ಅಂಬೇಡ್ಕರ್ ದೃಷ್ಟಿಯಲ್ಲಿ ಪ್ರಜಾಪ್ರಭುತ್ವಪರ ಸಮಾಜ ಮತ್ತು ಸರಕಾರ

Update: 2018-07-03 18:39 GMT

ಬಾಬಾಸಾಹೇಬರ ಈ ವಿಚಾರಗಳನ್ನು ಆಳುವ ಸರಕಾರಗಳ ನೇತಾರರು ಖಂಡಿತ ಅರ್ಥಮಾಡಿಕೊಳ್ಳಬೇಕು. ಅಂತೆಯೇ ಅಧಿಕಾರ ನಡೆಸಬೇಕು. ಆಗಷ್ಟೇ ಯಾರೇ ಮುಖ್ಯಮಂತ್ರಿಯಾದರೂ, ಪ್ರಧಾನಿಯಾದರೂ ಇತರರು ಅನುಮಾನದಿಂದ ನೋಡುವ ಪ್ರವೃತ್ತಿ ತೊಲಗುತ್ತದೆ. ಇಲ್ಲದಿದ್ದರೆ ಅಂಬೇಡ್ಕರರು ಆತಂಕ ವ್ಯಕ್ತಪಡಿಸಿರುವಂತೆ ಪ್ರಜಾಪ್ರಭುತ್ವ ಸರಕಾರಗಳು ಅಕ್ಷರಶಃ ವಿಫಲತೆಯೆಡೆಗೆ ಸಾಗುವ ಅಪಾಯವಿದೆ.

ಬಹುತೇಕರು ಚುನಾವಣೆಗಳು ಮುಗಿದು ಸರಕಾರಗಳು ರಚನೆಗೊಂಡ ತಕ್ಷಣ ಪ್ರಜಾಪ್ರಭುತ್ವ ಯಶಸ್ಸು ಕಂಡಿತು ಎನ್ನುತ್ತಾರೆ. ಆದರೆ...? ಅದು ಹಾಗಲ್ಲ. ಉದಾಹರಣೆಗೆ ನರೇಂದ್ರ ಮೋದಿಯವರು ಗೆದ್ದು ಪ್ರಧಾನಿಯಾಗಿ 4 ವರ್ಷ ಪೂರೈಸಿದರೂ ಬಹುತೇಕರು ಈ ಸರಕಾರ ತಮ್ಮದು ಎಂದು ಕೊಳ್ಳುತ್ತಿಲ್ಲ ಅಥವಾ ಈ ಸರಕಾರ ನಮಗೇನು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವವರೇ. ಹಾಗೆಯೇ ರಾಜ್ಯದ ಹಾಲಿ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರಕಾರಕ್ಕೂ ಕೆಲವರು ಅಂತಹದ್ದೇ ಅನುಮಾನ ವ್ಯಕ್ತಪಡಿಸಬಹುದು. ಈ ನಿಟ್ಟಿನಲ್ಲಿ ಇದು ಭಾರತದ ಬಹುತೇಕ ರಾಜ್ಯಗಳ, ಸರಕಾರಗಳ ಕತೆ. ಹಾಗಿದ್ದರೆ ಇಲ್ಲಿ ಸಮಸ್ಯೆ ಏನು? ಪ್ರಜಾಪ್ರಭುತ್ವ ಸರಕಾರಗಳು ಆಯ್ಕೆಯಾದರೂ ಅವುಗಳು ನಮ್ಮ ಪರ ಕೆಲಸ ಮಾಡುವುದಿಲ್ಲ ಎಂದುಕೊಳ್ಳಲಾಗುತ್ತಿದೆ ಎಂದರೆ ಅಲ್ಲಿ ಪ್ರಜಾಪ್ರಭುತ್ವ ವಿಫಲವಾಗುತ್ತಿದೆ ಎಂದೇ ಅರ್ಥ! ಹಾಗಿದ್ದರೆ ಇದಕ್ಕೆ ಕಾರಣ? ಉತ್ತರ ಬಾಬಾಸಾಹೇಬ್ ಅಂಬೇಡ್ಕರ್‌ರ ವಿಚಾರಗಳಲ್ಲಿ ದೊರಕುತ್ತದೆ. ಹೇಗೆಂದರೆ ಬಾಬಾಸಾಹೇಬ್ ಅಂಬೇಡ್ಕರ್‌ರು ಈಗಿನ ಸರಕಾರಗಳ ಭವಿಷ್ಯ ಮತ್ತು ಲಕ್ಷಣಗಳನ್ನು ತಿಳಿಸುವ ವಿಚಾರಗಳನ್ನು 80 ವರ್ಷಗಳ ಹಿಂದೆಯೇ ನುಡಿದಿದ್ದಾರೆ. ಬಾಬಾಸಾಹೇಬರ ಆ ನುಡಿಗಳು ಹಾಲಿ ಕೇಂದ್ರ ಸರಕಾರದ ಲಕ್ಷಣ, ಕಾರ್ಯನಿರ್ವಹಿಸುತ್ತಿರುವ ರೀತಿಗೂ ಕನ್ನಡಿ ಹಿಡಿಯುತ್ತದೆ ಮತ್ತು ರಾಜ್ಯದ ಸಮ್ಮಿಶ್ರ ಸರಕಾರದ ಭವಿಷ್ಯಕ್ಕೂ ಸ್ಥಿರತೆಗೂ ಬಲವಾದ ಕಾರಣ ನೀಡುತ್ತದೆ.

ಅಂಬೇಡ್ಕರರು ಹೇಳುವುದು: ‘‘ಪ್ರಜಾಪ್ರಭುತ್ವ ಮಾದರಿ ಸರಕಾರವು ಒಳ್ಳೆಯದನ್ನು ಮಾಡುತ್ತದೆಯೇ ಎಂಬುದು ಆ ಸಮಾಜವು ಒಳಗೊಂಡಿರುವ ವ್ಯಕ್ತಿಗಳ ಮಾನಸಿಕ ಪ್ರಬುದ್ಧತೆಯ ಮೇಲೆ ಅವಲಂಬಿತವಾಗಿದೆ. ವ್ಯಕ್ತಿಗಳ ಮಾನಸಿಕ ಪ್ರಬುದ್ಧತೆಯು ಪ್ರಜಾಪ್ರಭುತ್ವದ್ದಾಗಿದ್ದರೆ ಆಗ ಪ್ರಜಾಪ್ರಭುತ್ವ ರೂಪದ ಸರಕಾರವು ಅಕ್ಷರಶಃ ಒಳ್ಳೆಯದನ್ನು ಮಾಡುತ್ತದೆ ಎಂದು ನಿರೀಕ್ಷಿಸಬಹುದು. ಅಕಸ್ಮಾತ್ ಹಾಗಿಲ್ಲದಿದ್ದರೆ ಪ್ರಜಾಪ್ರಭುತ್ವ ಮಾದರಿ ಸರಕಾರವು ತುಂಬಾ ಸುಲಭವಾಗಿ ಒಂದು ಅಪಾಯಕಾರಿ ಮಾದರಿಯ ಸರಕಾರವಾಗುತ್ತದೆ.’’

ಹೌದು, ಬಾಬಾಸಾಹೇಬರ ಪ್ರಕಾರ ಪ್ರಜಾಪ್ರಭುತ್ವದ ಚುಕ್ಕಾಣಿ ಹಿಡಿಯುವ ವ್ಯಕ್ತಿಗಳ ಮಾನಸಿಕ ಪ್ರಬುದ್ಧತೆ ಪ್ರಜಾಪ್ರಭುತ್ವಪರವಾಗಿರಬೇಕು. ಆತ ಗೆಲ್ಲುವ ಸ್ಥಾನಗಳು, ಪಡೆಯುವ ಓಟುಗಳು ಇಲ್ಲಿ ಲೆಕ್ಕಕ್ಕೇ ಬರುವುದಿಲ್ಲ. ಆತನ ಮನಸ್ಸು ಪ್ರಜಾಪ್ರಭುತ್ವಪರವಾಗಿಲ್ಲದಿದ್ದರೆ ಅಂತಹ ಸರಕಾರ ಅಪಾಯಕಾರಿಯಾಗುತ್ತದೆ ಎಂದು ನೇರಾನೇರ ಅಂಬೇಡ್ಕರ್ ಹೇಳುತ್ತಾರೆ. ಮುಂದುವರಿದು ಅವರು ಹೇಳುವುದು


 
‘‘ಈ ನಿಟ್ಟಿನಲ್ಲಿ ಸಮಾಜವೊಂದರಲ್ಲಿ ವ್ಯಕ್ತಿಗಳು ವರ್ಗಗಳಾಗಿ ವಿಭಜನೆಗೊಂಡಿದ್ದರೆ ಮತ್ತು ಅಂತಹ ವರ್ಗಗಳು ಒಂದರಿಂದ ಮತ್ತೊಂದು ಪರಸ್ಪರ ಬೇರ್ಪಟ್ಟಿದ್ದರೆ, ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯೂ ಉಳಿದೆಲ್ಲರೆಡೆಗಿನ ಹಿತಾಸಕ್ತಿಗಿಂತ ತನ್ನ ಸ್ವಂತ ವರ್ಗದೆಡೆಗಿನ ಹಿತಾಸಕ್ತಿಯೇ ಆದ್ಯತೆ ಪಡೆಯಬೇಕು ಎಂದುಕೊಂಡರೆ, ಈ ಹಿನ್ನೆಲೆಯಲ್ಲಿ ಹೀಗೆ ವರ್ಗ ಎಂಬ ಆ ಕಂಪಾರ್ಟ್‌ಮೆಂಟ್‌ಗಳಲ್ಲಿ ಬದುಕುತ್ತ ಆ ವ್ಯಕ್ತಿ ಹೆಚ್ಚು ವರ್ಗ ಪ್ರಜ್ಞೆ ಪಡೆದುಕೊಳ್ಳುತ್ತಾನೆ. ಪರಿಣಾಮ ಬೇರೆಯವರ ಹಿತಾಸಕ್ತಿಗಿಂತ ತನ್ನ ವರ್ಗದ ಹಿತಾಸಕ್ತಿಯನ್ನೇ ಮೇಲಿಡಲು ಆತ ಇಚ್ಛಿಸುತ್ತಾನೆ.’’ ಅಂಬೇಡ್ಕರರು ಇಲ್ಲಿ ವರ್ಗ ಎಂಬ ಪದ ಬಳಸುತ್ತಾರೆ. ಅಂದರೆ ಭಾರತದಲ್ಲಿರುವ ವರ್ಗಗಳು ಜಾತಿಗಳು ಎಂಬುದಿಲ್ಲಿ ಸ್ಪಷ್ಟ. ತನ್ನ ಜಾತಿ ಮತ್ತು ಧರ್ಮದ ಹಿತಾಸಕ್ತಿಗಳನ್ನು ವ್ಯಕ್ತಿಗಳು ಇಲ್ಲಿ ಎತ್ತಿಹಿಡಿಯಲು ನಿರಂತರ ಯತ್ನಿಸುತ್ತಿರುವುದು ಎಲ್ಲರಿಗೂ ತಿಳಿದದ್ದೆ. ಹಾಗಿದ್ದರೆ ಅದಕ್ಕಾಗಿ ಆತ ಮಾಡುವುದು? ಅಂಬೇಡ್ಕರರು ಹೇಳುತ್ತಾರೆ, ‘‘ತನ್ನ ವರ್ಗದ ಹಿತಾಸಕ್ತಿಯನ್ನು ಮಂಚೂಣಿಗೆ ತರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ನ್ಯಾಯವನ್ನು ವಿರೂಪಗೊಳಿಸಲು ಆತ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾನೆ. ಈ ದಿಸೆಯಲ್ಲಿ ಇದನ್ನು ಸಾಧಿಸಲು ಆತ ತನ್ನ ಜಾತಿಗೆ ಸೇರದ ಇತರರ ಮೇಲೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ತಾರತಮ್ಯ ಎಸಗಲು ಪ್ರಾರಂಭಿಸುತ್ತಾನೆ. ಹೀಗಿರುವಾಗ ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮಾದರಿ ಸರಕಾರವು ಏನು ತಾನೇ ಮಾಡಲು ಸಾಧ್ಯ?’’ ಏಕೆ ತಾರತಮ್ಯ ಹುಟ್ಟಿಕೊಳ್ಳುತ್ತದೆ ಅಥವಾ ತಾರತಮ್ಯದ ಮೂಲ ಪ್ರತಿಯೊಬ್ಬರಿಗೂ ಅಂಬೇಡ್ಕರರ ಈ ನುಡಿಗಳಲ್ಲಿ ಅರಿವಾಗುತ್ತದೆ. ಹಾಗೆಯೇ ಹಾಲಿ ಸರಕಾರಗಳಿಂದ ವಿವಿಧ ಜಾತಿಗಳು, ಧರ್ಮಗಳು ಅನುಭವಿಸುತ್ತಿರುವ ತಾರತಮ್ಯವನ್ನು, ನೋವುಗಳನ್ನು ಅಂಬೇಡ್ಕರರ ಈ ನುಡಿಗಳೊಡನೆ ಸಂವಾದಿಸಿಕೊಳ್ಳಬಹುದು. ಮುಂದುವರಿದು ಅಂಬೇಡ್ಕರರು ಹೇಳುವುದು, ‘‘ಆದ್ದರಿಂದ ಪರಸ್ಪರ ವರ್ಗ ಸಂಘರ್ಷ ನಡೆಸುವ, ಸಮಾಜ ವಿರೋಧಿ ಧೋರಣೆ ಮತ್ತು ಆಕ್ರಮಣಶೀಲ ಮನೋಭಾವ ಹೊಂದಿವೆ ಎಂದು ಆರೋಪಿಸಲ್ಪಡುವ ಸಮಾಜದಲ್ಲಿ ಸರಕಾರವೊಂದು ನ್ಯಾಯ ಮತ್ತು ಪಕ್ಷಪಾತರಹಿತ ತನ್ನ ಕರ್ತವ್ಯ ನಿರ್ವಹಿಸುವುದು ಖಂಡಿತ ಕಷ್ಟ ಸಾಧ್ಯ. ಅಂದಹಾಗೆ ಅಂತಹ ಸಮಾಜವೊಂದರಲ್ಲಿ ಸರಕಾರವೊಂದು ತನ್ನ ರೂಪದಲ್ಲಿ ಪ್ರಜೆಗಳಿಂದಲೇ ಆಯ್ಕೆಯಾದ ಪ್ರಜೆಗಳ ಸರಕಾರವಾದರೂ ಕೂಡ ಪ್ರಜೆಗಳಿಗೋಸ್ಕರ ಇರುವ ಸರಕಾರವಂತೂ ಖಂಡಿತ ಆಗುವುದು ಸಾಧ್ಯವಿಲ್ಲ. ಬದಲಿಗೆ ಅದು ಒಂದು ವರ್ಗಕ್ಕಾಗಿ ಇರುವ ಒಂದು ವರ್ಗದ ಸರಕಾರವಾಗುತ್ತದೆ.’’ ಮತ್ತೆ ಹೇಳುವುದಾದರೆ ಅಂಬೇಡ್ಕರರು ಇಲ್ಲಿ ವರ್ಗ ಎಂದಿರುವುದನ್ನು ಭಾರತದ ಸಾಮಾಜಿಕ ಹಿನ್ನೆಲೆಯಲ್ಲಿ ನಾವು ಜಾತಿ, ಧರ್ಮ ಎಂದುಕೊಳ್ಳಬೇಕಾಗುತ್ತದೆ. ಹಾಗೆಯೇ ಸರಕಾರಗಳು ಒಂದು ಜಾತಿಯ, ನಿರ್ದಿಷ್ಟ ಧರ್ಮದ ಪರ ಎಂದು ಏಕೆ ಇತರರಿಗೆ ಅನಿಸುತ್ತದೆ ಎಂಬುದನ್ನು ಅಂಬೇಡ್ಕರರ ಈ ಮಾತಿನ ಹಿನ್ನೆಲೆಯಲ್ಲಿ ಅರಿತುಕೊಳ್ಳಬಹುದು. ಹಾಗಿದ್ದರೆ ಇಲ್ಲಿ ಪ್ರಜಾಪ್ರಭುತ್ವದ ಯಶಸ್ಸು? ಅದಕ್ಕೆ ಪರಿಹಾರ? ಅಂಬೇಡ್ಕರರು ಹೇಳುವುದು ‘‘ಈ ಹಿನ್ನೆಲೆಯಲ್ಲಿ ಪ್ರತೀ ವ್ಯಕ್ತಿಯ ವರ್ತನೆಯೂ ಪ್ರಜಾಪ್ರಭುತ್ವಪರವಾಗಿದ್ದರೆ ಆಗಷ್ಟೇ ನಾವು ಪ್ರಜೆಗಳಿಗೋಸ್ಕರ ಇರುವ ಸರಕಾರವನ್ನು ಹೊಂದುವುದು ಸಾಧ್ಯ!. ಮನಸ್ಸುಗಳು ಪ್ರಜಾಪ್ರಭುತ್ವಪರವಾಗಿರಬೇಕಾದ ಅಗತ್ಯವನ್ನು ಅಂಬೇಡ್ಕರರು ಇಲ್ಲಿ ಒತ್ತಿ ಹೇಳುತ್ತಾರೆ. ಮುಂದುವರಿದು ಅವರು ವಿವರಣೆ ಕೊಡುವುದು ಅಂದಹಾಗೆ ಪ್ರತೀ ವ್ಯಕ್ತಿಯೂ ಪ್ರಜಾಪ್ರಭುತ್ವಪರ, ಅಂದರೆ ಸದರಿ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯನ್ನು ತನ್ನಷ್ಟೆ ಸಮ ಎಂದು ಪರಿಗಣಿಸಲು ಸಿದ್ಧನಿರಬೇಕು ಮತ್ತು ತನಗೋಸ್ಕರ ತಾನು ಎಷ್ಟು ಸ್ವಾತಂತ್ರ್ಯ ಅಪೇಕ್ಷಿಸುತ್ತಾನೋ ಅಷ್ಟೇ ಸ್ವಾತಂತ್ರ್ಯವನ್ನು ಆತನಿಗೂ ಕೊಡಲೂ ಸಿದ್ಧನಿರಬೇಕು. ಈ ನಿಟ್ಟಿನಲ್ಲಿ ಮನಸ್ಸಿನ ಇಂತಹ ಪ್ರಜಾಪ್ರಭುತ್ವಪರ ವರ್ತನೆಯು ಪ್ರಜಾಪ್ರಭುತ್ವ ಸಮಾಜದಲ್ಲಿ ಸದರಿ ವ್ಯಕ್ತಿಯ ಅಂತಹ ಸಾಮಾಜಿಕೀಕರಣದ ಫಲಿತವಾಗಿರುತ್ತದೆ. ಅರ್ಥಾತ್ ಪ್ರಜಾಪ್ರಭುತ್ವಪರ ಸಮಾಜವು ಪ್ರಜಾಪ್ರಭುತ್ವ ಸರಕಾರದ ಪೂರ್ವಾಪೇಕ್ಷಿತ ಲಕ್ಷಣವಾಗಿದೆ. ಪ್ರಜಾಪ್ರಭುತ್ವ ಸರಕಾರಗಳನ್ನು ಅನೇಕ ಬಾರಿ ಕೆಳಗಿಳಿಸಲಾಗಿದೆ. ಇದಕ್ಕೆ ಬಹುತೇಕ ಕಾರಣ ಯಾವ ಸಮಾಜಕ್ಕಾಗಿ ಅಂತಹ ಸರಕಾರಗಳನ್ನು ಸೃಷ್ಟಿಸಲಾಯಿತೋ ಆ ಸಮಾಜವು ಪ್ರಜಾಪ್ರಭುತ್ವದ್ದಾಗಿಲ್ಲದಿದ್ದುದ್ದೇ ಆಗಿದೆ. ಅಂಬೇಡ್ಕರ್‌ರ ಈ ವಿಶ್ಲೇಷಣೆಯ ಪ್ರಕಾರ ಸಮಾಜ ಪ್ರಜಾಪ್ರಭುತ್ವೀಯವಾಗಿರಬೇಕು, ಸರಕಾರ ಹಿಡಿಯುವ ಮನಸ್ಸುಗಳೂ ಪ್ರಜಾಪ್ರಭುತ್ವೀಯವಾಗಿರಬೇಕು. ಆಳುವ ದೊರೆಗಳು ತನ್ನ ಜಾತಿ, ಧರ್ಮದ ಹಿತಾಸಕ್ತಿಯಷ್ಟೇ ಅಲ್ಲದೆ ಇತರರಿಗೂ ಅವಕಾಶ ಕೊಡಬೇಕು. ತಾನೆಷ್ಟು ಸ್ವಾತಂತ್ರ್ಯ, ಸಮಾನತೆ ಅಪೇಕ್ಷಿಸುತ್ತಾನೋ ಅಷ್ಟೇ ಸ್ವಾತಂತ್ರ್ಯ, ಸಮಾನತೆಯನ್ನು ಆತ ಇತರ ಜಾತಿ, ಧರ್ಮಗಳಿಗೂ ಕೊಡಬೇಕು. ಇದನ್ನು ಗಳಿಸಲು ಆತ ಅಂಬೇಡ್ಕರ್‌ರೇ ರಚಿಸಿದ ಸಂವಿಧಾನದ ಪ್ರಮುಖ ಅಂಶ ಸಹೋದರತೆಯನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕು ಅದನ್ನು ಕಾರ್ಯರೂಪಕ್ಕೆ ತರಬೇಕು ಎಂಬುದು. ಬಾಬಾಸಾಹೇಬರ ಈ ವಿಚಾರಗಳನ್ನು ಆಳುವ ಸರಕಾರಗಳ ನೇತಾರರು ಖಂಡಿತ ಅರ್ಥಮಾಡಿಕೊಳ್ಳಬೇಕು. ಅಂತೆಯೇ ಅಧಿಕಾರ ನಡೆಸಬೇಕು. ಆಗಷ್ಟೇ ಯಾರೇ ಮುಖ್ಯಮಂತ್ರಿಯಾದರೂ, ಪ್ರಧಾನಿಯಾದರೂ ಇತರರು ಅನುಮಾನದಿಂದ ನೋಡುವ ಪ್ರವೃತ್ತಿ ತೊಲಗುತ್ತದೆ. ಇಲ್ಲದಿದ್ದರೆ ಅಂಬೇಡ್ಕರರು ಆತಂಕ ವ್ಯಕ್ತಪಡಿಸಿರುವಂತೆ ಪ್ರಜಾಪ್ರಭುತ್ವ ಸರಕಾರಗಳು ಅಕ್ಷರಶಃ ವಿಫಲತೆಯೆಡೆಗೆ ಸಾಗುವ ಅಪಾಯವಿದೆ.

Writer - ರಘೋತ್ತಮ ಹೊ.ಬ., ಮೈಸೂರು

contributor

Editor - ರಘೋತ್ತಮ ಹೊ.ಬ., ಮೈಸೂರು

contributor

Similar News

ಜಗದಗಲ
ಜಗ ದಗಲ