ಜನೌಷಧಿ ಕೇಂದ್ರದ ನಾಮಫಲಕದಲ್ಲೂ ರಾಜಕೀಯ
ಕೇಂದ್ರ ಸರಕಾರದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ನಾಮಫಲಕವನ್ನು ಸರಿಯಾಗಿ ಗಮನಿಸಿದರೆ ಬಿಜೆಪಿ ಎಂತಹ ಕೀಳುಮಟ್ಟದ ರಾಜಕೀಯ ಪ್ರಚಾರವನ್ನು ಅದರಿಂದ ಪಡೆಯುತ್ತಿದೆ ಎಂದು ಮನವರಿಕೆಯಾಗುತ್ತದೆ.
ನಮ್ಮ ಪ್ರಧಾನಿಯವರ ‘ಫೋಟೋ ಪೋಸ್’ ವಿಷಯ ಜಗತ್ತಿಗೆಲ್ಲಾ ಗೊತ್ತಿರುವಂತಹದ್ದೇ... ಆದರೆ ಪ್ರಧಾನಿಯ ಭಾವಚಿತ್ರ ಮಾತ್ರವಲ್ಲದೆ ಜಿಲ್ಲೆಯ ಸಂಸದರ ಭಾವಚಿತ್ರವೂ ಜಿಲ್ಲೆಯ ಜನೌಷಧಿ ಅಂಗಡಿಗಳಲ್ಲಿ ರಾರಾಜಿಸುತ್ತಿವೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆಯೇ ಹೇಳುವುದಾದರೆ ಜಿಲ್ಲೆಯಲ್ಲಿ ನಾನು ನಾಮಫಲಕದಲ್ಲಿ ಮೋದಿಯ ಭಾವಚಿತ್ರವಿಲ್ಲದ ಒಂದೇ ಒಂದು ಜನೌಷಧಿ ಕೇಂದ್ರವನ್ನು ನೋಡಿಲ್ಲ. ಜನೌಷಧಿ ಕೇಂದ್ರಗಳ ನಾಮಫಲಕ ಹೇಗಿರಬೇಕು, ಅಲ್ಲಿ ಮೋದಿಯ ಭಾವಚಿತ್ರವನ್ನು ಯಾವ ಬದಿಗೆ ಹಾಕಬೇಕು, ಹೀಗೆ ಎಲ್ಲವನ್ನೂ ಕೇಂದ್ರ ಸರಕಾರವೇ ತೀರ್ಮಾನಿಸುತ್ತದೆ. ಒಟ್ಟಿನಲ್ಲಿ ನಾಮಫಲಕದಿಂದ ಪ್ರಾರಂಭಿಸಿ ಎಲ್ಲವನ್ನೂ ಸರಕಾರವೇ ತೀರ್ಮಾನಿಸುತ್ತದೆ.
ಈ ಜನೌಷಧಿ ಯೋಜನೆಯ ಪೂರ್ಣ ಹೆಸರು ಭಾರತೀಯ ಜನೌಷಧಿ ಪರಿಯೋಜನ್ ಈ ಮೂರು ಪದಗಳ ಮೊದಲ ಅಕ್ಷರಗಳನ್ನು ಗಮನಿಸಿ. ಹಿಂದಿ ಮತ್ತು ಕನ್ನಡದಲ್ಲಿ ಬರೆಯುವಾಗ ಮೇಲಿಂದ ಕೆಳಗೆ ಮೂರು ಗೆರೆಗಳಲ್ಲಿ
ಭಾರತೀಯ - ಭಾ
ಜನ ಔಷಧಿ - ಜ
ಪರಿಯೋಜನ್-ಪ ಎಂದು ಬರೆಯಲಾಗುತ್ತದೆ.
ಇದನ್ನು ಇಂಗ್ಲಿಷ್‌ನಲ್ಲಿ ಬರೆದಾಗಲೂ
Bharatiya &B
Janata -J
Party -P ಅದು ಬಿಜೆಪಿ ಎಂದೇ ತೋರಿಸುವಂತಿದೆ.
ಅದನ್ನು ಕಾಕತಾಳೀಯ ಎಂದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲೆಡೆಯ ನಾಮಫಲಕಗಳಲ್ಲೂ ಭಾರತೀಯ ಜನ ಔಷಧಿ ಪರಿಯೋಜನ್ ಎಂದು ಮೂರು ಗೆರೆಗಳಲ್ಲಿ ಮೊದಲ ಮೂರು ಅಕ್ಷರಗಳು ಬಿಜೆಪಿ ಎಂದು ಸೂಚಿಸುವಂತಿದೆ. ಅಷ್ಟು ಮಾತ್ರವಲ್ಲ. ಯಾವುದೇ ಜನೌಷಧಿ ಕೇಂದ್ರಗಳ ನಾಮಫಲಕದಲ್ಲಿ ಭಾಜಪ ಅಥವಾ BJP ಎಂದು ಸೂಚಿಸುವ ಮೂರು ಅಕ್ಷರಗಳು ಕೇಸರಿ ಬಣ್ಣದಲ್ಲೇ ಬರೆದಿರುತ್ತದೆ.
ಇನ್ನು ಈ ಕುರಿತ ಮಾಹಿತಿಗಾಗಿ ಅಂತರ್ಜಾಲದಲ್ಲಿ ಜಾಲಾಡಿದಾಗಲೂ ಕೇಸರಿ ಬಣ್ಣದ ಹಿನ್ನೆಲೆಯಲ್ಲಿ ಕ್ಯಾಪಿಟಲ್ ಲೆಟರ್‌ನಲ್ಲಿ PMBJP ಎಂದು ಕಾಣಸಿಗುತ್ತದೆ. ಅಂದರೆ ಈ ಯೋಜನೆ ಬಿಜೆಪಿಯ ಪ್ರಧಾನಮಂತ್ರಿಯದ್ದು.... ನಾನೇ ಸ್ವತಃ ಜನರ ಬಾಯಲ್ಲಿ ಕೇಳಿಸಿಕೊಂಡ ಹಾಗೆ ಕೆಲವು ಗ್ರಾಮೀಣ ಜನರು ಅದನ್ನು ‘ಮೋದಿಯ ಮೆಡಿಕಲ್’ ಎನ್ನುವುದೂ ಇದೆ.
ಈ ರೀತಿಯ ನಾಮಫಲಕ, ಪ್ರಧಾನಿ ಮತ್ತು ಸಂಸದರ ಭಾವಚಿತ್ರ ಹಾಕಿ ಬಿಜೆಪಿ ಪರ ರಾಜಕೀಯ ಪ್ರಚಾರ ಮಾಡಲು ಎಲ್ಲ ಜನೌಷಧಿ ಅಂಗಡಿಯ ಮಾಲಕರು ಸಂಬಂಧಿತರಿಂದ ಆದೇಶವಿರದ ಹೊರತಾಗಿ ಮುಂದಾಗಲಾರರು.
ಮೋದಿ ಸರಕಾರವು ಜನೌಷಧಿ ಯೋಜನೆಯನ್ನು ಜಾರಿಗೆ ತರುವ ಮುನ್ನವೇ ಕರ್ನಾಟಕದಲ್ಲಿ ಸಿದ್ದರಾಮಯ್ಯರ ಸರಕಾರವು ಯು.ಟಿ.ಖಾದರ್ ಆರೋಗ್ಯ ಮಂತ್ರಿಯಾಗಿದ್ದ ಕಾಲದಲ್ಲಿ ‘ಜನಸಂಜೀವಿನಿ’ ಎಂಬ ಜನರಿಕ್ ಔಷಧ ಮಳಿಗೆಯ ಯೋಜನೆ ಜಾರಿಗೆ ತಂದಿತ್ತು. ನಮ್ಮ ದ.ಕ.ಜಿಲ್ಲೆಯಲ್ಲಿ ಜನೌಷಧಿ ಕೇಂದ್ರಗಳು ಸುಮಾರಷ್ಟು ಇವೆಯಾದರೂ ಜನಸಂಜೀವಿನಿ ಔಷಧ ಕೇಂದ್ರಗಳು ಅಷ್ಟಿಲ್ಲ. ಆದರೆ ಇರುವ ಜನಸಂಜೀವಿನಿ ಔಷಧಾಲಯಗಳಲ್ಲಿ ಲಭ್ಯವಿರುವಷ್ಟು ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿಲ್ಲ ಮತ್ತು ಬಿಜೆಪಿಯವರಂತೆ ಸಿದ್ದರಾಮಯ್ಯ ಯಾವುದೇ ‘ಜನಸಂಜೀವಿನಿ’ ಮಳಿಗೆಯ ನಾಮಫಲಕದಲ್ಲಿ ತನ್ನ ಭಾವಚಿತ್ರ ಅಥವಾ ಆಗಿನ ಆರೋಗ್ಯ ಸಚಿವರ ಭಾವಚಿತ್ರವನ್ನು ಹಾಕಿಲ್ಲ.
ಯಾವುದೇ ರಾಜಕೀಯ ಪಕ್ಷ ತನ್ನ ಸಾಧನೆಯ ಪ್ರಚಾರ ಮಾಡುವುದು ತಪ್ಪಲ್ಲ ಆದರೆ ಅದನ್ನು ಔಷಧಾಲಯದಂತಹ ಆರೋಗ್ಯ ಕ್ಷೇತ್ರಕ್ಕೂ ಕೊಂಡೊಯ್ಯುವುದು ಅಕ್ಷಮ್ಯ..
ಖಾಸಗಿ ವ್ಯಕ್ತಿಗಳು ಬಂಡವಾಳ ಹೂಡಿ ಮಾಡುವ ವ್ಯಾಪಾರವನ್ನೂ ರಾಜಕೀಯ ಪ್ರಚಾರಕ್ಕಾಗಿ ಬಳಸುವುದು ಖಂಡಿತಾ ತಪ್ಪು. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯ ಪ್ರಚಾರ ಮಾಡಿದ್ದಾರೆಯೇ ಹೊರತು ಇದು ತನ್ನ ಯೋಜನೆಯೆಂದು ಎಲ್ಲಾ ನ್ಯಾಯ ಬೆಲೆಯ ಅಂಗಡಿಯಲ್ಲಿ ಅಥವಾ ಅಂಗಡಿಗಳ ನಾಮಫಲಕದಲ್ಲಿ ತನ್ನ ಭಾವಚಿತ್ರ ಹಾಕಿಸಿಲ್ಲ.
ಯಾವುದೇ ಸರಕಾರವೂ ಶಾಶ್ವತವಲ್ಲ ಮತ್ತು ಯಾವುದೇ ಸಚಿವನಿಗೆ ಆತನ ಸರಕಾರದ ಅವಧಿಯಿಡೀ ಅದೇ ಖಾತೆ ಸಿಗುತ್ತದೆ ಎಂಬುವುದಕ್ಕೂ ಖಾತರಿಯಿಲ್ಲ. ಯಾವುದೇ ಸರಕಾರವಿರಲಿ, ಮಂತ್ರಿಯಿರಲಿ ಅವರು ಯಾರೂ ತಮ್ಮ ಹಿರಿಯರು ಮಾಡಿದ ಆಸ್ತಿ ಮಾರಿ ಅಭಿವೃದ್ಧಿ ಕಾರ್ಯ ಮಾಡುವುದಿಲ್ಲ, ಏನೇ ಯೋಜನೆಯಿದ್ದರೂ ಅದು ಜನರ ತೆರಿಗೆಯ ದುಡ್ಡಿನಿಂದ ಮಾಡುವಂತಹದ್ದು. ಆದುದರಿಂದ ಸರಕಾರೀ ಯೋಜನೆಗಳು ಜನತೆಯ ಹಕ್ಕೇ ಹೊರತು ರಾಜಕಾರಣಿಗಳ ಔದಾರ್ಯವಲ್ಲ. ಜನರ ತೆರಿಗೆಯ ದುಡ್ಡನ್ನು ಸರಿಯಾದ ಮಾರ್ಗದಲ್ಲಿ ವ್ಯಯಿಸಿದರೆ ಜನ ಅವರಾಗಿಯೇ ನೆನಪಿಟ್ಟುಕೊಳ್ಳುತ್ತಾರೆ. ಅದಕ್ಕಾಗಿ ಮೂರನೇ ದರ್ಜೆಯ ಪ್ರಚಾರದ ರಾಜಕೀಯ ಸಲ್ಲದು.