ರಾಜ್ಯಗಳ ನಾಗರಿಕ ಸೇವೆ ಅಧಿಕಾರಿಗಳ ಮೇಲೆ ಕೇಂದ್ರದ ಅಂಕುಶ ಸರಿಯೇ?

Update: 2018-07-04 18:36 GMT

ದಿಲ್ಲಿಯಲ್ಲಿ ತನ್ನ ಅಧಿಕಾರಿಗಳ ಮೇಲೆ ರಾಜ್ಯ ಸರಕಾರದ ನಿಯಂತ್ರಣವನ್ನು ಹಿಂದೆೆಗೆದುಕೊಳ್ಳುವ ಮೂಲಕ ಕೇಂದ್ರ ಸರಕಾರವು ರಾಜ್ಯದ ಆಡಳಿತದ ನಿರ್ದೇಶನಗಳನ್ನು ಉಲ್ಲಂಘಿಸಲು ಅಧಿಕಾರಿಗಳಿಗೆ ಆಸ್ಪದ ನೀಡುವಂತಹ ವಾತಾವರಣವನ್ನು ಸೃಷ್ಟಿಸಿದೆ. ಕೇಂದ್ರ ಸರಕಾರವು ದಿಲ್ಲಿ ಆಡಳಿತದ ಅಧಿಕಾರಿಗಳು, ಚುನಾಯಿತ ಸಚಿವರು ಹಾಗೂ ಮುಖ್ಯಮಂತ್ರಿ ಆದೇಶಗಳನ್ನು ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿತ್ತಲ್ಲದೆ, ಹಾಗೆ ಮಾಡುವಂತೆ ಅದು ಸಕಾರಾತ್ಮಕವಾಗಿ ಪ್ರಚೋದನೆಯನ್ನು ಕೂಡಾ ನೀಡಿತ್ತು.

ತ್ತೀಚಿನ ವಾರಗಳಲ್ಲಿ ಹಲವಾರು ಕಾರಣಗಳಿಗಾಗಿ ಉನ್ನತ ನಾಗರಿಕ ಸೇವೆಗಳ ಅಧಿಕಾರಿಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರು ಕರೆದ ಸಭೆಗಳಲ್ಲಿ ಭಾಗವಹಿಸಲು ನಿರಾಕರಿಸುವ ಮೂಲಕ ದಿಲ್ಲಿ ಸರಕಾರದ ಭಾರತೀಯ ಆಡಳಿತಾತ್ಮಕ ಸೇವೆಗಳ ಅಧಿಕಾರಿಗಳು ನಡೆಸಿದ ಅಸಾಮಾನ್ಯವಾದ ಬಂಡಾಯವು ಅವುಗಳಲ್ಲೊಂದಾಗಿದೆ. ಈ ಅಧಿಕಾರಿಗಳ ಅಸಹಕಾರವು ಮಾಜಿ ನಾಗರಿಕ ಸೇವಾ ಅಧಿ ಕಾರಿಯೂ ಆಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ಹಿರಿಯ ಸಹದ್ಯೋಗಿಗಳು ರಾಜ್ಯಪಾಲರ ನಿವಾಸದಲ್ಲಿ ಧರಣಿ ನಡೆಸುವುದಕ್ಕೆ ಕಾರಣವಾಯಿತು. ವಸಾಹತು ಶಾಹಿ ಕಾಲದಲ್ಲಿ ಅರ್ಹತೆ ಆಧಾರಿತ ನಾಗರಿಕ ಸೇವೆಯನ್ನು ಸೃಷ್ಟಿಸಿದಾಗಿನಿಂದ ಭಾರತದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದು ನನ್ನ ನೆನಪಿಗೆ ಬರುತ್ತಿಲ್ಲ. ಇಂತಹ ಪ್ರಕರಣಗಳ ಪೈಕಿ ಎರಡನೆಯದು ಪ್ರಧಾನಿ ಕಾರ್ಯಾಲಯವು ನಾಗರಿಕ ಸೇವೆಗಳಿಗೆ ನೇಮಕಗೊಂಡವರಿಗೆ, ಅವರ ಮೂಲ ಭೂತ ಕೋರ್ಸ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅವರನ್ನು ಆಯಾ ಸೇವೆಗಳಲ್ಲಿ ನೇಮಕಗೊಳಿಸುವ ಆದೇಶವನ್ನು ಜಾರಿಗೊಳಿಸಿ ರುವುದಾಗಿದೆ. ಇನ್ನು ಮೂರನೆಯದು, ಕೇಂದ್ರ ಲೋಕಸೇವಾ ಆಯೋಗವನ್ನು ಬದಿಗೆ ಸರಿಸಿ, ಭಾರತ ಸರಕಾರದ ಹಿರಿಯ ಹಾಗೂ ಪ್ರಭಾವಿ ಮಟ್ಟದ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ, ಸರಕಾರದಿಂದ ಹೊರಗಿನವರನ್ನು ಆಹ್ವಾನಿಸುವ ಜಾಹೀರಾತನ್ನು ಪ್ರಕಟಿಸಿರುವುದಾಗಿದೆ.

 ನಾಗರಿಕ ಸೇವೆಗಳು, ಅವುಗಳ ಉಪಯುಕ್ತತೆ ಹಾಗೂ ಪ್ರಜಾಪ್ರಭುತ್ವದಲ್ಲಿ ಅವುಗಳ ಪಾತ್ರ, ನಾಗರಿಕ ಸೇವೆಯ ಅಭ್ಯರ್ಥಿಗಳ ಆಯ್ಕೆ, ತರಬೇತಿ, ಅವರ ಕೆಲಸದ ವಿಧಾನಗಳ ವೌಲ್ಯಮಾಪನ, ದೇಶದ ನಿರೀಕ್ಷೆಗಳಿಗೆ ತಕ್ಕಂತೆ ಅವರು ಎಷ್ಟರ ಮಟ್ಟಿಗೆ ನಡೆದುಕೊಂಡಿದ್ದಾರೆ ಇತ್ಯಾದಿ ವಿಷಯಗಳ ಬಗ್ಗೆ ಆವೇಶಪೂರ್ಣವಾದ ಚರ್ಚೆಗೆ ಈ ಘಟನಾವಳಿಗಳು ಎಡೆಮಾಡಿಕೊಟ್ಟಿವೆ.
ಭಾರತೀಯ ಆಡಳಿತಾತ್ಮಕ ಸೇವೆಯು, ಅಖಿಲ ಭಾರತ ಮಟ್ಟದ ಸೇವೆಯಾಗಿದೆ. ಆದರೆ ಅದರ ಸದಸ್ಯರ ಸೇವೆಗಳನ್ನು ನಿರ್ದಿಷ್ಟ ರಾಜ್ಯ ಸರಕಾರದ ಸುಪರ್ದಿಗೆ ಬಿಟ್ಟುಕೊಡಲಾಗಿದೆ. ಕಾಲಕಾಲಕ್ಕೆ ಅವರನ್ನು ಕೇಂದ್ರ ಸರಕಾರದ ಸೇವೆಗಳಿಗೆ ನಿಯೋಜಿಸಲಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ದಿಲ್ಲಿಯ ಆಡಳಿತಾತ್ಮಕ ಸೇವೆಗಳ ಅಧಿಕಾರಿಗಳು ಅರಾಜಕತಾವಾದಕ್ಕೆ ಸಾಕ್ಷಿಯಾಗುತ್ತಾರೆ. ದಿಲ್ಲಿಯಲ್ಲಿ ಜಾರಿಗೊಳ್ಳಬೇಕಾದ ಯೋಗ್ಯ ವಾದ ಪ್ರಜಾತಾಂತ್ರಿಕ ವ್ಯವಸ್ಥೆಯೇನೆಂದರೆ, ಇತರ ರಾಜ್ಯ ಸರಕಾರಗಳಲ್ಲಿರುವ ಹಾಗೆ, ನಾಗರಿಕ ಸೇವೆಗಳ ಅಧಿಕಾರಿಗಳನ್ನು ಸಂಪೂರ್ಣವಾಗಿ ದಿಲ್ಲಿ ಸರಕಾರದ ನಿಯಂತ್ರಣಕ್ಕೆ ತರುವುದಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯು, ರಾಜ್ಯ ಸರಕಾರಗಳ ವ್ಯಾಪ್ತಿಗೆ ಸಂಪೂರ್ಣವಾಗಿ ಸೇರಿದ್ದಾಗಿದ್ದರೂ, ದಿಲ್ಲಿಯಲ್ಲಿ ಮಾತ್ರ ಅದು ಮೊದಲಿನಿಂದಲೂ ರಾಷ್ಟ್ರ ರಾಜಧಾನಿಯೆಂಬ ಕಾರಣಕ್ಕಾಗಿ ಕೇಂದ್ರ ಸರಕಾರದ ನಿಯಂತ್ರಣಕ್ಕೆ ಸೇರಿದ್ದಾಗಿತ್ತು. ಆದರೆ 2015ರಲ್ಲಿ ಅಧಿಸೂಚನೆಯೊಂದನ್ನು ಹೊರಡಿಸುವ ಮೂಲಕ ರಾಜ್ಯ ಸರಕಾರದಿಂದ ನಿರ್ಣಾಯಕವಾದ ಅಧಿಕಾರವನ್ನು ಕಸಿದುಕೊಳ್ಳುವ ಮೋದಿ ಸರಕಾರದ ನಿರ್ಧಾರವು ಈ ಅಸಮತೋಲನವನ್ನು ಇನ್ನಷ್ಟು ವಿಷಮಗೊಳಿಸಿತು. ಈ ಅಧಿಸೂಚನೆಯ ಮೂಲಕ ದಿಲ್ಲಿಯ ನಾಗರಿಕ ಸೇವೆಗಳ ಮೇಲೆ ಕೇಂದ್ರ ಸರಕಾರ ನಿಯಂತ್ರಣ ಸಾಧಿಸಲು ಮುಂದಾಗಿದೆ.
   ಈ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಕೇಂದ್ರ ಸರಕಾರವು ಮುಖ್ಯಮಂತ್ರಿಯ ಜೊತೆ ಸಮಾಲೋಚನೆ ನಡೆಸುವ ಸೌಜನ್ಯವನ್ನು ತೋರಿಸದೆಯೇ ಮತ್ತು ಅವರ ಒಪ್ಪಿಗೆಯನ್ನು ಪಡೆಯದೆಯೇ ದಿಲ್ಲಿ ಆಡಳಿತದ ಅಧಿಕಾರಿ ಗಳನ್ನು ನೇಮಿಸಬಹುದಾಗಿದೆ ಹಾಗೂ ಅವರ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ. ಇದರಿಂದಾಗಿ, ಈ ಮೊದಲೇ ಕೇಂದ್ರ ಹಾಗೂ ದಿಲ್ಲಿ ಸರಕಾರದ ನಡುವೆ ಹೊಗೆಯಾಡುತ್ತಿದ್ದ ಬಿಕ್ಕಟ್ಟು ಇದರಿಂದಾಗಿ ಉಲ್ಬಣಗೊಂಡಿದೆ. ಮೋದಿ ಸರಕಾರ ಹೊರಡಿಸಿದ ಈ ಅಧಿಸೂಚನೆಯು ದಿಲ್ಲಿ ಮುಖ್ಯಮಂತ್ರಿಯ ಸ್ಥಾನಮಾನವನ್ನು ಸಂಪೂರ್ಣವಾಗಿ ಕ್ಷುಲ್ಲಕಗೊಳಿಸಿದೆ. ಅವರಿಗೆ ತನ್ನ ಮುಖ್ಯ ಕಾರ್ಯದರ್ಶಿಯನ್ನಾಗಲಿ ಅಥವಾ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನಾಗಲಿ ಅಥವಾ ವರಿಷ್ಠರನ್ನಾಗಲಿ ನೇಮಿಸುವ ಅಥವಾ ಯಾವುದೇ ಅಧಿಕಾರಿಯನ್ನು ವರ್ಗಾಯಿಸುವ ಹಾಗಿಲ್ಲ.
 ಆದರೆ ಇದು ಕೇಂದ್ರ ಸರಕಾರವು ಅಮಾಯಕತನದಿಂದ ಮಾಡಿದ ಆಡಳಿತಾತ್ಮಕ ಬದಲಾವಣೆಯಾಗಿರಲಿಲ್ಲವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. 2015ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಭೂತಪೂರ್ವವಾದ ಜಯಗಳಿಸಿರುವುದಕ್ಕೆ ಕೇಂದ್ರ ಸರಕಾರದ ಸೇಡಿನ ಪ್ರತಿಕ್ರಿಯೆ ಇದಾ ಗಿದೆ. ಮೋದಿಯ ವಿಜಯಯಾತ್ರೆಗೆ ತಡೆಯೊಡ್ಡಿದ ಪ್ರಪ್ರಥಮ ಚುನಾವಣಾ ಫಲಿತಾಂಶ ಅದಾಗಿತ್ತು. ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸಹದ್ಯೋಗಿಗಳು ಕಾರ್ಯ ನಿರ್ವಹಿಸಲು ಅಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ನಿಖರವಾಗಿ ನಡೆಸಿದ ಸಿನಿಕತನದ ನಡೆ ಇದಾಗಿತ್ತು. ಇದರ ಪರಿಣಾಮವಾಗಿ, ಇಂದು ದಿಲ್ಲಿಯ ಜನತೆ, ಹಿಂದೆಂದೂ ಕಾಣದಂತಹ ಆಡಳಿತ ಬಿಕ್ಕಟ್ಟಿಗೆ ಸಾಕ್ಷಿಯಾಗಿದ್ದಾರೆ.

ದಿಲ್ಲಿಯಲ್ಲಿ ಬಿಕ್ಕಟ್ಟು 
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ, ದರ್ಪದ ಕಾರ್ಯನಿರ್ವಹಣೆ ಶೈಲಿಯಿಂದಾಗಿ ಅಧಿಕಾರಿಗಳು ಅವರಿಂದ ದೂರವಾಗಲು ಕಾರಣವೆಂದು ಕೆಲವು ಉನ್ನತ ಅಧಿಕಾರಿಗಳು ವಾದಿಸುತ್ತಾರೆ. ಕೇಜ್ರಿವಾಲ್ ಅವರು ತನ್ನ ಅಧಿಕಾರಿಗಳ ಜೊತೆ ಹೆಚ್ಚು ಸೌಜನ್ಯ ಹಾಗೂ ಗೌರವದಿಂದ ನಡೆದುಕೊಳ್ಳಬೇಕಾಗಿತ್ತೆಂದು ಹೇಳುವುದು ಸಹಜ. ಸ್ವತಃ ಅವರು ನಾಗರಿಕ ಸೇವೆಯಿಂದ ಬಂದವರಾಗಿರುವುದರಿಂದ ನಾಗರಿಕ ಸೇವೆಯ ಅಧಿಕಾರಿಗಳ ಬವಣೆಗಳ ಬಗ್ಗೆ ಸಹಾನುಭೂತಿಯನ್ನು ತೋರ್ಪಡಿಸಬೇಕಾಗಿತ್ತು ಹಾಗೂ ಅವರನ್ನು ತನ್ನ ಶತ್ರುಗಳೆಂಬಂತೆ ಭಾವಿಸಕೂಡದು. ನನ್ನ ಸೇವಾವಧಿಯ ವರ್ಷಗಳ ಅನುಭವದಿಂದ ನಾನು ಖಡಾಖಂಡಿತವಾಗಿ ಹೇಳುವುದೇನೆಂದರೆ, ಕಳೆದ ಹಲವು ದಶಕಗಳಿಂದ, ವಿವಿಧ ರಾಜ್ಯಗಳ ಹಲವಾರು ನಾಗರಿಕ ಸೇವೆಯ ಅಧಿಕಾರಿಗಳು ಗಣನೀಯ ಸಂಖ್ಯೆಯ ಮುಖ್ಯಮಂತ್ರಿಗಳ ಮೇಲೆ ಮಾಡಿದ್ದ ಆರೋಪಗಳು, ದಿಲ್ಲಿಯ ಅಧಿಕಾರಿಗಳು ಕೇಜ್ರಿವಾಲ್ ವಿರುದ್ಧ ಈಗ ಮಾಡಿರುವ ಆರೋಪಗಳಿಗಿಂತಲೂ ಹೆಚ್ಚು ಗಂಭೀರವಾಗಿದ್ದವು. ಮಧ್ಯಪ್ರದೇಶದ ಕೇಡರ್‌ನಲ್ಲಿ ನಾನು 17 ವರ್ಷ ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ಕೆಲವು ಮುಖ್ಯಮಂತ್ರಿಗಳು ಒರಟಾಗಿ ವರ್ತಿಸುತ್ತಿದ್ದುದು ಮಾತ್ರವಲ್ಲದೆ ಅಧಿಕಾರಿಗಳನ್ನು ಬಹಿರಂಗವಾಗಿ ಹಾಗೂ ಪದೇ ಪದೇ ಅಪಮಾನಿಸುತ್ತಿದ್ದರು. ಅವರ ಮುಖಗಳ ಮೇಲೆ ಕಡತಗಳನ್ನು ಎಸೆಯುತ್ತಿದ್ದರು ಮತ್ತು ನಿಂದಿಸುತ್ತಿದ್ದರು ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದರು. ಅಗಾಧವಾದ ಭ್ರಷ್ಟಾಚಾರಿಗಳಾಗಳೂ, ಕೋಮುವಾದಿ, ಜಾತಿವಾದಿ, ಲಂಚಕೋರರೂ ಹಾಗೂ ಕ್ರಿಮಿನಲ್ ಕೂಡಾ ಆಗಿದ್ದಂತಹ ಮುಖ್ಯಮಂತ್ರಿಗಳನ್ನು ಕೂಡಾ ನಾನು ಕಂಡಿದ್ದೇನೆ. ಅವರು ತಮ್ಮ ಅಕ್ರಮ ಚಟುವಟಿಕೆಗಳಲ್ಲಿ, ಪಕ್ಷಪಾತದ ನಡವಳಿಕೆಯಲ್ಲಿ ಹಾಗೂ ಅಪರಾಧಗಳಲ್ಲಿ ಕೈಜೋಡಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಆದಾಗ್ಯೂ ಕೇಜ್ರಿವಾಲ್ ವಿರುದ್ಧ ನಡೆದ ಹಾಗೆ ಉಳಿದ ಯಾವುದೇ ರಾಜ್ಯಗಳಲ್ಲಿ ಐಎಎಸ್ ಅಧಿಕಾರಿಗಳು ಬಂಡಾಯವೆದ್ದ ನಿದರ್ಶನಗಳಿಲ್ಲ. ಇದಕ್ಕೆ ಕಾರಣವೂ ತುಂಬಾ ಸರಳವಾಗಿದೆ. ಇತರ ರಾಜ್ಯಗಳಲ್ಲಿ ಯಾವುದೇ ಓರ್ವ ಅಧಿಕಾರಿಯು ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ಧಣಿಗಳ ವಿರುದ್ಧ ಉನ್ನತ ತತ್ವದ ಆಧಾರದಲ್ಲಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದಲ್ಲಿ, ಆತ ಅಥವಾ ಆಕೆ ತನ್ನ ವೃತ್ತಿಬದುಕಿನಲ್ಲಿ ಗಂಭೀರವಾದ ಪರಿಣಾಮಗಳನ್ನು ಅನುಭವಿಸುವ ಸಾಧ್ಯತೆಗಳಿದ್ದವು.
ಭ್ರಷ್ಟ, ಕೋಮವಾದಿ, ಜಾತಿವಾದಿ ಹಾಗೂ ಕ್ರಿಮಿನಲ್ ಮುಖ್ಯಮಂತ್ರಿಗಳ ವಿರುದ್ಧ ಸಾಮೂಹಿಕವಾಗಿ ಪ್ರತಿಭಟನೆಗೆ ಪ್ರೇರೇಪಿಸುವಂತಹ ಸಾಮೂಹಿಕ ಪ್ರಜ್ಞೆ ಆಗ ಉನ್ನತ ಸಾರ್ವಜನಿಕ ಸೇವೆಯ ಅಧಿಕಾರಿಗಳಲ್ಲಿ ಇದ್ದಿರಲಿಲ್ಲ. ದಿಲ್ಲಿಯಲ್ಲಿ ತನ್ನ ಅಧಿಕಾರಿಗಳ ಮೇಲೆ ರಾಜ್ಯ ಸರಕಾರದ ನಿಯಂತ್ರಣವನ್ನು ಹಿಂದೆೆಗೆದುಕೊಳ್ಳುವ ಮೂಲಕ ಕೇಂದ್ರ ಸರಕಾರವು ರಾಜ್ಯದ ಆಡಳಿತದ ನಿರ್ದೇಶನಗಳನ್ನು ಉಲ್ಲಂಘಿಸಲು ಅಧಿಕಾರಿಗಳಿಗೆ ಆಸ್ಪದ ನೀಡುವಂತಹ ವಾತಾವರಣವನ್ನು ಸೃಷ್ಟಿಸಿದೆ. ಕೇಂದ್ರ ಸರಕಾರವು ದಿಲ್ಲಿ ಆಡಳಿತದ ಅಧಿಕಾರಿಗಳು, ಚುನಾಯಿತ ಸಚಿವರು ಹಾಗೂ ಮುಖ್ಯಮಂತ್ರಿ ಆದೇಶಗಳನ್ನು ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿತ್ತಲ್ಲದೆ, ಹಾಗೆ ಮಾಡುವಂತೆ ಅದು ಸಕಾರಾತ್ಮಕವಾಗಿ ಪ್ರಚೋದನೆಯನ್ನು ಕೂಡಾ ನೀಡಿತ್ತು.
  ಚುನಾಯಿತ ಕಾರ್ಯನಿರ್ವಾಹಕರು ನೀಡುವ ಆದೇಶಗಳು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿದ್ದಲ್ಲಿ ಅವುಗಳನ್ನು ಪಾಲಿಸಲು ನಿರಾಕರಿಸುವ ಮಟ್ಟದ ವರೆಗೂ ಹೋಗುವಂತೆ ನಾನು ನಾಗರಿಕ ಸೇವೆಯ ಅಧಿಕಾರಿಗಳಿಗೆ ನನ್ನ ವೃತ್ತಿ ಜೀವನದ ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇನೆ. ದೇಶದ ಸಂವಿಧಾನದ ಪ್ರಪ್ರಥಮ ಸೇವಕರೇ ನಾಗರಿಕ ಸೇವೆಯ ಅಧಿಕಾರಿಗಳೆಂದು ನಾನು ನಂಬಿದ್ದೇನೆ. ಆನಂತರ ಅವರು ತಮ್ಮ ಅಧಿಕಾರವ್ಯಾಪ್ತಿಯಲ್ಲಿ ಅತ್ಯಂತ ಅವಕಾಶವಂಚಿತ, ದಮನಿತ ಹಾಗೂ ನಿರ್ಗತಿಕರಿಗೆ ಮತ್ತು ನಿರ್ಭಾಗ್ಯರ ಸೇವಕರಾಗಿರಬೇಕಾಗಿದೆ. ಇವೆಲ್ಲದರ ಬಳಿಕವಷ್ಟೇ ಅವರು ತಾವು ಯಾವ ಚುನಾಯಿತ ಸರಕಾರದ ಕೈಕೆಳಗೆ ಕೆಲಸ ಮಾಡುತ್ತೇವೆಯೋ ಆ ಸರಕಾರದ ಸೇವಕರಾಗಬೇಕಾಗಿದೆ. ಒಂದು ವೇಳೆ ನಾಗರಿಕ ಸೇವಾಧಿಕಾರಿಗಳ ಆತ್ಮಸಾಕ್ಷಿಯು, ಅವರು ಪಡೆದಿರುವ ಆದೇಶವು ಕಾನೂನುಬಾಹಿರವಾದುದು ಹಾಗೂ ಸಂವಿಧಾನದ ನೈತಿಕತೆ, ನ್ಯಾಯ, ಸ್ವಾತಂತ್ರ, ಸಮಾನತೆ ಹಾಗೂ ಭ್ರಾತೃತ್ವಕ್ಕೆ ವಿರುದ್ಧವಾಗಿದ್ದರೆ ಅಥವಾ ಅವಕಾಶವಂಚಿತ ನಾಗರಿಕರ ಹಿತಾಸಕ್ತಿಗೆ ಪೂರಕವಾಗಿರದಿದ್ದರೆ, ಆಂತಹ ಆದೇಶಗಳ ವಿರುದ್ಧ ಪ್ರತಿಭಟಿಸುವುದು ಅವರ ನೈತಿಕ ಕರ್ತವ್ಯವಾಗಿದೆ. ಅವರು ಇಂತಹ ಆದೇಶಗಳನ್ನು ಉಲ್ಲಂಘಿಸುವ ಮಟ್ಟದವರೆಗೂ ಹೋಗಬೇಕೆಂದು ನಾನು ಪ್ರತಿಪಾದಿಸುತ್ತೇನೆ. ಆದಾಗ್ಯೂ ನಾಗರಿಕ ಸೇವೆಯ ಸದಸ್ಯರಿಗೆ ವಿಧೇಯತೆಯ ನೈತಿಕತೆಗಿಂತಲೂ ಆತ್ಮಸಾಕ್ಷಿಯ ನೈತಿಕತೆಯು ಮಿಗಿಲೆಂಬುದನ್ನು ಪ್ರತಿಪಾದಿಸುವ ನನ್ನ ದೃಷ್ಟಿಕೋನವನ್ನು ಎಲ್ಲರೂ ಒಪ್ಪಿಕೊಳ್ಳದೆ ಇರಬಹುದು.
 ಆದಾಗ್ಯೂ, ದಿಲ್ಲಿಯಲ್ಲಿ ನಡೆದ ನಾಗರಿಕ ಸೇವಾ ಅಧಿಕಾರಿಗಳ ಮುಷ್ಕರವು ಅಂತಹ ಯಾವುದೇ ಕಾನೂನುಬಾಹಿರವಾದ ಹಾಗೂ ನ್ಯಾಯಯುತವಲ್ಲದ ಆದೇಶಗಳ ವಿರುದ್ಧ ನಡೆದ ಪ್ರತಿಭಟನೆಯಾಗಿರಲಿಲ್ಲ.
 ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕೆಲವು ತಿಂಗಳುಗಳ ಹಿಂದೆಯಷ್ಟೇ, ತನ್ನ ಸರಕಾರವು ಮೊಹಲ್ಲಾಗಳಲ್ಲಿ ಸ್ಥಾಪಿಸಿರುವ ಕ್ಲಿನಿಕ್‌ಗಳ ಬಗ್ಗೆ ನಿಕಟವಾದ ಗಮನಹರಿಸುವಂತೆ ಕೋರಿ ನನ್ನನ್ನು ಆಹ್ವಾನಿಸಿದ್ದರು. ಕೆಲವೊಂದು ಲೋಪದೋಷಗಳ ಹೊರತಾಗಿಯೂ, ಈ ಮೊಹಲ್ಲಾ ಕ್ಲಿನಿಕ್‌ಗಳು ಗುಣಮಟ್ಟದ ಖಾಸಗಿ ಆರೋಗ್ಯಪಾಲನೆಗೆ ಖರ್ಚು ಭರಿಸಲು ಸಾಧ್ಯವಿಲ್ಲದ ದಿಲ್ಲಿಯ ಬಡ ನಾಗರಿಕರಿಗೆ ಕೇಜ್ರಿ ಸರಕಾರದ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಖಂಡಿತವಾಗಿಯೂ ಇದು ದೇಶದಲ್ಲಿ ನಗರ ಪ್ರದೇಶದ ಬಡವರಿಗೆ ಸರಕಾರವು ಒದಗಿಸುವ ಅತ್ಯುತ್ತಮ ಮಾದರಿಯ ಪ್ರಾಥಮಿಕ ಆರೋಗ್ಯ ಸೇವೆಯಾಗಿದೆ. ಆದರೆ ಆರೋಗ್ಯ ಕಾರ್ಯದರ್ಶಿ (ಕೇಂದ್ರ ಸರಕಾರದಿಂದ ನೇಮಕಗೊಂಡವರು)ಯವರು ಮುಖ್ಯಮಂತ್ರಿಯ ಹಾಗೂ ಆರೋಗ್ಯ ಸಚಿವರ ನಿರ್ದೇಶನಗಳನ್ನು ಪಾಲಿಸಲು ನಿರಾಕರಿಸಿದ ಪರಿಣಾಮವಾಗಿ ಈ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯು ಗೊಂದಲದ ಗೂಡಾಗಿ ಬಿಟ್ಟಿದೆ.
ನಾನು ಲೇಖನದಲ್ಲಿ ಮೊದಲೇ ಪ್ರತಿಪಾದಿಸಿದಂತೆ ದಿಲ್ಲಿಯಲ್ಲಿ ಅಧಿಕಾರಿಗಳು ಹಾಗೂ ರಾಜ್ಯ ಸರಕಾರದ ನಡುವೆ ಸಂಘರ್ಷದ ಸನ್ನಿವೇಶವನ್ನು ಕೇಂದ್ರ ಸರಕಾರವು ನೇರವಾಗಿ ಸೃಷ್ಟಿಸಿದೆ. ದಿಲ್ಲಿಯ ಜನತೆಯಿಂದ ಆಮ್ ಆದ್ಮಿ ಪಕ್ಷವು ಪಡೆದ ಅಭೂತಪೂರ್ವ ಜನಾದೇಶವನ್ನು ಕಸಿಯಲು ಕೇಂದ್ರ ಸರಕಾರವು ನಡೆಸಿದ ಯತ್ನ ಇದಾಗಿದೆ.
ಕೃಪೆ: scroll.in

Writer - ಹರ್ಷ ಮಂದರ್

contributor

Editor - ಹರ್ಷ ಮಂದರ್

contributor

Similar News

ಜಗದಗಲ
ಜಗ ದಗಲ