವರಿಂದ ನೇಮಿಸಲ್ಪಟ್ಟ ಒಂದು ಅಂತರ್‌ರಾಷ್ಟ್ರೀಯ ಪಿಆರ್ ಏಜೆನ್ಸಿ ವಹಿಸಿದ ಪಾತ್ರದ ಮರುಜ್ಞಾಪಿಸಿಕೊಳ್ಳುವಿಕೆಯ ಸಾರಾಂಶವಾಗಲಿ ಇದಲ್ಲ.
ಅಧ್ಯಾತ್ಮದಲ್ಲಿ ಒಂದು ಅನುಭವವನ್ನು ಸ್ವಚ್ಛಗೊಳಿಸುವುದಕ್ಕೆ ಹೋಲಿಸಲಾಗಿರುವ ವ್ಯಕ್ತಿಯ ಚಿಂತನೆಗಳಿರುವ ಪುಸ್ತಕದ ಮರು ಸಂದರ್ಶನ, ಮರು ಓದು ಇದಲ್ಲ.
ಆ ವ್ಯಕ್ತಿ ತನ್ನ ವೈವಾಹಿಕ ಸ್ಥಾನಮಾನವನ್ನು ಬಾಹ್ಯ ಜಗತ್ತಿಗೆ ಎಷ್ಟರ ಮಟ್ಟಿಗೆ ಬಹಿರಂಗಪಡಿಸಲಿಲ್ಲವೆಂದರೆ ಅವರೊಂದಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದ ವ್ಯಕ್ತಿಗೆ ಅವರ ಬದುಕಿನ ಈ ಅಂಶದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ವಾಕರಿಕೆ ಬರುವಷ್ಟು ಬಾರಿ ಹೇಳಲಾಗಿರುವ ಈ ಸತ್ಯ ವಿಷಯವನ್ನು ಪುನರುಚ್ಚರಿಸುವುದು ಕೂಡ ಇಲ್ಲಿಯ ಉದ್ದೇಶವಲ್ಲ. ನಮ್ಮಂತಹ ಹುಲು ಮಾನವರಿಗೆ ಈ ವೈವಾಹಿಕ ವಿಷಯದ ಬಗ್ಗೆ ಇರುವ ಮೌನ ಇಷ್ಟೊಂದು ವರ್ಷಗಳ ಕಾಲ ಯಾಕೆ ಮುಂದುವರಿಯಿ ತೆಂದು ಗೊಂದಲ ವಾಗದಿರುವುದಿಲ್ಲ.


ಪ್ರಾಯಶಃ ಆ ವ್ಯಕ್ತಿ ತನ್ನ ಬದುಕಿನ ಅಷ್ಟೊಂದು ದೀರ್ಘ ಅವಧಿಯ ವರೆಗೆ ತನಗೆ ಬೇಕಾದ್ದನ್ನು ಮಾತ್ರ ಮರೆಯುವ ಮರೆವಿನಿಂದ (ಸೆಲೆಕ್ಟೀವ್ ಅಮ್ನೇಶಿಯ) ಬಳಲಿರಬಹುದು ಅಥವಾ ‘ರಾಷ್ಟ್ರ’ಕ್ಕಾಗಿ ತಾನು ಮಾಡುತ್ತಿದ್ದೇನೆಂದು ಪರಿಗಣಿಸಿದ ಕೆಲಸದಲ್ಲಿ ಪ್ರಾಯಶಃ ಅವರು ಎಷ್ಟೊಂದು ತಲ್ಲೀನರಾಗಿಬಿಟ್ಟಿದ್ದರೆಂದರೆ ಅವರು ಆ ವಿಷಯವನ್ನು ಇತರರಿಗೆ ಹೇಳಲು ಕೂಡ ಮರೆತು ಬಿಟ್ಟಿರಬಹುದು. ಅವರು ಯಾವ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದರೋ ಆ ಸಂಘಟನೆ ಅಂತಹ ಯಾವುದೇ ವೈವಾಹಿಕ ಬಂಧನದ ಬಗ್ಗೆ ಸಿಟ್ಟಿನಲ್ಲಿ ಹುಬ್ಬೇರಿಸಬಹುದು ಹಾಗಾಗಿ ಅವರು ತನ್ನ ವಿವಾಹದ ಸುದ್ದಿಯನ್ನು ಇತರರೊಂದಿಗೆ ಹಂಚಿಕೊಳ್ಳದಿರಲು ನಿರ್ಧರಿಸಿರಬಹುದು
ಸುದ್ದಿಯನ್ನು ಬಹಿರಂಗ ಪಡಿಸುವ ಅಗತ್ಯ ಎದುರಾದಾಗ ಮತ್ತು ಸತ್ಯ ವಿಷಯವನ್ನು ಎದುರಿಸಬೇಕಾಗಿ ಬಂದಾಗ ಆ ವ್ಯಕ್ತಿಗೆ ತಾನು ವಿವಾಹಿತನೋ ಅಥವಾ ಅವಿವಾಹಿತನೋ ಎಂಬ ಹ್ಯಾಮ್ಲೆಟ್‌ನ ವಿರೋಧಾಭಾಸ ಎದುರಾಗಿ ಅವರು ಆ ಬಗ್ಗೆ ಅಸ್ಪಷ್ಟವಾಗಿಯೇ ಉಳಿಯಲು ನಿರ್ಧರಿಸಿರಬಹುದು. ಅಧಿಕಾರದ ಕುರ್ಚಿಗಳಲ್ಲಿ ಕುಳಿತಿರುವವರು ಮುಖ ಅತ್ತ ತಿರುಗಿಸಿ ಅಥವಾ ಮೌನವಾಗಿ ಇದ್ದ ಬಗ್ಗೆ ಇದು ಟೀಕೆಯಲ್ಲ.
ಅಧಿಕಾರದ ಗದ್ದುಗೆ ಏರುವುದಕ್ಕಾಗಿ ಜನರನ್ನು ಒಂದು ಗೂಡಿಸುತ್ತಾ ಆ ವ್ಯಕ್ತಿ ದೇಶವ್ಯಾಪಿ ಪ್ರವಾಸ ಕೈಗೊಂಡಾಗ, ವಂಶಾಡಳಿತದ ಸರ್ವ ಸ್ವಾಮ್ಯವನ್ನು ಅಂತ್ಯ ಗೊಳಿಸುವುದಕ್ಕಾಗಿ ದೇಶಾದ್ಯಂತ ಸಂಚರಿಸಿದಾಗ, ಆ ವ್ಯಕ್ತಿಗೆ ತನ್ನ ಸ್ವಂತ ಬದುಕಿನ ಬಗ್ಗೆ ಅಸ್ಪಷ್ಟತೆಯನ್ನು ಉಳಿಸಿ ಕೊಳ್ಳುವಾಗ ತಾನು ಸರಿಯಾದುದನ್ನೇ ಮಾಡುತ್ತಿದ್ದೇನೋ ಅಥವಾ ತಪ್ಪು ಮಾಡುತ್ತಿದ್ದೇನೋ ಎಂಬ ಬಗ್ಗೆ ಯಾವುದೇ ಅನುಮಾನವಿರಲಿಲ್ಲವೆಂದು ಹೇಳಬೇಕಾಗಿಲ್ಲ ಮತ್ತು ಈ ಕ್ರಮ, ಈ ಮರ್ಜಿ, ಈ ಶೈಲಿ ಈಗಲೂ ಮುಂದುವರಿಯುತ್ತಿದೆ. ನಿಜವೇ ಹೇಳಬೇಕೆಂದರೆ ಅವರು ಒಮ್ಮೆ ತಾನು ಮೂಲತಃ ಒಬ್ಬ ಪಕೀರ, ಐಹಿಕ ಬಂಧನ ಅಥವಾ ಆಸ್ತಿಪಾಸ್ತಿ ಗಳಿಲ್ಲದ ಒಬ್ಬ ದೇವತಾ ಮನುಷ್ಯ ಮತ್ತು ತನ್ನ ಕಚೇರಿಯನ್ನು ತೊರೆದು ಹೊರಟು ಹೋಗಲು ಒಂದು ಕ್ಷಣವೂ ಬೇಕಾಗಿಲ್ಲ ಎಂದು ದೇಶದ ಜನರಿಗೆ ಹೇಳಿದ್ದರು.
ಕೆಲ ವರ್ಷಗಳ ಹಿಂದೆ ಆ ವ್ಯಕ್ತಿಯ ಸೆಲೆಕ್ಟಿವ್ ಅಮ್ನೇಶಿಯ ಅಥವಾ ತನ್ನ ವೈವಾಹಿಕ ಸ್ಥಾನಮಾನದ ಕುರಿತಾದ ಅವರ ಅಸ್ಪಷ್ಟತೆ ಅಂತಿಮವಾಗಿ ಕೊನೆಗೊಂಡಿತ್ತು ಮತ್ತು ಅವರು ತಾನು ವಿವಾಹಿತರೆಂದು ಅಧಿಕೃತವಾಗಿ ಒಪ್ಪಿಕೊಂಡರು ಎಂದು ನಿಮಗೆ ಹೇಳುವ ಪ್ರಯತ್ನ ಇದಲ್ಲ.
ಇವೆಲ್ಲವುಗಳಿಗೆ ಮತ್ತು ಸಾರ್ವಜನಿಕ ಜಾಲತಾಣಗಳಲ್ಲಿ ದೊರಕುವ ಇನ್ನಷ್ಟು ವಿಷಯಗಳಿಗೆ ಸೇರಿಸಲು ಈ ಟಿಪ್ಪಣಿಯಲ್ಲಿ ಬೇರೇನೂ ಇಲ್ಲ. ಪ್ರಾಯಶಃ ಭವಿಷ್ಯದ ಇತಿಹಾಸಕಾರರು ಇವುಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲಲು ಸಮರ್ಥರಾಗಬಹುದು ಅಥವಾ ಈ ಎಲ್ಲ ವಿಷಯಗಳ ಬಗ್ಗೆ ತೀರ್ಪು ನೀಡಬಹುದು. ಭಾರತವು ಯಾವ ‘ದಾರ್ಶನಿಕ ರಾಜಕೀಯ ಮುತ್ಸದ್ದಿ’ಗಾಗಿ ಕಾದು ಕುಳಿತಿತ್ತೋ ಆ ಮುತ್ಸದ್ದಿ, ಆ ವ್ಯಕ್ತಿ ಹೌದೋ ಅಥವಾ ವಿಸ್ತೃತವಾದ ಚರ್ಚೆ ನಡೆಸದೆ ಭಾರತದ ರಾಜಧಾನಿಯನ್ನು ಸ್ಥಳಾಂತರಿಸಲು ನಿರ್ಧರಿಸಿದ ಮಧ್ಯಯುಗದ ಓರ್ವ ರಾಜನ ಪುನರವತಾರವೇ ಎಂದು ಹೇಳಲು ಭವಿಷ್ಯದ ಇತಿಹಾಸಕಾರರು ಸಮರ್ಥರಾಗಬಹುದು.
 ಆ ವ್ಯಕ್ತಿ ತ್ಯಜಿಸಿದ ಮಹಿಳೆ, ಅವರ ಬದುಕಿನ ದಶಕಗಳ ಕಾಲ ಅವರಿಗಾಗಿ ಕಾಯುತ್ತಾ ಕುಳಿತ ಮಹಿಳೆ, ಅವರು ನೂರಾರು ಭದ್ರತಾ ಸಿಬ್ಬಂದಿಯಿಂದ ಯಾವ ಮನೆಯಲ್ಲಿ ರಕ್ಷಿಸಲ್ಪಟ್ಟಿದ್ದಾರೋ, ಆ ವಿಸ್ತಾರವಾದ ಮನೆಯನ್ನಾದರೂ ಕನಿಷ್ಠ ಪಕ್ಷ ಒಮ್ಮೆ ನೋಡುತ್ತೇನೆಂದು ಯಾವ ಮಹಿಳೆ ತುಂಬಾ ಆಸೆ ಪಟ್ಟಿದ್ದರೋ, ಆ ಮಹಿಳೆ ವಿವಾಹ ಪ್ರಮಾಣ ಪತ್ರವಿಲ್ಲವೆಂಬ ಕಾರಣಕ್ಕಾಗಿ ಯಾವ ಮಹಿಳೆ ಪಾಸ್‌ಪೋರ್ಟ್‌ಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಯಿತೋ, ತಾನು ಮಾಡಿರದ ತಪ್ಪಿಗಾಗಿ ಯಾವ ಮಹಿಳೆ ಇಷ್ಟೊಂದು ವರ್ಷಗಳ ಕಾಲ ಮೌನವಾಗಿ ಯಾತನೆಯನ್ನು ಅನುಭವಿಸಿದ್ದರೋ ಮತ್ತು ತನ್ನ ಸಹೋದರನ ಕುಟುಂಬದ ಜೊತೆ ಬದುಕುತ್ತಾ ಬಂದಿದ್ದಾರೋ, ಆ ಮಹಿಳೆ ಇನ್ನೂ ಕೂಡ ಆ ವ್ಯಕ್ತಿಯನ್ನು ದೇವರೆಂದು ಪೂಜಿಸುತ್ತಿದ್ದಾರೆ.
ಯಾಕೆ? ಗೊತ್ತಿಲ್ಲ..
ಯಾಕೆ? ಗೊತ್ತಿಲ್ಲ...
ಯಾಕೆ? ಗೊತ್ತಿಲ್ಲ...

ಕೃಪೆ: sabrangindia.in 

Writer - ಸುಭಾಷ್ ಗಟಡೆ

contributor

Editor - ಸುಭಾಷ್ ಗಟಡೆ

contributor

Similar News

ಜಗದಗಲ
ಜಗ ದಗಲ